ಭಾರತವು ಆತ್ಮನಿರ್ಭರ್ ಯೋಜನೆಯಡಿಯಲ್ಲಿ (Atmanirbhar Bharat) ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಇದೀಗ ಭಾರತೀಯ ಅಧಿಕಾರಿಗಳು ವಿದೇಶಿ ವಿಮಾನಗಳಿಗೆ (Foreign Flights) ಹೆಚ್ಚಿನ ಫ್ಲೈಯಿಂಗ್ ಹಕ್ಕುಗಳು ಅಥವಾ ದ್ವಿಪಕ್ಷೀಯ ಹಕ್ಕುಗಳನ್ನು ಒದಗಿಸುವುದನ್ನು ನಿಲ್ಲಿಸಲು ಯೋಜಿಸುತ್ತಿದ್ದಾರೆ ಎಂಬುದು ವರದಿಯಾಗಿದೆ. ದೇಶವು ತನ್ನದೇ ಆದ ದೇಶೀಯ ವಿಮಾನಗಳನ್ನು ಭಾರತದಿಂದ ಹೊರಕ್ಕೆ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸಲು ಒಲವು ತೋರಿಸಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಅಭಿವೃದ್ಧಿಯ ಪಥದತ್ತ ಭಾರತ
ಸುದ್ದಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಭಾರತದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ ಬದಲಾವಣೆಯ ಹಾದಿಯಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಭಾರತದ ವಿಮಾನ ಯಾನ ಸೌಲಭ್ಯಗಳು ಹೆಚ್ಚಾಗಲಿದ್ದು, ಭಾರತದ ವಿಮಾನ ಸಂಚಾರ ಅಭಿವೃದ್ಧಿಗೊಳ್ಳಲಿದೆ ಎಂದು ನುಡಿದಿದ್ದಾರೆ.
ಶೀಘ್ರದಲ್ಲೇ ನಿಯಮ ಅಂತಿಮ
ಸ್ಥಳೀಯ ವಿಮಾನಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರತವು ಏರೋಸ್ಪೇಸ್ ಕಂಪನಿಗಳನ್ನು ಕೇಳುತ್ತಿದೆ. ಪ್ರಮುಖ ಜಾಗತಿಕ ವಾಯುಯಾನ ಮಾರುಕಟ್ಟೆಗಳೊಂದಿಗೆ ನಿಯಂತ್ರಣ ಸಾಧಿಸಲು, ಜೆಟ್‌ಗಳ ಮರು ಸ್ವಾಧೀನದಲ್ಲಿ ಗುತ್ತಿಗೆದಾರರ ಹಕ್ಕುಗಳನ್ನು ರಕ್ಷಿಸಲು ನಿಯಮಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತ ವಿಶ್ವದ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆ
ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿದ. ದಶಕದ ಅಂತ್ಯದ ವೇಳೆಗೆ ಬಹುಶಃ ಇದು ಇನ್ನಷ್ಟು ವಿಸ್ತಾರಗೊಳ್ಳುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ವಾಯುಮಾರ್ಗಗಳಲ್ಲೂ ಭಾರತ ತನ್ನದೇ ವಿಮಾನ ಯಾನ ಸೌಕರ್ಯಗಳನ್ನು ಆರಂಭಿಸುವ ಯೋಜನೆಯಲ್ಲಿದೆ ಎಂಬುದು ತಿಳಿದುಬಂದಿದ್ದು, ಸಂಸ್ಥೆಗಳು ಹಾಗೂ ಪ್ರಯಾಣಿಕರು ಇದಕ್ಕೆ ಯಾವ ರೀತಿಯಲ್ಲಿ ಸ್ಪಂದಿಸಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.
ದ್ವಿಪಕ್ಷೀಯ ವಾಯು ಸೇವಾ ಒಪ್ಪಂದಗಳು ಎಂದರೇನು?
ದ್ವಿಪಕ್ಷೀಯ ವಿಮಾನ ಸೇವೆಗಳ ಒಪ್ಪಂದಗಳು ಎರಡು ದೇಶಗಳ ನಡುವೆ ನಡೆಯುವ ಒಪ್ಪಂದವಾಗಿದ್ದು, ಈ ಒಪ್ಪಂದ ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸಬಹುದಾದ ವಿಮಾನಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ.
116 ದೇಶಗಳೊಂದಿಗೆ ಸಹಿ
ಭಾರತವು 116 ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ. ಈ ಒಪ್ಪಂದದ ಅನುಸಾರ ಎರಡು ದೇಶಗಳ ನಡುವೆ ಕಾರ್ಯನಿರ್ವಹಿಸುವ ವಿಮಾನಗಳ ಸೇವೆಯನ್ನು ಮಿತಿಗೊಳಿಸಬಹುದು. ಅನಿಯಮಿತ ಸೇವೆಯನ್ನೊದಗಿಸುವಂತಹ ಕ್ರಮವನ್ನು ಜಾರಿಗೆ ತರಬಹುದು. ಉದಾಹರಣೆಗೆ ಭಾರತ ಅಮೆರಿಕಾ ಹಾಗೂ ಇಂಗ್ಲೆಂಡ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನುಸಾರ, ಎರಡೂ ದೇಶಗಳ ವಿಮಾನಗಳಿಗೆ ಎರಡು ದೇಶಗಳ ನಡುವೆ ಅನಿಯಮಿತ ವಿಮಾನ ಸೇವೆಗಳನ್ನೊದಗಿಸಲು ಅನುವು ಮಾಡಿಕೊಡುತ್ತದೆ.
ಆದರೆ ಇತರ ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಕಾರ್ಯನಿರ್ವಹಿಸಬಹುದಾದ ವಿಮಾನಗಳ ಸಂಖ್ಯೆಯ ಮೇಲೆ ಮಿತಿ ಇದೆ.
ವಿದೇಶಿ ವಿಮಾನಯಾನ ಸಂಸ್ಥೆಗಳು ಏನು ಬಯಸುತ್ತವೆ?
ಆಸನಗಳ ಹೆಚ್ಚಳವು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶವನ್ನು ನೀಡುತ್ತದೆ. ತಮ್ಮ ತಾಯ್ನಾಡನ್ನೂ ಮೀರಿ ಯುರೋಪ್ ಮತ್ತು ಅಮೇರಿಕಗಳಿಗೆ ತಮ್ಮ ವಿಮಾನಗಳನ್ನು ಪ್ರಯಾಣಿಕರಿಂದ ಭರ್ತಿಗೊಳಿಸಲು ಅವಕಾಶವನ್ನೊದಗಿಸುತ್ತದೆ. ಒಂದು ಅಂದಾಜಿನ ಪ್ರಕಾರ 50-80% ಭಾರತೀಯ ಪ್ರಯಾಣಿಕರು (ಮಾರ್ಗಗಳು, ವರ್ಷದ ಸಮಯ ಇತ್ಯಾದಿಗಳನ್ನು ಅವಲಂಬಿಸಿ), ಭಾರತದಿಂದ ದೊಡ್ಡ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ, ವಿಮಾನಯಾನದ ತಾಯ್ನಾಡಿನ ಆಚೆಗೆ ಪ್ರಯಾಣಿಸುತ್ತಾರೆ.
ಈ ಮಾರ್ಗಗಳಲ್ಲಿ ಹೆಚ್ಚಿನ ವಿದೇಶಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ತಮ್ಮ ಅನುಮತಿ ಸಾಮರ್ಥ್ಯವನ್ನು ಬಳಸಿಕೊಂಡಿವೆ ಮತ್ತು ವಿಮಾನ ಪ್ರಯಾಣ ಹಕ್ಕುಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ.
ಭಾರತ ಸರಕಾರ ಹೆಚ್ಚಿನ ಹಕ್ಕುಗಳ ವಿರುದ್ಧವಾಗಿದೆ
ವಿದೇಶಿ ವಿಮಾನ ಯಾನ ಹಕ್ಕುಗಳ ಹೆಚ್ಚಳದ ವಿನಂತಿಗಳನ್ನು ಮೊದಲೇ ಅನುಮೋದಿಸಲಾಗಿದ್ದರೂ, ಪ್ರಸ್ತುತ ಸರ್ಕಾರವು 2014 ರಿಂದ ಯಾವುದೇ ಹೊಸ ವಿಮಾನ ಯಾನ ಹಕ್ಕುಗಳನ್ನು ಒಪ್ಪಿಕೊಂಡಿಲ್ಲ. ಇದಕ್ಕೆ ಕಾರಣವೆಂದರೆ ಭಾರತೀಯ ವಿಮಾನ ಯಾನ ಸಂಸ್ಥೆಗಳು ದೊಡ್ಡ ನೆಟ್‌ವರ್ಕ್ ವಾಹಕಗಳಾಗಿ ಮಾತ್ರ ಬೆಳೆಯುತ್ತವೆ. ಸಂಪರ್ಕಕ್ಕಾಗಿ ಭಾರತವು ವಿದೇಶಿ ವಿಮಾನಗಳನ್ನು ಹೆಚ್ಚು ಅವಲಂಬಿಸುತ್ತದೆ. ಹಾಗಾಗಿ ಯುರೋಪ್ ಹಾಗೂ ಅಮೆರಿಕಾಕ್ಕೆ ಭಾರತದಿಂದ ಹಾರುವ ಭಾರತೀಯ ವಿಮಾನಗಳನ್ನು ಸರಕಾರ ಹೆಚ್ಚಿಸಿದೆ.
ಭಾರತೀಯ ವಿಮಾನ ಯಾನ ಸಂಸ್ಥೆಗಳ ದೃಷ್ಟಿಕೋನವೇನು?
ವಿದೇಶಿ ವಿಮಾನಗಳನ್ನು ಭಾರತಕ್ಕೆ ಪ್ರವೇಶಿಸಲು ಅನುಮತಿಸಿರುವುದರಿಂದ ದೇಶೀಯ ವಿಮಾನಯಾನ ಸಂಸ್ಥೆಗಳ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಬಂಧಿಸಲಾಗಿದೆ.
ಏರ್ ಇಂಡಿಯಾ, 70 ದೀರ್ಘ-ಪ್ರಯಾಣದ ವಿಮಾನಗಳನ್ನು (ಅದರ 470 ಏರ್‌ಕ್ರಾಫ್ಟ್ ಆರ್ಡರ್‌ನ ಭಾಗ) ಮತ್ತು ಇಂಡಿಗೋ ಗುತ್ತಿಗೆ ಪಡೆದ ವಿಮಾನಗಳೊಂದಿಗೆ ದೀರ್ಘಾವಧಿ ವಿಮಾನ ಪ್ರಯಾಣಗಳನ್ನು ಪರೀಕ್ಷಿಸುತ್ತಿದ್ದು, ವಿದೇಶಿ ವಿಮಾನಗಳ ಗಾತ್ರ ಹಾಗೂ ಸಾಮರ್ಥ್ಯಗಳೊಂದಿಗೆ ಸಮಬಲ ಸಾಧಿಸುವವರೆಗೆ ಭಾರತ ಸರಕಾರ ಯಾವುದೇ ವಿದೇಶಿ ವಿಮಾನಗಳನ್ನು ಭಾರತದಲ್ಲಿ ಅನುಮೋದಿಸಬಾರದು ಎಂದು ಬಯಸುತ್ತವೆ.
ವಿಮಾನ ಪ್ರಯಾಣದ ಮೇಲೆ ಏನು ಪರಿಣಾಮ ಬೀರಬಹುದು?
ವಿಮಾನ ಯಾನ ಶುಲ್ಕವು ಸಾಮರ್ಥ್ಯ ಹಾಗೂ ಬೇಡಿಕೆಯನ್ನು ಆಧರಿಸಿದೆ. ಗ್ರಾಹಕರ ಅಭಿಪ್ರಾಯದಲ್ಲಿ ವಿದೇಶಿ ವಿಮಾನಗಳಿಲ್ಲ ಎಂದರೆ ಮಧ್ಯಮ ಅವಧಿಯಲ್ಲಿ ಹೆಚ್ಚಿನ ಪ್ರಯಾಣ ಶುಲ್ಕಗಳು ಎಂದಾಗಿದೆ. ಏರ್ ಇಂಡಿಯಾ ಮತ್ತು ಇಂಡಿಗೋದಂತಹ ಏರ್‌ಲೈನ್‌ಗಳ ಏರ್‌ಕ್ರಾಫ್ಟ್ ಯೋಜನೆಗಳು ಒಂದು ದಶಕದಲ್ಲಿ ವಿಸ್ತಾರಗೊಂಡಿವೆ ಆದರೆ ಸಾಮರ್ಥ್ಯದ ಸಮಸ್ಯೆಯು ನಿರಾಳಗೊಂಡು ಮುಂದಿನ ಎರಡು ಮೂರು ವರ್ಷಗಳಲ್ಲಿ ಸರಾಗವಾಗಲು ಪ್ರಾರಂಭಿಸುತ್ತದೆ.
ಸಾಮರ್ಥ್ಯ ಸೀಮಿತವಾಗಿರುವ ಭಾರತ-ದುಬೈನಂತಹ ಸ್ಥಳಗಳಿಗೆ ವಿಮಾನ ಪ್ರಯಾಣ ಹಾಗೂ ಬೇಡಿಕೆಯು ಪ್ರಬಲವಾಗಿರುವ ಮಾರ್ಗಗಳಲ್ಲಿ ಅಂದರೆ ಭಾರತ-ಯುಎಸ್‌ನಂತಹ ಭಾಗಗಳಲ್ಲಿ ವಿಮಾನ ಪ್ರಯಾಣ ದರಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ.
ಫ್ಲೈಯಿಂಗ್ ರೈಟ್ಸ್ ಕೋರುತ್ತಿರುವ ಟಾಟಾ ಸಮೂಹ
ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾದ ದಾಖಲೆಯ ಸಂಖ್ಯೆಯ ವಿಮಾನಗಳು ಭಾರತೀಯ ಮಾರುಕಟ್ಟೆಯಲ್ಲಿ ಜಾಗತಿಕ ವಿಮಾನಗಳನ್ನು ಮೀರಿ ಬೆಳೆಯುವ ನಿಟ್ಟಿನಲ್ಲಿದ್ದು, ಸಂಸ್ಥೆ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚುವರಿ 'ಫ್ಲೈಯಿಂಗ್ ರೈಟ್ಸ್' ಅನ್ನು ಕೋರುತ್ತಿದೆ ಎಂದು ವರದಿಯಾಗಿದೆ.
ಏರ್ ಇಂಡಿಯಾ ಕಳೆದ ತಿಂಗಳು 470 ಜೆಟ್‌ಗಳಿಗೆ ದಾಖಲೆಯ ಆರ್ಡರ್ ಮಾಡಿದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕ್ರಮಣಕಾರಿ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ. ದೇಶೀಯ ಪ್ರತಿಸ್ಪರ್ಧಿ ಇಂಡಿಗೋ 500 ಕ್ಕೂ ಹೆಚ್ಚು ವಿಮಾನಗಳ ಹೊಸ ಆರ್ಡರ್‌ಗಾಗಿ ಮಾತುಕತೆ ನಡೆಸುತ್ತಿದೆ ಎಂದು ರಾಯಿಟರ್ಸ್ ಈ ತಿಂಗಳ ಆರಂಭದಲ್ಲಿ ವರದಿ ಮಾಡಿದೆ, ಹಳೆಯ ಆರ್ಡರ್‌ನಿಂದ ಕೂಡ ಅಷ್ಟೇ ಪ್ರಮಾಣದ ವಿಮಾನಗಳ ಡೆಲಿವರಿಯನ್ನು ತೆಗೆದುಕೊಳ್ಳಲು ಕಾಯುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:
ಭಾರತವು ಗಲ್ಫ್ ರಾಜ್ಯಗಳೊಂದಿಗೆ ಏರ್ ಟ್ರಾಫಿಕ್ ಕೋಟಾಗಳನ್ನು ಹೆಚ್ಚಿಸುವುದನ್ನು ನೋಡುತ್ತಿಲ್ಲ. ಇದಕ್ಕೆ ಬದಲಾಗಿ ಭಾರತೀಯ ವಿಮಾನ ಸಂಸ್ಥೆಗಳು ದೊಡ್ಡ ವಿಮಾನಗಳಲ್ಲಿ ತಡೆರಹಿತ ದೀರ್ಘಾವಧಿಯ ವಿಮಾನ ಯಾನ ಸೇವೆಗಳನ್ನು ನೀಡಲು ಬಯಸಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.
ಮಾರುಕಟ್ಟೆಯ ಬೆಳವಣಿಗೆಯನ್ನು ಬೆಂಬಲಿಸುತ್ತದೆ
ಆದರೆ ನೂರಾರು ಹೊಸ ವಿಮಾನಗಳ ಆರ್ಡರ್ ಪ್ರಗತಿಯಲ್ಲಿದ್ದರೂ, ಮತ್ತು ಕಿಂಗ್‌ಫಿಶರ್ ಮತ್ತು ಜೆಟ್ ಏರ್‌ವೇಸ್‌ನಂತಹ ಭಾರತದ ವೈಮಾನಿಕ ವೈಫಲ್ಯಗಳ ಇತಿಹಾಸದ ಹೊರತಾಗಿಯೂ, ಇದು ಯಾವುದೇ ಮಿತಿಮೀರಿದ ಪೂರೈಕೆಗೆ ಕಾರಣವಾಗಬಹುದು ಎಂಬುದು ಇಲ್ಲಿ ಒತ್ತಡವನ್ನುಂಟು ಮಾಡುವುದಿಲ್ಲ. ಏಕೆಂದರೆ ದೇಶದ ಆರ್ಥಿಕತೆ, ಕ್ಷಿಪ್ರ ನಗರೀಕರಣ ಮತ್ತು ಕಡಿಮೆ ವಿಮಾನ ಪ್ರಯಾಣ ಮಾರುಕಟ್ಟೆಯು ಬೆಳವಣಿಗೆಯನ್ನು ಬೆಂಬಲಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನು ಓದಿ: Plastic: ಎಲ್ಲಾ ಪ್ಲಾಸ್ಟಿಕ್‌ಗಳು ಮರುಬಳಕೆಗೆ ಯೋಗ್ಯವೇ? ಹೀಗಾದರೆ ಪರಿಸರ ರಕ್ಷಣೆ ಹೇಗೆ?
ಈ ಮೊದಲು ವಿಮಾನ ನಿಲ್ದಾಣಗಳು ಮತ್ತು ವಿಮಾನಗಳು ಹೂಡಿಕೆಗೆ ತಕ್ಕಂತ ಲಾಭವನ್ನುಂಟು ಮಾಡಲು ಉತ್ತಮ ಆರ್ಥಿಕ ಬೆಳವಣಿಗೆಯುಳ್ಳ ಆ ಇತಿಹಾಸವಿರುವ ಪ್ರಸ್ತುತಪಡಿಸಿದ ನಗರಗಳಿಗೆ ಮಾತ್ರ ಪ್ರಯಾಣಿಸುತ್ತಿದ್ದವು. ಇಂದು ಆರ್ಥಿಕ ಬೆಳವಣಿಗೆಯನ್ನು ನಿರ್ಧರಿಸುವುದೇ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳು ಎಂಬುದಾಗಿ ಸಚಿವರು ತಿಳಿಸಿದ್ದಾರೆ.
ವಿಮಾನಗಳ ಸಂಖ್ಯೆಯಲ್ಲಿ ಹೆಚ್ಚಳ
ಆರು ಪ್ರಮುಖ ಮೆಟ್ರೋ ವಿಮಾನ ನಿಲ್ದಾಣಗಳ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಹೆಚ್ಚಳವು ಮುಂದಿನ ಐದು ವರ್ಷಗಳಲ್ಲಿ 420 ಮಿಲಿಯನ್‌ಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಭಾರತದ ಪ್ರಗತಿಯು ಇಂದು 700 ರಿಂದ 2,000 ಕ್ಕೂ ಹೆಚ್ಚು ವಿಮಾನಗಳಿಗೆ ಅಭಿವೃದ್ಧಿಗೊಳ್ಳಲಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳು ಒದಗಿಸುವ ಅದೇ ಸೌಲಭ್ಯಗಳನ್ನು ದೇಶೀಯ ವಿಮಾನಗಳು ಇನ್ನು ಮುಂದಿನ ದಿನಗಳಲ್ಲಿ ಒದಗಿಸಲಿವೆ ಎಂಬುದು ಸಚಿವರ ಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ