HOME » NEWS » Entertainment » YOGARAJ BHAT WRITES LETTER TO KICCHA SUDEEP ON HIS BIRTHDAY SPECIAL HG

Kiccha Sudeep: ಸುದೀಪ್ ಹುಟ್ಟುಹಬ್ಬಕ್ಕೆ ಭಟ್ಟರ ಪತ್ರ! ನವೀನ್ ಕೃಷ್ಣ ಕೂಡ ಬರೆದರು ಕವಿತೆ!

Kichcha Sudeep: ಖ್ಯಾತ ನಿರ್ದೇಶಕ ಯೋಗರಾಜ್ ಭಟ್​​ರವರು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಪ್ರಯುಕ್ತ ವಿಶೇಷವಾಗಿ ವಿಶ್ ಮಾಡಿದ್ದಾರೆ. ತಾವೇ ಒಂದು ಪತ್ರ ಬರೆದು, ಟ್ವಿಟ್ಟರ್​​​​ನಲ್ಲಿ ಹಂಚಿಕೊಂಡಿದ್ದಾರೆ.

news18-kannada
Updated:September 3, 2020, 3:09 PM IST
Kiccha Sudeep: ಸುದೀಪ್ ಹುಟ್ಟುಹಬ್ಬಕ್ಕೆ ಭಟ್ಟರ ಪತ್ರ! ನವೀನ್ ಕೃಷ್ಣ ಕೂಡ ಬರೆದರು ಕವಿತೆ!
ಕಿಚ್ಚ ಸುದೀಪ್
  • Share this:
ಇದೇ ಬುಧವಾರ ಸ್ಯಾಂಡಲ್​​ವುಡ್ ಬಾದ್​​ಶಾ ಕಿಚ್ಚ ಸುದೀಪ್ 47ನೇ ವಸಂತಕ್ಕೆ ಕಾಲಿಟ್ಟರು. ಕೊರೋನಾ ಹಾಗೂ ಲಾಕ್​ರ್ಡೌನ್​​ನಿಂದಾಗಿ ತುಂಬಾ ಸರಳವಾಗಿ ತಮ್ಮ ಬರ್ತ್​ಡೇ ಆಚರಿಸಿಕೊಂಡರು ಕಿಚ್ಚ. ಹೀಗಾಗಿಯೇ ಅಭಿಮಾನಿಗಳ ಅಬ್ಬರವಾಗಲಿ, ಸೆಲೆಬ್ರಿಟಿಗಳ ಭೇಟಿಯಾಗಲಿ ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ಎಲ್ಲರೂ ಸೋಷಿಯಲ್ ಮೀಡಿಯಾಗಳಲ್ಲಿ ಅಕ್ಷರ ರೂಪದಲ್ಲಿ ತಮ್ಮ ಅಭಿಮಾನ, ಪ್ರೀತಿ ಮೆರೆದಿದ್ದಾರೆ.

ಹೌದು, ಖ್ಯಾತ ನಿರ್ದೇಶಕ ಯೋಗರಾಜ್ ಭಟ್​​ರವರು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಪ್ರಯುಕ್ತ ವಿಶೇಷವಾಗಿ ವಿಶ್ ಮಾಡಿದ್ದಾರೆ. ತಾವೇ ಒಂದು ಪತ್ರ ಬರೆದು, ಟ್ವಿಟ್ಟರ್​​​​ನಲ್ಲಿ ಹಂಚಿಕೊಂಡಿದ್ದಾರೆ.

ಅಸಾಧಾರಣ ದಾರಿಯಲ್ಲಿ 25 ವರ್ಷ ಕಾಲ ದಣಿವಾಗದೇ ನಡೆಯಬಲ್ಲ ತಾಕತ್ತು ಕೆಲವೊಬ್ಬ ನಟರಿಗೆ ಮಾತ್ರ ಸಾಧ್ಯ. ಇಷ್ಟು ಉದ್ದದ ಯಾನವನ್ನು ತೀರ ಸುಲಭ ಎಂಬ ರೀತಿ ಕಾಣುವಂತೆ ನಡೆದು ಬಂದವರು ಕಿಚ್ಚ ಸುದೀಪ್. ಸ್ಟಾರ್ ಒಬ್ಬನ ಜೀವನ ಪಯಣ ಖಂಡಿತ ಸುಲಭದ್ದಲ್ಲ.

ಜನರಿಗೆ ಆತನ ಸ್ಟಾರ್ ಪಟ್ಟ ಮಾತ್ರ ಕಾಣುತ್ತದೆ. ಆ ಸ್ಟಾರ್ ಕಿರೀಟದ ಒಳಗಿರುವ ಬಂಗಾರದ ಮುಳ್ಳುಗಳು, ಹೊರಜಗತ್ತಿಗೆ ಕಾಣುವ ಫಳ ಫಳ ಹೊಳೆಯುವ ಹೂವು- ನಕ್ಷತ್ರಗಳನ್ನು ಧರಿಸಿದ ಆ ನಟನ ತಲೆಬುರುಡೆಗೆ ಆಗುವ ನೋವು ಕಣ್ಣಿಗೆ ಕಾಣುವುದಿಲ್ಲ. ನಟನೆ ಎಂಬುದು ಎಲ್ಲ ನೋವು ನಲಿವುಗಳನ್ನು ಬದಿಗಿಟ್ಟು ಲೋಕದ ಮುಂದೆ ಬೆತ್ತಲಾಗುವ ಅತ್ಯಂತ ಮುಲಾಜಿನ ಕೆಲಸ. ನಟನೆ ಎಂಬುದು ಶಿಳ್ಳೆ ಚಪ್ಪಾಳೆ ಸದ್ದಿಗೆ ಬೆವರು ಸುರಿಸುವ ಕಾಯಕ. ಬಂದ ಕಾಸು ಖ್ಯಾತಿಯನ್ನೆಲ್ಲಾ ಮರಳಿ ಪ್ರೇಕ್ಷಕರಿಗೆ ಧಾರೆ ಎರೆಯುವ ನಿರಂತರ ಘನಕಾರ್ಯವಿದು. ಪ್ರೇಕ್ಷಕರ ಶಹಬಾಸ್​​ಗಿರಿಗೋಸ್ಕರ ನಿದ್ದೆ ನೀರಡಿಕೆ ಬಿಟ್ಟು ಬದುಕುವ ತಪಸ್ಸು ಇದು. ಇಂತಹ ದುರ್ಗಮ ದಾರಿಯ ಹಲವಾರು ತಿರುವುಗಳಲ್ಲಿ ಮುಗ್ಗರಿಸಿ, ಬಿದ್ದು, ಎದ್ದು, ಗೆದ್ದು, ಒದ್ದು, ಓಡಿ, ಅತ್ತು, ನಕ್ಕು, ನುಗ್ಗಿ ಬಂದ ಶ್ರೀ ಸುದೀಪ್ ಅವರ ಸಹನೆಗೆ ಸದಾ ಶುಭವಾಗಲಿ.
ಕನ್ನಡ ಬೆಳ್ಳಿ ಪರದೆಯ ಶಾಶ್ವತ ಬಿಂಬಗಳಲ್ಲೊಬ್ಬರಾದ ಅವರು ಮತ್ತು ನಾಡಿನ ಜೊತೆಗಿನ ಸ್ನೇಹ ಡಬ್ಕು ಡಬಲ್ ಆಗಲಿ. ಎಲ್ಲರ ನಲ್ಮೆಯ ಕಿಚ್ಚನ ಕೆಚ್ಚು, ಹುಚ್ಚುಗಳೆರಡೂ ಇಡೀ ಲೋಕಕ್ಕೆ ಅಚ್ಚುಮೆಚ್ಚಾಗುತ್ತಲೇ ಸಾಗಲಿ. ಸದಾ ಸ್ನೇಹ ಪ್ರೀತಿಗಳೊಂದಿಗೆ – ಯೋಗರಾಜ್ ಭಟ್.

ಇನ್ನು ನಟ ನವೀನ್ ಕೃಷ್ಣ ಅವರೂ ಕೂಡ ಒಂದು ವಿಶೇಷ ಕವಿತೆಯ ಮೂಲಕ ಬಾದ್​ಶಾ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆ ಕವಿತೆ ಹೀಗಿದೆ…

ನನ್ನದೂ ಎರಡು ಕೈ ಇದೆ ಸಾಮಾನ್ಯವಾಗಿ ಯಾರದೇ ಬರ್ತ್​ಡೇ ಆದರೂ,ಹುಟ್ಟುಹಬ್ಬದ ಶುಭಾಶಯಗಳು ಅಂತ ಸಾಮಾನ್ಯವಾಗಿ ಹೇಳಿಬಿಡ್ತೀವಿ ಅದೇನೋ ಗೊತ್ತಿಲ್ಲ ನಿಮ್ಮ ಹುಟ್ಟುಹಬ್ಬ ಬಂತು ಅಂದ್ರೆ ಪ್ಯಾಡ್, ಪೇಪರ್, ಪೆನ್, ಎಲ್ಲಾ ಪ್ರಶ್ನೆ ಮಾಡುತ್ತವೆ ಏನ್ ಗುರು ಏನೂ ಬರೆಯಲ್ವಾ ಅಂತ?ನಾನೂ ಕೇಳ್ತೀನಿ ಏನ್ ಬರೀಬೇಕು ನೀವೇ ಹೇಳ್ರಪ್ಪಾ? ಅಲ್ಲಾ….ಜನಗಳೆಲ್ಲಾ ಸೇರಿ ಸಿಂಹಾಸನ ಹಿಡಿದುಅದರ ಮೇಲೆ ಕೂರಿಸಿರೋ ರಾಜನ ಬಗ್ಗೆ ಆಸ್ಥಾನದಲ್ಲಿರುವ ಕವಿಗಳು ಹಾಡಿದರೂ, ಹೊಗಳಿದರೂ ಹಾರೈಸಿದರೂ. ಏನೇ ಮಾಡಿದರೂ ಅಭಿಮಾನಿ ಶಕ್ತಿಯ ಮುಂದೆ ಅದೆಲ್ಲವೂ ನಗಣ್ಯ ಆದರೆ ಪುಟ್ಟದಾಗಿ ನಾನೂ ಒಂದುಬರೆದು ಬಿಡ್ತೀನಿ, ನನ್ನ ಸಮಾಧಾನಕ್ಕೆ ಸರ್. ನಾನು ನಿಮ್ಮ ಅಭಿಮಾನಿ ನಿಮ್ಮ ಸಿಂಹಾಸನ ಎತ್ತಿಹಿಡಿದಿರುವ ಕೈಗಳಲ್ಲಿ ಎರಡು ಕೈ ನಂದೂ ಇದೆ ಹುಟ್ಟುಹಬ್ಬದ ಶುಭಾಶಯಗಳು ಸರ್ – ನವೀನ್ ಕೃಷ್ಣ   
Published by: Harshith AS
First published: September 3, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading