ಮಂಗಳವಾರ ಸಂಜೆ ಉತ್ತರ ಅಫ್ಘಾನಿಸ್ತಾನದಲ್ಲಿ (Afghanistan) 6.6 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ರಾತ್ರಿ 10.20 ರ ಸುಮಾರಿಗೆ ರಾಜಧಾನಿ ನವದೆಹಲಿ (New Delhi) ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಬಲ ಭೂಕಂಪನದ (Earthquake) ಅನುಭವವಾಗಿದೆ. ವರದಿಗಳ ಪ್ರಕಾರ, ತುರ್ಕಮೆನಿಸ್ತಾನ್, ಭಾರತ, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ್ ಮತ್ತು ಕಿರ್ಗಿಸ್ತಾನ್‌ನಲ್ಲಿ ಭೂಕಂಪದ ಅನುಭವ ಉಂಟಾಗಿದೆ.
ಕಂಪನದ ಮೊದಲ ಹಾಗೂ ಎರಡನೆಯ ತರಂಗ
ಇಂಡೋ ಆಸ್ಟ್ರೇಲಿಯನ್ ಪ್ಲೇಟ್ ಯುರೇಷಿಯನ್ ಪ್ಲೇಟ್‌ಗೆ ಡಿಕ್ಕಿ ಹೊಡೆಯುತ್ತಿದೆ ಹಾಗೂ ಇದರ ಬಿಡುಗಡೆಯು ಆ ಪ್ರದೇಶದಲ್ಲಿ ಸಂಭವಿಸಿದೆ. ವಾಯುವ್ಯ ಭಾರತ ಮತ್ತು ದೆಹಲಿಯ ಜನತೆಗೆ ಭೂಕಂಪದ ಅನುಭಕ್ಕೆ ಕಾರಣ ಕಂಪನದ ಆಳವಾಗಿದೆ.
ಏಕೆಂದರೆ ಕಂಪನವು 150 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವೇಗವನ್ನು ಹೊಂದಿದೆ ಹಾಗಾಗಿ ಮೊದಲ ತರಂಗ ಮತ್ತು ಎರಡನೆಯ ತರಂಗಗಳು ದೆಹಲಿ ಹಾಗೂ ಭಾರತದ ಕೆಲವು ಕಡೆಗಳಲ್ಲಿ ಸಂಭವಿಸಿದೆ. ಇನ್ನು ಇಂತಹ ಭೂಕಂಪನ ಸೂಚನೆಗಳನ್ನು ಮೊದಲೇ ಸೂಚಿಸಲು ಆಗುವುದಿಲ್ಲ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ವಿಜ್ಞಾನಿ ಜೆ ಎಲ್ ಗೌತಮ್ ತಿಳಿಸಿದ್ದಾರೆ.
ಆಗಾಗ್ಗೆ ಭೂಕಂಪ ಸಂಭವಿಸುವ ಪ್ರದೇಶ
ಹಿಂದೂ ಕುಶ್ ಶ್ರೇಣಿಗಳು ನೆಲೆಗೊಂಡಿರುವ ಈಶಾನ್ಯ ಅಫ್ಘಾನಿಸ್ತಾನವು ಭೂಕಂಪ-ಪೀಡಿತ ಪ್ರದೇಶವಾಗಿದೆ, ಇದು ವಾಡಿಕೆಯಂತೆ ಈ ಪ್ರದೇಶವು 6 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪಗಳನ್ನು ಅನುಭವಿಸುತ್ತದೆ.
ಒಂದು ವರ್ಷದಲ್ಲಿ ನಾಲ್ಕು ಕಂಪನಗಳು ಈಗಾಗಲೇ ಸಂಭವಿಸಿದೆ. ಭೂಕಂಪನಗಳು ಭೂಮಿಯ ಮೇಲ್ಮೈಯಿಂದ ಎಷ್ಟು ಆಳದಲ್ಲಿ ಸಂಭವಿಸಿದೆ ಎಂಬುದರ ಆಧಾರದ ಮೇಲೆ ಇವುಗಳಲ್ಲಿ ಕೆಲವು ಕಂಪನಗಳ ಅನುಭವ ಭಾರತದ ಕೆಲವೆಡೆಗಳಲ್ಲಿ ಉಂಟಾಗಲು ಕಾರಣವಾಗಿದೆ ಎಂದು ಗೌತಮ್ ತಿಳಿಸಿದ್ದಾರೆ.
USGS ಪ್ರಕಾರ, ಮಂಗಳವಾರ ರಾತ್ರಿಯ ಭೂಕಂಪವು ಮೇಲ್ಮೈಯಿಂದ 187 ಕಿಮೀ ಕೆಳಗೆ ಸೃಷ್ಟಿಯಾಗಿದೆ. ಹಿಂದೂ ಕುಶ್ ಪ್ರದೇಶವು ಸಾಮಾನ್ಯವಾಗಿ ಆಳವಾದ ಭೂಕಂಪಗಳನ್ನು ಹೊಂದಿದೆ, ಇದು 100 ಕಿಮೀ ಅಥವಾ ಕೆಳಗಿನ ಆಳದಲ್ಲಿ ಸಂಭವಿಸುತ್ತದೆ.
ಆಳವಾದ ಭೂಕಂಪಗಳು, ಸಾಕಷ್ಟು ಪ್ರಬಲವಾಗಿದ್ದರೆ ದೊಡ್ಡ ಭೌಗೋಳಿಕ ಪ್ರದೇಶಗಳ ಮೇಲೆ ಇವುಗಳ ಪರಿಣಾಮ ಉಂಟಾಗುತ್ತದೆ. ಇದಕ್ಕೆ ಕಾರಣ ಅಫ್ಘಾನಿಸ್ತಾನದ ಭೂಪ್ರದೇಶವು ಉತ್ತರ ಭಾರತಕ್ಕೆ ವಿಸ್ತರಿಸಿದ್ದು ಇದು ಅಲೆಗಳ ಪ್ರಸರಣಕ್ಕೆ ಅನುಕೂಲಕರವಾದ ಸಾಕಷ್ಟು ಘನ ಬಂಡೆಗಳನ್ನು ಹೊಂದಿದೆ.
ಹೆಚ್ಚಿನ ಹಾನಿ ಸಂಭವಿಸದೇ ಇರಲು ಕಾರಣ
ಕಂಪನದ ತೀವ್ರತೆ ಬಹುದೂರವನ್ನು ಕ್ರಮಿಸಬೇಕಾಗಿರುವುದರಿಂದ ಆಳವಾದ ಭೂಕಂಪನಗಳು ದುರ್ಬಲವಾಗಿರುತ್ತವೆ ಅಂತೆಯೇ ಇವು ವಿಸ್ತರಿಸಿದಷ್ಟೂ ದೂರ ಶಕ್ತಿಯನ್ನು ಕಳೆದುಕೊಂಡು ದುರ್ಬಲಗೊಳ್ಳುತ್ತವೆ. ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ 15-20 ಸೆಕೆಂಡುಗಳ ಕಾಲ ಕಂಪನಗಳು ಮುಂದುವರಿದಿದ್ದರೂ ಅವು ಹೆಚ್ಚಿನ ಹಾನಿಯುಂಟು ಮಾಡಲು ಸಮರ್ಥವಾಗಿಲ್ಲ ಎಂದು ಗೌತಮ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪಗಳಿಂದ ಉತ್ತರ ಭಾರತದ ಮೇಲೆ ಪರಿಣಾಮ ಬೀರುತ್ತಿರುವುದು ಇದು ಮೊದಲಲ್ಲ. 2015 ರಲ್ಲಿ, ನೇಪಾಳದ ಪ್ರಬಲ ಭೂಕಂಪದ ಸುಮಾರು ಆರು ತಿಂಗಳ ನಂತರ, ಅಫ್ಘಾನಿಸ್ತಾನದ ಸರಿಸುಮಾರು ಅದೇ ಪ್ರದೇಶದಲ್ಲಿ 7.5-ತೀವ್ರತೆಯ ಭೂಕಂಪವು ಉತ್ತರ ಭಾರತದ ಹೆಚ್ಚಿನ ಭಾಗವನ್ನು ಭೀತಿಗೊಳಿಸಿತು.
2018 ರ ಜನವರಿಯಲ್ಲಿಯೂ ಕಂಪನ ಉಂಟಾಗಿದೆ. ಈ ಎಲ್ಲಾ ಘಟನೆಗಳಲ್ಲಿಯೂ ಭೂಕಂಪಗಳು ಭೂಮಿಯ ಮೇಲ್ಮೈಯಿಂದ 150 ಕಿಲೋಮೀಟರ್‌ಗಿಂತ ಹೆಚ್ಚು ಆಳದಲ್ಲಿ ಸೃಷ್ಟಿಯಾಗಿವೆ.
ಮಂಗಳವಾರ ಸಂಭವಿಸಿದ ಭೂಕಂಪನ ಸ್ಥಳದಿಂದ ಈ ಹಿಂದೆ ಉತ್ತರಕ್ಕೆ ಒಂದೆರಡು ನೂರು ಕಿಮೀ ದೂರದಲ್ಲಿರುವ ದಕ್ಷಿಣ ತಜಿಕಿಸ್ತಾನ್‌ನಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪವು ಭಾರತದಲ್ಲಿ ಎಲ್ಲಿಯೂ ಕಂಡಬರಲಿಲ್ಲ, ಏಕೆಂದರೆ ಇದು ತುಂಬಾ ಆಳವಿರಲಿಲ್ಲ ಹಾಗೂ ಭೂಮಿಯ ಮೇಲ್ಮೈಯಿಂದ ಕೇವಲ 11 ಕಿಮೀ ಕೆಳಗೆ ಸಂಭವಿಸಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.
ಟೆಕ್ಟೊನಿಕ್ ಶಕ್ತಿಗಳ ಪ್ರಭಾವಕ್ಕೆ ಒಳಗಾಗುವ ಹಿಂದೂ ಕುಶ್ ಪ್ರದೇಶ
ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶವು ವಿಶಿಷ್ಟವಾದ ಟೆಕ್ಟೋನಿಕ್ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಿದ್ದು ಆಗಾಗ್ಗೆ ಭೂಕಂಪನಗಳು ಈ ಪ್ರದೇಶದಲ್ಲಿ ಉಂಟಾಗುತ್ತಿರುತ್ತವೆ. ಈ ಪ್ರದೇಶದಲ್ಲಿ ಒಂದೆಡೆ ಭಾರತೀಯ ಟೆಕ್ಟೋನಿಕ್ ಪ್ಲೇಟ್‌ನ ಬಲಗಳು ಹಿಮಾಲಯದ ಅಡಿಯಲ್ಲಿ ಬರುತ್ತಿರುವಂತೆ ಭಾಸವಾಗುತ್ತದೆ ಹಾಗೂ ಇದು ಸಂಪೂರ್ಣ ಹಿಮಾಲಯ ಶ್ರೇಣಿಯಾದ್ಯಂತ ನಡೆಯುವ ವಿದ್ಯಮಾನವಾಗಿದೆ. ಇನ್ನೊಂದು ಬದಿಯಿಂದ, ಯುರೇಷಿಯನ್ ಪ್ಲೇಟ್ ಪಾಮಿರ್ ಪರ್ವತ ಶ್ರೇಣಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಸ್ಥಳೀಯ ದೋಷಗಳು ಉಂಟಾಗುತ್ತವೆ.
ಆಳವಾದ ಭೂಕಂಪಗಳು ನಂತರದ ಕಂಪನಗಳನ್ನು ಉಂಟುಮಾಡುವ ಸಂಭವ ಹೆಚ್ಚಾಗಿದೆ. ಮಂಗಳವಾರ ಅಫ್ಘಾನಿಸ್ತಾನದಿಂದ ಯಾವುದೇ ನಂತರದ ಆಘಾತಗಳು ವರದಿಯಾಗಿಲ್ಲ. ಕಳೆದ ತಿಂಗಳು ಟರ್ಕಿಯಲ್ಲಿ ಸಂಭವಿಸಿದ 7.8 ಭೂಕಂಪದ ನಂತರ ಸುಮಾರು ನೂರು ದೊಡ್ಡ ಮತ್ತು ಸಣ್ಣ ನಂತರದ ಆಘಾತಗಳು ಸಂಭವಿಸಿದೆ.
ಭೂಕಂಪನದ ಅನುಭವ ಪಡೆದುಕೊಂಡ ಜನರು
ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಹಲವಾರು ಸೆಕೆಂಡುಗಳ ಕಾಲ ಭೂಕಂಪದ ಕಂಪನಗಳು ಸಂಭವಿಸಿದ್ದರಿಂದ ಜನರು ತಮ್ಮ ಮನೆಗಳಿಂದ ಹೊರಬಂದರು.
ಶಕರ್‌ಪುರ ಪ್ರದೇಶದಲ್ಲಿ ಕಟ್ಟಡವೊಂದು ವಾಲುತ್ತಿರುವ ಬಗ್ಗೆ ತಮಗೆ ಕರೆ ಬಂದಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದ್ದು, ನಂತರ ಕಟ್ಟಡದ ನೆರೆಹೊರೆಯವರೂ ಅಗ್ನಿಶಾಮಕಕ್ಕೆ ಕರೆ ಮಾಡಿದ್ದು, ನಂತರ ಇಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸಲಿಲ್ಲ ಎಂದು ಹೇಳಿದೆ. ಡೈನಿಂಗ್ ಟೇಬಲ್ ಅಲುಗಾಡುವುದನ್ನು ಮೊದಲು ಗಮನಿಸಿದೆ ಎಂದು ನೋಯ್ಡಾ ನಿವಾಸಿಯೊಬ್ಬರು ತಿಳಿಸಿದ್ದು, ಫ್ಯಾನ್ ಕೂಡ ಅಲುಗಾಡುತ್ತಿದ್ದುದು ಗಮನಕ್ಕೆ ಬಂದಿದೆ.
ಭೂಕಂಪವು ತೀವ್ರತೆಯ ದೃಷ್ಟಿಯಿಂದ ಪ್ರಬಲವಾಗಿತ್ತು ಮತ್ತು ಹೆಚ್ಚು ಕಾಲ ಇತ್ತು ಎಂದು ನೋಯ್ಡಾದ ಹೈಡ್ ಪಾರ್ಕ್ ಸೊಸೈಟಿಯ ನಿವಾಸಿ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್ ಬಳಿ ಇರುವ ಕ್ಯಾಬ್ ಮಾಲೀಕರಾದ ರಮೇಶ್ ಪವಾರ್ ತಿಳಿಸಿರುವಂತೆ, ನಾನು ಪ್ರಯಾಣಿಕರಿಗಾಗಿ ಕಾಯುತ್ತಿದ್ದೆ ಹಾಗೂ ಇದ್ದಕ್ಕಿದ್ದಂತೆ ಕಾರು ಅಲಗಾಡಲಾರಂಭಿಸಿತು ನಾನು ತಕ್ಷಣ ನನ್ನ ಸ್ನೇಹಿತರಿಗೆ ವಿಷಯ ತಿಳಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Earthquake: ಕ್ಷಮಯಾಧರಿತ್ರಿ ಆಗಾಗ ಕಂಪಿಸುವುದೇಕೆ? ಭೂಕಂಪಕ್ಕೆ ಕಾರಣವೇನು ಅಂತ ನಿಮಗೆ ಗೊತ್ತಾ?
ದಕ್ಷಿಣ ದೆಹಲಿಯ ಲಜಪತ್ ನಗರದ ನಿವಾಸಿ ಜ್ಯೋತಿ ಅವರು ಟಿವಿ ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಟಿವಿ ಮತ್ತು ಸೋಫಾ ಅಲುಗಾಡುತ್ತಿರುವುದು ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿ ಭೂಕಂಪದ ಆಘಾತ
ಇದರ ನಡುವೆಯೇ ಭೂಕಂಪದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಕರೆ ತರಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆಗಸದಲ್ಲಿ ಕಂಡುಬರುವ ವಿಲಕ್ಷಣ ಬೆಳಕು
ದೆಹಲಿ ಹಾಗೂ ಇತರೆಡೆಗಳಲ್ಲಿ ಆಕಾಶದಲ್ಲಿ ವಿಲಕ್ಷಣ ಬೆಳಕು ಕಂಡುಬಂದಿರುವ ಬಗ್ಗೆ ಕೂಡ ಜನರು ಟ್ವಿಟರ್‌ನಲ್ಲಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭೂಕಂಪನದ ಸಮಯದಲ್ಲಿ ಸಂಭವಿಸುವ ಈ ನಿಗೂಢ ಬೆಳಕು ಏನನ್ನು ಸೂಚಿಸುತ್ತದೆ ಎಂಬುದನ್ನು ವಿಜ್ಞಾನಿಗಳು ವಿವರಿಸಿದ್ದಾರೆ.
ಭೂಕಂಪನ ಬೆಳಕಿನ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ
ಭೂಕಂಪನದ ಮೊದಲು ಹಾಗೂ ನಂತರ ಆಕಾಶದಲ್ಲಿ ನಿಗೂಢ ಬೆಳಕನ್ನು ಜನರು ಹೆಚ್ಚಾಗಿ ಗಮನಿಸಿದ್ದಾರೆ. ಭೂಕಂಪದ ಮೊದಲು ಅಥವಾ ಸಮಯದಲ್ಲಿ ಆಕಾಶದಲ್ಲಿ ಹೊಳೆಯುವ ಈ ಬೆಳಕು ಅನೇಕ ಕುತೂಹಲಗಳಿಗೆ ಕಾರಣವಾಗಿದೆ ಅಂತೆಯೇ ಭೂಕಂಪನಕ್ಕೂ ಆಕಾಶದಲ್ಲಿ ಕಂಡುಬರುವ ಹೊಳೆಯುವ ಮಿಂಚನಂತಹ ಬೆಳಕಿಗೂ ಏನು ಕಾರಣ ಎಂಬ ಸೋಜಿಗ ಸೃಷ್ಟಿಯಾಗಿದೆ.
ಇದನ್ನೂ ಓದಿ: Explained: ಕೊಡೈಕೆನಾಲ್‌ನಲ್ಲಿ ಇನ್ನೂ ಇದೆ ಪಾದರಸದ ವಿಷಕಾರಿ ಎಫೆಕ್ಟ್!
ವಿಜ್ಞಾನಿಗಳು ಈ ಬೆಳಕಿನ ಕುರಿತು ಅಧ್ಯಯನ ನಡೆಸಿದ್ದು ಭೂಮಿಯು ಬೇರ್ಪಟ್ಟಾಗ ಉಂಟಾಗುವ ಬಿರುಕು ಹಾಗೂ ಆಕಾಶದಲ್ಲಿ ಕಾಣುವ ಬೆಳಕು ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂದು ತಿಳಿಸಿದ್ದಾರೆ. ಭೂಕಂಪಕ್ಕೆ ಸಂಬಂಧಿಸಿದ ಬಂಡೆಗಳ ಮೇಲಿನ ಒತ್ತಡವು ವಿದ್ಯುತ್ ವಲಯವನ್ನು ಸೃಷ್ಟಿಸುತ್ತವೆ ಇದುವೇ ಬೆಳಕಿಗೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಭೂಕಂಪದ ಬೆಳಕು ಭೂಕಂಪಗಳ ಮೊದಲು ಅಥವಾ ನಂತರದ ಸಮಯದಲ್ಲಿ ಅಸಮಾನವಾಗಿ ಗೋಚರಿಸುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಈ ದೀಪಗಳು ಭೂಕಂಪ ಸೂಚಕವಾಗಿ ಕೂಡ ಕೆಲಸಮಾಡುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಎರಡು ವಿಧಗಳ ಭೂಕಂಪನ ಬೆಳಕು
ಭೂಕಂಪದ ಬೆಳಕನ್ನು ಅವುಗಳ ಗೋಚರಿಸುವಿಕೆಯ ಸಮಯದ ಆಧಾರದ ಮೇಲೆ ಎರಡು ವಿಭಿನ್ನ ಗುಂಪುಗಳಾಗಿ ವರ್ಗೀಕರಿಸಬಹುದು. ಭೂಕಂಪನದ ಮೊದಲು ಕೆಲವು ಸೆಕೆಂಡುಗಳಿಂದ ಕೆಲವು ವಾರಗಳವರೆಗೆ ಸಾಮಾನ್ಯವಾಗಿ ಸಂಭವಿಸುವ ಪೂರ್ವಭಾವಿ ಭೂಕಂಪನ ಬೆಳಕು, ಮತ್ತು ಸಾಮಾನ್ಯವಾಗಿ ಅಧಿಕೇಂದ್ರಕ್ಕೆ ಹತ್ತಿರದಲ್ಲಿ ಕಂಡುಬರುತ್ತದೆ.
ಇನ್ನೊಂದು ಭೂಕಂಪನದ ಸಮಯದಲ್ಲಿ ಕಂಡುಬರುವ ಬೆಳಕು ಕೇಂದ್ರಬಿಂದುವಿನ ಬಳಿ ಅಥವಾ ಅಧಿಕೇಂದ್ರದಿಂದ ಗಮನಾರ್ಹ ದೂರದಲ್ಲಿ ಸಂಭವಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ