IT Companies: ಐಟಿ ಸಿಟಿಯ ಖ್ಯಾತಿ ಕಳೆದುಕೊಳ್ಳುತ್ತಾ ಬೆಂಗಳೂರು? ಪರರಾಜ್ಯದತ್ತ ಸಾಫ್ಟ್‌ವೇರ್ ಕಂಪನಿಗಳ ಚಿತ್ತ!

ಮಹಾಮಳೆಯ ಅವಾಂತರಗಳಿಂದ ಐಟಿ ಕಂಪನಿಗಳಿಗೆ ಬರೋಬ್ಬರಿ 200 ಕೋಟಿ ನಷ್ಟವಾಗಿದ್ಯಂತೆ. ಇದೀಗ ವ್ಯವಸ್ಥೆ ಸರಿಪಡಿಸಿ, ಇಲ್ಲ ನಾವು ಬೆಂಗಳೂರು ತೊರೆಯುತ್ತೇವೆ ಅಂತ ಐಟಿ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಹಾಗಾದ್ರೆ ಐಟಿ ಕಂಪನಿಗಳ ಕೋಪಕ್ಕೆ ಕಾರಣವೇನು? ಐಟಿ ಕಂಪನಿಗಳು ಬೆಂಗಳೂರು ತೊರೆಯಲು ನಿರ್ಧರಿಸಿದ್ದೇಕೆ? ಬೇರೆ ಯಾವ ರಾಜ್ಯಕ್ಕೆ ಐಟಿ ಕಂಪನಿಗಳು ಹೋಗಬಹುದು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ರಾಜ್ಯದ (Karnataka State) ರಾಜಧಾನಿ ಬೆಂಗಳೂರಿಗೆ (Bengaluru) ಉದ್ಯಾನನಗರಿ (Garden City), ಗ್ರೀನ್ ಸಿಟಿ (Green City) ಎಂಬ ಖ್ಯಾತಿ ಇತ್ತು. ಇದಾದ ಬಳಿಕ ಐಟಿ ಸಿಟಿ (IT City), ಸಿಲಿಕಾನ್ ಸಿಟಿ (Silicon City) ಎಂಬ ಅಭಿದಾನ ಪ್ರಾಪ್ತವಾಯಿತು. ಉದ್ಯಾನದಂತೆ ಹಸಿರಾಗಿದ್ದ ಬೆಂಗಳೂರು, ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ಉದ್ಯಾನನಗರಿ, ಗ್ರೀನ್ ಸಿಟಿ ಎಂಬ ಹೆಸರನ್ನು ಕಳೆದುಕೊಳ್ಳುತ್ತಿದೆ. ಇದರೊಂದಿಗೆ ಸಿಲಿಕಾನ್ ಸಿಟಿ, ಐಟಿ ಸಿಟಿ ಎಂಬ ಖ್ಯಾತಿಯನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಬೆಂಗಳೂರಿನ ಮಹಾಮಳೆ (Heavy Rain) ಮತ್ತು ಮಳೆಯನ್ನು ಸರಿಯಾಗಿ ನಿರ್ವಹಿಸಲಾಗದ ಬಿಬಿಎಂಪಿ (BBMP) ಹಾಗೂ ರಾಜ್ಯ ಸರ್ಕಾರದ (State Government) ವಿಫಲ ಆಡಳಿತ! ಹೌದು, ಮೊನ್ನೆ ಮೊನ್ನೆ ಸುರಿದ ಮಹಾಮಳೆ ಬರೀ ಬೆಂಗಳೂರಿನ ಜನಸಾಮಾನ್ಯರನ್ನಷ್ಟೇ ಅಲ್ಲ, ಬೆಂಗಳೂರಿನ ಐಟಿ ಕಂಪನಿಗಳನ್ನೂ (IT Companies) ನಡುಗಿದಿದ್ಯಂತೆ. ಮಹಾಮಳೆಯ ಅವಾಂತರಗಳಿಂದ ಐಟಿ ಕಂಪನಿಗಳಿಗೆ ಬರೋಬ್ಬರಿ 200 ಕೋಟಿ ನಷ್ಟವಾಗಿದ್ಯಂತೆ. ಇದೀಗ ವ್ಯವಸ್ಥೆ ಸರಿಪಡಿಸಿ, ಇಲ್ಲ ನಾವು ಬೆಂಗಳೂರು ತೊರೆಯುತ್ತೇವೆ ಅಂತ ಐಟಿ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಹಾಗಾದ್ರೆ ಐಟಿ ಕಂಪನಿಗಳ ಕೋಪಕ್ಕೆ ಕಾರಣವೇನು? ಐಟಿ ಕಂಪನಿಗಳು ಬೆಂಗಳೂರು ತೊರೆಯಲು ನಿರ್ಧರಿಸಿದ್ದೇಕೆ? ಬೇರೆ ಯಾವ ರಾಜ್ಯಕ್ಕೆ ಐಟಿ ಕಂಪನಿಗಳು ಹೋಗಬಹುದು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಕೆಲ ದಿನಗಳ ಹಿಂದಷ್ಟೇ ಏನಾಗಿತ್ತು?

ಕಳೆದ ಆಗಸ್ಟ್ 30ರಂದು ಸುರಿದ ಮಳೆಗೆ ಐಟಿ ಬಿಟಿ ಕಂಪನಿಗಳು ಅತೀ ಹೆಚ್ಚು ಇರುವ  ಏರಿಯಾಗಳು ಸಂಪೂರ್ಣ ಜಲಾವೃತವಾಗಿದ್ದವು. ರಾಜಾಕಾಲುವೆ ಒತ್ತುವರಿ, ಚರಂಡಿ ಅವ್ಯವಸ್ಥೆ, ಕಿತ್ತೋದ ಫುಟ್​ಪಾತ್​​​ಗಳಿಂದ ನೀರು ನಿಂತಲ್ಲೇ ನಿಂತಿತ್ತು. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆ.ಆರ್​. ಪುರಂವರೆಗೆ 17 ಕಿಮಿ ಅಂತರದಲ್ಲಿ ಅನೇಕ ಐಟಿ ಕಂಪನಿಗಳು ಇದೆ. ಎಕೋಸ್ಪೇಸ್ ಭಾಗದ ಹೊರವರ್ತುಲ ರಸ್ತೆ ಐಟಿ ಟೆಕ್ ಪಾರ್ಕ್ ಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆದರೆ ಮಳೆ ಬಂದು ಅಲ್ಲಿ ನೀರು ನಿಂತು ರೋಡ್ ಬ್ಲಾಕ್ ಆಗಿ ಐಟಿ ಉದ್ಯೋಗಿಗಳು ಪರದಾಡುವಂತಾಗಿತ್ತು.

ಒಂದೇ ದಿನದ ಮಹಾಮಳೆಗೆ 255 ಕೋಟಿ ರೂಪಾಯಿ ನಷ್ಟ!

ಹೌದು, ಇದು ಆಶ್ಚರ್ಯವಾದರೂ ಸತ್ಯ. ಆಗಷ್ಟ್ 30ರ ಒಂದೇ ದಿನದ ಮಹಾ ಮಳೆಗೆ ಬೆಂಗಳೂರಿನ ಐಟಿ ಕಂಪನಿಗಳಿಗೆ ಬರೋಬ್ಬರಿ 255 ಕೋಟಿ ರೂಪಾಯಿ ನಷ್ಟವಾಗಿದ್ಯಂತೆ. ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಪರಿಣಾದ 5 ಗಂಟೆಗಳ ಕಾಲ ಔಟರ್ ರಿಂಗ್ ರೋಡ್ನಲ್ಲಿ ನೂರಾರು ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು. ಇದೆಲ್ಲದರ ಪರಿಣಾಮ ಅಂದು ಒಂದೇ ದಿನ ಬರೋಬ್ಬರಿ 255 ಕೋಟಿ ರೂಪಾಯಿ ನಷ್ಟವಾಗಿದೆಯಂತೆ.

ಇದನ್ನೂ ಓದಿ: IT BT Shock: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ಬೆಂಗಳೂರು ತೊರೆಯುವ ಎಚ್ಚರಿಕೆ

ಐಟಿ ಕಂಪನಿಗಳು ಬೆಂಗಳೂರು ತೊರೆದು, ಬೇರೆ ರಾಜ್ಯಗಳ ಮಹಾನಗರಗಳತ್ತ ವಲಸೆ ಹೋಗುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿವೆ. ಮಳೆಯಿಂದಾದ ಅವಾಂತರದಿಂದ ಕೊಟ್ಯಾಂತರ ನಷ್ಟ ಉಂಟಾಗಿತ್ತು. ಇದರಿಂದ ಆಕ್ರೋಶಗೊಂಡಿರುವ ಬೆಂಗಳೂರು ಐಟಿ ಕಂಪೆನಿಗಳು ವಲಸೆ ಹೋಗುವ ಎಚ್ಚರಿಕೆ ನೀಡಿದೆ. ಖ್ಯಾತ ಉದ್ಯಮಿ ಮೋಹನ್ ದಾಸ್ ಪೈಯವರ ಅಧ್ಯಕ್ಷತೆಯ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ನಾವು ಬೆಂಗಳೂರು ಬಿಡಬೇಕಾದೀತು ಅಂತಾ ಐಟಿ ಕಂಪೆನಿಗಳು ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದೆ.

ಐಟಿ ಕಂಪನಿಗಳ ಪತ್ರದಲ್ಲಿ ಏನಿದೆ?

ಬೆಂಗಳೂರು ಮಹಾನಗರದಲ್ಲಿ ಮೂಲಸೌಕರ್ಯ ಸುಧಾರಣೆ ಆಗದಿದ್ದರೆ ಐ.ಟಿ ಕಂಪನಿಗಳನ್ನು ಮುಂದುವರಿಸಲು ಬೇರೆ ಸ್ಥಳಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ‘ಭಾರಿ ಮಳೆಯಿಂದಾಗಿ ಹೊರವರ್ತುಲ ರಸ್ತೆಗಳಲ್ಲಿನ ಕಂಪನಿಗಳಿಗೆ ಸುಮಾರು 200 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗಿದೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತಾಗಿದೆ. ಇದರಿಂದ ಉತ್ಪಾದನಾ ಸಾಮರ್ಥ್ಯದ ಮೇಲೆ ಹೊಡೆತ ಬಿದ್ದಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

2000ರ ದಶಕದಲ್ಲಿ ಐಟಿ ಕಂಪನಿಗಳ ಸ್ಥಾಪನೆ

2000 ರ ದಶಕದ ಆರಂಭದಲ್ಲಿ, ನಮ್ಮ ದೇಶದಲ್ಲಿ ಹೈದರಾಬಾದ್ ಮತ್ತು ಬೆಂಗಳೂರು ಎಂಬ ಎರಡು ಐಟಿ ಹಬ್‌ಗಳು ಮಾತ್ರ ಇದ್ದವು. ಹೈದರಾಬಾದ್‌ನಲ್ಲಿ ಐಟಿಯನ್ನು ಚಂದ್ರಬಾಬು ನಾಯ್ಡು ಮತ್ತು ಬೆಂಗಳೂರಿನಲ್ಲಿ ಎಸ್‌ಎಂ ಕೃಷ್ಣ ಅವರು ಪೋಷಿಸಿದರು. ಈ ಇಬ್ಬರೂ ಮುಖ್ಯಮಂತ್ರಿಗಳು ಐಟಿ ದೊಡ್ಡ ಪ್ರಮಾಣದ ಉದ್ಯೋಗವನ್ನು ತರಬಹುದು ಎಂದು ನಂಬಿದ್ದರು ಅದು ಇಂದು ನಿಜವಾಗಿದೆ ಎಂದು ಸಾಬೀತಾಗಿದೆ. ಜಾಗತಿಕ ಐಟಿ ಕಂಪನಿಯು ಭಾರತವನ್ನು ಪ್ರವೇಶಿಸಲು ಬಯಸಿದಾಗ, ಈ ಎರಡು ನಗರಗಳು ಅವರನ್ನು ಗೆಲ್ಲುತ್ತಿದ್ದವು. ಕಾಲ ಕಳೆದಂತೆ ಹೈದರಾಬಾದ್ ಬೆಂಗಳೂರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಐಟಿ ಹಬ್ ಖ್ಯಾತಿ ಪಡೆದಿರುವ ಬೆಂಗಳೂರು

ರಾಜ್ಯ ರಾಜಧಾನಿ ಬೆಂಗಳೂರು ದೇಶದ ಐಟಿ ಕಂಪನಿಗಳ ರಾಜಧಾನಿ ಎಂಬ ಹೆಸರನ್ನೂ ಪಡೆದಿದೆ. ಐಟಿ ಹಬ್, ಸಿಲಿಕಾನ್ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ಹೆಸರನ್ನೂ ಪಡೆದಿದೆ. ಇದಕ್ಕೆ ಕಾರಣ ಅತ್ಯಂತ ಹೆಚ್ಚು ಐಟಿ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದು. ಅಲ್ಲದೇ ಜಗತ್ತಿನ ಟಾಪ್ ಐಟಿ ಕಂಪನಿಗಳೆಲ್ಲ ಬೆಂಗಳೂರಲ್ಲೂ ಕಾರ್ಯನಿರ್ವಹಿಸುತ್ತಿವೆ.

800ಕ್ಕೂ ಹೆಚ್ಚು ಐಟಿ ಕಂಪನಿಗಳು ಇಲ್ಲಿವೆ

ಒಆರ್‌ಆರ್ ಸ್ಟ್ರೆಚ್‌ನಲ್ಲಿ ಒಂಬತ್ತರಿಂದ ಹತ್ತು ತಂತ್ರಜ್ಞಾನ ಪಾರ್ಕ್‌ ಅಥವಾ ಐಟಿ ಪಾರ್ಕ್‌ಗಳಿವೆ, ಅಲ್ಲಿಂದ 700 ರಿಂದ 800 ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಆದಾಯದಲ್ಲಿ ಶೇ. 32ರಷ್ಟು ಪಾಲು

ಐ.ಟಿ ಕಂಪನಿಗಳಿಂದ ಸರ್ಕಾರಕ್ಕೆ ಬರುತ್ತಿರುವ ವರಮಾನದಲ್ಲಿ ಐಟಿ ಪಾಲು ಹೆಚ್ಚಿದೆ. ಬೆಂಗಳೂರಿನ ಆದಾಯದಲ್ಲಿ ಶೇ 32ರಷ್ಟು ಪಾಲು ಬೆಂಗಳೂರು ಐ.ಟಿ ಕಂಪನಿಗಳದ್ದೇ ಆಗಿದೆ.

ಐಟಿ ಕಂಪನಿಗಳ ಸಮಸ್ಯೆಗಳೇನು?

ಪದೇ ಪದೇ ಮಳೆ ಅವಾಂತರದಿಂದ ಐಟಿ ಕಂಪನಿಗಳು ಕಂಗೆಟ್ಟಿವೆ. ಇದರಿಂದ ಉದ್ಯೋಗಿಗಳ ಸಂಚಾರದಲ್ಲಿ ವ್ಯತ್ಯಯವಾಗಿಲದ್ದು, ಪರಿಣಾಮ ಉತ್ಪಾದನೆ ಮೇಲೆ ಹೊಡೆತ ಬೀಳುತ್ತದೆ ಎನ್ನುವುದು ಐಟಿ ಕಂಪನಿಗಳ ಆತಂಕ.

ಸಂಚಾರ ದಟ್ಟಣೆ ಸಮಸ್ಯೆ

ಬೆಂಗಳೂರಿನ ಸಂಚಾರ ದಟ್ಟಣೆ ಕುಖ್ಯಾತಿ ಪಡೆದಿದೆ. ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ಹಲವು ವರ್ಷಗಳಿಂದ ಕಂಪನಿಗಳನ್ನು ಕಾಡುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿಲ್ಲ ಎನ್ನುವುದು ಆರೋಪ. ಅಲ್ಲದೇ ಗುಣಮಟ್ಟದ ರಸ್ತೆಗಳಿಲ್ಲ ಅಂತ ಐಟಿ ಕಂಪನಿಗಳ ಮುಖ್ಯಸ್ಥರೇ ಹಲವು ಬಾರಿ ಆರೋಪ ಮಾಡಿದ್ದರು.

ಇದನ್ನೂ ಓದಿ: Digital Rape: ಡಿಜಿಟಲ್‌ ರೇಪ್ ಎಂದರೇನು? ಭಾರತದಲ್ಲಾದ ಅತ್ಯಾಚಾರ ಪ್ರಕರಣಗಳ ಬಗ್ಗೆ ತಿಳಿಯಿರಿ

ನೆರೆ ರಾಜ್ಯಗಳತ್ತ ಐಟಿ ಕಂಪನಿಗಳ ಚಿತ್ತ

ಇನ್ನು ಬೆಂಗಳೂರು ತೊರೆದರೆ ನೆರೆ ರಾಜ್ಯಗಳತ್ತ ಐಟಿ ಕಂಪನಿಗಳು ಒಲಸೆ ಹೋಗಲಿವೆ. ಅದರಲ್ಲೂ ಸದ್ಯ ಹೈದ್ರಾಬಾದ್ ಹಾಗೂ ಪುಣೆ ಐಟಿ ಕಂಪನಿಗಳ ಫೇವರೇಟ್ ಸಿಟಿಯಾಗಿ ಕಾಣಿಸುತ್ತಿದೆ. ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಈಗಾಗಲೇ ಐಟಿ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಕಿ, ಕಾಯುತ್ತಿದ್ದಾರೆ. ಹೀಗಾಗಿ ಬೆಂಗಳೂರು ಬಿಟ್ಟರೆ ಹೈದ್ರಾಬಾದ್ ಹಾಗೂ ಪುಣೆ ಐಟಿ ಕಂಪನಿಗಳ ಮುಂದಿನ ಆಯ್ಕೆ ಆಗಲಿದೆ.
Published by:Annappa Achari
First published: