Explainer: ಬೂಸ್ಟರ್‌ ಡೋಸ್‌ Omicron ವಿರುದ್ಧ ಹೋರಾಡಲು ಶಕ್ತವಾಗಿದ್ಯಾ? ತಜ್ಞರು ಹೀಗಂತಾರೆ...

ಫ್ರಾನ್ಸ್‌ನಲ್ಲಿನ ಇತ್ತೀಚಿನ ಅಧ್ಯಯನದ ಪ್ರಕಾರ 6-10 ವಯಸ್ಸಿನ ಮಕ್ಕಳು ಇತರ ಜನಸಂಖ್ಯೆಗಿಂತ ಸೋಂಕಿಗೀಡಾಗುತ್ತಿರುವ ಪ್ರಮಾಣ 2 ಪಟ್ಟು ಹೆಚ್ಚಿದೆ ಎಂದು ಕಂಡುಕೊಂಡಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಕೋವಿಡ್‌ ಅಬ್ಬರ ಇನ್ನೇನು ತಗ್ಗಿತು ಅನ್ನೋವಷ್ಟರಲ್ಲಿ ಈಗ ಹೊಸ ರೂಪಾಂತರ ಓಮೈಕ್ರಾನ್‌ (Omicron) ಅಬ್ಬರ ಆರಂಭವಾಗ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಲಸಿಕೆ (Vaccines) ಪಡೆಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದರೂ ಓಮೈಕ್ರಾನ್‌ ಎರಡು ಡೋಸ್‌ ಲಸಿಕೆ ಹಾಕಿಸಿದವರನ್ನೂ ಬಿಡಲ್ಲ ಎನ್ನುವ ವರದಿಗಳು ಬರುತ್ತಿವೆ. ದೇಶದಲ್ಲಿ ಮಾತ್ರವಲ್ಲ ಸರಾಸರಿ ಹೆಚ್ಚು ಲಸಿಕೆ ಪಡೆದಿರುವ ಹಾಗೂ ಮುಂದುವರಿದ ದೇಶಗಳಲ್ಲಿ ಸಹ ಓಮೈಕ್ರಾನ್‌ ಅಬ್ಬರ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಬೂಸ್ಟರ್‌ ಡೋಸ್‌ ಅಂದ್ರೆ ಮೂರನೇ ಡೋಸ್‌ ಪಡೆದರೆ ಓಮೈಕ್ರಾನ್‌ ಸೋಂಕಿನ ಅಬ್ಬರ ಕಡಿಮೆಯಾಗುತ್ತದೆ ಎನ್ನುವ ವರದಿಗಳೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಕೋವಿಶೀಲ್ಡ್‌ (Covishield) ಬ್ರ್ಯಾಂಡ್‌ನಡಿ ನೀಡಲಾಗುತ್ತಿರುವ ಆಸ್ಟ್ರಾಜೆನಿಕಾ (AstraZeneca) ಲಸಿಕೆಯೂ ಮೂರನೇ ಡೋಸ್‌ ಪರಿಣಾಮ ಬೀರುತ್ತದೆ ಎಂಬ ಅಧ್ಯಯನವೊಂದು ಹೊರಬಂದಿದೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ (University of Oxford) ಸಂಶೋಧಕರೇ ಈ ಅಧ್ಯಯನ ನಡೆಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ..

ಬೂಸ್ಟರ್ ಡೋಸ್ ಭರವಸೆ

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರ ಹೊಸ ಅಧ್ಯಯನವು ಆಸ್ಟ್ರಾಜೆನಿಕಾ ಲಸಿಕೆಯ ಬೂಸ್ಟರ್ ಡೋಸ್ ಕೊರೊನಾ ವೈರಸ್‌ನ ಓಮೈಕ್ರಾನ್‌ ರೂಪಾಂತರದ ವಿರುದ್ಧ ತಟಸ್ಥಗೊಳಿಸುವ ಪ್ರತಿಕಾಯಗಳ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಲು ಸಾಧ್ಯವಾಯಿತು ಎಂದು ಕಂಡುಕೊಂಡಿದೆ. ಈ ಹಿನ್ನೆಲೆ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿರುವ ಓಮೈಕ್ರಾನ್‌ ರೂಪಾಂತರದ ವಿರುದ್ಧ ಆಸ್ಟ್ರಾಜೆನಿಕಾ ಲಸಿಕೆ ಸ್ವಲ್ಪವಾದರೂ ರಕ್ಷಣೆ ನೀಡುತ್ತದೆ ಎಂದು ಭರವಸೆ ನೀಡುತ್ತದೆ. ಆಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ತಯಾರಿಸಲಾದ ಕೋವಿಶೀಲ್ಡ್ ಮತ್ತು ದಕ್ಷಿಣ ಕೊರಿಯಾದಲ್ಲಿ ಉತ್ಪಾದಿಸಲಾದ ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್‌ಗಳ ಹೆಸರುಗಳ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಈ ಅಧ್ಯಯನವನ್ನು ಸಹ ಅದೇ ವಿಶ್ವವಿದ್ಯಾನಿಲಯದ ವಿಭಿನ್ನ ಸಂಶೋಧಕರ ತಂಡವು ನಡೆಸಿದೆ.

ಇದನ್ನೂ ಓದಿ: Omicron Effect : ಕೊರೋನಾ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ, ಕಟ್ಟೆಚ್ಚರ ಅಗತ್ಯ: ಮೋದಿ

ಲಸಿಕೆಯ ಸಂಶೋಧನೆಗಳು ಹೀಗಿದೆ..
ಆಸ್ಟ್ರಾಜೆನಿಕಾ ಲಸಿಕೆಯ ಮೂರನೇ ಡೋಸ್‌ ಪಡೆದ 1 ತಿಂಗಳ ನಂತರ ವ್ಯಕ್ತಿಗಳಿಂದ ಪಡೆದ ಸೆರಾವು 2ನೇ ಡೋಸ್ ಲಸಿಕೆ ಪಡೆದ 1 ತಿಂಗಳ ನಂತರ ಡೆಲ್ಟಾ ರೂಪಾಂತರದ ವಿರುದ್ಧ ಗಮನಿಸಿದ ಮಟ್ಟಗಳಿಗೆ ಓಮೈಕ್ರಾನ್‌ ರೂಪಾಂತರ ತಟಸ್ಥಗೊಳಿಸಲು ಸಮರ್ಥವಾಗಿದೆ ಎಂದು ಅಧ್ಯಯನವು ಕಂಡುಕೊಂಡಿದೆ.

ಅಲ್ಲದೆ, ಮೂರನೇ ಡೋಸ್‌ ಲಸಿಕೆ ಪಡೆದ ನಂತರ ತಟಸ್ಥಗೊಳಿಸುವ ಪ್ರತಿಕಾಯಗಳ ಮಟ್ಟವು ಈ ಹಿಂದೆ ಡೆಲ್ಟಾ ಸೇರಿದಂತೆ ಇತರ ರೂಪಾಂತರಗಳಿಂದ ಸೋಂಕಿಗೆ ಒಳಗಾದ ಮತ್ತು ತಾವಾಗಿಯೇ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಕಂಡುಬಂದಕ್ಕಿಂತ ಹೆಚ್ಚಾಗಿರುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಈ ಮಧ್ಯೆ, Moderna ಅಥವಾ Pfizerನಂತಹ ಇತರ ಲಸಿಕೆಗಳ ಮೇಲಿನ ಅಧ್ಯಯನಗಳಲ್ಲಿ ಕಂಡುಬಂದ ಪ್ರಕಾರ, ತಮ್ಮ 3ನೇ ಡೋಸ್‌ಗಳು Omicron ರೂಪಾಂತರದ ವಿರುದ್ಧ ಸ್ವಲ್ಪ ರಕ್ಷಣೆ ನೀಡುತ್ತವೆ ಎಂದು ಸೂಚಿಸಿವೆ. ಆದರೂ, ಡೆಲ್ಟಾ ರೂಪಾಂತರದ ವಿರುದ್ಧದ ರಕ್ಷಣೆಗೆ ಹೋಲಿಸಿದರೆ ಕಡಿಮೆ ಪರಿಣಾಮಕಾರಿತ್ವ ಹೊಂದಿದೆ ಎಂದು ತಿಳಿದುಬಂದಿತ್ತು.

ಭಾರತದಲ್ಲಿ ನೀಡಲಾದ ಎಲ್ಲಾ ಲಸಿಕೆಗಳಲ್ಲಿ ಕೋವಿಶೀಲ್ಡ್ 85 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿದೆ. ಆ ಕಾರಣಕ್ಕಾಗಿ, ಇದು ಬೂಸ್ಟರ್ ಡೋಸ್‌ಗಳಿಗೆ ಸೂಕ್ತವಾದ ಲಸಿಕೆ ಎಂದು ಪರಿಗಣಿಸಲಾಗುವುದಿಲ್ಲ. ಪ್ರಾಥಮಿಕ ಡೋಸ್‌ಗಳಿಗಿಂತ ವಿಭಿನ್ನವಾದ ಲಸಿಕೆ ಬಳಸಿದರೆ ಬೂಸ್ಟರ್ ಡೋಸ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಆರೋಗ್ಯ ತಜ್ಞರು ಸ್ಪಷ್ಟನೆ ನೀಡುತ್ತಿದ್ದಾರೆ ಮತ್ತು ಹಲವಾರು ಅಧ್ಯಯನಗಳು ಸಹ ಇದೇ ರೀತಿ ತೋರಿಸಿವೆ ಎಂದೂ ಹೇಳಲಾಗುತ್ತಿದೆ. ಇನ್ನೊಂದೆಡೆ, ಓಮೈಕ್ರಾನ್‌ ರೂಪಾಂತರದ ವಿರುದ್ಧವೇ ನಿರ್ದಿಷ್ಟ ಲಸಿಕೆ ಅಭಿವೃದ್ಧಿಪಡಿಸುವ ತನ್ನ ಯೋಜನೆಗಳನ್ನು ಸಹ ಆಸ್ಟ್ರಾಜೆನಿಕಾ ಇತ್ತೀಚೆಗೆ ಘೋಷಿಸಿತ್ತು.

ಮಕ್ಕಳಿಗೆ ಲಸಿಕೆ ಹಾಕುವುದು
ಓಮಿಕ್ರಾನ್‌ ರೂಪಾಂತರ ಹೆಚ್ಚು ವೇಗವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಸೋಂಕು ಪ್ರಕರಣಗಳ ಉಲ್ಬಣದ ನಡುವೆ ಯುರೋಪಿನ ಹಲವಾರು ದೇಶಗಳು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿವೆ. ಆದರೆ, ಭಾರತ ಸೇರಿ ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ, ಕಿರಿಯ ವಯಸ್ಸಿನ ಗುಂಪುಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಇನ್ನು ಕೆಲವು ದೇಶಗಳು ನಂತರ 12-18 ವಯಸ್ಸಿನ ಯುವಕ - ಯುವತಿಯರಿಗೆ ಲಸಿಕೆಗಳನ್ನು ನೀಡುವ ಕಾರ್ಯಕ್ರಮವನ್ನು ಕ್ರಮೇಣ ಪ್ರಾರಂಭಿಸಿದೆ.

ಮಕ್ಕಳೇ ಓಮೈಕ್ರಾನ್‌ ಟಾರ್ಗೆಟ್‌..?
ಕಿರಿಯ ವಯಸ್ಸಿನ ಗುಂಪುಗಳಲ್ಲಿನ ಜನ ಸೇರಿ ಲಸಿಕೆ ಪಡೆಯದ ಜನಸಂಖ್ಯೆ, ಓಮೈಕ್ರಾನ್‌ ರೂಪಾಂತರಕ್ಕೆ ಗುರಿಯಾಗುತ್ತಾರೆ ಎಂದು ಪರಿಗಣಿಸಲಾಗಿದೆ. ಫ್ರಾನ್ಸ್‌ನಲ್ಲಿನ ಇತ್ತೀಚಿನ ಅಧ್ಯಯನದ ಪ್ರಕಾರ 6-10 ವಯಸ್ಸಿನ ಮಕ್ಕಳು ಇತರ ಜನಸಂಖ್ಯೆಗಿಂತ ಸೋಂಕಿಗೀಡಾಗುತ್ತಿರುವ ಪ್ರಮಾಣ 2 ಪಟ್ಟು ಹೆಚ್ಚಿದೆ ಎಂದು ಕಂಡುಕೊಂಡಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಚ್ಚೆತ್ತುಕೊಂಡಿರುವ ಫ್ರಾನ್ಸ್‌, ತನ್ನ ದೇಶದ 5 - 11 ವರ್ಷದ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಆರಂಭಿಸಿದೆ. ಹಾಗೂ, 5 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳನ್ನು ನೀಡುವುದಾಗಿ ಫ್ರಾನ್ಸ್ ಈಗ ಹೇಳಿದೆ. ಇಟಲಿಯಲ್ಲಿ ಸಹ ಇದೇ ಮಾದರಿಯನ್ನು ಗಮನಿಸಲಾಗಿದೆ, ಅಲ್ಲಿ ಶಾಲಾ ಮಕ್ಕಳು ಮತ್ತು ಯುವ ವಯಸ್ಕರು ಇತ್ತೀಚಿನ ಹೆಚ್ಚಿನ ಪ್ರಕರಣಗಳಿಗೆ ಕಾರಣರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹೇಳಿದೆ. ಈ ಹಿನ್ನೆಲೆ, ಜರ್ಮನಿ, ಗ್ರೀಸ್, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ಕೂಡ ಮಕ್ಕಳಿಗೆ ಲಸಿಕೆಗಳನ್ನು ನೀಡುವ ಕಾರ್ಯಕ್ರಮವನ್ನು ಪ್ರಾರಂಭಗೊಳಿಸಿದೆ.

ಭಾರತದಲ್ಲೂ ಮಕ್ಕಳಲ್ಲಿ ಹರಡುತ್ತಿದೆ ಓಮೈಕ್ರಾನ್‌..!
ಯುರೋಪ್‌ ದೇಶಗಳಂತೆ ಭಾರತದಲ್ಲೂ ಸೋಂಕಿಗೀಡಾತ್ತಿರುವವರ ಪೈಕಿ ಮಕ್ಕಳೂ ಹೆಚ್ಚಾಗುತ್ತಿದ್ದಾರೆ. ಓಮೈಕ್ರಾನ್‌ ಕೂಡ ಇತ್ತೀಚೆಗೆ ದೇಶದ ಮಕ್ಕಳಲ್ಲಿ ಹರಡುತ್ತಿದೆ. ಇದಕ್ಕೆ ಉದಾಹರಣೆ ಗುರುವಾರ ಮಹಾರಾಷ್ಟ್ರದಲ್ಲಿ ಪತ್ತೆಯಾದ 23 ಓಮಿಕ್ರಾನ್ ಪ್ರಕರಣಗಳಲ್ಲಿ 4 ಕೇಸ್‌ಗಳು ಮತ್ತು ಗುಜರಾತ್‌ನಲ್ಲಿ ಏಳರಲ್ಲಿ ಮೂರು ಪ್ರಕರಣಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪತ್ತೆಯಾಗಿರುವುದು ಕಂಡುಬಂದಿದೆ.

ಯುಕೆ ಹಾಗೂ ಯುರೋಪ್‌ನಲ್ಲಿ ಮುಂದುವರಿದ ಕೋವಿಡ್ - 19 ಅಬ್ಬರ
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೆಚ್ಚು ಜನಸಂಖ್ಯೆ ಲಸಿಕೆಗಳನ್ನು ಪಡೆದಿದ್ದರೂ ಸಹ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಗುರುವಾರ ಸತತ ಎರಡನೇ ದಿನ ದಾಖಲೆ ಮುರಿಯುವ ಹೊಸ ಕೊರೊನಾ ವೈರಸ್‌ ಪ್ರಕರಣಗಳನ್ನು ದೇಶ ಹೊಂದಿದೆ. ಹಿಂದಿನ ದಿನ 1.06 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆಹಚ್ಚಿದ ನಂತರ 24 ಗಂಟೆಗಳ ಅವಧಿಯಲ್ಲಿ 1.19 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ.

ಇದನ್ನೂ ಓದಿ: Mask: ಬಟ್ಟೆ, ಟ್ರೆಂಡಿ ಮಾಸ್ಕ್​ಗೆ ಬಗ್ಗಲ್ಲ Omicron​; ಮಾಸ್ಕ್ ಆಯ್ಕೆಯಲ್ಲಿ ಇರಲಿ ಎಚ್ಚರ

ಸ್ಪೇನ್‌ನಲ್ಲೂ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು, ತನ್ನ ಅತಿ ಹೆಚ್ಚು ಏಕ ದಿನದ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಗುರುವಾರ 50,000ಕ್ಕೂ ಹೆಚ್ಚು ಕೋವಿಡ್ - 19 ಸೋಂಕುಗಳು ವರದಿಯಾಗಿವೆ. ಇನ್ನು, ಫ್ರಾನ್ಸ್‌ನಲ್ಲಿ, ದೈನಂದಿನ ಪ್ರಕರಣಗಳ ಸಂಖ್ಯೆ ಈಗ 70,000 ಮೀರಿದೆ ಮತ್ತು ಶೀಘ್ರದಲ್ಲೇ 1 ಲಕ್ಷ ಗಡಿ ದಾಟಲಿದೆ ಎಂದು ಆ ದೇಶದ ಆರೋಗ್ಯ ಸಚಿವರು ಈಗಾಗಲೇ ಎಚ್ಚರಿಸಿದ್ದಾರೆ. ಬಹುತೇಕ ಯುರೋಪ್‌ ದೇಶಗಳಲ್ಲೂ ಸಹ ಇದೇ ಪರಿಸ್ಥಿತಿ ಇದೆ, ಅಮೆರಿಕದಲ್ಲೂ ಸಹ ಕೋವಿಡ್ - 19 ಸೋಂಕಿತರು ದಿನೇ ದಿನೇ ಸಾಕಷ್ಟು ಸಂಖ್ಯೆಯಲ್ಲಿ ಪತ್ತೆಯಾಗುತ್ತಲೇ ಇದ್ದಾರೆ
Published by:vanithasanjevani vanithasanjevani
First published: