World Music Day 2022: ನಟನೆಯ ಜೊತೆಗೆ ಗಾಯನದಲ್ಲೂ ಸೈ ಎನಿಸಿಕೊಂಡ 'ಬಾಲಿವುಡ್ ಸ್ಟಾರ್ಸ್'ಗಳಿವರು

ಅಂತಾರಾಷ್ಟ್ರೀಯ ಯೋಗ ದಿನದೊಂದಿಗೇನೇ ಅಂದರೆ ಜೂನ್ 21ನೇ ತಾರಿಖಿನಂದು ತನ್ನ ದಿನವನ್ನು ಹಂಚಿಕೊಳ್ಳುವ ವಿಶ್ವ ಸಂಗೀತ ದಿನೋತ್ಸವವನ್ನು ಅಂತಾರಾಷ್ಟ್ರೀಯ ಸಂಗೀತ ದಿನ ಎಂತಲೂ ಸಹ ಆಚರಿಸುತ್ತ ಬರಲಾಗಿದೆ. ಬಾಲಿವುಡ್ ನಲ್ಲಿ ತಮ್ಮ ನಟನೆಯ ಮೂಲಕ ಅಪಾರ ಜನಮನ ಗೆದ್ದಿರುವ ಕೆಲ ತಾರಾ ನಟ, ನಟಿ ಮಣಿಯರು ಗಾಯನದಲ್ಲೂ ತಮ್ಮ ಪ್ರತಿಭೆ ತೋರಿಸಿ ಮನ್ನಣೆಗಳಿಸಿರುವ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಂತಾರಾಷ್ಟ್ರೀಯ ಯೋಗ ದಿನದೊಂದಿಗೇನೇ (International Yoga Day) ಅಂದರೆ ಜೂನ್ 21ನೇ ತಾರಿಖಿನಂದು ತನ್ನ ದಿನವನ್ನು ಹಂಚಿಕೊಳ್ಳುವ ವಿಶ್ವ ಸಂಗೀತ ದಿನೋತ್ಸವವನ್ನು (World Music Day) ಅಂತಾರಾಷ್ಟ್ರೀಯ ಸಂಗೀತ ದಿನ ಎಂತಲೂ ಸಹ ಆಚರಿಸುತ್ತ ಬರಲಾಗಿದೆ. ಸಂಗೀತ ಯಾವಾಗಲೂ ಮನಸ್ಸಿಗೆ ಸಂತಸ, ನೆಮ್ಮದಿ ಹಾಗೂ ಮುದ ನೀಡುತ್ತದೆ. ಶಾಸ್ತ್ರೀಯ ಶೈಲಿಯಿಂದ ಹಿಡಿದು ರಾಕ್ ಮೆಟಲ್, ಪಾಪ್ ಹಾಗೂ ಜಾಜ್ ವರೆಗೆ ಸಂಗೀತದಲ್ಲಿ (Music) ಹಲವಾರು ಬಗೆಗಳಿವೆ. ಸಂಗೀತ ಹಾಗೂ ಗಾಯನ (Vocals) ಎರಡು ಒಂದಕ್ಕೊಂದು ಬೆರೆತು ಹರಡಿದಾಗ ಕೇಳುಗರು ಹಾಗೆಯೇ ಸಂತಸದ ಲೋಕಕ್ಕೆ ಜಾರಿಬಿಡುತ್ತಾರೆ.

ಇಂದಿನ ಈ ಲೇಖನದಲ್ಲಿ ನಾವು ಬಾಲಿವುಡ್ ನಲ್ಲಿ ತಮ್ಮ ನಟನೆಯ ಮೂಲಕ ಅಪಾರ ಜನಮನ ಗೆದ್ದಿರುವ ಕೆಲ ತಾರಾ ನಟ, ನಟಿ ಮಣಿಯರು ಗಾಯನದಲ್ಲೂ ತಮ್ಮ ಪ್ರತಿಭೆ ತೋರಿಸಿ ಮನ್ನಣೆಗಳಿಸಿರುವ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಶೃದ್ಧಾ ಕಪೂರ್
ಬಾಲಿವುಡ್ ಜಗತ್ತಿನ 80ರ ದಶಕದ ನಟ ಹಾಗೂ ಖಳ ಪಾತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದ ಪ್ರಸಿದ್ಧ ಶಕ್ತಿ ಕಪೂರ್ ಅವರ ಮಗಳಾದ ಶೃದ್ಧಾ ಕಪೂರ್ ಈಗ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೆ ಆದ ಸ್ಥಾನಮಾನಗಳನ್ನು ಪಡೆದಿದ್ದಾರೆ. ಯಶಸ್ವಿ ನಾಯಕಿಯಾಗಿ ತಮ್ಮ ಅಭಿನಯಕ್ಕೆ ಸೈ ಎನಿಸಿಕೊಂಡಿದ್ದಾರೆ.

'ಏಕ್ ವಿಲನ್' ಎಂಬ ಹಿಂದಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಶೃದ್ಧಾ ಆ ಚಿತ್ರದಲ್ಲಿ "ಗಲಿಯಾ" ಎಂಬ ಹಾಡನ್ನು ಹಾಡಿದ್ದರು. ಇದು ಅವರು ಗಾಯನದ ಪ್ರತಿಭೆಯನ್ನು ಅನಾವರಣಗೊಳಿಸಿತ್ತು ಹಾಗೂ ಆ ಹಾಡು ಅಪಾರ ಮೆಚ್ಚುಗೆಗಳಿಸಿತ್ತು. ತದನಂತರ ಅವರು ತಮ್ಮ ಇನ್ನೊಂದು ಚಿತ್ರವಾದ ರಾಕ್ ಆನ್ 2 ಚಿತ್ರದಲ್ಲಿಯೂ ಗೀತೆಗಳನ್ನು ಹಾಡಿ ಯಶಸ್ಸುಗಳಿಸಿದ್ದರು.

ಆಲಿಯಾ ಭಟ್
ಇತ್ತೀಚಿಗಷ್ಟೆ ರಣಬೀರ್ ಕಪೂರ್ ಅವರನ್ನು ಮದುವೆಯಾಗಿರುವ ಆಲಿಯಾ ಭಟ್ ಹಿಂದಿ ಚಿತ್ರರಂಗಕ್ಕೆ ಕರಣ್ ಜೋಹರ್ ಅವರ "ಸ್ಟುಡೆಂಟ್ ಆಫ್ ದಿ ಇಯರ್" ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರು. ಇಂದು ಯಶಸ್ವಿ ತಾರಾ ನಟಿಯಾಗಿರುವ ಆಲಿಯಾ ಕೇವಲ ತಮ್ಮ ಅಭಿನಯ ಮಾತ್ರವಲ್ಲದೆ ಹಿನ್ನೆಲೆ ಗಾಯನದ ಪ್ರತಿಭೆಗಾಗಿಯೂ ಗುರುತಿಸಿಕೊಂಡಿದ್ದಾರೆ. 'ಸಮ್ಝಾವಾ', 'ಇಕ್ ಕುಡಿ' ಗಳಂತಹ ಹಿಟ್ ಗೀತೆಗಳನ್ನು ಹಾಡಿ ಸಂಗೀತ ಪ್ರೀಯರ ಮನ ಗೆದ್ದಿದ್ದಾರೆ.

ಪ್ರಿಯಾಂಕಾ ಚೋಪ್ರಾ
ಹಿಂದಿ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ತಮ್ಮ ನಟನಾ ಸಾಮರ್ಥ್ಯದ ಮೂಲಕ ಹಾಲಿವುಡ್ ಚಿತ್ರರಂಗಕ್ಕೂ ನೆಗೆದು ಅಲ್ಲಿಯೂ ತಮ್ಮ ಪ್ರತಿಭೆಯಿಂದ ಜನಮನಗೆದ್ದ ಭಾರತದ ಮತ್ತೊಬ್ಬ ಬಹುಮುಖ ಪ್ರತಿಭೆ ಎಂದರೆ ನಟಿ ಪ್ರಿಯಾಂಕಾ ಚೋಪ್ರಾ. ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮುಂಚೆಯೇ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡಿದಿದ್ದರು. ಅವರು ದಿಲ್ ಧಡಕ್ನೆ ದೋ ಎಂಬ ಟೈಟಲ್ ಗೀತೆಯನ್ನು ನಟ ಫರ್ಹಾನ್ ಅಖ್ತರ್ ಅವರೊಂದಿಗೆ ಹಾಡಿ ಅಭಿಮಾನಿಗಳ ಮನ ಸೆಳೆದಿದ್ದರು.

ಇದನ್ನೂ ಓದಿ: Yoga Day Special: ಯೋಗ ಎಂದರೇನು? ಯೋಗಾಸನದಿಂದ ಮನಸ್ಸು-ದೇಹಕ್ಕಾಗುವ ಲಾಭಗಳೇನು?

ಅಮಿತಾಬ್ ಬಚ್ಚನ್
ತಮ್ಮ ವಿಶಿಷ್ಟ ಕಂಠದಿಂದ ಜನರನ್ನು ಅಭಿಮಾನಿಗಳನ್ನಾಗಿ ಮಾಡಿಕೊಂಡಿರುವ ಹಿಂದಿ ಚಿತ್ರರಂಗದ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಹಲವು ಸಂದರ್ಭಗಳಲ್ಲಿ ತಮ್ಮ ವಿಶಿಷ್ಟವಾದ ಗಾಯನ ಪ್ರತಿಭೆಯನ್ನು ತೋರಿಸಿದ್ದಾರೆ. 'ರಂಗ ಬರ್ಸೆ' ಯಿಂದ ಹಿಡಿದು ಇತ್ತೀಚಿನ ಭೂತನಾಥ್ ವರೆಗಿನ ಚಿತ್ರಗಳಲ್ಲಿ ತಮ್ಮ ಧ್ವನಿ ದಾನ ಮಾಡಿದ್ದಾರೆ.

ಶೃತಿ ಹಾಸನ್
ದಕ್ಷಿಣ ಹಾಗೂ ಬಾಲಿವುಡ್ ಎರಡೂ ಚಿತ್ರರಂಗಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಮತ್ತೊಬ್ಬ ಪ್ರತಿಭಾನ್ವಿತೆಯಾದ ಶೃತಿ ಹಾಸನ್ ಕೇವಲ ಅಭಿನಯ ಮಾತ್ರವಲ್ಲದೆ ಗಾಯನ ಹಾಗೂ ಸಂಗೀತ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್ ಹಾಗೂ ಕೆಲವು ದಕ್ಷಿಣದಚಿತ್ರಗಳಲ್ಲಿ ತಮ್ಮ ಗಾಯನ ಪ್ರತಿಭೆ ತೋರಿಸಿರುವ ಶೃತಿ ಅವರು "ದಿ ಎಕ್ಸ್ಟ್ರಾ ಮೆಂಟಲ್ಸ್" ಎಂಬ ಬ್ಯಾಂಡಿನ ವೊಕಾಲಿಸ್ಟ್ ಕೂಡಾ ಆಗಿದ್ದಾರೆ.

ಫರ್ಹಾನ್ ಅಖ್ತರ್
ಹಿಂದಿ ಚಿತ್ರರಂಗದ ಪ್ರಸಿದ್ಧ ಕಥೆಗಾರ ಹಾಗೂ ಗೀತ ರಚನೆಕಾರರಾಗಿರುವ ಜಾವೆದ್ ಅಖ್ತರ್ ಅವರ ಮಗನಾಗಿರುವ ಫರ್ಹಾನ್ ಬಹುಮುಖ ಪ್ರತಿಭೆ. ನಿರ್ದೇಶನದಿಂದ ಹಿಡಿದು ನಟನೆ ಹಾಗೂ ಗಾಯನದಲ್ಲೂ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ರಾಕ್ ಆನ್ ಎಂಬ ಅವರ ಚಿತ್ರವು ಸಂಗೀತದ ಮೇಲೆ ಆಧಾರವಾಗಿದ್ದ ಕಥೆಯನ್ನು ಹೊಂದಿತ್ತು. ಆ ಚಿತ್ರ ತನ್ನ ಸಂಗೀತಕ್ಕಾಗಿ ಹಿಟ್ ಕೂಡ ಆಗಿತ್ತು. ಆ ಚಿತ್ರದಲ್ಲಿ ಹಿನ್ನೆಲೆ ಗಾಯಕನಾಗಿ ಫರ್ಹಾನ್ ತಮ್ಮ ಅದ್ಭುತ ಗಾಯನ ಸಿರಿಯನ್ನು ಅನಾವರಣಗೊಳಿಸಿದ್ದರು.

ಹೃತಿಕ್ ರೋಶನ್
ಇಂದು ಹಿಂದಿ ಚಿತ್ರರಂಗ ಸ್ಫುರದ್ರೂಪಿ ಹಾಗೂ ಸೂಪರ್ ಸ್ಟಾರ್ ಆಗಿರುವ ಹೃತಿಕ್ ಅವರು ಕೇವಲ ಅದ್ಭುತ ದೇಹದಾರ್ಢ್ಯ, ನಟನೆ ಮಾತ್ರವಲ್ಲದೆ ಗಾಯಕನಾಗಿಯೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. "ಜಿಂದಗಿ ನಾ ಮಿಲೇಗಿ ದೊಬಾರಾ" ಚಿತ್ರದಲ್ಲಿ ಪ್ರಥಮ ಬಾರಿಗೆ ಹಾಡುವ ಮೂಲಕ ಅವರು ತಮ್ಮ ಪ್ರತಿಭೆ ತೋರಿಸಿದ್ದಾರೆ. ಅವರು ಫರ್ಹಾನ್ ಅವರ ಜೊತೆಗೂಡಿ ಹಾಡಿದ್ದ "ಸಾನಿಯೋರಿಟಾ" ಹಾಡು ಇಂದಿಗೂ ಜನಪ್ರೀಯ ಗೀತೆಯಾಗಿದೆ.

ಆಯುಷ್ಮಾನ್ ಖುರಾನಾ
ಉತ್ತಮ ನಟನಾ ಕೌಶಲ್ಯದೊಂದಿಗೆ ತಮ್ಮದೆ ಆದ ವಿಭಿನ್ನ ಚಿತ್ರಗಳ ಮೂಲಕ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿರುವ ಆಯುಷ್ಮಾನ್ ಹಾಡಿನ ವಿಷಯದಲ್ಲೂ ತಮ್ಮ ಅಪಾರ ಸಾಮರ್ಥ್ಯ ತೋರಿಸಿದ್ದಾರೆ. ವಿಕಿ ಡೋನರ್ ಚಿತ್ರದಲ್ಲಿ ಅವರು ಹಾಡಿರುವ "ಪಾನಿ ದಾ ರಂಗ್" ಹಾಡು ಇಂದಿಗೂ ಸಾಕಷ್ಟು ಜನಪ್ರೀಯವಾದ ಗೀತೆಯಾಗಿದೆ.

ಇದನ್ನೂ ಓದಿ: Actor Rishi Birthday: ಕವಲುದಾರಿ ರಿಷಿಗೆ ಹುಟ್ಟುಹಬ್ಬದ ಸಂಭ್ರಮ, ಫುಲ್ ಬ್ಯುಸಿ ಇದ್ದಾರೆ ಕ್ಯೂಟ್​ ಹೀರೋ

ಸಲ್ಮಾನ್ ಖಾನ್
ಸ್ಟಾರ್ ನಟ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸಲ್ಮಾನ್ ಖಾನ್ ಅವರು ಹಲವು ಸೂಪರ್ ಹಿಟ್ ಗೀತೆಗಳನ್ನು ತಮ್ಮ ಸಿನೆ ಕರಿಯರ್ ನಲ್ಲಿ ಹಾಡಿದ್ದಾರೆ. ಅಪಾರವಾಗಿ ಜನಮನ ಗೆದ್ದಿರುವ ಅವರ ಇತ್ತೀಚಿನ ಕೆಲವು ಗೀತೆಗಳೆಂದರೆ, "ಮೈ ಹೂ ಹೀರೊ ತೇರಾ" ಹಾಗೂ "ಜಗ ಘೂಮಿಯಾ".
Published by:Ashwini Prabhu
First published: