news18-kannada Updated:September 5, 2020, 8:49 AM IST
ವೀರೇನ್ ಖನ್ನಾ
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು ಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಒಬ್ಬೊಬ್ಬರು ಅರೆಸ್ಟ್ ಕೂಡ ಆಗುತ್ತಿದ್ದಾರೆ. ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಈಗ ಮೂರು ದಿನ ಪೊಲೀಸರ ಕಸ್ಟಡಿಗೆ ಒಳಗಾಗಿದ್ದಾರೆ. ಇನ್ನು, ಡ್ರಗ್ ವಿಚಾರಕ್ಕೆ ಸಂಬಂಧೀಸಿ ನಿನ್ನೆಯಷ್ಟೇ ವಿರೇನ್ ಖನ್ನಾ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಈತ ರೇವ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದವರಲ್ಲಿ ಪ್ರಮುಖ ಎನ್ನಲಾಗಿದೆ. ಈ ಮಧ್ಯೆ ಈತನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಕ್ ಇರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಈತ ಆಯೋಜನೆ ಮಾಡುತ್ತಿದ್ದ ದೊಡ್ಡ ಮಟ್ಟದ ಪಾರ್ಟಿಗಳಲ್ಲಿ ಸ್ಟಾರ್ಗಳು ಕೂಡ ಬರುತ್ತಿದ್ದರು ಎನ್ನುವ ಮಾತು ಕೇಳಿ ಬಂದಿದೆ.
ವಿರೇನ್ ಖನ್ನಾ ಬೆಂಗಳೂರು, ದೆಹಲಿ, ಮುಂಬೈ, ಗೋವಾ ಮೊದಲಾದ ಕಡೆಗಳಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಈತ ಈ ಪಾರ್ಟಿಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಕೂಡ ಹಾಕಿಕೊಂಡಿದ್ದಾನೆ. ಇನ್ನು, ರೇವ್ ಪಾರ್ಟಿ ವೇಳೆ ಈತನೇ ಡ್ರಗ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಶಾಕಿಂಗ್ ವಿಚಾರ ಎಂದರೆ, ಈತ ಅಂತರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ.
ದೆಹಲಿಯಲ್ಲಿ ಬಂಧನವಾದ ವ್ಯಕ್ತಿ ಬಳಿ ದೊಡ್ಡ ದೊಡ್ಡ ವ್ಯಕ್ತಿಗಳ ಜಾತಕವೇ ಇದೆ ಎನ್ನಲಾಗುತ್ತಿದೆ. ದೊಡ್ಡ ದೊಡ್ಡ ಪಾರ್ಟಿಗಳ ಮುಖಾಂತರ ಸ್ಟಾರ್ಗಳು ನಶೆ ಹತ್ತಿಸಿಕೊಳ್ಳುತ್ತಿದ್ದರಂತೆ. ಸ್ಟಾರ್ ನಟ-ನಟಿಯರು ಅಷ್ಟೇ ಅಲ್ಲದೆ ದೊಡ್ಡ ರಾಜಕಾರಣಿಗಳ ಮಕ್ಕಳು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು. ಹೀಗೆ ಪಾಲ್ಗೊಂಡವರ ಪ್ರಭಾವಿ ವ್ಯಕ್ತಿಗಳ ಮಕ್ಕಳ ಮಾಹಿತಿಯನ್ನು ತೆಗೆಯೋಕೆ ಸಿಸಿಬಿ ಮುಂದಾಗಿದೆ.
Published by:
Rajesh Duggumane
First published:
September 5, 2020, 8:49 AM IST