• Home
  • »
  • News
  • »
  • explained
  • »
  • Explained: ಕಾಂಗ್ರೆಸ್​ನಲ್ಲಿ ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ವಿಷಯ: ಮೂವರಲ್ಲಿ ಯಾರಿಗೆ ಲಕ್?

Explained: ಕಾಂಗ್ರೆಸ್​ನಲ್ಲಿ ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ವಿಷಯ: ಮೂವರಲ್ಲಿ ಯಾರಿಗೆ ಲಕ್?

ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ. ಶಿವಕುಮಾರ್.

ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ. ಶಿವಕುಮಾರ್.

ಕಾಂಗ್ರೆಸ್​ನಲ್ಲಿ ನಾಯಕತ್ವ, ಮುಂದಿನ ಸಿಎಂ, ದಲಿತ ಸಿಎಂ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯದ ಮಟ್ಟಿಗೆ ನೋಡುವುದಾದರೆ ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದಂತೆ ಆಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಲಿದೆ, ರಾಜ್ಯದಲ್ಲಿ ಯಾವೆಲ್ಲಾ ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದೆ ಓದಿ ...
  • Share this:

ಕಾಂಗ್ರೆಸ್​ ವಿಷಯದಲ್ಲಿ ನಾಯಕತ್ವ (Leadership Issue In Congress) ವಿಚಾರ ಆಗಾಗ್ಗೆ ದೊಡ್ಡ ಕಂದಕಗಳನ್ನೇ ಸೃಷ್ಟಿಸಿ ಬಿಡುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಇದೀಗ ಪಂಜಾಬ್​ನಲ್ಲಿ (Rajasthan, Madhya Pradesh, Punjab) ಕೂಡ ಆಗಿದ್ದು, ಇದೇ ನಾಯಕತ್ವದ ಗೊಂದಲ. ಒಬ್ಬರ ಕೈಯಲ್ಲಿ ನಾಯಕತ್ವ ಇಲ್ಲದ ಪರಿಣಾಮ ಬಣ ರಾಜಕೀಯ ಕಾಂಗ್ರೆಸ್ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಪಂಜಾಬ್​ ಕಾಂಗ್ರೆಸ್​ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅಸ್ತಿರತೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರ ನಡುವಿನ ವೈಮನಸ್ಸಿನಿಂದ ಇಬ್ಬರು ಇದೀಗ ಅಧಿಕಾರ ಕಳೆದುಕೊಂಡು ಪಕ್ಷದಿಂದ ಹೊರಕ್ಕೆ ಒಂದು ಕಾಲು ಇರಿಸಿದ್ದಾರೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಆಶ್ಚರ್ಯ ರೀತಿಯಲ್ಲಿ ಪಂಜಾಬ್​ ರಾಜ್ಯದ ಮೊದಲ ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ, ರಾಜಕೀಯ ಅನಿಶ್ಚತತೆ ಹಾಗೆ ಮುಂದುವರೆದಿದೆ. ಇದೆಲ್ಲದರ ಪರಿಣಾಮ ಇನ್ನು ನಾಲ್ಕು ತಿಂಗಳಲ್ಲಿ ಅಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮೇಲೆ ಪ್ರತಿಫಲನಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕರ್ನಾಟಕ ರಾಜ್ಯದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಮುಂದಿನ ಸಿಎಂ ವಿಚಾರವಾಗಿ ಶೀತನ ಸಮರ ಏರ್ಪಟ್ಟಿರುವುದು (Cold War Between Siddaramaiah And DK Shivakumar For Next CM) ಗೊತ್ತಿಲ್ಲದ ಸಂಗತಿ ಏನಲ್ಲ. ಇದರ ನಡುವೆ ಕಾಂಗ್ರೆಸ್​ನ ಮತ್ತೋರ್ವ ಹಿರಿಯ ನಾಯಕ ಜಿ. ಪರಮೇಶ್ವರ್ (G Parameshwar) ಅವರು ದಲಿತ ಸಿಎಂ ಅಸ್ತ್ರವನ್ನು (Dalit CM) ಪ್ರಯೋಗ ಮಾಡಿ ಮತ್ತೊಂದು ಹಂತದ ಚರ್ಚೆ ಹುಟ್ಟು ಹಾಕಿದ್ದಾರೆ.


ಪಂಜಾಬ್ ಘಟನೆ ಎಳೆದುತಂದ ಪರಮೇಶ್ವರ್


ತುಮಕೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಪರಮೇಶ್ವರ್ ಅವರು, ಪಂಜಾಬಿನಲ್ಲಿ ದಲಿತ ಸಮುದಾಯದವರನ್ನು ಸಿಎಂ ಮಾಡಿದ್ದಾರೆ. ನಮ್ಮಲ್ಲೂ ದಲಿತ ಸಿಎಂ ಕೇಳುವಂತದಾಗಬಹುದು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳುವಂತದಾಗಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ ಎಂದು ಹೇಳುವ ಮೂಲಕ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ.


ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮದು ಏನಿದ್ದರೂ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದು ಹೇಳಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇಬ್ಬರಿಗೂ ಪರಮೇಶ್ವರ್ ಹೇಳಿಕೆ ಸಂಕಷ್ಟ ತಂದೊಡ್ಡಬಹುದು ಎಂಬುದು ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದ್ದಾರೆ.


ದಲಿತ ಸಿಎಂ ಅಸ್ತ್ರ


2023ಕ್ಕೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆಗೂ ಮೊದಲೆ ಕಾಂಗ್ರೆಸ್​ ನಾಯಕರಲ್ಲಿ ಸಿಎಂ ಸ್ಥಾನದ ಹಗ್ಗ-ಜಗ್ಗಾಟ ನಡೆದಿದೆ. ಕಾಂಗ್ರೆಸ್ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಅವರೆ ಸಿಎಂ ಆಗಲಿದ್ದಾರೆ. ಇದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ ಜಿ ಪರಮೇಶ್ವರ್ ಮುಂದಿನ ಸಿಎಂ ಎಂದು ಹೇಳಲಾಗುತ್ತಿತ್ತು. ಆದರೆ, ಆ ಚುನಾವಣೆಯಲ್ಲಿ ಪರಮೇಶ್ವರ್ ಸೋತ ಕಾರಣದಿಂದ ಅವರಿಗೆ ಸಿಎಂ ಪಟ್ಟ ತಪ್ಪಿತ್ತು. ಆ ಸ್ಥಾನಕ್ಕೆ ಸಿದ್ದರಾಮಯ್ಯ ಬಂದರು. ಬಳಿಕ ಸತತ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಅವರ ಆಡಳಿತದಲ್ಲಿ ಬಡಜನರಿಗೆ ಹಲವು ಅಕ್ಕಿ ಭಾಗ್ಯ ಸೇರಿದಂತೆ ಹಲವು ಭಾಗ್ಯ ಯೋಜನೆಗಳನ್ನು ನೀಡಿದರು. ಮುಂದೆಯೂ ಸಹ ಇಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಹೇಳುವ ಮೂಲಕ ಮತ್ತೊಮ್ಮೆ ಅಧಿಕಾರದ ಆಸೆ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನು ಓದಿ: DK Shivakumar: ಜೆಡಿಎಸ್ ಅಲ್ಪಸಂಖ್ಯಾತರನ್ನು ನಿಲ್ಲಿಸಿ Political Strategy ಮಾಡಿದೆ; ಡಿ.ಕೆ. ಶಿವಕುಮಾರ್


ಒಟ್ಟಿನಲ್ಲಿ ಕಾಂಗ್ರೆಸ್​ನಲ್ಲಿ ನಾಯಕತ್ವ, ಮುಂದಿನ ಸಿಎಂ, ದಲಿತ ಸಿಎಂ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯದ ಮಟ್ಟಿಗೆ ನೋಡುವುದಾದರೆ ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದಂತೆ ಆಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಲಿದೆ, ರಾಜ್ಯದಲ್ಲಿ ಯಾವೆಲ್ಲಾ ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


  • ವರದಿ: ರಮೇಶ್ ಹಂಡ್ರಂಗಿ

Published by:HR Ramesh
First published: