news18-kannada Updated:April 6, 2021, 12:44 PM IST
ಮಹಿಮಾ ಚೌಧರಿ
ಆ ನಟಿ ತನ್ನ ಮೊದಲ ಚಿತ್ರದಲ್ಲಿಯೇ ಅತ್ಯುತ್ತಮ ಡೆಬ್ಯೂ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿದ್ದಾಕೆ. ಒಬ್ಬ ಅದ್ಭುತ ಪ್ರತಿಭಾನ್ವಿತ ಸುಂದರಿ ಸಿಕ್ಕಳು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕರಿಯರ್ ಇನ್ನೇನು ಪ್ರಾರಂಭವಾಯಿತು ಎನ್ನುತ್ತಿರುವಾಗಲೇ, ಮೂರನೇ ಚಿತ್ರದ ಶೂಟಿಂಗ್ ಸಮಯದಲ್ಲಿ ಅಪಘಾತಕ್ಕೊಳಗಾಗಿ ಆ ನಟಿಯ ಮುಖಕ್ಕೆ ಬರೋಬ್ಬರಿ 67 ಗಾಜಿನ ಚೂರುಗಳು ಹೊಕ್ಕಿದ್ದವು. ಆಪರೇಷನ್, ಸರ್ಜರಿ ಅಂತೆಲ್ಲಾ ಪರಿಪಾಟಲು ಪಟ್ಟು ಮತ್ತೆ ಆ ಸುಂದರಿ ಚಿತ್ರರಂಗದಲ್ಲಿ ಎದ್ದುನಿಂತರು. ಆ ನಟಿಯ ಹೆಸರೇ ಮಹಿಮಾ ಚೌಧರಿ. ಮಹಿಮಾ ಚೌಧರಿ. 1997ರಲ್ಲಿ ಪರ್ದೇಸ್ ಚಿತ್ರದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದ ಮಹಿಮಾ, ತಮ್ಮ ನಟನೆ, ಸೌಂದರ್ಯದಿಂದ ಭರವಸೆ ಮೂಡಿಸಿದ್ದರು. ಹೀಗಾಗಿಯೇ ಹಿಂದೆ ಮಾತ್ರವಲ್ಲ ಬೇರೆ ಬೇರೆ ಭಾಷೆಗಳಿಂದಲೂ ಅವರಿಗೆ ಅವಕಾಶಗಳು ಅರಸಿಕೊಂಡು ಬಂದವು. ಆದರೆ ಆಗಲೇ ಅವರ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದಿತ್ತು.
ಹೌದು, ಬಾಲಿವುಡ್ ಆಕ್ಷನ್ ಕಿಂಗ್ ಅಜಯ್ ದೇವಗನ್ ಅವರ ಜೊತೆ ದಿಲ್ ಕ್ಯಾ ಕರೇ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ, ಹೋಟೆಲ್ನಿಂದ ಸೆಟ್ಗೆ ತೆರಳುವಾಗ ಮಹಿಮಾ ಕಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿ ಕುಳಿತಿದ್ದ ಮಹಿಮಾ ಚೌಧರಿಗೆ ಗಾಯಗಳಾಗಿದ್ದವು. ಬರೋಬ್ಬರಿ 67 ಗಾಜಿನ ಚೂರುಗಳು ಅವರ ಮುಖಕ್ಕೆ ಹೊಕ್ಕಿದ್ದವು.

ಮಹಿಮಾ ಚೌಧರಿ
ಆಸ್ಪತ್ರೆಯಲ್ಲಿ ಅವರ ಮುಖ ನೋಡಿಕೊಂಡ ಮಹಿಮಾಗೆ ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿತ್ತು. ಸಿನಿಮಾ ಕನಸು ಹೊತ್ತು ಬಂದು, ಇನ್ನೇನು ಅವಕಾಶಗಳು ದೊರೆಯುತ್ತಿವೆ, ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎನ್ನುತ್ತಿರುವಾಗಲೇ ಈ ಅಪಘಾತ ಅವರಿಗೆ ಆಘಾತ ನೀಡಿತ್ತು.
ಇದನ್ನೂ ಓದಿ: Rashmika Mandanna: ಅಮಿತಾಭ್ ಬಚ್ಚನ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ..!
ಬರೋಬ್ಬರಿ 22 ವರ್ಷಗಳ ನಂತರ ನಟಿ ಮಹಿಮಾ ಚೌಧರಿ ಆ ಅಪಘಾತದ ಬಗ್ಗೆ ಮಾತನಾಡಿದ್ದಾರೆ. `ಅಪಘಾತದ ಸಮಯದಲ್ಲಿ ನಾನು ಸಾಯುತ್ತಿದ್ದೇನೇನೋ ಅಂತನ್ನಿಸಿತ್ತು. ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಹೋಗಲೂ ಯಾರೂ ಸಹಾಯ ಮಾಡಿರಲಿಲ್ಲ. ಆಸ್ಪತ್ರೆ ಸೇರಿದ ಬಳಿಕ ಅಮ್ಮ, ನಟ ಅಜಯ್ ದೇವಗನ್ ಬಂದರು. ಅಪಘಾತದ ಸಮಯದಲ್ಲಿ ನಾನು ಸಾಕಷ್ಟು ಸಿನಿಮಾಗಳಿಗೆ ಸೈನ್ ಮಾಡಿದ್ದೆ. ಆಗ ಚಿತ್ರರಂಗದ ಮಂದಿ ಹೆಚ್ಚು ಸಪೋರ್ಟಿವ್ ಆಗಿರಲಿಲ್ಲ. ಆ ಚಿತ್ರತಂಡಗಳಿಗೆ ನನ್ನ ಅಪಘಾತದ ವಿಷಯ ಗೊತ್ತಾಗಿದ್ದರೆ, ಎಲ್ಲ ಸಿನಿಮಾಗಳಿಂದಲೂ ನನಗೆ ಗೇಟ್ಪಾಸ್ ಕೊಟ್ಟುಬಿಡುತ್ತಾರೆ ಅನ್ನೋ ಆತಂಕವಿತ್ತು. ಹೀಗಾಗಿಯೇ ಸಿನಿಮಾ ಹೊರತಾಗಿ ನಾನೇನು ಮಾಡಬಹುದು ಅಂತ ಅದಾಗಲೇ ಯೋಚಿಸತೊಡಗಿದ್ದೆ. ಆದರೆ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಅಜಯ್ ದೇವಗನ್ ಹಾಗೂ ಕಾಜಲ್ ದಂಪತಿ ನನ್ನ ಕೈಬಿಡಲಿಲ್ಲ. ಚಿತ್ರರಂಗದಲ್ಲಿ ಯಾರಿಗೂ ಅಪಘಾತದದ ವಿಷಯ ಗೊತ್ತಾಗದಂತೆ ಗುಟ್ಟಾಗಿಟ್ಟರು. ಬೆಂಗಳೂರಿನಲ್ಲಿ ಬೇಡ ಮುಂಬೈನ ಅತ್ಯುತ್ತಮ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಮುಂಬೈನಲ್ಲಿ ಪರಿಣಿತ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರು. ಆಗಾಗ ಭೇಟಿಯಾಗಿ ಧೈರ್ಯ ಹೇಳುತ್ತಿದ್ದರು. ಅವರ ಸಹಾಯವನ್ನು ನಾನೆಂದೂ ಮರೆಯುವುದಿಲ್ಲ' ಎಂದು ಆ ಹೋರಾಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಟಿ ಮಹಿಮಾ ಚೌಧರಿ.
ಇದನ್ನೂ ಓದಿ: ರಶ್ಮಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಕ್ಷಿತ್ ಶೆಟ್ಟಿ:ಇಲ್ಲಿದೆ ಸಾನ್ವಿಯ ಮೊದಲ ಆಡಿಷನ್ ವಿಡಿಯೋಸುಮಾರು ಎರಡು ದಶಕಗಳ ಸಿನಿಕರಿಯರ್ನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಮಹಿಮಾ. ಪರ್ದೇಸ್, ಧಡ್ಕನ್, ಧಾಗ್ ದಿ ಫೈರ್, ಲಜ್ಜಾ, ಕುರುಕ್ಷೇತ್ರ, ದೊಬಾರಾ ಅವುಗಳಲ್ಲಿ ಪ್ರಮುಖವಾದುವು. 2016ರಲ್ಲಿ ರಿಲೀಸ್ ಆದ ಡಾರ್ಕ್ ಚಾಕ್ಲೇಟ್ ಮಹಿಮಾ ಚೌಧರಿ ನಟಿಸಿದ ಕೊನೆಯ ಸಿನಿಮಾ. ಕಳೆದ ಐದು ವರ್ಷಗಳಿಂದ ಚಿತ್ರರಂಗದಿಂದ ದೂರವಿರುವ 47 ವರ್ಷದ ಮಹಿಮಾ ಚೌಧರಿ ಸದ್ಯ ತಮ್ಮ ಮಗಳ ಜೊತೆ ಆರಾಮಾಗಿ ಸೆಟಲ್ ಆಗಿದ್ದಾರೆ.
Published by:
Anitha E
First published:
April 6, 2021, 12:44 PM IST