ಕೊರೊನಾ (Corona Virus) ಮಹಾಮಾರಿ ವೈರಸ್ ಬಂದಿದ್ದೇ ಬಂದಿದ್ದು, ಅದರ ಹಿಂದೆ ಹತ್ತಾರು ಹೊಸ ವೈರಸ್‌ಗಳ ಉಗಮವಾಗುತ್ತಿದೆ. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ (West Bengal) ಹೊಸ ವೈರಸ್ ಒಂದು ದಾಂಗುಡಿ ಇಟ್ಟಿದ್ದು ಮಕ್ಕಳಲ್ಲಿ (Children) ಹೆಚ್ಚಿನ ಪ್ರಮಾಣದಲ್ಲಿ ಈ ವೈರಸ್ ಕಾಣಿಸಿಕೊಳ್ಳುತ್ತಿದೆ. ಹೌದು, ಅಡೆನೊ ವೈರಸ್ (Adenovirus) ಎಂಬ ಹೊಸ ಸೋಂಕು ಪಶ್ಚಿಮ ಬಂಗಾಳದಾದ್ಯಂತ ವ್ಯಾಪಕವಾಗಿ ಹಬ್ಬಿದ್ದು, ಆತಂಕವನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಭಾನುವಾರದಂದು ಎರಡು ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಒಂದು ಮಗು ರೋಗದ ತೀವ್ರತೆಯಿಂದಾಗಿ ಸಾವನ್ನಪ್ಪಿದೆ. ಇನ್ನೂ ಕೊಲ್ಕತ್ತಾ (Kolkata) ಮತ್ತು ಇತರೆ ಮಹಾನಗರಗಳ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ, ಜ್ವರ (Fever), ಶೀತ (Cold) ಮತ್ತು ಕೆಮ್ಮಿನಿಂದ (Caugh) ಹಲವು ಮಕ್ಕಳು ದಾಖಲಾಗಿವೆ ಎಂದು ವರದಿಗಳು ತಿಳಿಸಿವೆ. ಸುರಕ್ಷಿತ ಕ್ರಮವಾಗಿ ಆಮ್ಲಜನಕ ಉಪಕರಣಗಳು ಮತ್ತು ಮಕ್ಕಳ ವೆಂಟಿಲೇಟರ್‌ಗಳ ದಾಸ್ತಾನು ತೆಗೆದುಕೊಳ್ಳಲು ಆರೋಗ್ಯ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಅಡೆನೊ ವೈರಸ್
ಜನವರಿಯಲ್ಲಿ ಆರೋಗ್ಯ ಇಲಾಖೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಾಲರಾ ಮತ್ತು ಎಂಟೆರಿಕ್ ಡಿಸೀಸ್ (ಎನ್‌ಐಸಿಇಡಿ) ಪರೀಕ್ಷೆಗೆ ಕಳುಹಿಸಿದ್ದ 500 ರಕ್ತ ಮಾದರಿಗಳಲ್ಲಿ 32 ಪ್ರತಿಶತದಷ್ಟು ಅಡೆನೊ ವೈರಸ್, 12 ಪ್ರತಿಶತ ರೈನೋವೈರಸ್ ಮತ್ತು 13 ಪ್ರತಿಶತ ಪ್ಯಾರೆನ್‌ಫ್ಲುಯೆನ್ಸ ವೈರಸ್ ಇರುವುದು ಕಂಡುಬಂದಿದೆ. ಅಷ್ಟಕ್ಕೂ ಏನಿದು ಅಡೆನೊ ವೈರಸ್? ರೋಗ ಲಕ್ಷಣಗಳೇನು? ಅಡೆನೊ ವೈರಸ್ ಹರಡುವ ವಿಧಾನ ಹೇಗೆ? ಎಂಬುದರ ಬಗ್ಗೆ ಇಲ್ಲಿ ನೋಡಿ ವಿವರ.
ಅಡೆನೊ ವೈರಸ್ ಎಂದರೇನು?
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಅಡೆನೊ ವೈರಸ್‌ಗಳು ವೈರಾಣುಗಳ ಗುಂಪಾಗಿದ್ದು, ಈ ವೈರಸ್ ದೇಹವನ್ನು ಪ್ರವೇಶಿಸಿದರೆ ಸಾಮಾನ್ಯವಾಗಿ ಜ್ವರ, ನೆಗಡಿ, ನ್ಯುಮೋನಿಯಾ, ಶ್ವಾಸಕೋಶದ ತೊಂದರೆ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ. ಕೇವಲ ಮಕ್ಕಳಿಗೆ ಮಾತ್ರವಲ್ಲದೇ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ, ಉಸಿರಾಟ ಅಥವಾ ಹೃದಯ ಕಾಯಿಲೆ ಹೊಂದಿರುವ ಜನರಲ್ಲಿ ಅಡೆನೊ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ರೋಗದ ಲಕ್ಷಣಗಳು ಏನು?
ಜ್ವರ
ಗಂಟಲು ಕೆರತ
ತೀವ್ರವಾದ ಬ್ರಾಂಕೈಟಿಸ್ (ಶ್ವಾಸಕೋಶದ ಶ್ವಾಸನಾಳದ ಉರಿಯೂತ)
ನ್ಯುಮೋನಿಯಾ (ಶ್ವಾಸಕೋಶದ ಸೋಂಕು)
ಗುಲಾಬಿ ಕಣ್ಣು (ಕಾಂಜಂಕ್ಟಿವಿಟಿಸ್)
ಗ್ಯಾಸ್ಟ್ರೋಎಂಟರೈಟಿಸ್ (ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆ ನೋವನ್ನು ಉಂಟುಮಾಡುವ ಹೊಟ್ಟೆ ಅಥವಾ ಕರುಳಿನ ಉರಿಯೂತ)
ಮಕ್ಕಳಲ್ಲೂ ಅಡೆನೊ ವೈರಸ್ ಕಂಡುಬಂದಲ್ಲಿ ಇದೇ ರೀತಿಯ ರೋಗಲಕ್ಷಣಗಳು ಗೋಚರವಾಗುತ್ತವೆ. ಮಗು ಎರಡು ದಿನಗಳಿಗಿಂತ ಹೆಚ್ಚು ಜ್ವರದಿಂದ ಬಳಲುತ್ತಿದ್ದರೆ, ಹಲವು ದಿನಗಳಿಂದ ಕೆಮ್ಮುತ್ತಿದ್ದರೆ, ಮೂತ್ರದ ಪ್ರಮಾಣವು ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ ಅಥವಾ ಮಗು ಸುಸ್ತಾಗಿದ್ದರೆ ತಕ್ಷಣ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಅಡೆನೊ ವೈರಸ್‌ಗಳು ಹೇಗೆ ಹರಡುತ್ತವೆ?
ಅಡೆನೊ ವೈರಸ್ ಕೂಡ ಹೆಚ್ಚುಕಮ್ಮಿ ಕೊರೋನಾ ವೈರಸ್ ಹರಡಿದಂತೆ ಒಬ್ಬರಿಂದ ಒಬ್ಬರಿಗೆ ಬರುತ್ತದೆ. ಅಡೆನೊ ವೈರಸ್ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ, ಆತನನ್ನು ಮುಟ್ಟುವುದು, ಕೈಕುಲುಕುವುದರಿಂದ ಹಬ್ಬುತ್ತದೆ. ಅಷ್ಟೇ ಅಲ್ಲದೇ ಈ ವೈರಸ್ ಗಾಳಿಯ ಮೂಲಕ, ಸೀನಿನ ಮೂಲಕವೂ ಬರಬಹುದು.
ಅಡೆನೊವೈರಸ್ ಸೋಂಕನ್ನು ತಡೆಯುವುದು ಹೇಗೆ?
ಕೊರೋನಾ ವೈರಸ್ ಸಂದರ್ಭದಲ್ಲಿ ತೆಗೆದುಕೊಂಡ ಹಲವು ಕ್ರಮಗಳನ್ನು ಅಡೆನೊ ವೈರಸ್ ತಡೆಯಲು ಬಳಸಿಕೊಳ್ಳಬೇಕು. ರೋಗ ತಡೆಗಟ್ಟಲು ಮೊದಲಿಗೆ,
- ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ ಮತ್ತು ಚಿಕ್ಕ ಮಕ್ಕಳಿಗೂ ಈ ಅಭ್ಯಾಸ ಹೇಳಿಕೊಡಿ.
- ಕೈ ತೊಳೆಯದೇ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸಬೇಡಿ
- ಅನಾರೋಗ್ಯದ ಜನರೊಂದಿಗೆ ಸಂಪರ್ಕವನ್ನು ತಪ್ಪಿಸಿ
- ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳು ಮನೆಯಿಂದ ಹೊರಹೋಗದೇ ಇತರರ ಸುರಕ್ಷತೆ ಕಾಪಾಡಬೇಕು.
- ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ
ಅಡೆನೊವೈರಸ್ ಸೋಂಕಿನ ಚಿಕಿತ್ಸೆ
ಸಿಡಿಸಿ ಪ್ರಕಾರ, ಅಡೆನೊ ವೈರಸ್ ಸೋಂಕಿನ ಜನರಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಅನುಮೋದಿತ ಆಂಟಿವೈರಲ್ ಔಷಧಿ ಇಲ್ಲ. ಜೊತೆಗೆ ಸೋಂಕಿಗೆ ಲಸಿಕೆ ಕೂಡ ಇಲ್ಲ. ತೀವ್ರವಾಗಿ ಅಸ್ವಸ್ಥರಾಗಿರುವ ರೋಗಿಗಳಿಗೆ ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ