news18-kannada Updated:August 12, 2020, 9:31 AM IST
ಸಂಜಯ್ ದತ್ ಹಾಗೂ ಯುವರಾಜ್ ಸಿಂಗ್.
ಕಳೆದ ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆ ಹಾಗೂ ಅನಾರೋಗ್ಯರಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಕಂಡುಬಂದಿದೆ. ಸದ್ಯ 61 ವರ್ಷದ ಸಂಜಯ್ ದತ್ ಅವರಿಗೆ ಕ್ಯಾನ್ಸರ್ 3ನೇ ಹಂತದಲ್ಲಿದ್ದು ಹೆಚ್ಚಿನ ಚಿಕಿತ್ಸೆಗೆ ಯುಎಸ್ಗೆ ತೆರಳಿದ್ದಾರೆ. ಕಳೆದ ಶನಿವಾರದಂದು ಸಂಜಯ್ ದತ್ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಅವರಿಗೆ ಲಂಗ್ ಕ್ಯಾನ್ಸರ್ ಇರುವುದು ಖಚಿತಗೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಜಯ್ ದತ್, ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ ಟ್ವೀಟ್ ಮಾಡಿರುವ ಫಿಲ್ಮ್ ಇನ್ಫಾರ್ಮೇಶನ್ ಮುಖ್ಯ ಸಂಪಾದಕ ಕೋಮಲ್ ನಹ್ತಾ 'ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ' ಎಂದಿದ್ದಾರೆ.
ಸಂಜಯ್ ದತ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರೈಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು, "ನೀವು ಫೈಟರ್, ಅಷ್ಟು ಬೇಗ ಸೋಲನ್ನು ಒಪ್ಪಿಕೊಳ್ಳುವವರಲ್ಲ. ಈ ನೋವು ನನಗೆ ಚೆನ್ನಾಗಿಯೆ ತಿಳಿದಿದೆ. ಗಟ್ಟಿಜೀವ ಸಂಜಯ್ ದತ್ ಕ್ಯಾನ್ಸರ್ ಜೊತೆ ಗುದ್ದಾಡಿ ಗೆದ್ದು ಬರಲಿ" ಎಂದು ಯುವಿ ಸ್ಫೂರ್ತಿದಾಯಕ ಸಂದೇಶ ಹೇಳಿದ್ದಾರೆ.
ಸಂಜಯ್ ದತ್ ಆದಷ್ಟು ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಸಂಜಯ್ ದತ್ ಆಪ್ತ ಸ್ನೇಹಿತ ಇಂಗ್ಲೀಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿ "ಸಂಜಯ್ ದತ್ ಸದ್ಯ ದುಬೈನಲ್ಲಿರುವ ತನ್ನ ಪುಟ್ಟ ಮಕ್ಕಳು ಮತ್ತು ಪತ್ನಿಯ ಬಗ್ಗೆ ಆತಂಕಗೊಂಡಿದ್ದಾರೆ. ಸದ್ಯ ಪತ್ನಿ ಮತ್ತು ಮಕ್ಕಳು ದುಬೈನಲ್ಲಿದ್ದಾರೆ. ಕ್ಯಾನ್ಸರ್ ಗುಣಪಡಿಸಬಹುದು, ಆದರೆ ಕಠಿಣ ಚಿಕಿತ್ಸೆಯ ಅಗತ್ಯವಿದೆ" ಎಂದು ಹೇಳಿದ್ದಾರೆ.
ಹಿರಿಯ ನಟ ಸಂಜಯ್ ದತ್ ಅವರು 'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಕೆಜಿಎಫ್ ಚಾಪ್ಟರ್ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಅಧೀರ ಎಂಬ ಪಾತ್ರ ಮಾಡುತ್ತಿದ್ದಾರೆ. ಪ್ರಸ್ತುತ ಹಿಂದಿಯಲ್ಲಿಯೂ ಅವರು ನಟಿಸುತ್ತಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ನಲ್ಲಿ ಸಂಜಯ್ ದತ್ ಪಾತ್ರದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಅಧೀರನ 20 ದಿನಗಳ ಚಿತ್ರೀಕರಣ ಬಾಕಿ ಇದೆ ಎಂದು ಹೇಳಲಾಗಿದೆ.
Published by:
Vinay Bhat
First published:
August 12, 2020, 9:31 AM IST