2022ನೇ ಇಸ್ವಿ ಮುಗಿಯುತ್ತಾ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ 2023 ಆಗಮಿಸಲಿದೆ. ಈ ಹೊತ್ತಲ್ಲಿ ಹಿಂತಿರುಗಿ ನೋಡಿದಾಗ ಹಲವು ಘಟನೆಗಳು (incidents) ಈಗಲೂ ಗಮನಸೆಳೆಯುತ್ತದೆ. 2022 ಕರ್ನಾಟಕದ (Karnataka) ಪಾಲಿಗೆ ವಿವಾದಿತ ವರ್ಷ (controversial year) ಅಂತಾನೇ ಹೇಳಬಹುದು. ಹಿಂದೂ ಸಂಘಟನೆ ಕಾರ್ಯಕರ್ತರಾದ ಹರ್ಷ, ಪ್ರವೀಣ್ ನೆಟ್ಟಾರ್ ಕೊಲೆ (Harsha, Praveen Nettar Murder), ಅದರ ಬೆನ್ನಲ್ಲಿ ನಡೆದ ಮಸೂದ್ ಹತ್ಯೆ (Masood Murder), ಹಿಜಾಬ್ ವಿವಾದ (Hijab Controversy), ಹಲಾಲ್ ಕಟ್ ಜಟ್ಕಾ ಕಟ್ ವಿವಾದ, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಮಳಲಿ ಮಸೀದಿ, ಶ್ರೀರಂಗಪಟ್ಟಣ ಮಸೀದಿ ವಿವಾದ, ಪಠ್ಯಪುಸ್ತಕ ವಿವಾದ… ಹೀಗೆ ಸಾಲು ಸಾಲು ಘಟನೆಗಳು ನಡೆದಿವೆ. ಈ ಪ್ರಮುಖ ಘಟನೆ, ವಿವಾದಗಳ ಬಗ್ಗೆ ಇಲ್ಲಿದೆ ಮಾಹಿತಿ…
ವಿಶ್ವದ ಗಮನ ಸೆಳೆದ ಹಿಜಾಬ್ ವಿವಾದ
ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಜನವರಿ 1ರಂದು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು 6 ವಿದ್ಯಾರ್ಥಿನಿಯರು ಆರೋಪಿಸಿದಾಗ ಈ ಹಿಜಾಬ್ ವಿವಾದ ಬೆಳಕಿಗೆ ಬಂತು. ಹಿಜಾಬ್‌ಗೆ ಅವಕಾಶ ಬೇಕು ಅಂತ ಮುಸ್ಲಿಂ ವಿದ್ಯಾರ್ಥಿನಿಗಳು ಮತ್ತು ಸಂಘಟನೆಗಳು ಪಟ್ಟು ಹಿಡಿದವು. ಅತ್ತ ಕೇಸರಿ ಸಾಲು ಧರಿಸಿ ಬರಲು ನಮಗೂ ಅವಕಾಶ ಬೇಕು ಅಂತ ಹಿಂದೂ ವಿದ್ಯಾರ್ಥಿಗಳು ಮತ್ತು ಸಂಘಟನೆಗಳು ಪಟ್ಟು ಹಿಡಿದವು. ಬಳಿಕ ರಾಜ್ಯದಲ್ಲಷ್ಟೇ ಅಲ್ಲದೇ, ದೇಶದಾದ್ಯಂತ ಈ ಬಗ್ಗೆ ಪರ-ವಿರೋಧ ಪ್ರತಿಭಟನೆ ನಡೆದವು. ಬಳಕ ಮಾರ್ಚ್ 15ರಂದು ಹೈಕೋರ್ಟ್ ತೀರ್ಪು ನೀಡಿತು. ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದ ಕೋರ್ಟ್, ಶಾಲೆಗಳಲ್ಲಿ ಸೂಚಿತ ಸಮವಸ್ತ್ರ ಧರಿಸಿ ಬರುವುದು ಕಡ್ಡಾಯ ಎಂದು 129 ಪುಟಗಳ ತೀರ್ಪು ನೀಡಿತು. ಸದ್ಯ ಹಿಜಾಬ್ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.
ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ
2022ರ ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಎಂಬುವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಹರ್ಷ ಸಕ್ರಿಯ ಹಿಂದೂ ಕಾರ್ಯಕರ್ತನಾಗಿದ್ದನು. ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶವಾಗಿದ್ದರಿಂದ ಹಿಂದೂವನ್ನು ಕೊಂದರೇ ಭಯದ ವಾತಾವರಣ ನಿರ್ಮಾಣ ಮಾಡಬಹುದು ಎಂದು ದುಷ್ಟರ ಕೂಟ ಒಗ್ಗಟ್ಟಾಗಿತ್ತು. ಇದರಿಂದಲೇ ಹರ್ಷನನ್ನು ಹದಿನೈದು ದಿನಗಳ ಕಾಲ ಗಮನಿಸಿ ಕೊಲೆಯನ್ನು ಮಾಡಲಾಗಿತ್ತು. ಇನ್ನು ಹರ್ಷನ ಶವಯಾತ್ರೆ ವೇಳೆ ಕಲ್ಲುತೂರಾಟ ಕೂಡ ನಡೆದಿತ್ತು. ಇದಾದ ಬಳಿಕ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು. ಕೊಲೆ ಪ್ರಕರಣ ಸಂಬಂಧ ಈಗಾಗಲೇ 10 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
10 ದಿನಗಳಲ್ಲಿ 3 ಹತ್ಯೆ
ಹಿಂದೂ ಹಾಗೂ ಮುಸ್ಲಿಂ ಕೋಮು ಸಂಘರ್ಷಕ್ಕೆ ಸಿಲುಕಿ ಕೇವಲ 10 ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ಮೂರು ಹತ್ಯೆಗಳು ನಡೆದು ಹೋಗಿದ್ದವು. ಜುಲೈ 19 ರಿಂದ ಜುಲೈ 28 ರ ನಡುವಿನ 10 ದಿನಗಳ ಅವಧಿಯಲ್ಲಿ 19 ವರ್ಷದ ಮಸೂದ್ ಬಿ, 32 ವರ್ಷದ ಪ್ರವೀಣ್ ನೆಟ್ಟಾರು ಹಾಗೂ ಮೊಹಮ್ಮದ್ ಫಾಜಿಲ್ ಎಂಬುವರ ಹತ್ಯೆ ನಡೆದಿತ್ತು.
ಇದನ್ನೂ ಓದಿ: Zika Virus: ಜಿಗಿದು ಜಿಗಿದು ಬರುತ್ತಿದೆ ಝೀಕಾ ವೈರಸ್! ಸೋಂಕು ಹರಡುವ ಮುನ್ನ ಇರಲಿ ಮುಂಜಾಗ್ರತೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ
2022ರ ಜುಲೈ 26ರಂದು ಪ್ರವೀಣ್ ಕೊಲೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ 36 ವರ್ಷದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮೊನ್ನೆ26ರಂದು ಬೆಳ್ಳಾರೆ ಪೇಟೆಯಲ್ಲಿ ತಮ್ಮ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಮೃತಪಟ್ಟಿದ್ದರು. ಪ್ರವೀಣ್ ಕೊನೆಯುಸಿರೆಳೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ, ಹಿಂದೂ ಸಂಘಟನೆಗಳ ಆಕ್ರೋಶ ಭುಗಿಲೆದ್ದಿತ್ತು. ಇದಾದ ಬಳಿಕ ಜುಲೈ 28 ರಂದು ರಾತ್ರಿ ಸುರತ್ಕಲ್ ಪೇಟೆಯಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಾಗ ನಾಲ್ವರು ಮುಸುಕುಧಾರಿಗಳು ಫಾಝಿಲ್ ಎಂಬಾತನ ಮೇಲೆ ದಾಳಿ ಮಾಡಿ ಕೊಂದಿದ್ದರು.
ಹಲಾಲ್ ಕಟ್ ಜಟ್ಕಾ ಕಟ್ ವಿವಾದ
ಇಸ್ಲಾಂ ಧರ್ಮದವರು ಹಲಾಲ್ ವಿಧಾನದ ಮೂಲಕ ಸಿಗುವ ಮಾಂಸವು ಆರೋಗ್ಯಕರವಾಗಿರುತ್ತದೆ ಎಂದು ನಂಬಿದ್ದರೆ, ಜಟ್ಕಾ ಕಟ್ ವಿಧಾನದಲ್ಲಿ ಪ್ರಾಣಿಯು ಅತಿಯಾದ ನರಳಾಟವಿಲ್ಲದೆ ಪ್ರಾಣಿ ಬೇಗನೆ ಸಾಯುತ್ತದೆ ಎನ್ನಲಾಗುತ್ತದೆ. ಇನ್ನೊಂದು ವಿಷಯವೆಂದರೆ ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮದವರೇ ಆಗಿರಬೇಕೆಂಬ ನಿಯಮವಿದ್ದರೆ ಜಟ್ಕಾ ಕಟ್‌ನಲ್ಲಿ ನಿರ್ದಿಷ್ಟ ಧರ್ಮದವರೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಇನ್ನು ಹಲಾಲ್ ಕಟ್ ಮಾಡಿದ ಮಾಂಸವನ್ನು ಹಿಂದೂಗಳು ಖರೀದಿಸಬಾರದು ಅಂತ ಹಿಂದೂ ಪರ ಸಂಘಟನೆಗಳು ಜಾಗೃತೆ ಮೂಡಿಸಿದ್ದವು. ಇದೂ ವಿವಾದಕ್ಕೆ ಕಾರಣವಾಗಿತ್ತು.
ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ
ಹಿಂದೂ ದೇವಸ್ಥಾನದ ಜಾತ್ರೆ, ಉತ್ಸವಗಳಲ್ಲಿ ಸಂತೆ, ವ್ಯಾಪಾರ ನಡೆಯುವುದು ಸಾಮಾನ್ಯ, ಆದರೆ ಇಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ, ಅಂಗಡಿಯಿಡುವುದಕ್ಕೆ, ಸಂತೆ ಮಾಡುವುದಕ್ಕೆ ನಿರ್ಬಂಧ ಹೇರಲಾಯಿತು. ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ನಿಷೇಧ ಎಂದು ಹಲವು ದೇವಸ್ಥಾನಗಳ ಜಾತ್ರೆಯ ಹೊರಗೆ ಗದ್ದೆಗಳಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಇದು ಮುಸ್ಲಿಂ ವ್ಯಾಪಾರಿಗಳ, ಮುಸ್ಲಿಂ ಮುಖಂಡರ, ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಳಲಿ ಮಸೀದಿ ವಿವಾದ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಮಳಲಿ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ಮೇ 26ರಂದು ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿತ್ತು. ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆ ಇದೀಗ ಮುಕ್ತಾಯವಾಗಿದೆ. ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಲಾಗಿತ್ತು. ಸದ್ಯ ಈ ವಿವಾದ ಕೋರ್ಟ್‌ನಲ್ಲಿದೆ.
ಶ್ರೀರಂಗಪಟ್ಟಣ ಮಸೀದಿ ವಿವಾದ
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ವಿವಾದ ಭುಗಿಲೆದ್ದಿದೆ. ಅದು ಹನುಮ ದೇಗುಲವಾಗಿದ್ದು, ಟಿಪ್ಪು ಸುಲ್ತಾನ್ ಅದನ್ನು ಅದನ್ನು ಜಾಮಿಯಾ ಮಸೀದಿಯನ್ನಾಗಿ ಬದಲಾಯಿಸಿದ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ಹಿಂದೂ ಸಂಘಟನೆ ಕಾರ್ಯಕರ್ತರು ಜೂನ್ 4ರಂದು ‘ಶ್ರೀರಂಗಪಟ್ಟಣ ಚಲೋ’ ಅಭಿಯಾನ ಹಮ್ಮಿಕೊಂಡಿದ್ದವು.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ
ಬೆಂಗಳೂರಿನ ಚಾಮರಾಜಪೇಟೆಯ ಆಟದ ಮೈದಾನವನ್ನೇ ಆಗಿನಿಂದ ಈದ್ಗಾ ಮೈದಾನ ಎಂದು ಕರೆಯಲಾಗುತ್ತದೆಯಂತೆ. ಇದು ಅಧಿಕೃತವಾಗಿ ಈದ್ಗಾ ಮೈದಾನ ಅಲ್ಲ ಎನ್ನವುದು ಹಿಂದೂಪರ ಸಂಘಟನೆಗಳ ವಾದ. ಇಲ್ಲಿ ಮುಸ್ಲಿಮರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ, ಈದ್ಗಾ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ಹಿಂದೂ ಸಂಘಟನೆ ಎಚ್ಚರಿಸಿತ್ತು.
ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!
ಶಾಲಾ ಪಠ್ಯಪುಸ್ತಕ ವಿವಾದ
2022ರಲ್ಲಿ ಶಾಲಾ ಪಠ್ಯ ಪುಸ್ತಕದ ಪರಿಷ್ಕರಣೆಗೆ ಲೇಖಕ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಪರಿಷ್ಕರಣೆ ಹೆಸರಲ್ಲಿ ಕೇಸರಿಕರಣ ತುಂಬಲಾಗುತ್ತಿದೆ. ಮಕ್ಕಳ ಮನಸ್ಸಲ್ಲಿ ಬ್ರಾಹ್ಮಣತ್ವದ ಬೀಜ ಬಿತ್ತಲಾಗುತ್ತಿದೆ ಎಂಬುವುದು ಪ್ರಗತಿಪರ ಚಿಂತಕರು, ಸಾಹಿತಿಗಳು ಗಂಭೀರ ಆರೋಪ ಮಾಡಿದ್ದರು. ತೀವ್ರ ವಿವಾದದಿಂದಾಗಿ ಸಮಿತಿಯನ್ನೇ ಸರ್ಕಾರ ವಿಸರ್ಜಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ