ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಕಡೆಗೂ ಸಿಹಿ ಸುದ್ದಿ ಸಿಕ್ಕಿದೆ. ಬಹಳ ವರ್ಷಗಳಿಂದ ವಿಷ್ಣು ಸ್ಮಾರಕ ನಿರ್ಮಾಣದ ವಿಷಯವಾಗಿ ಸಾಕಷ್ಟು ಹೋರಾಟ ನಡೆಸಲಾಗಿತ್ತು. ವಿಷ್ಣುವರ್ಧನ್ ಅವರ ಕುಟುಂಬದವರು ಸೇರಿದಂತೆ ಅಭಿಮಾನಿಗಳು ಸ್ಮಾರಕ ನಿರ್ಮಾಣದ ವಿಷಯವಾಗಿ ರಾಜ್ಯದ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಹ ಕಳೆದ ಡಿಸೆಂಬರ್ನಲ್ಲಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಸ್ಮಾರಕದ ನಿರ್ಮಾಣದ ವಿಷಯವಾಗಿ ಮನವಿ ಸಲ್ಲಿಸಿದ್ದರು. ಜೊತೆಗೆ ಅನಿರುದ್ಧ್ ಈ ಸಲ ಮತ್ತೆ ಏನಾದರೂ ಕಾರಣಗಳಿಂದ ಈ ಕೆಲಸಕ್ಕೆ ಮುಂದಕ್ಕೆ ಹೋದರೆ, ವಿಷ್ಣು ಅಭಿಮಾನಿಗಳು ಉಗ್ರ ಪ್ರತಿಭಟನೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು. ಆಗಲೇ ಯಡಿಯೂರಪ್ಪ ಅವರು ಸ್ಮಾರಕಕ್ಕೆ ಅಡಿಪಾಯ ಕಾರ್ಯ ಆರಂಭಿಸುವ ಕುರಿತು ಭರವಸೆ ನೀಡಿದ್ದರು. ಈಗ ವಿಷ್ಣು ಸ್ಮಾರಕ ಭೂಮಿ ಪೂಜೆಗೆ ದಿನಾಂಕ ನಿಗದಿಯಾಗಿದೆ.
ಹೌದು, ಭಾರತಿ ವಿಷ್ಣುವರ್ಧನ್ ಅವರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದರು. ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸೆಪ್ಟೆಂಬರ್ 15ಕ್ಕೆ ವಿಷ್ಣು ಸ್ಮಾರಕದ ಭೂಮಿ ಪೂಜೆ ನಡೆಯಲಿದೆ. ಆನ್ಲೈನ್ನಲ್ಲಿ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದ್ದಾರೆ.
ಸೆ.15ರಂದು ಬೆಳಿಗ್ಗೆ 10.30ಕ್ಕೆ ಮುಹೂರ್ತ ನಿಗದಿ ಮಾಡಿದ್ದು, ಕೋವಿಡ್ನಿಂದಾಗಿ ಮುಖ್ಯಮಂತ್ರಿಗಳು ಆನ್ಲೈನ್ನಲ್ಲಿ ಭೂಮಿ ಪೂಜೆಗೆ ಚಾಲನೆ ನೀಡಲಿದ್ದಾರೆ. ಅಂದಿನಿಂದಲೇ ಸ್ಮಾರಕದ ಕಟ್ಟಡದ ಕೆಲಸಗಳು ಸಹ ಆರಂಭವಾಗಲಿವೆಯಂತೆ. ಈಗಾಗಲೇ ಮೈಸೂರಿನಲ್ಲಿ ಭೂಮಿ ಪೂಜೆಗೆ ಸಿದ್ಧತೆಗಳು ಆರಂಭವಾಗಿವೆ. ಈ ವಿಷಯದಿಂದಾಗಿ ವಿಷ್ಣು ಅಭಿಮಾನಿಗಳು ಸಹ ಖುಷಿಯಲ್ಲಿದ್ದಾರೆ.
ವಿಷ್ಣುವರ್ಧನ್ ಅವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಬೇಕೆಂದು ಮೊದಲಿನಿಂದ ವಿಷ್ಣು ಕುಟುಂಬದವರ ಬೇಡಿಕೆ ಇತ್ತು. ಆದರೆ ಅದು ಆಗಲಿಲ್ಲ. ನಂತರ ಕಂಠೀರವ ಸ್ಟುಡಿಯೋದಲ್ಲಿ ಮಾಡುವಂತೆ ಅಭಿಮಾನಿಗಳು ಒತ್ತಡ ಹೇರಲಾರಂಭಿಸಿದರು. ಅದೂ ಆಗಲಿಲ್ಲ. ಇದೇ ಕಾರಣದಿಂದಾಗಿ ವಿಷ್ಣು ಸ್ಮಾರಕವನ್ನು ಮೈಸೂರಿನಲ್ಲಿ ಮಾಡಲಿ ನಿರ್ಧರಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ