News18 India World Cup 2019

ರಕ್ಷಿತ್​-ರಶ್ಮಿಕಾರ ಸಿಂಪಲ್​ ಲವ್​ಸ್ಟೋರಿಗೆ ಯಾರ ಕಣ್ಣು ಬಿತ್ತೋ..?

news18
Updated:September 11, 2018, 7:19 PM IST
ರಕ್ಷಿತ್​-ರಶ್ಮಿಕಾರ ಸಿಂಪಲ್​ ಲವ್​ಸ್ಟೋರಿಗೆ ಯಾರ ಕಣ್ಣು ಬಿತ್ತೋ..?
news18
Updated: September 11, 2018, 7:19 PM IST
ರಕ್ಷಿತ್​-ರಶ್ಮಿಕಾರದ್ದು ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ. ಸಿಕ್ಕಿದ ಮೊದಲ ಸಿನಿಮಾದಲ್ಲೇ ಇಬ್ಬರಿ ಗೂ ಲವ್ವಾಯ್ತು. ನಿಶ್ಚಿತಾರ್ಥವೂ ಆಯಿತು. ಅದೇನು ಅದೃಷ್ಟಾನೋ... ದುರಾದೃಷ್ಟಾನೋ... ಇಬ್ಬರಿಗೂ ಅವಕಾಶಗಳು ದಂಡಿಯಾಗಿ ಸಿಕ್ಕಿ, ಇಬ್ಬರೂ ಒಂದೊಂದು ಕಡೆ ಬ್ಯುಸಿಯಾದರು. ಕೆಲಸ ಇಲ್ಲದವರಿಗೆ ಮಾತ್ರ ಇಲ್ಲೊಂದು ಕೆಲಸ ಸಿಕ್ಕಂಗಾಯಿತು. ಅವರ ನಡುವೆ ಏನೋ ಸರಿಯಲ್ಲ. ಇಬ್ಬರೂ ದೂರವಾಗುತ್ತಿದ್ದಾರೆ ಅಂತ ಏನೇನೋ ಸುದ್ದಿ ಮಾಡಿ ಚಪಲ ತೀರಿಸಿಕೊಳ್ಳೋಕೆ ಶುರುಮಾಡಿದ್ದರು.

ಹೇಳಿಕೇಳಿ ರಕ್ಷಿತ್ ಶೆಟ್ಟಿ ಸಿನಿಮಾ ಮೇಕರ್.. ನಟನಾದರೂ ನಿರ್ದೇಶನದ ಬಗ್ಗೇನೇ ಹೆಚ್ಚು ಪ್ರೀತಿ. ತಮ್ಮದೇ ಪ್ರೊಡಕ್ಷನ್ ಹೌಸ್ ಬೇರೆ. ಅಲ್ಲಿ ನಾಲ್ಕಾರು ನಿರೀಕ್ಷೆ ಮೂಡಿಸಿರೋ ಸಿನಿಮಾಗಳು. ಅವುಗಳ ಉಸ್ತುವಾರಿಯಲ್ಲಿ ಬ್ಯುಸಿಯಾಗಿದ್ದರು. ರಶ್ಮಿಕಾಗೂ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಜೊತೆಗೆ ಯಶಸ್ಸು. ಏನಾದರೂ ಸುದ್ದಿ ಸಿಕ್ಕುತ್ತಾ ಅಂತ ಬರಗೆಟ್ಟಂತೆ ಕಾದಿದ್ದವರಿಗೆ ಕೊಡಗಲ್ಲಿ ಮಳೆ ಸುರಿದಂತಾಯಿತು 'ಗೀತ ಗೋವಿಂದಂ' ಸಿನಿಮಾದ ಲಿಪ್‍ಲಾಕ್ ಸೀನ್ ಲೀಕ್ ಆಗಿದ್ದು.

ಆಗಿದ್ದೇನೋ ಆಯ್ತು. ಸಿನಿಮಾನೂ ಇಷ್ಟವಾಯಿತು. ಆದರೆ ಆಗಿರುವುದರ ಬಗ್ಗೆ ಕರ್ನಾಟಕದ ಕ್ರಶ್ ಪಕ್ಕದ ರಾಜ್ಯದಲ್ಲಿ ಮಿಂಚುತ್ತಿದ್ದಾರೆ ಅಂತ ಬರೆದಿದ್ದಕ್ಕಿಂತ ಅಲ್ಲಿ ಆ ಹೀರೋ ಜೊತೆ ಲವ್ ಶುರು ಮಾಡಿದ್ದಾರೆ. ರಕ್ಷಿತ್‍ಗಿಂತ ದೊಡ್ಡ ಸ್ಟಾರ್ ಆಗುತ್ತಿದ್ದಾರೆ. ಇನ್ನು ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ ಕಥೆ ಮುಗೀತು ಅಂತ ಷರಾ ಬರೆದುಬಿಟ್ಟರು.

ಇಲ್ಲೇ ನೋಡಿ ಚೆನ್ನಾಗೇ ಇದ್ದ ರಕ್ಷಿತ್ ರಶ್ಮಿಕಾಗೆ ನೋವಾಗಿದ್ದು. ನಾವು ಏನನ್ನೂ ಹೇಳೋಕೂ ಮೊದಲೇ ಎಲ್ಲವನ್ನೂ ಅವರೇ ಹೇಳುತ್ತಿದ್ದಾರೆ. ನಮ್ಮ ಮರ್ಯಾದೆ ಕಳೆಯುತ್ತಿದ್ದಾರೆ ಅಂತ ನೊಂದುಕೊಂಡು ಘಟನೆಯ ಬಗ್ಗೆ ಮಾತಾಡೋದನ್ನೇ ನಿಲ್ಲಿಸಿಬಿಟ್ಟರು. ಮಾಧ್ಯಮದವರ ಸಂಪರ್ಕಕ್ಕೇ ಸಿಗಲಿಲ್ಲ. ಇದಾದಮೇಲೆ ಬಡಾಯಿ ಬಿಡುವವರಿಗೆ ಮೌನಂ ಸಮ್ಮತಿ ಲಕ್ಷಣಂ ಎಂಬತಾಯಿತು. ಇದು ನಿಜವೇ ಇರಬೇಕು ಅದಕ್ಕೇ ಇಬ್ಬರೂ ಮಾತಾಡುತ್ತಿಲ್ಲ ಅಂತ ನಿರ್ಧರಿಸಿ, ಬಿಸಿ ಬಿಸಿ ಸುದ್ದಿ ಅಂತ ಹಳಸಲನ್ನೇ ಮತ್ತೆ ಕೆರೆದು, ಬಿಸಿ ಮಾಡಿ ಮತ್ತೆ ಮತ್ತೆ ಬರೆದರು.

ಇನ್ನು ನಿಶ್ಚಿತಾರ್ಥದ ನಂತರ ರಕ್ಷಿತ್ ಸಹಜವಾಗಿಯೇ ಸಿನಿಮಾದೊಳಗೆ ಮುಳುಗಿ ಹೋದರು. 50 ಕೋಟಿಯ ಸಿನಿಮಾ ಕೊಟ್ಟ ನಟ ಅದನ್ನು ಮೀರಿಸೋಕೆ ಎಷ್ಟು ಆಳಕ್ಕಿಳಿದು ಮತ್ತೊಂದು ಸಿನಿಮಾ ಮಾಡಬೇಕು ಅಂತ ತಯಾರಿ ಮಾಡಿಕೊಳ್ಳತೊಡಗಿದ್ದರು. ಆದರೆ ಈ ಗಾಸಿಪ್ ಹಬ್ಬಿಸುವವರಿಗೆ ನಿಶ್ಚಿತಾರ್ಥದ ನಂತರ ಆಗಾಗ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದರೆ ಅದೂ ಒಂದು ಸುದ್ದೀನೇ.

ಇಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿಲ್ಲ ಯಾಕೆ? ಇಬ್ಬರ ಸಂಬಂಧ ಹಳಸಿತಾ..? ಅನ್ನೋ ಹಳಸಲು ಸುದ್ದಿ ಹಬ್ಬಿಸೋಕೆ ಕಾಯುತ್ತಾ ಇರುತ್ತಾರೆ. ಇಲ್ಲಿ ಆಗಿದ್ದೂ ಅದೇನೇ. ಸಿಕ್ಕ ಯಶಸ್ಸು ಅದೃಷ್ಟ ತಂದರೂ ಅದೇ ಯಶಸ್ಸು ಇಬ್ಬರನ್ನೂ ಬ್ಯುಸಿಯಾಗಿಸಿ ಹೀಗೊಂದು ಬ್ರೇಕಿಂಗ್ ಸುದ್ದಿ ಬಂದು ಉಳಿದವರು ಕಂಡಂತೆ ಮಾತಾಡಿಕೊಳ್ಳುವಂತಾಗಿದೆ.
Loading...

ಸಹಜವಾಗಿ ರಕ್ಷಿತ್ ಪ್ರಚಾರದಿಂದ ದೂರ ಇರುವ ವ್ಯಕ್ತಿ. ಒಂಥರಾ ಮೀಡಿಯಾ ಫ್ರೆಂಡ್ಲಿ ಅಲ್ಲ ಅಂತಲೇ ಕರೆಸಿಕೊಂಡಿದ್ದವರು ಈ ಘಟನೆಯಿಂದ ಮತ್ತಷ್ಟು ಅಂತರ ಕಾಯ್ದುಕೊಂಡರು. ಇದು ಹಸಿದ ಸುದ್ದಿರಸಿಕರ ಬಾಯಿಗೆ ರಸದಾಳಿಂಬೆ ಕೊಟ್ಟಂತಾಯಿತು. ಬರೆದು ಬರೆದು ಹೇಳಿ ಹೇಳಿ ಬಾಯಿಚಪ್ಪರಿಸಿ ಎಂಜಾಯ್ ಮಾಡುತ್ತಿದ್ದವರಿಗೆ, ತಮ್ಮ ಕಲ್ಪನಾತಿರೇಖದ ಕಥೆಯಿಂದ ಒಂದು ಕುಟುಂಬವೇ ಹಾಳಾಗುತ್ತೆ ಅನ್ನೋದು ಅರಿವಾಗಲಿಲ್ಲವೇನೋ? ಈಗ ಅರ್ಧಕ್ಕರ್ಧ ಹಾಳಾಗಿ ಹೋಗಿದೆ.

ಸಿಂಪಲ್ಲಾಗಿ ಸಾಗಿದ್ದ ಲವ್‍ಸ್ಟೋರಿಯಲ್ಲಿ ಕಿರಿಕ್‍ ಪಾರ್ಟಿಗಳೇ ಇರಲ್ಲ ಅಂದುಕೊಂಡವರಿಗೆ ಅದೆಲ್ಲಿಂದಲೋ ಕಿರಿಕ್‍ಪಾರ್ಟಿಗಳು ಬಂದು ವಕ್ಕರಿಸಿದ್ದಾರೆ. ಯಾರು ಅಂತ ಈಗ ಹುಡುಕೋಕೆ ಹೋದರೆ, ಉಳಿದವರು ಕಂಡಂತೆ ಸಿನಿಮಾ ನೆನಪಾಗುತ್ತೆ. ಅವರವರ ದೃಷ್ಟಿಕೋನದಲ್ಲಿ ಅವರವರು ಸರಿ ಅನಿಸುತ್ತಾರೆ ಹೌದಲ್ವಾ.?

ಕೊನೆಗೊಂದು ಮಾತು ವೈಯಕ್ತಿಕ ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ ಕಿಚ್ಚ ಸುದೀಪ್ ಸ್ಯಾಂಡಲ್‍ವುಡ್‍ನಲ್ಲಿ ಜೀವಂತ ಉದಾಹರಣೆ ಕಣ್ಣ ಮುಂದಿದ್ದಾರೆ. ರಕ್ಷಿತ್ ಅವರನ್ನು ಹಿಂಬಾಲಿಸೋದು ಒಳ್ಳೆಯದು ಅನ್ನೋದು ನಮ್ಮ ಸಲಹೆ. ನವಜೋಡಿಗಳು ಸದಾ ನಗುನಗುತ್ತಾ ಜೊತೆಗೇ ಇರಲಿ. ಗಣೇಶ ಹಬ್ಬ ಹತ್ತಿರ ಬರುತ್ತಿರೋ ಈ ದಿನಗಳಲ್ಲಿ ವಿಘ್ನವಿನಾಶಕ, ಎಲ್ಲ ವಿಘ್ನಗಳನ್ನೂ ನಿವಾರಿಸಲಿ ಅನ್ನೋದು ನಮ್ಮ ಆಶಯ.

 

 
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...