ತ್ರಿವಿಕ್ರಮ, ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣವನ್ನ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.
ಅಂದಹಾಗೆ, ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಚಿತ್ರದ ಒಂದು ಹಾಡು ರಿಲೀಸಾಗಿದೆ. ‘ಮಮ್ಮಿ ಪ್ಲೀಸ್ ಮಮ್ಮಿ’ ಎಂಬ ಈ ಹಾಡು A2 music ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ. ಮಗ ತಾಯಿ ಬಳಿ ತನ್ನ ಪ್ರೀತಿಯನ್ನ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಹಾಡಿಗೆ ಚಿತ್ರರಸಿಕರು ಫಿದಾ ಆಗಿದ್ದಾರೆ. ಯೂಟ್ಯೂಬ್ ನಲ್ಲಿ ಪದೇ ಪದೆ ನೋಡುತ್ತಿದ್ದಾರೆ. ಪರಿಣಾಮ ಮೂರು ದಿನಗಳಲ್ಲೇ 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ವೀವ್ಸ್ ಪಡೆದಿದೆ.
ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಮಮ್ಮಿ ಮಮ್ಮಿ ಹಾಡನ್ನು ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಸಖತ್ ಆಗಿ ಮೂಡಿ ಬಂದಿದೆ ಈ ಹಾಡು.
ಗೌರಿ ಎಂಟರ್ ಟೈನರ್ ಲಾಂಛನದಲ್ಲಿ ಸೋಮಣ್ಣ ರಾಮ್ಕೊ ಅವರು ನಿರ್ಮಿಸುತ್ತಿರುವ ತ್ರಿವ್ರಿಕಮ ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸಹನಾ ಮೂರ್ತಿ ಅವರದ್ದೇ.
ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ತ್ರಿವಿಕ್ರಮ ಚಿತ್ರಕ್ಕಿದೆ.
ವಿಕ್ರಮ್ ರವಿಚಂದ್ರನ್ ಅವರಿಗೆ ನಾಯಕಿಯಾಗಿ ಅಕಾಂಕ್ಷ ಶರ್ಮ ನಟಿಸುತ್ತಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಡು ಹಾಗೂ ಟ್ರೇಲರ್ ಮೂಲಕ ಸಾಕಷ್ಟು ಟ್ರೆಂಡ್ ಹುಟ್ಟುಹಾಕಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ