ಮೈಸೂರಿನಲ್ಲಿ (Mysuru) ಅದ್ಧೂರಿಯಾಗಿ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಲೋಕಾರ್ಪಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನ ಹಾಲಾಳು ಬಳಿ ಇರುವ ವಿಷ್ಣುವರ್ಧನ್ ಸ್ಮಾರಕವನ್ನು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟನೆ (Inauguration) ಮಾಡಿದ್ದಾರೆ. ಸಿಎಂ ಸ್ಮಾರಕ ಉದ್ಘಾಟನೆ ವೇಳೆ ಭಾರತಿ ವಿಷ್ಣುವರ್ಧನ್, ಅನಿರುದ್ದ್, ಕೀರ್ತಿ ವಿಷ್ಣುವರ್ಧನ್ ಅವರು ಉಪಸ್ಥಿತರಿದ್ದರು. ಸಂಸದ ಪ್ರತಾಪ್ ಸಿಂಹ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ಮಾರಕದಲ್ಲಿರುವ ವಿಷ್ಣು ಪೋಟೋ ಗ್ಯಾಲರಿ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ.
ಸಿಎಂ ಜೊತೆ ಸಂಸದ ಪ್ರತಾಪ್ ಸಿಂಹ, ಶಾಸಕ ಜಿಟಿ ದೇವೆಗೌಡ, ಮಾಜಿ ಸಚಿವ ರಾಮ್ ದಾಸ್ ಹಾಗೂ ವಿಷ್ಣು ಕುಟುಂಬಸ್ಥರು ವೇದಿಕೆ ಹಂಚಿಕೊಂಡಿದ್ದಾರೆ. ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿ ಬೇಡಿಕೆ
ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬೇಡಿಕೆ ಇಟ್ಟ ಅಭಿಮಾನಿಗಳು ಮಾನ್ಯ ಮುಖ್ಯಮಂತ್ರಿಗಳೇ ಡಾ.ವಿಷ್ಣುವರ್ಧನ್ ಕರ್ನಾಟಕ ರತ್ನ ಅಲ್ಲವೇ ಎಂಬ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದಾರೆ. ಭಿತ್ತಿ ಪತ್ರ ಹಿಡಿದುಕೊಂಡೇ ವಿಷ್ಣು ಅಭಿಮಾನಿಗಳು ಕಾರ್ಯಕ್ರಮ ವೀಕ್ಷಿಸಿದ್ದಾರೆ.
ಅನ್ನದಾನ ಸೇವೆಗೆ ಅವಕಾಶವಿಲ್ಲ
ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿಗಳು ಅನ್ನದಾನ ನಡೆಸಲು ಬಯಸಿದ್ದರು. ಆದರೆ ಇದಕ್ಕೆ ಅನುಮತಿ ಕೊಡದೆ ಪೊಲೀಸರು ತೊಂದರೆ ಕೊಡುತ್ತಿರುವುದಾಗಿ ಅಭಿಮಾನಿಗಳು ಆರೋಪಿಸಿದ್ದಾರೆ. ಮೈಸೂರು ಪೊಲೀಸರ ನಡೆಗೆ ಅಕ್ರೋಶ ವ್ಯಕ್ತ ಪಡಿಪಡಿಸ್ತಿರುವ ಫ್ಯಾನ್ಸ್ ಈ ಬಗ್ಗೆ ಬೇಸರಗೊಂಡಿದ್ದಾರೆ.
ವಿಷ್ಣುವರ್ಧನ್ ಬದುಕಿದ್ದಾಗ ಅವರಿಗೆ ತೊಂದರೆ ಕೊಟ್ಟರು. ಅದೇ ರೀತಿ ಈಗಲೂ ತೊಂದರೆ ಕೊಡುತ್ತಿದ್ದಾರೆ. ವಿಷ್ಣು ಸರ್ ಅವರ ಹೆಸರಲ್ಲಿ ಸೇವೆ ಮಾಡಲು ಬಂದಿದ್ದೆವು. ಆದರೆ ಪೊಲೀಸರು ಸಡನ್ನಾಗಿ ರಾತ್ರಿ 9 ಗಂಟೆಗ ಇಲ್ಲಿ ಅಡುಗೆ ಮಾಡಬೇಡಿ ಅಂದರು. ಪೊಲೀಸರ ಭಯಕ್ಕೆ ನಾವು ಕರೆದುಕೊಂಡು ಬಂದಿದ್ದ ಅಡುಗೆ ಭಟ್ಟರು ಕೂಡಾ ಓಡಿಹೋಗಿದ್ದಾರೆ ಎಂದಿದ್ದಾರೆ. ನಮ್ಮ ಮನೆ ದುಡ್ಡು ಹಾಕಿ ನಾವು ಅನ್ನದಾನ ಮಾಡುತ್ತೇವೆ ಎಂದರೂ ಅನುಮತಿ ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಸ್ಥಳದಲ್ಲಿ ಬಿಗಿ ಭದ್ರತೆ
ಸಾಹಸಿಂಹ ವಿಷ್ಣು ವರ್ಧನ್ ಸ್ಮಾರಕ ಲೋಕಾರ್ಪಣೆ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದ ವಿಷ್ಣು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಮುತ್ತ ಪೊಲೀಸರ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 550ಕ್ಕೂ ಹೆಚ್ಚು ಪೊಲೀಸರನ್ನು ಕಾರ್ಯಕ್ರಮಕ್ಕೆ ಭದ್ರತೆಗೆ ನಿಯೋಜಿಸಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಸಾವಿರಾರು ಅಭಿಮಾನಿಗಳು ಬೃಹತ್ ಮೆರವಣಿಗೆ ಮೂಲಕ ಪ್ರಯಾಣ ಬೆಳೆಸಿದರು. ಅಭಿಮಾನ್ ಸ್ಟೂಡಿಯೋದಲ್ಲಿ ವಿಷ್ಣು ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮೈಸೂರಿನತ್ತ ಸುಮಾರು ಒಂದು ಸಾವಿರಕ್ಕೂ ಅಧಿಕ ವಾಹನಗಳಲ್ಲಿ ಸಾವಿರಾರು ಡಾ. ವಿಷ್ಣು ಅಭಿಮಾನಿಗಳು ತೆರಳಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಾರಕ ಉದ್ಘಾಟನೆಯನ್ನು ರಾಜ್ಯ ಸರ್ಕಾರ ಕಾಟಚಾರಕ್ಕೆ ಮಾಡುತ್ತಿದೆ. ಬೇರೆ ಕಾರ್ಯಕ್ರಮಗಳಿಗೆ ರಾಜ್ಯದಾದ್ಯಂತ ಹೆಚ್ಚಿನ ಪ್ರಚಾರ ಮಾಡುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ. ಕೇವಲ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಮುಗಿಸಿ ಸುಮ್ಮನಾಗುತ್ತಿದ್ದಾರೆ. ಸರ್ಕಾರ, ಚಲನಚಿತ್ರ ಮಂಡಳಿ, ಕನ್ನಡ ನಟರು ಯಾರು ಕೂಡ ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ.
ರಾಜ್ಯ ಸರ್ಕಾರ ಇತರೆ ಕಾರ್ಯಕ್ರಮಗಳಿಗೆ ಖಾಸಗಿ ಜೆಟ್ ಮೂಲಕ ಬೇರೆ ಭಾಷೆಗಳ ನಟರನ್ನು ಕರೆತಂದು ಅದ್ದೂರಿ ಕಾರ್ಯಕ್ರಮ ಮಾಡುತ್ತಾರೆ. ವಿಷ್ಣುವರ್ಧನ್ ವಿಚಾರದಲ್ಲಿ ಮಾತ್ರ ಯಾಕಿಷ್ಟು ನಿರ್ಲಕ್ಷ್ಯ? 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರಿಗೆ ಈ ರೀತಿ ಮಾಡೋದು ಸರಿಯಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರದ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ