ಸಿನಿಮಾ: ಯಜಮಾನ
ತಾರಾಬಳಗ: ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ದತ್ತಣ್ಣ, ದೇವರಾಜ್, ಧನಂಜಯ್, ಠಾಕೂರ್ ಅನೂಪ್ ಸಿಂಗ್, ರವಿಂಶಕರ್, ಮಂಡ್ಯ ರಮೇಶ್
ನಿರ್ದೇಶನ: ಪೊನ್ ಕುಮಾರ್, ಹರಿಕೃಷ್ಣ
ಸಂಗೀತ: ಹರಿಕೃಷ್ಣ
- ಅನಿತಾ ಈ,
ದರ್ಶನ್ ಸಿನಿಮಾ ಅಂದ್ರೆ ಕೇವಲ ಕತ್ತಿ, ಮಚ್ಚು ಹಿಡಿದು ರಕ್ತದ ಹೊಳೆ ಹರಿಸೋದು ಅನ್ನೋ ಕಾಲ ಒಂದಿತ್ತು. ಆದರೆ ಡಿಬಾಸ್ ಕಾಲಕ್ಕೆ ತಕ್ಕಂತೆ ಸಿನಿಮಾಗಳ ಆಯ್ಕೆಯಲ್ಲೂ ಬದಲಾಗುತ್ತಿದ್ದಾರೆ ಅನ್ನೋದಕ್ಕೆ ಉತ್ತಮ ಉದಾಹರಣೆ ಈ 'ಯಜಮಾನ'. ಯಜಮಾನ ಕೇವಲ ಮಾಸ್ ಹೀರೋ ಅಲ್ಲ ಕ್ಲಾಸ್ ಪ್ರೇಕ್ಷಕನಿಗೂ ಇಷ್ಟವಾಗುತ್ತಾನೆ.
'ಯಜಮಾನ' ಸಿನಿಮಾದಲ್ಲಿ ನಿಜವಾದ ಹೀರೋ ಸಿನಿಮಾದ ಕಥಾವಸ್ತು. ಅದಕ್ಕೆ ತಕ್ಕಂತೆ ದರ್ಶನ್ ಅಭಿನಯ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಸಿನಿಮಾದ 19ನೇ ಶತಮಾನದ ಕತೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಬಂಡವಾಳಶಾಹಿ ವ್ಯವಸ್ಥೆ ಹೇಗೆ ಸ್ಥಳೀಯ ಗುಡಿ ಕೈಗಾರಿಕೆಗಳು, ಸಾಮಾಜಿಕ ವ್ಯವಸ್ಥೆ ಹಾಗೂ ಜನರ ಜೀವನಕ್ಕೆ ಹೇಗೆ ಕೊಡಲಿ ಪೆಟ್ಟು ನೀಡಿತ್ತು, ನೀಡುತ್ತಿದೆ ಎಂದು ಅಚ್ಚುಕಟ್ಟಾಗಿ ಅರ್ಥವಾಗುಂತೆ ತೋರಿಸಿದ್ದಾರೆ. ಇದು ಒಳ್ಳೆಯ ಪ್ರಯತ್ನವಾದರೂ ಅದನ್ನು ಮತ್ತಷ್ಟು ನೈಜವಾಗಿ ತೋರಿಸಬಹುದಿತ್ತೆನಿಸುತ್ತದೆ.
ಇದನ್ನೂ ಓದಿ: ಕಾಡಿನ ರಕ್ಷಣೆಗೆ ಟೊಂಕ ಕಟ್ಟಿದ ಡಿಬಾಸ್ : ಸಸಿ ನೆಡಲು ದರ್ಶನ್ ಮನವಿ
ದರ್ಶನ್ ಅಭಿನಯದ ಬಗ್ಗೆ ಹೇಳುವಂತಿಲ್ಲ. ಪುಟ್ಟ ಹಳ್ಳಿಯಲ್ಲಿ ಗಾಣದಿಂದ ಅಡುಗೆ ಎಣ್ಣೆ ತೆಗೆದು, ಇರುವುದರಲ್ಲೇ ನೆಮ್ಮದಿಯಿಂದ ಜೀವಿಸುವ ಹಳ್ಳಿ ಹೈದ ಕೃಷ್ಣ. ತನ್ನದೇ ಆದ ನಂದಿ ಬ್ರ್ಯಾಂಡ್ ಅಡುಗೆ ಎಣ್ಣೆಯ ವ್ಯಾಪಾರವನ್ನು ನಡೆಸುತ್ತಾ, ತನ್ನ ಅಸ್ತಿತ್ವಕ್ಕೆ ಕುತ್ತು ಬಂದಾಗ ಹಳ್ಳಿಯಿಂದ ಮುಂಬೈನತ್ತ ಪಯಣ ಬೆಳೆಸುವ ಪಾತ್ರದಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಜೀವನದಲ್ಲಿ ಯಜಮಾನನಾಗಲು ಕೇವಲ ಓದು ಮುಗಿಸಿ, ನಗರಗಳಿಗೆ ಬಂದು ಕಚೇರಿಗಳಲ್ಲಿ ಕೂಲಿ ಮಾಡುವ ಬದಲು, ಇರುವ ಜಮೀನು ಅಥವಾ ಸ್ವಉದ್ಯೋಗದಿಂದ ಮಾತ್ರ ಸಾಧ್ಯ ಎಂಬ ಸಂದೇಶ ನೀಡಿದ್ದಾರೆ.
ಕೆಲವೊಮ್ಮೆ ಸಿನಿಮಾ ಬೋರ್ ಎನಿಸಿಸುತ್ತದೆಯಾದರೂ, ಚೇತನ್ ಬರೆದಿರುವ ಡೈಲಾಗ್ ಅಭಿಮಾನಿಗಳನ್ನು ಶಿಳ್ಳೆ ಹೊಡೆಯುವಂತೆ ಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ಸುಲ್ತಾನ್ ಎಂದು ಮೆರೆಯುವ ಹಾಗೂ ವಿಲನ್ ಎಷ್ಟೇ ಬಲಿಷ್ಠನಾದರೂ ಗೆಲ್ಲೋದು ಕೊನೆಗೆ ಹೀರೋನೆ ಅನ್ನೋ ಒಂದೇ ಒಂದು ಡೈಲಾಗ್ ಚಿತ್ರಮಂದಿರದಿಂದ ಹೊರಬರುವ ಪ್ರತಿಯೊಬ್ಬರ ತುಟಿಯಂಚಲ್ಲಿ ಕುಣಿಯುತ್ತಿರುತ್ತದೆ.
ಇನ್ನು, ಹಳ್ಳಿ ಸೊಗಡಿನ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸಿರುವ ರಶ್ಮಿಕಾ ಮಂದಣ್ಣ ಅವರ ಪಾತ್ರಕ್ಕೆ ಅಷ್ಟೇನೂ ಮಹತ್ವ ಇಲ್ಲದಿದ್ದರೂ ಕ್ಯೂಟ್ ಚೈಲ್ಡ್ಹುಡ್ ಲವ್ ಸ್ಟೋರಿಲಿ ಹೈಲೈಟ್ ಡಿಬಾಸ್ ರೋಮಾನ್ಸ್. ಪ್ರೀತಿಸುವ ಕಾವೇರಿಗೆ ಒಂದಿಷ್ಟೂ ಕಷ್ಟವಾಗದಂತೆ ನೋಡಿಕೊಳ್ಳುವ, ಸಣ್ಣ ಸಣ್ಣ ವಿಯಷಗಳಲ್ಲೂ ದಚ್ಚು ರೋಮಾನ್ಸ್ ನೋಡಿದವರಿಗೆ ಇಂತಹ ಹುಡುಗ ನನಗ್ಯಾಕೆ ಸಿಕ್ಕಿಲ್ಲ ಎನ್ನುಷ್ಟು ಮುದ್ದಾಗಿದೆ ಕೃಷ್ಣ-ಕಾವೇರಿ ಲವ್ ಸ್ಟೋರಿ.
ಆದರೆ ಇವೆಲ್ಲದರ ಮಧ್ಯೆ ಸಿನಿಮಾದ ಆರಂಭದಿಂತ ಅಂತ್ಯದವರೆಗೂ ಬರುವ ಸುದ್ದಿ ವಾಹಿನಿ ವರದಿಗಾರ್ತಿಯ ಪಾತ್ರ ನಾಯಕಿಯ ಪಾತ್ರಕ್ಕಿಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಈ ಪಾತ್ರದಲ್ಲಿ ತಾನ್ಯಾ ಹೋಪ್ ಅಭಿನಯಿಸಿದ್ದಾರೆ.
ವಿಲನ್ ದೇವಿಶೆಟ್ಟಿ ಪಾತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ಅಭಿನಯಿಸಿದ್ದು, ನಾಯಕನ ಮುಂದೆ ವಿಲನ್ ಪಾತ್ರ ತುಂಬಾ ವೀಕ್ ಎನಿಸುತ್ತದೆ. ಅದಕ್ಕಿಂತ ಕಾಮಿಡಿ ವಿಲನ್ ಪಾತ್ರದಲ್ಲಿ ಅಭಿನಯಿಸಿರುವ ರವಿಶಂಕರ್ ಮಾತ್ರ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.
ಡಾಲಿ ಧನಂಜಯ್ ಅವರು ಮಿಠಾಯಿ ಸೂರಿ ಪಾತ್ರದಲ್ಲಿ ಎಂದಿನಂತೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಟ್ ಅಂದ್ರೆ ಪಟಾಸು ಅಂತ ಬರೊ ಮಿಠಾಯಿ ಸೂರಿ ವಿಲನ್ ಶೇಡ್ ಇರುವ ಪಾತ್ರವಾದರೂ ಒಂದಿಷ್ಟು ಟ್ವಿಸ್ಟ್ ಇದೆ. ಆದರೆ ಈ ಪಾತ್ರಕ್ಕೆ ಕೊಂಚ ಸ್ಪೇಸ್ ಕೊಟ್ಟಿದ್ದರೂ ಚೆನ್ನಾಗಿರುತ್ತಿತ್ತು. ಮೊದಲು ವಿಲನ್ ಆದರೂ ಕೊನೆಗೆ ಯಜಮಾನನ ಸ್ನೇಹಿತನಾಗುವ ಸೂರಿ ಅಭಿನಯ ಊಟಕ್ಕೆ ಉಪ್ಪಿನ ಕಾಯಿಯಂತಿದೆ. ಈ ಸಿನಿಮಾದಲ್ಲಿ ಕತೆಯ ಜತೆಗೆ ಕಾಮಿಡಿ ಸಹ ಸಖತ್ ಕಿಕ್ ಕೊಡುತ್ತದೆ.
ಇದನ್ನೂ ಓದಿ: ಗಿಡ ನೆಟ್ಟು ವರ್ಷಕ್ಕೊಂದು ಸೆಲ್ಫಿ ಕಳಿಸಿ ಎಂದ ಡಿಬಾಸ್ ದರ್ಶನ್
ಸಂಗೀತದ ವಿಷಯಕ್ಕೆ ಬಂದರೆ ಸಿನಿಮಾ ಬಿಡುಗಡೆಗೂ ಮುನ್ನವೇ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಐಟಂ ಸಾಂಗ್ನಲ್ಲಿ ದರ್ಶನ್ ಹಾಕಿರುವ ಸ್ಟೆಪ್ ನೋಡುಗರನ್ನು ಕುಣಿಯುವಂತೆ ಮಾಡುತ್ತದೆ. ಪೊನ್ ಕುಮಾರ್ ಹಾಗೂ ಹರಿಕೃಷ್ಣ ನಿರ್ದೇಶನ ಹೇಳಿಕೊಳ್ಳುವ ಮಟ್ಟಕ್ಕೆ ಇಲ್ಲ. ಕತೆಯನ್ನು ಮತ್ತಷ್ಟು ಮನಮುಟ್ಟುವಂತೆ ಮಾಡಬಹುದಿತ್ತು. ದತ್ತಣ್ಣ, ಸಾಧು ಕೋಕಿಲ, ದೇವರಾಜ್, ಶಿವರಾಜ್ ಕೆ.ಆರ್. ಪೇಟೆ, ಮಂಡ್ಯ ರಮೇಶ್ ಸಂಜು ಬಸಯ್ಯ ಅವರ ಪಾತ್ರಗಳಿಗೂ ಸಿನಿಮಾದಲ್ಲಿ ಅಷ್ಟೇ ಮಹತ್ವವಿದೆ.
ನಾವೆಲ್ಲಾ ಡಮ್ಮಿ.. ಅವರೇ ರಿಯಲ್ ಹೀರೋ; ಚಾಲೆಂಜಿಂಗ್ ಸ್ಟಾರ್ ದರ್ಶನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ