ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರಾ ನಟ ರಜನಿಕಾಂತ್​?

news18
Updated:July 5, 2018, 2:22 PM IST
ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರಾ ನಟ ರಜನಿಕಾಂತ್​?
news18
Updated: July 5, 2018, 2:22 PM IST
ನ್ಯೂಸ್ 18 ಕನ್ನಡ

ಸೂಪರ್​ಸ್ಟಾರ್​ ರಜಿನಿಕಾಂತ್, ತಮ್ಮ ಸಿನಿ ಜೀವನದ ಆರಂಭದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ಯಾವಾಗ ತಮಿಳು ಚಿತ್ರರಂಗದ 'ದಳಪತಿ' ಆದರೋ ಆ ನಂತರ ಅವರು ಕನ್ನಡದ ತೆರೆ ಮೇಲೆ ಇಣುಕಿ ಸಹ ನೋಡಿಲ್ಲ. ಈಗ 36 ವರ್ಷಗಳ ನಂತರ ಸೂಪರ್​ಸ್ಟಾರ್​ ರಜಿನಿಯನ್ನ ಕನ್ನಡಕ್ಕೆ ಕರೆ ತರುವ ಪ್ರಯತ್ನ ನಡೀತಾ ಇದೆ. ಅದು ಯಾವ ಸಿನಿಮಾ? ಏನು ಕಥೆ ಅಂತೀರಾ ಇಲ್ಲಿದೆ ಓದಿ ಈ ವರದಿ.

ರಜಿನಿಕಾಂತ್ ನೇಮು-ಫೇಮು ಗಳಿಸಿದ್ದೆಲ್ಲ ತಮಿಳು ಚಿತ್ರಗಳ ಮೂಲಕವಾದರೂ, ಅವರು ಕನ್ನಡಿಗರು ಅನ್ನೋ ಅಕ್ಕರೆ ಅಭಿಮಾನ ಕನ್ನಡ ಜನತೆಗಿದೆ. ಹೀಗಾಗಿನೇ ರಜಿನಿ ಸಿನಿಮಾ ಬರುತ್ತಿದೆ ಅಂದರೆ ತಮಿಳುನಾಡಿನಲ್ಲಷ್ಟೇ ಅಲ್ಲ, ಕರ್ನಾಟಕದಲ್ಲೂ ಅದ್ಧೂರಿ ಸ್ವಾಗತಕ್ಕೆ ವೇದಿಕೆ ಸಿದ್ದವಾಗಿರುತ್ತದೆ.

ಇಂತಹ ರಜಿನಿಕಾಂತ್ ಸಿನಿ ಜೀವನದ ಆರಂಭದಲ್ಲಿ ಕನ್ನಡ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಅವರ ಕೆಲವು ಸಿನಿಮಾಗಳು ತಮಿಳು-ಕನ್ನಡ ಎರಡು ಭಾಷೆಗಳಲ್ಲಿಯೂ ತಯಾರಾಗಿ ಬಿಡುಗಡೆಯಾಗುತ್ತಿದ್ದವು. ಎಲ್ಲೋ ಒಂದು ಕಡೆ ತಮಿಳು ನೆಲದಲ್ಲಿ ಸಿಕ್ಕಷ್ಟು ಪ್ರೀತಿ-ಅಭಿಮಾನ ಕನ್ನಡ ನೆಲದಲ್ಲಿ ಅವರ ಕನ್ನಡ ಚಿತ್ರಗಳಿಗೆ ಸಿಗಲಿಲ್ಲ. ಹೀಗಾಗಿ ತಮಿಳು ಚಿತ್ರಗಳತ್ತಲೇ ತಮ್ಮ ದೃಷ್ಟಿಕೋನವನ್ನ ಹರಿಸಿ, ಅಲ್ಲಿನ ಚಿತ್ರರಂಗದ ಅಧಿಪತಿಯಾದರು ರಜಿನಿ. ಆದರೆ ಯಾವಾಗ ರಜಿನಿಕಾಂತ್ ತಮಿಳು ಚಿತ್ರರಂಗದ ಸೂಪರ್ ​ಸ್ಟಾರ್​ ಆದರೋ ? ಆಗಿನಿಂದ ರಜಿನಿಕಾಂತ್ ಕನ್ನಡ ಚಿತ್ರಗಳತ್ತ ಇಣುಕಿಯೂ ಸಹ ನೋಡಿಲ್ಲ.

ರಜನಿ ಕನ್ನಡ ಚಿತ್ರದಲ್ಲಿ ಅಭಿನಯಿಸಿ 36-37 ವರ್ಷಗಳೇ ಕಳೆದಿವೆ. 'ಗರ್ಜನೆ' ಎಂಬ ಚಿತ್ರದಲ್ಲಿ ಅವರು ಅಭಿನಯಿಸಿದ್ದೇ ಕೊನೆಯಾಗಿತ್ತು. ಈ ಹಿಂದೆ ಹಲವಾರು ಬಾರಿ ಅವರನ್ನ ಕನ್ನಡಕ್ಕೆ ಕರೆತರುವ ಪ್ರಯತ್ನಗಳಾಗಿತ್ತು. ಆದರೆ ಯಾವ ಪ್ರಯತ್ನಗಳು ಕೈಗೂಡಿರಲಿಲ್ಲ. ಈಗ ಸುಮಾರು ವರ್ಷಗಳ ನಂತರ ರಜಿನಿಯನ್ನ ಕನ್ನಡಕ್ಕೆ ಕರೆತರುವ ಪ್ರಯತ್ನ ಮತ್ತೆ ಚಾಲ್ತಿಯಲ್ಲಿದೆ. ಹಾಗಂತ ಪೂರ್ಣ ಪ್ರಮಾಣದ ನಾಯಕನಾಗಿ ಅಲ್ಲ. ಅತಿಥಿ ಪಾತ್ರಕ್ಕಾಗಿ ಅನ್ನೋದು ಸುದ್ದಿ ಈಗ ಚಂದನವನದಲ್ಲಿ ಓಡಾಡುತ್ತಿದೆ.

ಅಷ್ಟಕ್ಕೂ ಈ ಪ್ರಯತ್ನ ನಡೆಯುತ್ತಿರೋದು ಅಂಬಿ ಮಗನ 'ಅಮರ್' ಚಿತ್ರಕ್ಕಾಗಿ. ನಾಗಶೇಖರ್ ನಿರ್ದೇಶನದಲ್ಲಿ ಭರ್ಜರಿಯಾಗಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣದ ಹಂತದಲ್ಲಿರುವಾಗ ಚಿತ್ರತಂಡಕ್ಕೆ ಇಂತಹದ್ದೊಂದು ಉಪಾಯ ಬಂದಿದೆ. ನಿಮಗೆಲ್ಲ  ಗೊತ್ತಿರುವಂತೆಯೇ ರಜಿನಿಕಾಂತ್-ಅಂಬರೀಷ ಆತ್ಮೀಯ ಸ್ನೇಹಿತರು. ಹೀಗಾಗಿ ಅಂಬಿ ಏನಾದರೂ ರಜನಿ ಬಳಿ ಮಾತನಾಡಿದರೆ, ಅವರು ಇಲ್ಲ ಅನ್ನೋದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ 'ಅಮರ್' ಮೂಲಕ ಮತ್ತೆ ಕನ್ನಡದ ತೆರೆ ಮೇಲೆ ರಜಿನಿ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಆದರೆ ಕಾವೇರಿ ವಿಚಾರದಲ್ಲಿ ರಜನಿ ನೀಡಿರುವ ತಮ್ಮ ಹೇಳಿಕೆಯಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಕಾಲಾ' ಸಿನಿಮಾದ ಪ್ರದರ್ಶನ ವಿಚಾರವಾಗಿಯೂ ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಈ ಸಮಯದಲ್ಲಿ ಒಂದುವೇಳೆ ರಜನಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡರೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಊಹಿಸಲಾಗುವುದಿಲ್ಲ.
Loading...

 
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ