ಕೊರೋನಾ ಎರಡನೇ ಅಲೆ ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಡುವೆಯೇ ಈಗ ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಎನ್ನುವ ಹೊಸ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಕೋವಿಡ್-19 ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆಯಿಂದಾಗಿ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ ರೋಗ ಪತ್ತೆಯಾಗುತ್ತಿದೆ. ಇದು ಭಾರತೀಯರ ಜೀವವನ್ನು ಹಿಂಡಲು ಪ್ರಾರಂಭಿಸಿದೆ. ಈಗಾಗಲೇ ಸಾವಿನ ಮನೆಯ ಬಾಗಿಲು ತಟ್ಟಿ ಬಂದವರಿಗೆ ಮತ್ತೊಂದು ಯಮಯಾತನೆ ನೀಡುತ್ತಿದೆ.
ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾದ ಬಳಿಕ ಅದಕ್ಕೆ ಚಿಕಿತ್ಸೆ ಕಂಡುಹಿಡಿಯುತ್ತಿರುವಾಗಲೇ, ವೈಟ್ ಮತ್ತು ಯಲ್ಲೋ ಫಂಗಸ್ ಸೋಂಕು ಭಾರತದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳಲು ಶುರುವಾಗಿದೆ. ಮೊದಲು ಬ್ಲ್ಯಾಕ್(ಕಪ್ಪು ಶಿಲೀಂಧ್ರ-Black Fungus ), ನಂತರ ವೈಟ್(ಬಿಳಿ ಶಿಲೀಂಧ್ರ-White Fungus), ಈಗ ಎಲ್ಲೋ(ಹಳದಿ ಶಿಲೀಂಧ್ರ -Yellow Fungus) ಈ ಮೂರು ಸೋಂಕುಗಳ ಕೊರೋನಾ ವೈರಸ್ನಿಂದ(corona virus) ಚೇತರಿಕೆಯಾದವರ ಜೀವ ಹಿಂಡಿ ಹಿಪ್ಪೆ ಮಾಡಿವೆ.
ಈ ಮೂರು ಸಹ ಶಿಲೀಂಧ್ರಗಳ ಸೋಂಕುಗಳಾಗಿವೆ. ಇವುಗಳ ಲಕ್ಷಣಗಳು, ತಡೆಗಟ್ಟುವ ವಿಧಾನಗಳು ಪರಸ್ಪರ ವಿಭಿನ್ನವಾಗಿರುತ್ತವೆ.
ಯಲ್ಲೋ ಫಂಗಸ್ ಎಂದರೇನು?(ಹಳದಿ ಶಿಲೀಂಧ್ರ) What is Yellow Fungus?
ಈ ಯಲ್ಲೋ ಫಂಗಸ್ ಸೋಂಕು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಗಾಜಿಯಾಬಾದ್ನಲ್ಲಿ ಪತ್ತೆಯಾಗಿದೆ. ಇದು ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಸೋಂಕುಗಳಿಗಿಂತ ಹೆಚ್ಚಿನ ಅಪಾಯಕಾರಿಯಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಯಾಕೆಂದರೆ ಈ ಯಲ್ಲೋ ಫಂಗಸ್ ದೇಹದ ಆಂತರಿಕ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯಲೋಕ ಹೇಳುತ್ತಿದೆ.
ಯಲ್ಲೋ ಫಂಗಸ್ ಬರಲು ಕಾರಣವೇನು? Yellow Fungus Causes
ವೈಟ್ ಮತ್ತು ಬ್ಲ್ಯಾಕ್ ಫಂಗಸ್ ಸೋಂಕಿನಂತೆ ಇದು ಸಹ ಮುಖ್ಯವಾಗಿ ಕಲುಷಿತ ಆಹಾರ, ನೈರ್ಮಲ್ಯದ ಕೊರತೆ, ಅಶುಚಿತ್ವ ಹಾಗೂ ಆಕ್ಸಿಜನ್ ಮೂಲದಂತಹ ಅನಾರೋಗ್ಯಕರ ಪರಿಸ್ಥಿತಿಗಳಿಂದ ಬರುತ್ತದೆ. ಅತಿಯಾದ ಸ್ಟಿರಾಯ್ಡ್ಗಳ ಬಳಕೆ ಹಾಗೂ ಆ್ಯಂಟಿ-ವೈರಸ್ ಔಷಧಿಗಳ ಅತೀ ಬಳಕೆ ಕೂಡ ಯಲ್ಲೋ ಫಂಗಸ್ಗೆ ಕಾರಣವಾಗಬಹುದು. ಕೊಮೊರ್ಬಿಡಿಟಿಗಳನ್ನು ಹೊಂದಿರುವ ಅಥವಾ ಇಮ್ಯುನೋ-ಸಪ್ರೆಸೆಂಟ್ಗಳ ಮೇಲೆ ಇರುವ ರೋಗಿಗಳು ಈ ಯಲ್ಲೋ ಫಂಗಸ್ನ ಅಪಾಯವನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಯಲ್ಲೋ ಫಂಗಸ್ನ ಲಕ್ಷಣಗಳೇನು? Yellow Fungus Symptoms
ಇದು ದೇಹದ ಒಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೀವು ಸೋರಿಕೆಗೆ ಕಾರಣವಾಗುತ್ತದೆ, ಗಾಯಗಳು ಗುಣವಾಗಲು ನಿಧಾನವಾಗುತ್ತದೆ. ಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ತೀವ್ರವಾದ ನೆಕ್ರೋಸಿಸ್ ಉಂಟಾಗುತ್ತದೆ.
ಸೋಂಕು ಹರಡಿದ ಪ್ರಾರಂಭದಲ್ಲಿ ರೋಗಿಗಳಿಗೆ ಆಲಸ್ಯದ ಅನುಭವವಾಗುತ್ತದೆ. ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ, ರೋಗಿಗಳ ದೇಹದಲ್ಲಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಸಿವಾಗದಿರಬಹುದು, ಕಳಪೆ ಆಹಾರ ತಿನ್ನುವ ಪದ್ಧತಿ ರೂಢಿಸಿಕೊಳ್ಳಬಹುದು. ಇದು ಕೊನೆಗೆ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಕ್ರಮೇಣ ಚಯಾಪಚಯ ಕ್ರಿಯೆ ಮೇಲೂ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:Madhya Pradesh: ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ರಾಡ್ನಿಂದ ಥಳಿಸಿದ ಗ್ರಾಮಸ್ಥರು
ಬ್ಲ್ಯಾಕ್ ಫಂಗಸ್ ಎಂದರೇನು? What is Black Fungus?
ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ಸಹ ಅಶುಚಿತ್ವದಿಂದ ಹರಡುತ್ತದೆ. ಮುಖ್ಯವಾಗಿ ಡಯಾಬಿಟಿಸ್ ಇರುವ ರೋಗಿಗಳಿಗೆ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಇರುವವರಿಗೂ ಬ್ಲ್ಯಾಕ್ ಫಂಗಸ್ ಭಾದಿಸುತ್ತದೆ. ಇದು ಗಾಳಿಯ ಮೂಲಕ ಹರಡಬಹುದಾದರೂ ಸಹ, ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದರೆ ಅದು ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಎಂದು ಏಮ್ಸ್ ಪ್ರಾಧ್ಯಾಪಕ ಡಾ.ನಿಖಿಲ್ ಟಂಡನ್ ಹೇಳಿದ್ದಾರೆ.
ಬ್ಲ್ಯಾಕ್ ಫಂಗಸ್ ಹರಡಲು ಕಾರಣವೇನು? Black Fungus causes
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಾಗಿ ಸ್ಟಿರಾಯ್ಡ್ ಇಂಜೆಕ್ಷನ್ನ್ನು ಬಳಸಲಾಗುತ್ತದೆ. ಇದು ಉಸಿರಾಟದ ಪ್ರದೇಶಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದೇ ವೇಳೆ ಸೋಂಕಿನ ವಿರುದ್ಧ ಹೋರಾಡುವ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೂ ಸಹ ಪರಿಣಾಮ ಬೀರುತ್ತದೆ. ಅಂತಹ ವ್ಯಕ್ತಿಗಳಿಗೆ ಈ ಬ್ಲ್ಯಾಕ್ ಫಂಗಸ್ ವಕ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿಡ್ನಿಗಳ ಸಮಸ್ಯೆ, ಡಯಾಬಿಟಿಸ್, ಕ್ಯಾನ್ಸರ್ ಇರುವ ಹಾಗೂ ಯಾರೂ ದೀರ್ಘಕಾಲ ಸ್ಟಿರಾಯ್ಡ್ಗಳನ್ನು ಬಳಸುತ್ತಾರೋ ಅವರಿಗೆ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಅತಿಯಾದ ಸ್ಟಿರಾಯ್ಡ್ ಬಳಕೆಯಿಂದಾಗಿ ಮಾನವನ ದೇಹದಲ್ಲಿನ ಬಿಳಿರಕ್ತಕಣಗಳು ಬಹುತೇಕ ನಶಿಸಿಹೋಗಿರುತ್ತವೆ.
ಬ್ಲ್ಯಾಕ್ ಫಂಗಸ್ನ ಲಕ್ಷಣಗಳೇನು? Black Fungus Symptoms
ಈ ಬ್ಲ್ಯಾಕ್ ಫಂಗಸ್ ರೋಗಿಯ ಸೈನಸ್ ಮತ್ತು ಶ್ವಾಸಕೋಸದ ಮೇಲೆ ಪರಿಣಾಮ ಬೀರುತ್ತದೆ. ಮುಖದ ಒಂದು ಭಾಗ ಊದಿಕೊಳ್ಳುತ್ತದೆ. ತೀವ್ರ ತಲೆನೋವು, ಮೂಗು ಕಟ್ಟಿದಂತಾಗುತ್ತದೆ, ಮೂಗಿನ ಮೇಲೆ ಮತ್ತು ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸುತ್ತವೆ, ಎದೆನೋವು, ಉಸಿರಾಟದ ತೊಂದರೆ, ಕಣ್ಣಿನ ದೃಷ್ಟಿ ಕಡಿಮೆಯಾಗುವುದು ಇವೆಲ್ಲಾ ಬ್ಲ್ಯಾಕ್ ಫಂಗಸ್ನ ಲಕ್ಷಣಗಳಾಗಿವೆ. ಏಮ್ಸ್ ವೈದ್ಯರ ಪ್ರಕಾರ, ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ತೆರೆಯಲು ಹಾಗೂ ಜಗಿಯುವಾಗ ಹಿಂಸೆಯಾಗುತ್ತದೆ. ಹಲ್ಲುಗಳು ಸಹ ಸಡಿಲಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಸ್ಟಿರಾಯ್ಡ್ಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಾಗೂ ಕೊರೋನಾ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ವೈಟ್ ಫಂಗಸ್ ಎಂದರೇನು? What is White Fungus?
ವೈಟ್ ಫಂಗಸ್ ಅಥವಾ ಬಿಳಿ ಶಿಲೀಂಧ್ರ ಸೋಂಕು ಬ್ಲ್ಯಾಕ್ ಫಂಗಸ್ಗಿಂತ ಹೆಚ್ಚು ಅಪಾಯಕಾರಿ. ದೇಹದಲ್ಲಿ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಖಾಸಗಿ ಭಾಗಗಳು ಹಾಗೂ ಮೆದುಳಿನ ಮೇಲೂ ಈ ವೈಟ್ ಫಂಗಸ್ ಪರಿಣಾಮ ಬೀರಬಹುದು.
White Fungus Causes
ಬ್ಲ್ಯಾಕ್ ಫಂಗಸ್ ಇರುವ ರೋಗಿಗಳಲ್ಲಿ ವೈಟ್ ಫಂಗಸ್ ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ವೈಟ್ ಫಂಗಸ್ ಹೆಚ್ಚಾಗಿ ಭಾದಿಸುತ್ತದೆ. ಡಯಾಬಿಟಿಸ್ ಮತ್ತು ಕ್ಯಾನ್ಸರ್ ಇರುವ ರೋಗಿಗಳು ಎಚ್ಚರಿಕೆ ವಹಿಸುವುದು ಒಳಿತು. ಹೆಚ್ಚಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುವವರಿಗೆ ಮತ್ತು ಯಾರು ದೀರ್ಘ ಕಾಲ ಐಸಿಯುನಲ್ಲಿ ಇರುತ್ತಾರೋ ಅವರಿಗೆ ವೈಟ್ ಫಂಗಸ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಾಲಿಗೆ ಮತ್ತು ಖಾಸಗಿ ಭಾಗಗಳಿಂದ ಶುರುವಾಗುತ್ತದೆ. ನಾಲಿಗೆ ಬಿಳಿ ಬಣ್ಣಕ್ಕೆ ತಿರುಗುತ್ತದೆ ಎಂದು ಏಮ್ಸ್ನ ಪ್ರೊಫೆಸರ್ ಡಾ.ಕೌಶಲ್ ವರ್ಮಾ ಹೇಳಿದ್ದಾರೆ. ವೈಟ್ ಫಂಗಸ್ ಸೋಂಕು SARS-CoV2 ಸೋಂಕಿನ ರೀತಿ ಇರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದು ಶ್ವಾಸಕೋಸದ ಮೇಲೂ ಪ್ರಭಾವ ಬೀರುತ್ತದೆ. ಸಿಟಿ ಸ್ಕ್ಯಾನ್ ಮಾಡಿಸುವ ಮೂಲಕ ವೈಟ್ ಫಂಗಸ್ನ್ನು ಪತ್ತೆ ಹಚ್ಚಬಹುದಾಗಿದೆ.
ವೈಟ್ ಫಂಗಸ್ನ ಸಾಮಾನ್ಯ ಲಕ್ಷಣಗಳೆಂದರೆ, ಕೆಮ್ಮು, ಜ್ವರ, ಅತಿಸಾರ, ಶ್ವಾಸಕೋಶದ ಮೇಲೆ ಕಪ್ಪು ಕಲೆಗಳು, ಆಮ್ಲಜನಕದ ಮಟ್ಟ ಕಡಿಮೆಯಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ