`ಯುವರತ್ನ' ಸಿನಿಮಾಗೆ ಅಮೇಜಾನ್ ಪ್ರೈಮ್ ಕೊಟ್ಟ ಮೊತ್ತವೆಷ್ಟು ಗೊತ್ತಾ? `ಕೆಜಿಎಫ್' ದಾಖಲೆ ಉಡೀಸ್ ಮಾಡಿದ ಪುನೀತ್ ಚಿತ್ರ !

ಶೇಕಡಾ 50ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ಇದ್ದಾಗ್ಯೂ ಯುವರತ್ನಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ ಚಿತ್ರ ತಯಾರಕರು ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೇರೆಯೇ ಆಲೋಚನೆ ಮಾಡಿದರು. ಚಿತ್ರ ಬಿಡುಗಡೆಯಾಗಿ ವಾರ ಕಳೆಯುವುದರಲ್ಲಿ ಒಟಿಟಿ ಪ್ಲಾಟ್​ಫಾರ್ಮ್ ಅಮೇಜಾನ್ ಪ್ರೈಮ್ ಜೊತೆ ಒಪ್ಪಂದ ಮಾಡಿಕೊಂಡು ಚಿತ್ರ ಬಿಡುಗಡೆಯಾದ ಹತ್ತೇ ದಿನಗಳಿಗೆ ಪ್ರೈಮ್ ನಲ್ಲಿಇಂದು, ಏಪ್ರಿಲ್ 9ಕ್ಕೆ ಬಿಡುಗಡೆ ಮಾಡಿಬಿಟ್ರು.

ಅಮೇಜಾನ್ ಪ್ರೈಮ್​ನಲ್ಲಿ `ಯುವರತ್ನ'

ಅಮೇಜಾನ್ ಪ್ರೈಮ್​ನಲ್ಲಿ `ಯುವರತ್ನ'

  • Share this:
ಬೆಂಗಳೂರು (ಏಪ್ರಿಲ್ 09): ಕೋವಿಡ್ ಎರಡನೇ ಅಲೆಯ ಎಫೆಕ್ಟ್ ಕನ್ನಡ ಚಿತ್ರರಂಗದ ಮೇಲೆ ನೇರವಾಗೇ ಆಗ್ತಿದೆ. ರಾಜ್ಯ ಸರ್ಕಾರ ಸೋಂಕು ನಿಯಂತ್ರಿಸೋಕೆ ದಿನೇ ದಿನೇ ಹೊಸಾ ಹೊಸಾ ಕಠಿಣ ಕ್ರಮಗಳನ್ನು ಜಾರಿ ಮಾಡುತ್ತಲೇ ಇದೆ.  ಇದು ಈಗಾಗಲೇ ಬಿಡುಗಡೆಯಾದ ಚಿತ್ರಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಏಪ್ರಿಲ್ 1ರಂದು ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಯ್ತು. ಚಿತ್ರ ಬಿಡುಗಡೆಯಾಗಿ ವಾರಕ್ಕೆಲ್ಲಾ ರಾಜ್ಯ ಸರ್ಕಾರ ಸೋಂಕಿನ ನಿಯಂತ್ರಣಕ್ಕೆ ಎಂದು ಥಿಯೇಟರ್​ಗಳಲ್ಲಿ ಶೇಕಡಾ 50ರಷ್ಟು ಸೀಟುಗಳು ಮಾತ್ರ ಭರ್ತಿಯಾಗುವ ಆದೇಶ ಹೊರಡಿಸಿತು. ಆಗ ನಾಯಕ ಪುನೀತ್ ರಾಜ್ಕುಮಾರ್ ಸೇರಿದಂತೆ ಚಿತ್ರತಂಡ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪನವರನ್ನು ಭೇಟಿ ಮಾಡಿ ಕನಿಷ್ಠ 3 ದಿನಗಳವರೆಗಾದರೂ ಈ ಆದೇಶವನ್ನು ಮುಂದೆ ಹಾಕುವಂತೆ ಮನವಿ ಮಾಡಿತು. ಕನಿಷ್ಟ ಮೊದಲ ವಾರಾಂತ್ಯವಾದರೂ ಒಂದಷ್ಟು ಕಲೆಕ್ಷನ್ ಆಗಲಿ ಎನ್ನುವ ಉದ್ದೇಶದಿಂದ ಸರ್ಕಾರಕ್ಕೆ ಮನವಿ ಮಾಡಿತು. ಚಿತ್ರತಂಡದ ಮನವಿಗೆ ಒಪ್ಪಿದ ಸಿಎಂ 3 ದಿನಗಳಿಗೆ ಆದೇಶವನ್ನು ತಡೆ ಹಿಡಿದಿದ್ದರು. ಈ ನಿಯಮಗಳು ಜಾರಿ ಬರುವ ಬಗ್ಗೆ ಮೊದಲೇ ತಿಳಿದಿದ್ದರೆ ಚಿತ್ರವನ್ನು ಬಿಡುಗಡೆಯೇ ಮಾಡುತ್ತಿರಲಿಲ್ಲ ಎಂದು ಪುನೀತ್ ರಾಜ್ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದರು.

ಶೇಕಡಾ 50ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ಇದ್ದಾಗ್ಯೂ ಯುವರತ್ನಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ ಚಿತ್ರ ತಯಾರಕರು ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೇರೆಯೇ ಆಲೋಚನೆ ಮಾಡಿದರು. ಚಿತ್ರ ಬಿಡುಗಡೆಯಾಗಿ ವಾರ ಕಳೆಯುವುದರಲ್ಲಿ ಒಟಿಟಿ ಪ್ಲಾಟ್​ಫಾರ್ಮ್ ಅಮೇಜಾನ್ ಪ್ರೈಮ್ ಜೊತೆ ಒಪ್ಪಂದ ಮಾಡಿಕೊಂಡು ಚಿತ್ರ ಬಿಡುಗಡೆಯಾದ ಹತ್ತೇ ದಿನಗಳಿಗೆ ಪ್ರೈಮ್ ನಲ್ಲಿಇಂದು, ಏಪ್ರಿಲ್ 9ಕ್ಕೆ ಬಿಡುಗಡೆ ಮಾಡಿಬಿಟ್ರು.

ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ಯುವರತ್ನ ನಿರ್ಮಾಪಕ. ಕೆಜಿಎಫ್ ಚಾಪ್ಟರ್ 1ನ್ನು ಅಮೇಜಾನ್ ಗೆ 18 ಕೋಟಿಗಳಿಗೆ ನೀಡಿದ್ದ ದಾಖಲೆ ಇವರದ್ದಾಗಿತ್ತು. ಈಗ ಆ ದಾಖಲೆಯನ್ನು ಮುರಿಯುವಂತೆ ಬರೋಬ್ಬರಿ 20 ಕೋಟಿ ರೂಪಾಯಿಗಳಿಗೆ ಯುವರತ್ನ ಅಮೇಜಾನ್ ಪ್ರೈಮ್ ಗೆ ಸೋಲ್ಡ್ ಔಟ್ ಆಗಿದೆ. ಪ್ರೈಮ್ 18 ಕೋಟಿ ರೂಪಾಯಿ ಕನ್ನಡಕ್ಕೆ ಮತ್ತು 2 ಕೋಟಿ ರೂಪಾಯಿ ಬೇರೆ ಭಾಷೆಗಳಿಗೆ ನೀಡಿದೆ ಎನ್ನುತ್ತಿವೆ ಮೂಲಗಳು.

ಕೆಜಿಎಫ್ 1ರಷ್ಟು ಹೂಡಿಕೆ ಅಥವಾ ಅಷ್ಟು ದೊಡ್ಡ ಸಿನಿಮಾ ಆಗದಿದ್ದರೂ ದೊಡ್ಡ ಸ್ಟಾರ್ ಒಬ್ಬರ ಚಿತ್ರ ಇಷ್ಟು ಬೇಗನೇ ಒಟಿಟಿಗೆ ಬಂದಿರುವುದು ಕನ್ನಡದ ಮಟ್ಟಿಗೆ ಇದು ಮೊದಲು. ಅಲ್ಲದೇ ಪುನೀತ್​ಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚು. ಯುವರತ್ನ ಚಿತ್ರ ಕೂಡಾ ಸರ್ಕಾರಿ ಕಾಲೇಜುಗಳ ಬದುಕಿನ ಸುತ್ತಲಿನ ಕತೆಯಾಗಿರೋದ್ರಿಂದ ಒಟಿಟಿಗೂ ಹೇಳಿ ಮಾಡಿಸಿದ ಚಿತ್ರ ಎನ್ನುವ ಲೆಕ್ಕಾಚಾರದಲ್ಲಿ ಅಮೇಜಾನ್ ಪ್ರೈಮ್ ಕೂಡಾ ಭಾರೀ ಮೊತ್ತದ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗ್ತಿದೆ.

“ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಉತ್ತಮ ಕಂಟೆಂಟ್ ಹೆಚ್ಚು ಜನರಿಗೆ ಅದ್ರಲ್ಲೂ ಕುಟುಂಬಗಳು ಮತ್ತು ಹಿರಿಯರಿಗೆ ಸುಲಭವಾಗಿ ತಲುಪುವಂತೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಥಿಯೇಟರ್​ಗಳಲ್ಲಿ ಚಿತ್ರದ ಪ್ರದರ್ಶನ ಮುಂದುವರೆಯಲಿದೆ. ಎಲ್ಲಾ ಅಭಿಮಾನಿಗಳು, ಚಿತ್ರರಂಗ ಮತ್ತು ಹಿತೈಷಿಗಳಿಂದ ಸಹಕಾರ ಕೋರುತ್ತೇವೆ” ಎಂದು ಹೊಂಬಾಳೆ ಫಿಲಂಸ್​ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
Published by:Soumya KN
First published: