• ಹೋಂ
 • »
 • ನ್ಯೂಸ್
 • »
 • Explained
 • »
 • Sri Lanka Crisis: ಧಗಧಗಿಸುತ್ತಿರುವ ಸಿಂಹಳದ ಸಿಂಹಾಸನ ಯಾರಿಗೆ? ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ!

Sri Lanka Crisis: ಧಗಧಗಿಸುತ್ತಿರುವ ಸಿಂಹಳದ ಸಿಂಹಾಸನ ಯಾರಿಗೆ? ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ!

ಸಜಿತ್ ಪ್ರೇಮದಾಸ್ ಹಾಗೂ ರನಿಲ್ ವಿಕ್ರಮಸಿಂಘೆ

ಸಜಿತ್ ಪ್ರೇಮದಾಸ್ ಹಾಗೂ ರನಿಲ್ ವಿಕ್ರಮಸಿಂಘೆ

ಸದ್ಯ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರೇಸ್ ಏರ್ಪಟ್ಟಿದ್ದು, ಕನಿಷ್ಠ ಅರ್ಧ ಡಜನ್ ಮಂದಿ ರೇಸ್‌ನಲ್ಲಿದ್ದಾರೆ.  ಹಾಲಿ ಪ್ರಧಾನಿ ಹಾಗೂ ಹಂಗಾಮಿ ಅಧ್ಯಕ್ಷರಾಗಿರುವ ರನಿಲ್ ವಿಕ್ರಮಸಿಂಘೆ ಅವರು ರಾಜಪಕ್ಸೆ ಕುಟುಂಬದ ಬಹುಮತದ ಪಕ್ಷವಾದ ಎಸ್‌ಎಲ್‌ಪಿಪಿ ಬೆಂಬಲದೊಂದಿಗೆ ರೇಸ್‌ನಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಇದೀಗ ಅವರ ಪ್ರತಿಸ್ಪರ್ಧಿಯಾಗಿರುವವರು ವಿಪಕ್ಷ ನಾಯಕ, ಎಸ್‌ಜೆಬಿ ಪಕ್ಷದ ಸಜಿತ್ ಪ್ರೇಮದಾಸ್.

ಮುಂದೆ ಓದಿ ...
 • Share this:

ರಾಮಾಯಣದಲ್ಲಿ (Ramayana) ಆಂಜನೇಯ (Anjaneya) ಲಂಕಾ ದಹನ ಮಾಡಿದ ಬಗ್ಗೆ ಪ್ರಸಂಗವೊಂದಿದೆ. ಆದರೆ ಈಗ ಅಲ್ಲಿನ ಜನರೇ ಲಂಕೆಗೆ ಬೆಂಕಿ (Fire) ಇಡುತ್ತಿದ್ದಾರೆ. ಹೌದು, ಶ್ರೀಲಂಕಾ (Sri Lanka) ಕೊತಕೊತನೆ ಕುದಿಯುತ್ತಿದೆ. ಆರ್ಥಿಕ ಬಿಕ್ಕಟ್ಟು (Economic Crisis), ರಾಜಕೀಯ ಬಿಕ್ಕಟ್ಟಿನಿಂದಾಗಿ (Political Crisis) ಸ್ವರ್ಣ ಲಂಕೆ ಧಗಧಗನೆ ಉರಿಯುತ್ತಿದೆ. ಜನರ ಆಕ್ರೋಶ, ಅಸಹಾಯಕತೆ, ಸಂಕಟವೆಲ್ಲ ಮೊನ್ನೆ ಜುಲೈ 9ರಂದು ಸ್ಫೋಟಗೊಂಡಿತ್ತು. ಆ ಸ್ಫೋಟಕ್ಕೆ ಅಂದಿನ ಶ್ರೀಲಂಕಾ ಅಧ್ಯಕ್ಷ (ಈಗ ಮಾಜಿ) ಗೋತಬಯ ರಾಜಪಕ್ಸ (Gotabaya Rajapaksa) ತರತರನೆ ನಡುಗಿ ಬಿಟ್ಟಿದ್ದರು. ರಾತ್ರೋರಾತ್ರಿ ಹೆಂಡತಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್‌ಗೆ (Maldives) ಪ್ರಯಾಣ ಮಾಡಿದ್ದರು. ಬಳಿಕ ಅಲ್ಲಿಂದ ಖಾಸಗಿ ಕಾರ್ಯಕ್ರಮದ ನೆಪದಲ್ಲಿ ಸಿಂಗಾಪೂರ್‌ಗೆ (Singapore) ತೆರಳಿದ್ದು, ಸದ್ಯ ಅಲ್ಲೇ ಇದ್ದಾರೆ ಎನ್ನಲಾಗಿದೆ. ಅವರ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಯ (Protest) ನೇತೃತ್ವ ವಹಿಸಿದ್ದ ಅರಗಾಲಯ ಅಥವಾ ಅರಗಲಿಸ್ಟ್‌ಗಳು (ಸಿಂಹಳೀಯ ಭಾಷೆಯಲ್ಲಿ 'ಹೋರಾಟ' ಎಂದರ್ಥ) ಅಸಾಧ್ಯವಾದುದನ್ನು ಸಾಧಿಸಿದ್ದಾರೆ. ಆದರೆ, ಇಷ್ಟಕ್ಕೇ ಅವರ ಹೋರಾಟ ಮುಗಿದಿಲ್ಲ. ಯಾಕೆಂದರೆ ಮುಂದೆ ಲಂಕೆಯ ಆಡಳಿತದ ಚುಕ್ಕಾಣಿ ಹಿಡಿಯುವವರು ದೂರದೃಷ್ಟಿಯುಳ್ಳವರು, ಸಮರ್ಥರೂ, ಜನಪರ ಆಡಳಿತ ನಡೆಸುವವರೂ, ಮುಖ್ಯವಾಗಿ ಪಾತಾಳಕ್ಕೆ ಕುಸಿದ ಶ್ರೀಲಂಕಾ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಸಾಧ್ಯವಿರುವ ಅಧ್ಯಕ್ಷರನ್ನು ಬಯಸುತ್ತಿದ್ದಾರೆ.


ಜುಲೈ 20ರಂದು ಅಧ್ಯಕ್ಷೀಯ ಚುನಾವಣೆ


ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೆಯವರ್ಧನೆ ಅವರು ಜುಲೈ 20 ರಂದು ಅಧ್ಯಕ್ಷೀಯ ಚುನಾವಣೆಗೆ ದಿನವನ್ನು ನಿಗದಿಪಡಿಸಿದ್ದಾರೆ. ಲಂಕಾ ಸಂಸತ್‌ನ ಎಲ್ಲಾ 225 ಸದಸ್ಯರು ಅದರಲ್ಲಿ ಮತ ಚಲಾಯಿಸಲು ಮತ್ತು ಸ್ಪರ್ಧಿಸಲು ಅರ್ಹರಾಗಿದ್ದಾರೆ.


ಅಧ್ಯಕ್ಷ ಸ್ಥಾನಕ್ಕೆ ಶುರುವಾಗಿದೆ ರೇಸ್!


ಸದ್ಯ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರೇಸ್ ಏರ್ಪಟ್ಟಿದ್ದು, ಕನಿಷ್ಠ ಅರ್ಧ ಡಜನ್ ಮಂದಿ ರೇಸ್‌ನಲ್ಲಿದ್ದಾರೆ.  ಹಾಲಿ ಪ್ರಧಾನಿ ಹಾಗೂ ಹಂಗಾಮಿ ಅಧ್ಯಕ್ಷರಾಗಿರುವ ರನಿಲ್ ವಿಕ್ರಮಸಿಂಘೆ ಅವರು ರಾಜಪಕ್ಸೆ ಕುಟುಂಬದ ಬಹುಮತದ ಪಕ್ಷವಾದ ಎಸ್‌ಎಲ್‌ಪಿಪಿ (ಶ್ರೀಲಂಕಾ ಪೊದುಜನ ಪೆರಮುನಾ ಅಥವಾ ಶ್ರೀಲಂಕಾ ಪೀಪಲ್ಸ್ ಫ್ರಂಟ್) ಪಾರ್ಟಿ ಬೆಂಬಲದೊಂದಿಗೆ ರೇಸ್‌ನಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಇದೀಗ ಅವರ ಪ್ರತಿಸ್ಪರ್ಧಿಯಾಗಿರುವವರು ವಿಪಕ್ಷ ನಾಯಕ, ಎಸ್‌ಜೆಬಿ (ಸಮಗಿ ಜನ ಬಲವೇಗಾಯ) ಪಕ್ಷದ ಸಜಿತ್ ಪ್ರೇಮದಾಸ್.


ಹೊಸ ಅಧ್ಯಕ್ಷರಿಗೆ 28 ತಿಂಗಳು ಅಧಿಕಾರ


ಶ್ರೀಲಂಕಾ ಸಂಸತ್‌ನಲ್ಲಿ ಎಸ್‌ಎಲ್‌ಪಿಪಿ 145 ಸದಸ್ಯರನ್ನು ಹೊಂದಿದೆ. ಆದರೆ ಅಧ್ಯಕ್ಷರು ಚುನಾಯಿತರಾಗಲು ಕನಿಷ್ಠ 113 ಮತಗಳು ಬೇಕು. ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ಇನ್ನೂ ಅಂದಾಜು 28 ತಿಂಗಳು ಅಧಿಕಾರದಲ್ಲಿ ಇರಬೇಕಿತ್ತು. ಹೀಗಾಗಿ ನೂತನ ಅಧ್ಯಕ್ಷರು ಉಳಿದ ಅವಧಿವರೆಗೆ ಅಧಿಕಾರದಲ್ಲಿ ಇರುತ್ತಾರೆ.


ಇದನ್ನೂ ಓದಿ: Sri Lanka: ಗೋತಬಯ ರಾಜೀನಾಮೆ ಅಂಗೀಕಾರ, ಮುಂದಿನ ವಾರದೊಳಗೆ ಲಂಕಾಕ್ಕೆ ಹೊಸ ಅಧ್ಯಕ್ಷರ ಆಯ್ಕೆ


ರನಿಲ್ ವಿಕ್ರಮಸಿಂಘೆ ಉಮೇದುವಾರಿಕೆಗೆ ವಿರೋಧ


ಇನ್ನು ಎಸ್‌ಎಲ್‌ಪಿಪಿಗೆ ಈಗಾಗಲೇ ಭಾರೀ ಆಘಾತ ಎದುರಾಗಿದೆ. ಸುಮಾರು 40ಕ್ಕೂ ಹೆಚ್ಚು ಸಂಸದರು ತಾವು ಈ ಪಕ್ಷದ ಭಾಗವಾಗಿಲ್ಲ ಅಂತ ಹೇಳಿದ್ದು, ಸ್ವತಂತ್ರವಾಗಿದ್ದೇವೆ ಅಂತ ಘೋಷಿಸಿಕೊಂಡಿದ್ದಾರೆ. ಇದರ ನಡುವೆಯೇ ರನಿಲ್ ವಿಕ್ರಮಸಿಂಘೆ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದ್ದು, ಮತದಾನದಂದೇ ಅನೇಕ ಸಂಸದರು ಕೈಕೊಟ್ಟರೂ ಅಚ್ಚರಿಯಿಲ್ಲ.


ಸಜಿತ್‌ ಪ್ರೇಮದಾಸ್‌ಗೆ ಸಿಗುತ್ತಾ ಬೆಂಬಲ?


ಮತ್ತೊಂದೆಡೆ ಸಜಿತ್ ಪ್ರೇಮದಾಸ ಅವರಿಗೆ ಅವರದೇ ಪಕ್ಷದ ಸುಮಾರು 55 ಸಂಸದರು ಬೆಂಬಲ ನೀಡಿದ್ದಾರೆ. ಅಲ್ಪಸಂಖ್ಯಾತ ತಮಿಳು ಮತ್ತು ಮುಸ್ಲಿಂ ಸಂಸದರ ನೆರವಿನಿಂದ ಅವರು ಸುಮಾರು 80 ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಚುನಾವಣೆಯಲ್ಲಿ ಗೆಲ್ಲಲು ಅವರಿಗೆ ಇನ್ನೂ 33 ಮತಗಳ ಅಗತ್ಯವಿದೆ. ಅತ್ತ ಎಸ್‌ಎಲ್‌ಪಿಪಿಯ ಬಂಡಾಯ ಸಂಸದರೂ ಕೂಡ ಅವರನ್ನು ಬೆಂಬಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.


ಇಬ್ಬರ ಸ್ಪರ್ಧೆ ನಡುವೆ ಮೂರನೇ ವ್ಯಕ್ತಿಗೆ ಸಿಗುತ್ತಾ ಅಧಿಕಾರ?


ಒಂದು ವೇಳೆ ಅಧ್ಯಕ್ಷ ಚುನಾವಣೆಯಲ್ಲಿ ಪ್ರೇಮದಾಸ್ ಗೆದ್ದರೆ, ಪ್ರಧಾನಿಯಾಗಿ ವಿಕ್ರಮಸಿಂಘೆ ಮುಂದುವರೆದರೆ ಇಬ್ಬರೂ ಸೇರಿ ಅಧಿಕಾರ ನಡೆಸುವುದು ದೂರದ ಮಾತು. ಹೀಗಾಗಿ ಈ ಇಬ್ಬರ ಜಟಾಪಟಿಯಲ್ಲಿ ಮೂರನೇ ವ್ಯಕ್ತಿಗೆ ಅಧ್ಯಕ್ಷ ಗಾದಿ ಸಿಕ್ಕಿದರೂ ಅಚ್ಚರಿಯಿಲ್ಲ. ಆ ವ್ಯಕ್ತಿಯೇ ಡಲ್ಲಾಸ್ ದಹಮ್ ಕುಮಾರ ಅಲಹಪ್ಪೆರುಮಾ.


ಡಲ್ಲಾಸ್ ದಹಮ್ ಕುಮಾರ ಅಲಹಪ್ಪೆರುಮಾ ಯಾರು?


ಡಲ್ಲಾಸ್ ದಹಮ್ ಕುಮಾರ ಅಲಹಪ್ಪೆರುಮಾ ಅವರು ಶ್ರೀಲಂಕಾದ ಮಾಜಿ ಮಾಹಿತಿ ಮತ್ತು ಸಮೂಹ ಮಾಧ್ಯಮದ ಮಂತ್ರಿ. ಸದ್ಯ ಮಾತರಾ ಕ್ಷೇತ್ರದ ಸಂಸತ್ ಸದಸ್ಯ. 1994 ರಲ್ಲಿ ತಮ್ಮ ಮೊದಲ ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವ ಮೊದಲು ಪತ್ರಕರ್ತರಾಗಿದ್ದರು. ಅವರು ಹಿಂದಿನ ರಾಜಪಕ್ಸೆ ಸಹೋದರರ ಸರ್ಕಾರದಲ್ಲಿ ವಿದ್ಯುತ್ ಮತ್ತು ಕ್ರೀಡಾ ಕ್ಯಾಬಿನೆಟ್ ಮಂತ್ರಿಯಾಗಿದ್ದರೂ ಸಹ, ಅವರು ಅವರಿಂದ ಆರೋಗ್ಯಕರ ಅಂತರವನ್ನು ಕಾಯ್ದುಕೊಂಡರು. ಈ ಅಂತರವೇ ಇದೀಗ ಅವರ ಗೆಲುವಿಗೆ ಕಾರಣವಾಗಬಹುದಾಗಿದೆ ಎನ್ನಲಾಗುತ್ತಿದೆ.


ಪ್ರೇಮದಾಸ್‌ ಜೊತೆ ಒಪ್ಪಂದಕ್ಕೆ ಮುಂದಾದ್ರಾ ವಿಕ್ರಮಸಿಂಘೆ?


ಈ ನಡುವೆ ಪ್ರೇಮದಾಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲು ವಿಕ್ರಮಸಿಂಘೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಪ್ರೇಮದಾಸ್‌ಗೆ ಕಾರ್ಯಕಾರಿ ಪ್ರಧಾನಿ ಹುದ್ದೆಯ ಆಮಿಷವೊಡ್ಡಲು ತಂತ್ರರೂಪಿಸಿದ್ದಾಗಿ ತಿಳಿದು ಬಂದಿದೆ.


ಆಫರ್ ಒಪ್ಪಿಕೊಳ್ತಾರಾ ಪ್ರೇಮದಾಸ್?


ಆದರೆ ವಿಕ್ರಮಸಿಂಘೆ ಅವರ ಆಫರ್‌ ಅನ್ನು ಪ್ರೇಮದಾಸ್ ಒಪ್ಪಿಕೊಳ್ಳುವುದು ಕಷ್ಟ. ವಿಕ್ರಮಸಿಂಘೆ ಅವರನ್ನೇ ಅಕ್ರಮ ಪ್ರಧಾನಿ ಎಂದು ಜರಿದಿದ್ದ ಪ್ರೇಮದಾಸ್ ಈ ಆಹ್ವಾನ ಒಪ್ಪಿಕೊಳ್ಳುವುದು ಅಸಾಧ್ಯ ಅಂತಾರೆ ರಾಜಕೀಯ ವಿಶ್ಲೇಷಕರು.


ಅಧ್ಯಕ್ಷ ಸ್ಥಾನದ ಮೇಲೆ ಮಾಜಿ ಸೇನಾ ಕಮಾಂಡರ್ ಕಣ್ಣು


ಮಾಜಿ ಸೇನಾ ಕಮಾಂಡರ್ ಫೀಲ್ಡ್ ಮಾರ್ಷಲ್ ಶರತ್ ಫೊನ್ಸೆಕಾ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅವರಿಗೆ ತಮಿಳು ಅಲ್ಪಸಂಖ್ಯಾತ ಸಮುದಾಯದ ಸಂಸದರ ಬೆಂಬಲ ಸಿಗುವುದು ಸಾಧ್ಯವೇ ಇಲ್ಲ. ಯಾಕೆಂದ್ರೆ 2009ರಲ್ಲಿ ಕೊನೆಗೊಂಡಿದ್ದ ಏಲಂ ಯುದ್ಧದಲ್ಲಿ ರಾಜಪಕ್ಸೆ ಜೊತೆ ಭೀಕರ ನರಮೇಧಕ್ಕೆ ಶರತ್ ಫೊನ್ಸೆಕಾ ಕೂಡ ಕಾರಣರಾಗಿದ್ದರು. ಹೀಗಾಗಿ ಅವರೀಗ ಎಸ್‌ಎಲ್‌ಪಿಪಿ ಮತ್ತು ಎಸ್‌ಜೆಬಿ ಸಂಸದರ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.


ಹೊಸ ಚುನಾವಣೆ ನಡೆಸುವಂತೆ ಪ್ರತಿಭಟನಾಕಾರರ ಆಗ್ರಹ


ಈ ನಡುವೆ 2023ರ ಆರಂಭದಲ್ಲೇ ಹೊಸದಾಗಿ ಅಧ್ಯಕ್ಷೀಯ ಹಾಗೂ ಸಂಸತ್ ಚುನಾವಣೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೊಸ ಚುನಾವಣೆ ನಡೆಸುವುದು ಸುಲಭವಲ್ಲ ಎನ್ನುವುದು ಎಲ್ಲಾ ಸಂಸದರಿಗೂ ತಿಳಿದಿದೆ.


ಇದನ್ನೂ ಓದಿ: Sri Lanka: ಶ್ರೀಲಂಕಾದ ಬಲಿಷ್ಠ ರಾಜಪಕ್ಸೆ ಕುಟುಂಬದ ಅಧಿಕಾರ ಪತನದ ಹಿಂದಿದ್ದಾರೆ ನಾಲ್ವರು! ಯಾರವರು ಅಂತ ನೋಡಿ


ಜುಲೈ 20ಕ್ಕೆ ಎಲ್ಲಾ ಕುತೂಹಲಕ್ಕೆ ಬೀಳಲಿದೆ ತೆರೆ

top videos


  ಇನ್ನು ಜುಲೈ 20ರಂದು ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಸದ್ಯ ಅಲ್ಲೋಲ ಕಲ್ಲೋಲ ಸ್ಥಿತಿಯಲ್ಲಿರುವ ಸಿಂಹಳದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಆದರೆ ಸದ್ಯ ಹಾಟ್ ಸೀಟ್‌ನಂತಿರುವ ಶ್ರೀಲಂಕಾ ಅಧ್ಯಕ್ಷರ ಹುದ್ದೆ ನಿಭಾಯಿಸೋದು ಅಷ್ಟು ಸುಲಭವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವೆಲ್ಲವುಗಳ ನಡುವೆ ಶ್ರೀಲಂಕಾದ ಪರಿಸ್ಥಿತಿ ಸುಧಾರಿಸಿ, ಸಮಸ್ಯೆಗಳನ್ನು ಬಗೆಹರಿಸುವ ಅಧ್ಯಕ್ಷ ಆಯ್ಕೆಯಾದರೆ ಸಾಕು ಅಂತ ಶ್ರೀಲಂಕಾದ ಜನಸಾಮಾನ್ಯರ ಪ್ರಾರ್ಥನೆಯಾಗಿದೆ.

  First published: