• Home
  • »
  • News
  • »
  • explained
  • »
  • Explained: ದೇಶದ ರಕ್ಷಣೆಯ ಮತ್ತೊಬ್ಬ ರಿಯಲ್ ಹೀರೋಗಳಿವರು! ಸೇನಾ ನಾಯಿಗಳ ನೇಮಕ, ತರಬೇತಿ, ಕರ್ತವ್ಯಗಳ ಬಗ್ಗೆ ಇಲ್ಲಿದೆ ವಿವರ

Explained: ದೇಶದ ರಕ್ಷಣೆಯ ಮತ್ತೊಬ್ಬ ರಿಯಲ್ ಹೀರೋಗಳಿವರು! ಸೇನಾ ನಾಯಿಗಳ ನೇಮಕ, ತರಬೇತಿ, ಕರ್ತವ್ಯಗಳ ಬಗ್ಗೆ ಇಲ್ಲಿದೆ ವಿವರ

ಸೇನಾ ನಾಯಿ

ಸೇನಾ ನಾಯಿ

ದೇಶದ ರಕ್ಷಣೆ ವಿಚಾರದಲ್ಲಿ ಸೇನೆಯ ಪಾತ್ರ ಬಹುದೊಡ್ಡದು, ಇನ್ನೂ ಭಾರತೀಯ ಸೇನೆಯಲ್ಲಿ ನಾಯಿಗಳೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ವಾಸನಾ ಗ್ರಹಣ ಶಕ್ತಿ ದೇಶ ರಕ್ಷಣೆಗೆ, ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸದಾ ಸಹಾಯಕಾರಿಯಾಗುತ್ತಲೇ ಇದೆ. ಸೈನಿಕರಂತೆ ಇವುಗಳನ್ನು ಸಹ ಸೇನೆಯ ಹೀರೋಗಳು ಎಂದು ಪ್ರಶಂಸಿದರೆ ತಪ್ಪಾಗಲಾರದು.

ಮುಂದೆ ಓದಿ ...
  • Share this:

ದೇಶದ ರಕ್ಷಣೆ  ವಿಚಾರದಲ್ಲಿ ಸೇನೆಯ (Army) ಪಾತ್ರ ಬಹುದೊಡ್ಡದು, ಇನ್ನೂ ಭಾರತೀಯ ಸೇನೆಯಲ್ಲಿ (Indian Army) ನಾಯಿಗಳೂ (Dogs) ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳ ವಾಸನಾ ಗ್ರಹಣ ಶಕ್ತಿ ದೇಶ ರಕ್ಷಣೆಗೆ, ವಿಧ್ವಂಸಕ ಕೃತ್ಯಗಳನ್ನು ತಡೆಯಲು ಸದಾ ಸಹಾಯಕಾರಿಯಾಗುತ್ತಲೇ ಇದೆ. ಸೈನಿಕರಂತೆ (Soldier) ಇವುಗಳನ್ನು ಸಹ ಸೇನೆಯ ಹೀರೋಗಳು ಎಂದು ಪ್ರಶಂಸಿದರೆ ತಪ್ಪಾಗಲಾರದು. ಸೇನೆಯ ನಾಯಿಗಳು (Army dogs) ಎದುರಿರುವವರ ಗುಂಡಿಗೆಯಲ್ಲಿ ಒಂದು ಕ್ಷಣ ಭಯಹುಟ್ಟಿಸುವ ರೀತಿಯಲ್ಲಿ ಇರುತ್ತವೆ. ಸಾವಿರಾರು ನಾಯಿಗಳು ಸೇನೆಯಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದು, ಇವುಗಳೂ ಸಹ ಕಾರ್ಯಾಚರಣೆ, ಗಡಿಯಲ್ಲಿ ಗುಂಡಿನ ಚಕಮಕಿ ಇಂತಹ ಸಂದರ್ಭದಲ್ಲಿ ವೀರ ಮರಣ ಹೊಂದುತ್ತವೆ.


ಜುಲೈ 30ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ನೊಂದಿಗೆ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ಎರಡು ವರ್ಷದ ಆಕ್ಸೆಲ್ ಎಂಬ ಸೇನಾ ನಾಯಿ ಕರ್ತವ್ಯದಲ್ಲಿರುವಾಗಲೇ ವೀರಮರಣ ಹೊಂದಿದೆ. ಆಕ್ಸೆಲ್‌ಗೆ ಸಕಲ ಗೌರವ ನೀಡಿ ಆಕ್ಸೆಲ್ ಸೇವೆ ಸಲ್ಲಿಸಿದ ಆರ್ಮಿ ಡಾಗ್ ಯೂನಿಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.


ವೀರಮರಣ ಹೊಂದಿದ ಆಕ್ಸೆಲ್
ಆಕ್ಸೆಲ್, ಕಾಶ್ಮೀರ ಕಣಿವೆಯಲ್ಲಿ 26 ಆರ್ಮಿ ಡಾಗ್ ಯುನಿಟ್‌ನಲ್ಲಿ ಸೇವೆ ಸಲ್ಲಿಸುತ್ತಿತ್ತು ಮತ್ತು 29 ರಾಷ್ಟ್ರೀಯ ರೈಫಲ್ಸ್ ನಡೆಸುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿತ್ತು. ಶಂಕಿತ ಭಯೋತ್ಪಾದಕರು ಅಡಗಿರುವ ಕೊಠಡಿಗಳನ್ನು ಸೈನಿಕರು ತೆರವುಗೊಳಿಸಲು ಟಾರ್ಗೆಟ್ ಹೌಸ್ ಮೇಲೆ ದಾಳಿ ಮಾಡಿದ್ದರು. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭೀಕರ ಗುಂಡಿನ ಕಾಳಗ ನಡೆಯುತ್ತಿದ್ದಂತೆ, ಅಡಗಿಕೊಂಡಿದ್ದ ಭಯೋತ್ಪಾದಕರು ಆಲೆಕ್ಸಾ ಮೇಲೆ ಗುಂಡಿನ ದಾಳಿ ನಡೆಸಿದರು ಮತ್ತು ಶ್ವಾನವು ಸ್ಥಳದಲ್ಲಿಯೇ ಮೃತಪಟ್ಟಿದೆ. ಆರ್ಮಿ ವೆಟರ್ನರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಆಕ್ಸೆಲ್ ದೇಹದಲ್ಲಿ ಹತ್ತಕ್ಕೂ ಹೆಚ್ಚು ಗುಂಡುಗಳಿದ್ದು, ಮೂಳೆ ಮುರಿತ ಉಂಟಾಗಿರುವ ಬಗ್ಗೆಯೂ ತಿಳಿದು ಬಂದಿದೆ.


ರಾಷ್ಟ್ರೀಯ ರೈಫಲ್ಸ್‌ನ 10 ವಲಯದ ರಾಷ್ಟ್ರೀಯ ರೈಫಲ್ಸ್‌ನಿಂದ ನಡೆದ ಸಮಾರಂಭದಲ್ಲಿ ಆಕ್ಸೆಲ್ ಗೆ ಗೌರವ ನಮನ ಸಲ್ಲಿಸಿ, ಕಿಲೋ ಫೋರ್ಸಿನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಎಸ್. ಎಸ್. ಸ್ಲಾರಿಯಾ ಅವರು ಯೋಧಶ್ವಾನಕ್ಕೆ ನಮನ ಸಲ್ಲಿಸಿದರು. ನಂತರ ಶ್ವಾನವನ್ನು 26 ಆರ್ಮಿ ಡಾಗ್ ಯುನಿಟ್‌ನ ಘಟಕ ಮೈದಾನದಲ್ಲಿ ಸಮಾಧಿ ಮಾಡಲಾಯಿತು.


ಇದನ್ನೂ ಓದಿ: Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ


2019 ರಲ್ಲಿ ಸಂಸತ್ತಿನಲ್ಲಿ ಮಾಡಿದ ಹೇಳಿಕೆಯಲ್ಲಿ, ಸೇನೆಯು 25 ಪೂರ್ಣ ನಾಯಿ ಘಟಕಗಳು ಮತ್ತು ಎರಡು ಅರ್ಧ ಘಟಕಗಳನ್ನು ಹೊಂದಿದೆ ಎಂದು ರಕ್ಷಣಾ ರಾಜ್ಯ ಸಚಿವರು ಬಹಿರಂಗಪಡಿಸಿದ್ದರು. ಪೂರ್ಣ ನಾಯಿ ಘಟಕವು 24 ನಾಯಿಗಳನ್ನು ಒಳಗೊಂಡಿರುತ್ತದೆ ಮತ್ತು ಅರ್ಧ ಘಟಕವು 12 ಶ್ವಾನಗಳನ್ನು ಒಳಗೊಂಡಿರುತ್ತದೆ.


ಸೈನ್ಯದಲ್ಲಿ ಯಾವ ರೀತಿಯ ನಾಯಿಗಳನ್ನು ನೇಮಿಸಿಕೊಳ್ಳಲಾಗುತ್ತದೆ?
ಸೇನೆಯಲ್ಲೂ ಸಹ ಇಂತಹದ್ದೇ ನಾಯಿಗಳನ್ನು ನಿಯೋಜಿಸಿಕೊಳ್ಳಬೇಕೆಂಬ ಕೆಲವು ನಿಯಮಗಳಿವೆ. ಏಕೆಂದರೆ ಕಾರ್ಯಚರಣೆಯಲ್ಲಿ ಭಾಗಿಯಾಗಲು ಶಕ್ತಿಶಾಲಿ ಶ್ವಾನಗಳ ಅವಶ್ಯಕತೆ ಇದೆ. ಭಾರತೀಯ ಸೇನೆಯು ತನ್ನ ಶ್ವಾನ ಘಟಕಗಳಲ್ಲಿ ವಿವಿಧ ತಳಿಯ ನಾಯಿಗಳನ್ನು ಹೊಂದಿದೆ. ಇವುಗಳಲ್ಲಿ ಲ್ಯಾಬ್ರಡಾರ್‌ಗಳು, ಜರ್ಮನ್ ಶೆಫರ್ಡ್ಸ್, ಬೆಲ್ಜಿಯನ್ ಮಾಲಿನೋಯಿಸ್ ಮತ್ತು ಗ್ರೇಟ್ ಮೌಂಟೇನ್ ಸ್ವಿಸ್ ಡಾಗ್ಸ್ ಮುಖ್ಯವಾಗಿವೆ. ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವ ಆಕ್ಸೆಲ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ನಾಯಿ ಎಂದು ವರದಿಯಾಗಿದೆ.


ಸೇನಾ ಶ್ವಾನಗಳ ಕರ್ತವ್ಯ ಏನು? ಮತ್ತು ಅವುಗಳಿಗೆ ಎಲ್ಲಿ ತರಬೇತಿ ನೀಡಲಾಗುತ್ತದೆ?
ಸೇನೆಯಲ್ಲಿ ಶ್ವಾನಗಳು ತಮ್ಮದೇ ಆದ ವಿವಿಧ ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸುತ್ತವೆ. ಇವುಗಳಲ್ಲಿ ಕಾವಲು ಕರ್ತವ್ಯ, ಗಸ್ತು ತಿರುಗುವಿಕೆ, ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಸೇರಿದಂತೆ ಸ್ಫೋಟಕಗಳನ್ನು ಕಂಡುಹಿಡಿಯುವುದು, ಗಣಿ ಪತ್ತೆ, ಮಾದಕವಸ್ತು ಸೇರಿದಂತೆ ನಿಷಿದ್ಧ ವಸ್ತುಗಳ ಪತ್ತೆ ಹಚ್ಚುವಿಕೆ, ಸಂಭಾವ್ಯ ಗುರಿಗಳ ಮೇಲೆ ದಾಳಿ ಮಾಡುವುದು, ಹಿಮಪಾತದ ಸಂದರ್ಭದಲ್ಲಿ ಅವಶೇಷಗಳ ಪತ್ತೆ ಮತ್ತು ಭಾಗವಹಿಸುವಿಕೆ ಸೇರಿ ಈ ಎಲ್ಲಾ ಪ್ರಮುಖ ಜವಾಬ್ದಾರಿ ಈ ಪ್ರಾಣಿಗಳ ಮೇಲಿರುತ್ತದೆ. ತಲೆಮರೆಸಿಕೊಂಡಿರುವ ಪರಾರಿಗಳು ಮತ್ತು ಭಯೋತ್ಪಾದಕರನ್ನು ಪತ್ತೆಹಚ್ಚಲು ಸಹ ಆರ್ಮಿ ಡಾಗ್ ಗಳನ್ನು ಸೇನೆಯ ಶೋಧ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ.


ಇದನ್ನೂ ಓದಿ:  Explained: ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಹೇಗಿರುತ್ತೆ? ಎಷ್ಟು ಬಲಿಷ್ಠವಾಗಿರುತ್ತೆ?


ಇನ್ನೂ ಶ್ವಾನಗಳ ತರಬೇತಿ ಎಲ್ಲಿ ನಡೆಯುತ್ತದೆ ಎಂಬುದನ್ನು ನೋಡುವುದಾದರೆ, ಇವುಗಳಿಗೆ ಮೀರತ್‌ನಲ್ಲಿರುವ ರಿಮೌಂಟ್ ಮತ್ತು ವೆಟರ್ನರಿ ಕಾರ್ಪ್ಸ್ ಸೆಂಟರ್ ಮತ್ತು ಸ್ಕೂಲ್‌ನಲ್ಲಿ ಸೇನಾ ನಾಯಿಗಳಿಗೆ ತರಬೇತಿ ನೀಡಲಾಗುತ್ತದೆ. 1960ರಲ್ಲಿ ಈ ಸ್ಥಳದಲ್ಲಿ ಶ್ವಾನ ತರಬೇತಿ ಶಾಲೆಯು ಪ್ರಾರಂಭವಾಯಿತು. ನಾಯಿಗಳ ತಳಿ ಮತ್ತು ಅವುಗಳ ಯೋಗ್ಯತೆಯ ಆಧಾರದ ಮೇಲೆ, ನಿಯೋಜನೆ ಮಾಡಿಕೊಳ್ಳುವ ಮೊದಲು ಅವುಗಳಿಗೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಸಂಪೂರ್ಣ ತರಬೇತಿ ಬಳಿಕ ಶ್ವಾನಗಳನ್ನು ಸೇನಾ ವಿಭಾಗಕ್ಕೆ ಸೇರಿಸಿಕೊಳ್ಳಲಾಗುತ್ತದೆ.


ಆರ್ಮಿ ನಾಯಿಗಳು ಎಷ್ಟು ಕಾಲ ಸೇವೆ ಸಲ್ಲಿಸುತ್ತವೆ
ಸೇನೆಯ ಶ್ವಾನಗಳು ನಿವೃತ್ತರಾಗುವ ಮೊದಲು ಸುಮಾರು ಎಂಟು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತವೆ. ಸೇನೆಯ ನಾಯಿಗಳು ಸಕ್ರಿಯ ಸೇವೆಯಲ್ಲಿಲ್ಲದ ನಂತರ ದಯಾಮರಣ ನೀಡುವ ಪದ್ಧತಿ ಈ ಮೊದಲು ಇತ್ತು. 2015ರಲ್ಲಿ ಈ ಮಾಹಿತಿ ಆರ್ಟಿಐ ಉತ್ತರದ ನಂತರ ಬಹಿರಂಗವಾದ ಬಳಿಕ ಈ ವಿಚಾರ ಸಾರ್ವಜನಿಕ ಕೋಲಾಹಲಕ್ಕೆ ಕಾರಣವಾಯಿತು ಮತ್ತು ನಂತರ ನೀತಿಯನ್ನು ತಿದ್ದುಪಡಿ ಮಾಡಲಾಯಿತು.


ಈ ಸಂಬಂಧ 2016 ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು, ಅಲ್ಲಿ ಆಗಿನ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಪ್ರಾಣಿಗಳನ್ನು ದಯಾಮರಣ ಮಾಡುವ ನೀತಿಯನ್ನು ತಿದ್ದುಪಡಿ ಮಾಡಲಾಗುತ್ತಿದೆ ಮತ್ತು ನಾಯಿಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ನೀತಿಯನ್ನು ತಿದ್ದುಪಡಿ ಮಾಡಿ ಹೊಸ ತೀರ್ಪು ನೀಡಿದರು.


ಸೇನಾ ನಾಯಿಗಳಿಗೆ ಪ್ರಶಸ್ತಿಗಳನ್ನು ನೀಡುತ್ತಾರೆಯೇ?
ಭಾರತೀಯ ಸೇನೆಯಲ್ಲಿ, ಸೈನಿಕರಂತೆ ನಾಯಿಗಳಿಗೂ ಪ್ರಶಸ್ತಿ, ಪುರಸ್ಕಾರ ನೀಡಾಗುತ್ತದೆ. ಪ್ರಾಣಿಗಳು ತಮ್ಮ ಶೌರ್ಯ ಮತ್ತು ವಿಶಿಷ್ಟ ಸೇವೆಗಾಗಿ ಸೇನಾ ಮುಖ್ಯಸ್ಥರ ಪ್ರಶಂಸಾ ಕಾರ್ಡ್, ವೈಸ್ ಚೀಫ್ ಆಫ್ ಸ್ಟಾಫ್ ಕಮೆಂಡೇಶನ್ ಕಾರ್ಡ್ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಕಮೆಂಡೇಶನ್ ಕಾರ್ಡ್ ಅನ್ನು ಪಡೆಯಲು ಅರ್ಹವಾಗಿರುತ್ತವೆ. ಶ್ವಾನ ನಿರ್ವಾಹಕರು ಶೌರ್ಯ ಪದಕಗಳಿಗೆ ಅರ್ಹರಾಗಿದ್ದಾರೆ ಮತ್ತು ತಮ್ಮ ಕಾರ್ಯಾಚರಣೆಯಲ್ಲಿ ಭಾಗವಹಿಸುವ ನಾಯಿಗಳ ಶೌರ್ಯಕ್ಕಾಗಿ ಶೌರ್ಯ ಚಕ್ರ ಮತ್ತು ಸೇನಾ ಪದಕವನ್ನು ಸಹ ನೀಡಲಾಗುತ್ತದೆ. ಇಲ್ಲಿಯವರೆಗೂ ಅದೆಷ್ಟೋ ಸೇನಾ ನಾಯಿಗಳು ಈ ಪ್ರಶಸ್ತಿಗೆ ಭಾಜನವಾಗಿವೆ.


ಬೇರೆ ದೇಶಗಳಲ್ಲೂ ಆರ್ಮಿ ನಾಯಿಗಳಿಗಿದೆ ವಿಶೇಷ ಸ್ಥಾನಮಾನ
ಯುನೈಟೆಡ್ ಕಿಂಗ್‌ಡಂನಲ್ಲಿ, ಮಿಲಿಟರಿ ಅಥವಾ ಪೊಲೀಸ್ ಸೇವೆಯಲ್ಲಿ ಪ್ರಾಣಿಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯೆಂದರೆ PDSA ಡಿಕಿನ್ ಪದಕ. ಇದನ್ನು 1943 ರಲ್ಲಿ ಪೀಪಲ್ಸ್ ಡಿಸ್ಪೆನ್ಸರಿ ಫಾರ್ ಸಿಕ್ ಅನಿಮಲ್ಸ್ (ಪಿಡಿಎಸ್‌ಎ) ಸಂಸ್ಥಾಪಕರಾದ ಮಾರಿಯಾ ಡಿಕಿನ್ ಅವರು ಬ್ರಿಟಿಷ್ ಸಶಸ್ತ್ರ ಪಡೆಗಳು ಅಥವಾ ನಾಗರಿಕ ತುರ್ತು ಸೇವೆಗಳೊಂದಿಗೆ ಸೇವೆ ಸಲ್ಲಿಸುತ್ತಿರುವಾಗ ಪ್ರಾಣಿಗಳಿಗೆ ಶೌರ್ಯ ಮತ್ತು ಭಕ್ತಿಯನ್ನು ಪ್ರದರ್ಶಿಸಲು ಸ್ಥಾಪಿಸಿದರು. ಕಂಚಿನ ಡಿಕಿನ್ ಪದಕವು ಒಂದು ಬದಿಯಲ್ಲಿ 'ಶೌರ್ಯಕ್ಕಾಗಿ" ಮತ್ತು ಇನ್ನೊಂದು ಬದಿಯಲ್ಲಿ "ನಾವು ಸಹ ಸೇವೆ ಮಾಡುತ್ತೇವೆ" ಎಂಬ ವಾಕ್ಯವನ್ನು ಒಳಗೊಂಡಿದೆ.


ಇದನ್ನೂ ಓದಿ:  Independence Day 2022: ಹೇಗಿತ್ತು 1947ರಲ್ಲಿ ಮೊದಲ ಸ್ವಾತಂತ್ರ್ಯ ಹಬ್ಬ? ಫೋಟೋಗಳಲ್ಲಿ ನೋಡಿ ಅಂದಿನ ಸಂಭ್ರಮ!


ಯುಎಸ್ ನಲ್ಲಿ, ಶೌರ್ಯದ ಪದಕವಿದೆ, ಇದನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ ಮತ್ತು 2019 ರಲ್ಲಿ ಸ್ಥಾಪಿಸಲಾಯಿತು. US ಕೂಡ K-9 ಧೈರ್ಯದ ಪದಕವನ್ನು ಹೊಂದಿದೆ, ಇದನ್ನು ಅಮೇರಿಕನ್ ಹ್ಯೂಮನ್ ಅಸೋಸಿಯೇಷನ್ ಸ್ಥಾಪಿಸಿದೆ. ಇನ್ನೂ ಸೇನೆಯಲ್ಲಿ ಇರುವಂತೆ ಪೊಲೀಸ್ ಇಲಾಖೆಯಲ್ಲಿ ನೋಡಿದರೆ ಎದೆ ನಡುಗುವಂತಹ ನಾಯಿಗಳನ್ನು ನೇಮಿಸಿಕೊಂಡಿರುತ್ತಾರೆ. ಇವುಗಳು ಸಹ ಅಪರಾಧ, ಕೃತ್ಯ ಇಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಗಳನ್ನು ಪತ್ತೆ ಹಚ್ಚಲು, ಸ್ಫೋಟಕಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಅತ್ಯುತ್ತಮ ಪೊಲೀಸ್ ನಾಯಿ ತಳಿಗಳು ಎಂದರೆ ಜರ್ಮನ್ ಶೆಫರ್ಡ್, ಬೀಗಲ್, ಬೆಲ್ಜಿಯನ್ ಮಾಲಿನೋಯಿಸ್, ರೊಟ್ವೀಲರ್ಸ್,ಲ್ಯಾಬ್ರಡಾರ್ ಇತ್ಯಾದಿ ಸೇರಿವೆ.


ಒಟ್ಟಾರೆ ದೇಶದ ರಕ್ಷಣೆಯಲ್ಲಿ ಸೈನಿಕರಷ್ಟೇ ಮುಖ್ಯವಾಗಿರುವ ಈ ಮೂಕಪ್ರಾಣಿಗಳ ನಿಷ್ಠೆ ಮತ್ತು ಧೈರ್ಯಕ್ಕೆ ನಾವೆಲ್ಲರೂ ಸಲಾಂ ಹೇಳಲೇಬೇಕು.

Published by:Ashwini Prabhu
First published: