ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಬಾ ಚುನಾವಣೆಗೆ (Karnataka Assembly Election) ಕೌಂಟ್‌ಡೌನ್ ಶುರುವಾಗಿದೆ. ಕೊನೆ ಕ್ಷಣದ ಪ್ರಯತ್ನದಲ್ಲಿ ಎಲ್ಲಾ ಪಕ್ಷಗಳು ನಿರತವಾಗಿವೆ. ಈ ಹಂತದಲ್ಲಿ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು (manifesto) ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೂಡ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ವೋಟ್ ಬ್ಯಾಂಕ್ (Vote Bank) ಹೆಚ್ಚಳಕ್ಕೆ ಕಾರಣವಾಗಬೇಕಿದ್ದ ಪ್ರಣಾಳಿಕೆ ಈಗ ಕೈ ಪಡೆಗೆ ಸಂಕಷ್ಟ ತಂದೊಡ್ಡಿದೆ. ಬಿಜೆಪಿ (BJP) ಇದನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿಕೊಂಡಿದೆ. ಚುನಾವಣಾ ಕಣದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಮಂಗಳವಾರ ಕಾಂಗ್ರೆಸ್ ತನ್ನ ‘ಸರ್ವ ಜನಾಂಗದ ಶಾಂತಿಯ ತೋಟ’ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಜರಂಗದಳ (Bajranga Dal) ಸಂಘಟನೆಯ ನಿಷೇಧದ ಪ್ರಸ್ತಾಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಈ ಒಂದು ವಿಚಾರ ಈಗ ಎಲೆಕ್ಷನ್ ಸಮಯದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತವಾಗುವ ಸಂಭವಗಳು ಎದ್ದು ಕಾಣುತ್ತಿದೆ.
ಹಿಂದೂ ಸಂಘಟನೆಗಳಿಂದ ಆಕ್ರೋಶ
ರಾಜ್ಯಾದ್ಯಂತ ಭಜರಂಗದಳ ನಿಷೇಧದ ಪ್ರಸ್ತಾಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಪರ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಅಭಿಯಾನವನ್ನು ನಡೆಸುತ್ತಿವೆ. ಬಿಜೆಪಿ ಕೂಡ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಎಲ್ಲಾ ಕೇಸರಿ ಕಲಿಗಳು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಮತ್ತು ರಾಜ್ಯಾದ್ಯಂತ ಬಜರಂಗ ಬಲಿ ಮಂತ್ರ ಜೋರಾಗಿ ಕೇಳಿ ಬರುತ್ತಿದೆ.
ರಾಜ್ಯದ ತುಂಬೆಲ್ಲಾ ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ಈ ಕುರಿತಾಗಿ ಒಂದು ಅವಲೋಕನ ನಡೆಸಿದೆ. ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಬಜರಂಗದಳದ ವಿಚಾರ ಸಣ್ಣ ವರ್ಗದ ಮತದಾರರನ್ನು ಪ್ರಭಾವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Hanuman Chalisa: ಬಜರಂಗಿ ಭಕ್ತರ ಕಾಪಾಡುತ್ತಾ ಹನುಮಾನ್ ಚಾಲೀಸಾ? ಈ ಮಂತ್ರದ ಮಹತ್ವ ಗೊತ್ತಾ?
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳದ ಮೇಲೆ ನಿಷೇಧ ಹೇರುವ ಭರವಸೆಯನ್ನು ಬಿಜೆಪಿ ದೊಡ್ಡ ಚುನಾವಣಾ ವಿಷಯವನ್ನಾಗಿ ಮಾಡಿರುವುದರಿಂದ, ಕಾಂಗ್ರೆಸ್ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದು, ಕರ್ನಾಟಕದ ಒಂದು ಸಣ್ಣ ವರ್ಗದ ಜನರು ಮಾತ್ರ ಇದನ್ನು ಚುನಾವಣಾ ವಿಷಯವೆಂದು ಭಾವಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕರಾವಳಿ ಪ್ರದೇಶದಲ್ಲಿ ಸಾವಿರಾರು ಮತ ನಷ್ಟ ಸಾಧ್ಯತೆ
ಸಮೀಕ್ಷೆಯ ಪ್ರಕಾರ, ಕರ್ನಾಟಕದ ಮತದಾರರಲ್ಲಿ ಕೇವಲ 7 ಪ್ರತಿಶತದಷ್ಟು ಜನರಿಗೆ ಮಾತ್ರ ಸಮಸ್ಯೆ ಏನು ಎಂದು ತಿಳಿದಿರುತ್ತದೆ ಮತ್ತು 10 ಪ್ರತಿಶತಕ್ಕಿಂತ ಕಡಿಮೆ ಜನರು ಇದನ್ನು ಚುನಾವಣಾ ವಿಷಯವೆಂದು ಭಾವಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಜರಂಗದಳ, ಶ್ರೀರಾಮಸೇನೆ ಸೇರಿದಂತೆ ಮತೀಯ ಆಧಾರಿತ ಸಂಘಟನೆಗಳು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಲಿಷ್ಠವಾಗಿವೆ. ಈ ವಿವಾದ ಕರಾವಳಿ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಮುಳುವಾಗಬಹುದು ಎನ್ನಲಾಗಿದೆ.
ಈ ವಿವಾದದಿಂದ 1000-1500 ಮತಗಳ ನಷ್ಟವಾಗಬಹುದು ಎಂದು ಕಾಂಗ್ರೆಸ್ ಸಮೀಕ್ಷೆ ಹೇಳಿದೆ ಮತ್ತು ಡ್ಯಾಮೇಜ್ ಕಂಟ್ರೋಲ್‌ಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯ ಮುಖಂಡರಿಗೆ ತಿಳಿಸಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ವಿಚಾರ
'ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷವು ಬದ್ಧವಾಗಿದೆ.
ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ.
ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ.
ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ಆಘಾತ
ಒಟ್ಟಾರೆ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಕೊನೆ ಕ್ಷಣದಲ್ಲಿ ದೊಡ್ಡ ಆಘಾತವಾಗಿದೆ. ಇರಲಾರದೇ ಇರುವೆ ಬಿಟ್ಟುಕೊಂಡಂತಾಗಿರುವ ಕಾಂಗ್ರೆಸ್ ಪರಿಸ್ಥಿತಿಯನ್ನು ಬಿಜೆಪಿ ಸದುಪಯೋಗ ಮಾಡಿಕೊಳ್ಳುತ್ತಿದ್ದು, ವಿಚಾರವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್ ತಮ್ಮ ನಿಲುವನ್ನು ಬದಲಿಸದೇ ಅದನ್ನು ಸಮರ್ಥಿಸಿಕೊಳ್ಳುವ ಮೂಲಕವೇ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ