`ಅಮರ್ ರಿಲೀಸ್‍ಗೂ ಮುನ್ನವೇ ಸ್ಟಾರ್ ಆದ್ರಲ್ಲ ಅಭಿ: ಈಗಾಗಲೇ ಇನ್ನೆರಡು ಚಿತ್ರಗಳಿಗೆ ಫಿಕ್ಸ್ ಯಂಗ್​ ರೆಬೆಲ್​ ಅಂಬಿ !

ಸಿನಿಮಾರಂಗಕ್ಕೆ ಬಂದು ಹಲವು ವರ್ಷಗಳ ಕಾಲ ಕಷ್ಟಪಟ್ಟ ನಂತರ ಸ್ಟಾರ್​ ಪಟ್ಟಕ್ಕೇರಿರುವ ಹಲವರನ್ನು ನೋಡಿದ್ದೇವೆ. ಆದರೆ ಚಿತ್ರರಂಗಕ್ಕೆ ಬರುವ ಮುನ್ನವೇ, ಮೊದಲ ಸಿನಿಮಾ ರಿಲೀಸ್‍ಗೂ ಮೊದಲೇ ಸ್ಟಾರ್ ಆಗಿದ್ದಾರೆ ರೆಬೆಲ್‍ಸ್ಟಾರ್ ಅಂಬರೀಷ್ ಪುತ, ಅಭಿಷೇಕ್. ಅದಕ್ಕೆ ಸಾಕ್ಷಿ ಎಂಬಂತೆ ಅಮರ್ ಚಿತ್ರ ರಿಲೀಸ್‍ಗೂ ಮುನ್ನವೇ ಅಭಿ ಇನ್ನೂ ಎರಡು ಚಿತ್ರಗಳಿಗೆ ಹೀರೋ ಆಗಿದ್ದಾರೆ. 

Anitha E | news18
Updated:May 19, 2019, 5:03 PM IST
`ಅಮರ್ ರಿಲೀಸ್‍ಗೂ ಮುನ್ನವೇ ಸ್ಟಾರ್ ಆದ್ರಲ್ಲ ಅಭಿ: ಈಗಾಗಲೇ ಇನ್ನೆರಡು ಚಿತ್ರಗಳಿಗೆ ಫಿಕ್ಸ್ ಯಂಗ್​ ರೆಬೆಲ್​ ಅಂಬಿ !
ಸ್ಯಾಂಡಲ್​ವುಡ್​ನ ಯಂಗ್​ ರೆಬೆಲ್​ ಸ್ಟಾರ್​ ಮೊದಲ ಸಿನಿಮಾದ ನಂತರ ಏನು ಮಾಡುತ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
  • News18
  • Last Updated: May 19, 2019, 5:03 PM IST
  • Share this:
ಅಭಿಷೇಕ್ ಅಂಬರೀಷ, ಅಂಬಿ ಬಳಿಕ ಸ್ಯಾಂಡಲ್‍ವುಡ್‍ಗೆ ಮತ್ತೊಬ್ಬ ರೆಬೆಲ್ ಸ್ಟಾರ್ ಯಾರು ಎನ್ನುತ್ತಿರುವಾಗಲೇ, ಜ್ಯೂನಿಯರ್ ರೆಬೆಲ್ ಸ್ಟಾರ್ ನಾನೇ ಇದೀನಲ್ಲ ಅಂತ 'ಅಮರ್' ಆಗಿ ಗುಡುಗಿದ್ದಾರೆ. ವಿಶೇಷ ಅಂದ್ರೆ ರೆಬೆಲ್ ಸ್ಟಾರ್ ಕೂಡ ಆ ಕನಸು ಕಂಡಿದ್ದರು. 'ನಮ್ಮ ಕಾಲದಲ್ಲಿ ಏನೂ ತಯಾರಿ ಇಲ್ಲದೇ ನಾವು ಚಿತ್ರರಂಗಕ್ಕೆ ಬಂದಿದ್ದೆವು. ಆದರೆ ಅಭಿ, ಸ್ಟಂಟ್ಸ್, ಡ್ಯಾನ್ಸ್, ಮಾರ್ಷಲ್ ಆರ್ಟ್​, ಆ್ಯಕ್ಟಿಂಗ್, ಬಾಡಿ ಬಿಲ್ಡಿಂಗ್ ಅಂತೆಲ್ಲ ಹಲವು ತಿಂಗಳ ಕಾಲ ತರಬೇತಿ ಪಡೆದು ಸ್ಯಾಂಡಲ್‍ವುಡ್‍ಗೆ ಬಂದಿದ್ದಾನೆ' ಅಂತ ಆತ್ಮವಿಶ್ವಾಸದಿಂದ ಹೇಳಿದ್ದರು.

ಅಪ್ಪನ ಆ ಭರವಸೆಯನ್ನು ಅಭಿ ನಿರಾಸೆ ಮಾಡಿಲ್ಲ. ಬದಲಾಗಿ ಮೊದಲ ಚಿತ್ರದ ಮೂಲಕವೇ ಸೆಂಚುರಿ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಅಪ್ಪನಂತೆಯೇ ತೆರೆ ಮೇಲೆ ತಮ್ಮ ಇರುವಿಕೆಯನ್ನು ಖಡಕ್ಕಾಗಿಯೇ ತೋರಿಸಿದ್ದಾರೆ. ಅಂಬಿ ಆಗೊಮ್ಮೆ ಈಗೊಮ್ಮೆ ಚಿತ್ರದ ಶೂಟಿಂಗ್ ವೇಳೆ ಸೆಟ್‍ಗೆ ಭೇಟಿ ಕೊಟ್ಟಿದ್ದರು. ಆದರೆ ಈಗ ಸಿನಿಮಾದ ಔಟ್‍ಪುಟ್ ಹೊರಬಂದಿದೆ. ಆದರೆ ಮಗನ ಚಿತ್ರವನ್ನು ನೋಡಬೇಕು ಅನ್ನೋ ಅಂಬಿ ಆಸೆ ಫಲಿಸಿಲ್ಲ ಅನ್ನೋದೇ ಎಲ್ಲರ ನೋವು.

ಎಲ್ಲರೂ ಹತ್ತು ವರ್ಷ ಚಿತ್ರರಂಗದಲ್ಲಿ ಕಷ್ಟಪಟ್ಟು ಮಾಡಿ, ಇನ್ನು ಹತ್ತು ವರ್ಷಗಳ ಕಾಲ ಹತ್ತಾರು ಸಿನಿಮಾಗಳಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ, ತಮ್ಮನ್ನು ತಾವು ಪ್ರೂವ್ ಮಾಡಿಕೊಂಡ ಬಳಿಕವಷ್ಟೇ ಸ್ಟಾರ್ ಆಗ್ತಾರೆ. ಆದರೆ ಅಭಿ ವಿಷಯ ಹಾಗಲ್ಲ. ಅಭಿಷೇಕ್ ಚಿತ್ರರಂಗಕ್ಕೆ ಬರ್ತಾರೆ, ಅನ್ನೋ ದಿನದಿಂದಲೇ ಅವರು ಸ್ಟಾರ್. ಈಗಾಗಲೇ ಟ್ರೈಲರ್​ ಹಾಗೂ ಹಾಡುಗಳ ಮೂಲಕವೇ, 'ಅಮರ್' ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ, ನಿರೀಕ್ಷೆಗಳು ಮೂಡಿವೆ.

'ಅಮರ್' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿಷೇಕ್ ನಟಿಸಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಅಭಿಗೆ ಜೋಡಿಯಾಗಿ ಯಜಮಾನನ ಬಸಣ್ಣಿ ತಾನ್ಯಾ ಹೋಪ್ ಸೌಂದರ್ಯವಿದೆ. ಜತೆಗೆ ಅರ್ಜುನ್ ಜನ್ಯಾ ಸಂಗೀತದ ಸೊಬಗಿದೆ. ಸತ್ಯಾ ಹೆಗಡೆ ಕ್ಯಾಮರಾ ಕೈಚಳಕವಿದೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಅದ್ಧೂರಿತನವಿದೆ. ಅದ್ಭುತ ಲೊಕೇಷನ್‍ಗಳಿವೆ. ಫೈಟ್ಸ್, ರೊಮ್ಯಾನ್ಸ್ ಮಾತ್ರವಲ್ಲ ಪ್ರೇಮಿಗಳಿಬ್ಬರ ಸರಸ - ವಿರಸವಿದೆ. ಒಂದೊಳ್ಳೆ ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗುವ ಎಲ್ಲ ಲಕ್ಷಣಗಳೂ ಈ ಚಿತ್ರಕ್ಕಿದೆ.

ಹೀಗೆ ಸಿನಿಮಾ ರಿಲೀಸ್‍ಗೂ ಮುನ್ನವೇ 'ಅಮರ್' ಗೆಲ್ಲೋದು ನಿಶ್ಚಿತ ಅಂತ ಈಗಾಗಲೇ ಗಾಂಧಿನಗರಕ್ಕೆ ಗಾಂಧಿನಗರವೇ ಹೇಳುತ್ತಿದೆ. ಜತೆಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಸಿನಿಮಾಕ್ಕಾಗಿ ರೆಬೆಲ್ ಅಭಿಮಾನಿಗಳೂ ಕಾತರದ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ. ಹೀಗಾಗಿಯೇ 'ಅಮರ್' ಚಿತ್ರದ ಮೂಲಕ ಅಭಿಷೇಕ್ ಅಂಬರೀಷ್ ಅದಾಗಲೇ ಸ್ಟಾರ್ ಆಗಿದ್ದಾರೆ. ಸಿನಿಮಾದ ಟ್ರೈಲರ್ ಹಾಡುಗಳನ್ನು ನೋಡಿಯೇ ಚಿತ್ರತಂಡಗಳು ಅವರ ಕಾಲ್‍ಶೀಟ್‍ಗೆ ದುಂಬಾಲು ಬಿದ್ದಿದ್ದಾರೆ. ಜತೆಗೆ ಅಭಿ ಕೂಡ ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಎರಡು ಚಿತ್ರಗಳಿಗೆ ಸಹಿ ಮಾಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರ ನಿರ್ದೇಶಿಸಿದ್ದರು ಮಹೇಶ್. 2016ರಲ್ಲಿ ತೆರೆಕಂಡ ಆ ಸಿನಿಮಾ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಆ ಚಿತ್ರದ ಯಶಸ್ಸಿನ ಬಳಿಕ ಎರಡು ವರ್ಷಗಳ ಕಾಲ ಬ್ರೇಕ್ ಪಡೆದಿದ್ದ ನಿರ್ದೇಶಕ ಮಹೇಶ್ ಈಗ ಅಭಿ ಎರಡನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಭಿ ಜತೆ ಮಾತುಕತೆ ನಡೆದಿದ್ದು, ಪ್ರೀಪ್ರೊಡಕ್ಷನ್ ಕೆಲಸಗಳೂ ಸಾಗಿವೆಯಂತೆ.

ಈ ಕುರಿತು ನ್ಯೂಸ್ 18 ಜತೆ ಮಾತನಾಡಿದ ನಿರ್ದೇಶಕ ಮಹೇಶ್, ಮಾತುಕತೆಯಾಗಿರೋದು ನಿಜ ಆದರೆ ಇನ್ನೂ ಏನೂ ಫೈನಲ್ ಆಗಿಲ್ಲ ಅಂತಾರೆ. ಜತೆಗೆ ಅಧಿಕೃತವಾಗಿ ಪ್ರಕಟವಾಗುವವರೆಗೂ ನಾನೇನೂ ಹೇಳಲಾರೆ ಎನ್ನುತ್ತಾರವರು. ಎಲ್ಲವೂ ಅಂದುಕೊಂಡಂತಾದರೆ ಇನ್ನು ಒಂದೆರಡು ತಿಂಗಳಲ್ಲಿ ಅಭಿ ಎರಡನೇ ಸಿನಿಮಾ ಸೆಟ್ಟೇರಿದರೂ ಆಶ್ಚರ್ಯವಿಲ್ಲ.ರೆಬೆಲ್ ಸ್ಟಾರ್ ನಾಯಕನಾಗಿದ್ದ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ'. ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ನವನಿರ್ದೇಶಕ ಗುರುದತ್ ಗಾಣಿಗ. ಕಳೆದ ವರ್ಷ ಅಂಬಿ ಸಿನಿಮಾ ನಿರ್ದೇಶಿಸಿದ್ದ ಗುರು, ಈಗ ಅಭಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ವಿಶೇಷ ಅಂದರೆ ಅಭಿ ಮೂರನೇ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ನ್ಯೂಸ್ 18 ಕನ್ನಡ ಜತೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಗುರುದತ್ ಗಾಣಿಗ, 'ಹೌದು, ಅಭಿಷೇಕ್ ಅವರ ಮೂರನೇ ಸಿನಿಮಾ ಕುರಿತು ಮಾತುಕತೆ ಮಾಡಿದ್ದೇನೋ ನಿಜ. ಆದರೆ ಎಲ್ಲ ಇನ್ನೂ ಸ್ಟಾರ್ಟಿಂಗ್ ಸ್ಟೇಜ್‍ನಲ್ಲಿದೆ. ಅಲ್ಲದೇ ಮೊದಲು 'ಅಮರ್' ರಿಲೀಸ್ ಆಗಬೇಕು, ಆ ಬಳಿಕ ಅಭಿ ಎರಡನೇ ಸಿನಿಮಾ ಕಂಪ್ಲೀಟ್ ಆಗಬೇಕು. ಆನಂತರ ಬಹುಶಃ ಮುಂದಿನ ವರ್ಷ ನನ್ನ ಹಾಗೂ ಅಭಿ ಸಿನಿಮಾ ಪ್ರಾರಂಭವಾಗಬಹುದು. ಅಷ್ಟರಲ್ಲಿ ನಾನೂ ಒಂದು ಸಿನಿಮಾ ಮಾಡುತ್ತಿದ್ದು, ಸದ್ಯ ಅದರಲ್ಲಿ ಬ್ಯುಸಿಯಾಗಿದ್ದೇನೆ' ಅಂತಾರೆ.

ವಿಶೇಷ ಅಂದರೆ ಇದು ಅಭಿ ಹಾಗೂ ಗುರುದತ್ ಇಬ್ಬರದೂ ಮೂರನೇ ಸಿನಿಮಾ ಆಗಲಿದೆ. ಒಟ್ಟಾರೆ ಇದೇ ತಿಂಗಳ 29ರಂದು ಅಂಬಿ ಹುಟ್ಟುಹಬ್ಬದಂದು ಮಂಡ್ಯದಲ್ಲಿ ದೊಡ್ಡ ಮಟ್ಟದ ಅಮರ್ ಪ್ರೀರಿಲೀಸ್ ಈವೆಂಟ್ ಆಯೋಜಿಸಲಾಗಿದೆ. ಆ ಬಳಿಕ 31ರಂದು 'ಅಮರ್' ಸಿನಿಮಾ ರಿಲೀಸ್ ಆಗಲಿದೆ. ಅಂದಿನಿಂದಲೇ ಯಂಗ್​ ರೆಬೆಲ್ ಸ್ಟಾರ್ ಅಬ್ಬರ್ ಸ್ಯಾಂಡಲ್‍ವುಡ್‍ನಲ್ಲಿ ಪ್ರಾರಂಭವಾಗಲಿದೆ.

- ಹರ್ಷ, 

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

 PHOTOS: ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ರೊಮ್ಯಾನ್ಸ್​​

First published: May 19, 2019, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading