ಭದ್ರಾ ಮೇಲ್ದಂಡೆ ಯೋಜನೆಗೆ (Bhadra Meldande Yojana) ಕೇಂದ್ರ ಸರ್ಕಾರ ಬಜೆಟ್ನಲ್ಲಿ (Budget 2023) ಬರೋಬ್ಬರಿ 5,300 ಕೋಟಿ ಮೀಸಲಿಟ್ಟಿದೆ. ಅಲ್ಲದೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಏನಿದು ಭದ್ರಾ ಮೇಲ್ದಂಡೆ ಯೋಜನೆ? (Upper Bhadra Yojana) ಈ ಯೋಜನೆಯಿಂದ ಕರ್ನಾಟಕದ ಯಾವೆಲ್ಲ ಜಿಲ್ಲೆಗಳಿಗೆ ಅನುಕೂಲವಾಗಲಿದೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ
ಏನಿದು ಭದ್ರಾ ಮೇಲ್ದಂಡೆ ಯೋಜನೆ?
ಕರ್ನಾಟಕದಲ್ಲಿ ಅತ್ಯಂತ ಮಹತ್ವ ಪಡೆದಿರುವ ನೀರಾವರಿ ಯೋಜನೆ ಈ ಭದ್ರಾ ಮೇಲ್ದಂಡೆ ಯೋಜನೆ. ಕರ್ನಾಟಕದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳು ಈ ನೀರಾವರಿ ಯೋಜನೆಯ ಫಲಾನುಭವಿಗಳು.
787 ಗ್ರಾಮಗಳಿಗೆ ನೇರ ಪ್ರಯೋಜನ
ಮಧ್ಯ ಕರ್ನಾಟಕದ ಬರೋಬ್ಬರಿ 5,57,022 ಎಕರೆ ಪ್ರದೇಶ ವಿಸ್ತಾರ ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆ ಬರೋಬ್ಬರಿ 367 ಕೆರೆಗಳಿಗೆ ಜೀವ ತುಂಬಿಸುತ್ತದೆ. ಹೀಗಾಗಿ ಈ ಪ್ರದೇಶಗಳ ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದ ಒಟ್ಟು 787 ಗ್ರಾಮಗಳ 74.26 ಲಕ್ಷ ಜನರಿಗೆ ಈ ಯೋಜನೆಯಡಿ ಅನುಕೂಲವಾಗಲಿದೆ ಅನ್ನೋದು ಈ ಯೋಜನೆ ಮಹತ್ವ ಸಾರುತ್ತದೆ. ಸದ್ಯ ಭದ್ರಾ ಮೇಲ್ದಂಡೆ ಯೋಜನೆಯಡಿ 29.9 ಟಿಎಂಸಿ ನೀರನ್ನು ಬಳಸಲು ಸಮ್ಮತಿ ದೊರೆತಿದೆ.
ಈ ತಾಲೂಕುಗಳಲ್ಲಿ ಇರಲಿದೆ ಭದ್ರಾ ಮೇಲ್ದಂಡೆ ಯೋಜನೆ
ದಾವಣಗೆರೆಯ ಜಗಳೂರು, ಚಿಕ್ಕಮಗಳೂರಿನ ತರೀಕೆರೆ, ಕಡೂರು, ಚಿತ್ರದುರ್ಗದ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿಗಳ ಹಳ್ಳಿಗಳು ಭದ್ರಾ ಮೇಲ್ದಂಡೆ ಯೋಜನೆಯ ನೇರ ಫಲಾನುಭವಿಗಳು.
ವಿಧಾನಸಭಾ ಚುನಾವಣೆಯ ಮೇಲೆ ಕಣ್ಣು!
ಇದೇ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅಲ್ಲದೇ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳನ್ನೂ ಇಟ್ಟುಕೊಂಡಿದೆ ಎಂದೇ ವಿಶ್ಲೇಷಣೆಗಳು ಕೇಳಿಬಂದಿವೆ.
ಎರಡು ಹಂತಗಳಲ್ಲಿ ಅನುಷ್ಠಾನ, ಅಂದಾಜು ಮೊತ್ತವೂ ಏರಿಕೆ
ಭದ್ರಾ ಮೇಲ್ದಂಡೆ ಯೋಜನೆ ಒಟ್ಟು ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಪ್ಯಾಕೇಜ್ I ರ ಅಡಿ ತುಂಗಾ ನದಿಯಿಂದ 17.40 ಟಿ.ಎಂ.ಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ನೀರು ಹರಿಸುವ, ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೂ ಮಿಗಿಲಾಗಿ 2020-21 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 21,473 ಕೋಟಿ ರೂ.ಗೆ ಹೆಚ್ಚಳವಾಗಿದೆ.
ಜೊತೆಗೆ ಪ್ಯಾಕೇಜ್ II ರ ಅಡಿಯಲ್ಲಿ ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ ಭೌತಿಕ ಕಾಮಗಾರಿಗಳು ಪೂರ್ಣಗೊಂಡಿವೆ.
2ನೇ ಹಂತದಲ್ಲಿ ಒಳಗೊಂಡಿರುವ ಕಾಮಗಾರಿಗಳಿವು
ತರೀಕೆರೆ ಏತ ನೀರಾವರಿ: ತರೀಕೆರೆ ತಾಲೂಕಿನ 20,150 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಮೂಲಕ ನೀರನ್ನು ಒದಗಿಸು ಮಹತ್ವಾಕಾಂಕ್ಷಿ ಯೋಜನೆಯನ್ನು ಭದ್ರಾ ಮೇಲ್ದಂಡೆ ಯೋಜನೆಯ 2ನೇ ಹಂತ ಒಳಗೊಂಡಿದೆ. ಸದ್ಯ ಈ ಯೋಜನೆಯಡಿ ಈ ಭಾಗದ 79 ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ನಡೆಯುತ್ತಿವೆ.
ಚಿತ್ರದುರ್ಗ ಶಾಖಾ ಕಾಲುವೆ
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 134.597 ಕಿ.ಮೀ ಉದ್ದದ ಕಾಲುವೆ ನಿರ್ಮಾಣವಾಗಲಿದೆ. ಈ ಎರಡು ಜಿಲ್ಲೆಗಳ 1,07,265 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 157 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ತುಮಕೂರು ಶಾಖಾ ಕಾಲುವೆ
ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 84,900 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 131 ಕೆರೆಗಳಿಗೆ ನೀರನ್ನು ತುಂಬಿಸುವ ತುಮಕೂರು ಶಾಖಾ ಕಾಲುವೆಯನ್ನೂ ಭದ್ರಾ ಮೇಲ್ದಂಡೆ ಯೋಜನೆ ಒಳಗೊಂಡಿದೆ.
ಈ ತಾಲೂಕುಗಳಲ್ಲಿ ಕೆರೆ ತುಂಬಿಸುವ ಕಾಮಗಾರಿ
ಚಿತ್ರದುರ್ಗ ಶಾಖಾ ಕಾಲುವೆಯಿಂದ ಕವಲೊಡೆಯುವ ಹೊಳಲ್ಕೆರೆ, ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಭದ್ರಾ ಮೇಲ್ದಂಡೆ ಯೋಜನೆ ಒಳಗೊಂಡಿದೆ. ಜೊತೆಗೆ ತುಮಕೂರು ಶಾಖಾ ಕಾಲುವೆಯಿಂದ ಕವಲೊಡೆಯುವ ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ನಡೆಯುತ್ತಿವೆ.
ಇದನ್ನೂ ಓದಿ: Budget 2023: ಅಳೆದು ತೂಗಿ ಲೆಕ್ಕಾಚಾರ, ಬಜೆಟ್ನಲ್ಲಿ ಹಣಕಾಸು ಸಚಿವೆ ಮಾಡಿದ ಪ್ರಮುಖ ಘೋಷಣೆಗಳಿವು!
ನೀರಾವರಿ ಯೋಜನೆಯಿಂದ ಮಧ್ಯ ಕರ್ನಾಟಕ ವಶಕ್ಕೆ?
ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಬಿಜೆಪಿಗೆ ಮಧ್ಯ ಕರ್ನಾಟಕ ಅತ್ಯಂತ ಮಹತ್ವದ್ದಾಗಿದೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು ಸುತ್ತಿನ ಪ್ರವಾಸ ನಡೆಸಿದ್ದಾರೆ.ಭದ್ರಾ ಮೇಲ್ದಂಡೆ ಯೋಜನೆಯನ್ನೇ ಬಾಣವಾಗಿಟ್ಟುಕೊಂಡು ಮಧ್ಯ ಕರ್ನಾಟಕದ ಕ್ಷೇತ್ರಗಳಿಗೆ ಲಗ್ಗೆಯಿಡಬೇಕು ಅನ್ನೋದು ಬಿಜೆಪಿಯ ಲೆಕ್ಕಾಚಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ