ಮತ್ತೊಮ್ಮೆ ಸರ್ಕಾರದ ಕಾಲೆಳೆಯಲಿದೆಯಾ ವಿಜಯ್ 'ಸರ್ಕಾರ್'

news18
Updated:July 26, 2018, 10:58 PM IST
ಮತ್ತೊಮ್ಮೆ ಸರ್ಕಾರದ ಕಾಲೆಳೆಯಲಿದೆಯಾ ವಿಜಯ್ 'ಸರ್ಕಾರ್'
news18
Updated: July 26, 2018, 10:58 PM IST
-ನ್ಯೂಸ್ 18 ಕನ್ನಡ

ಕಾಲಿವುಡ್ ನಟ ವಿಜಯ್ ಅಭಿನಯದ ಮೆರ್ಸಲ್​ ಚಿತ್ರ ವಿವಾದದ ನಡುವೆಯು ಸೂಪರ್ ಡೂಪರ್ ಹಿಟ್ ಆಗಿತ್ತು. ಕೇಂದ್ರ ಸರ್ಕಾರದ ಕೆಲ​ ನೀತಿಗಳನ್ನು ಬೆಳ್ಳಿಪರದೆಯಲ್ಲಿ ಇಳಯ ದಳಪತಿ ವಿಜಯ್ ಜಾಡಿಸಿದ್ದರು. ಜಿಎಸ್​ಟಿ ಬಗ್ಗೆ ಪ್ರಶ್ನಿಸುವ ಮತ್ತು ಡಿಜಿಟಲ್ ಇಂಡಿಯಾದ ಕಲ್ಪನೆಯಿಂದ ಖಾಲಿ ಕೈಯಲ್ಲಿ ತಿರುಗಾಡುತ್ತಿರುವುದನ್ನು ಹಾಸ್ಯದ ಮೂಲಕ ಮೆರ್ಸಲ್​ನಲ್ಲಿ ತೋರಿಸಲಾಗಿತ್ತು. ಈ ಚಿತ್ರದ ಮೂಲಕ ಕೇಂದ್ರ ಸರ್ಕಾರದ ನೀತಿಗಳನ್ನು ಅವಹೇಳನ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ಕೆಲ ನಾಯಕರು ತಗಾದೆ ಕೂಡ ತೆಗೆದಿದ್ದರು. ವಿವಾದದ ಕಿಚ್ಚು ಹೆಚ್ಚಾದಂತೆ ಸಿನಿಮಾಗೆ ಬಿಟ್ಟಿ ಪ್ರಚಾರ ಸಿಕ್ಕಿತ್ತು.​

'ಮೆರ್ಸಲ್' ಬಳಿಕ ವಿಜಯ್ ಅಭಿನಯಿಸುತ್ತಿರು ಹೊಸ ಚಿತ್ರಕ್ಕೆ 'ಸರ್ಕಾರ್' ಎಂಬ ಟೈಟಲ್ ಘೋಷಿಸಿದಾಗಲೇ ಈ ಚಿತ್ರದಲ್ಲೂ ಏನೋ ಇರಲಿದೆ ಎಂಬ ಮಾತು ಕೇಳಿ ಬಂದಿತ್ತು. ಅದರಲ್ಲೂ 'ಕತ್ತಿ' ಎಂಬ ಸಾಮಾಜಿಕ ಕಳಕಳಿಯ ಸಿನಿಮಾ ಬಳಿಕ ವಿಜಯ್ ಮತ್ತು ನಿರ್ದೇಶಕ ಮುರುಗದಾಸ್ 'ಸರ್ಕಾರ್'​ನಲ್ಲಿ ಒಂದಾಗಿದ್ದರು. ಇದು ಕೂಡ ಚಿತ್ರದ ಮೇಲೆ ನಿರೀಕ್ಷೆ ಇಮ್ಮಡಿಯಾಗುವಂತೆ ಮಾಡಿದೆ.

'ಸರ್ಕಾರ್' ತಂಡಕ್ಕೆ ಇದೀಗ 'ಮೆರ್ಸಲ್​'ನ ಗೀತರಚನೆಕಾರ/ಸಂಭಾಷಣೆಗಾರ ವಿವೇಕ್ ಎಂಟ್ರಿಯಾಗಿದ್ದಾರೆ. 'ಅಲಪೊರಾನ್ ತಮಿಳನ್' ಎಂಬ ಗೀತೆ ಸಾಹಿತ್ಯದೊಂದಿಗೆ ತಮಿಳರನ್ನು ಬಡಿದೆಬ್ಬಿಸಿದ್ದ ವಿವೇಕ್ 'ಸರ್ಕಾರ್'​ ಚಿತ್ರತಂಡದಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ. ಮುರುಗದಾಸ್ ತಂಡಕ್ಕೆ ವಿವೇಕ್ ಎಂಟ್ರಿಯಾಗುತ್ತಿದ್ದಂತೆ ಮೆರ್ಸಲ್​ನ ಡೈಲಾಗ್ ಸರಮಾಲೆಗಳು ಸರ್ಕಾರ್​ನಲ್ಲೂ ಮುಂದುವರೆಯಲಿದೆ ಎನ್ನಲಾಗುತ್ತಿದೆ.

'ಕತ್ತಿ' ಚಿತ್ರದಲ್ಲಿ ರೈತರ ಬವಣೆಗೆ ಕಾರಣವಾಗುತ್ತಿರುವ ಮಲ್ಟಿನೇಷನಲ್​ ಕಂಪನಿಗಳ ಒಳಸುಳಿವು ನೀಡಿದ್ದ ಮುರುಗದಾಸ್ 'ಸರ್ಕಾರ್'​ನಲ್ಲೂ ಅಂತಹದ್ದೇ ಸಂದೇಶ ನೀಡಲಿದ್ದಾರೆಂಬ ಮಾತುಗಳು ಕಾಲಿವುಡ್​ನಲ್ಲಿ ಕೇಳಿ ಬರುತ್ತಿದೆ. ಈಗ ವಿವೇಕ್ ಕೂಡ 'ಸರ್ಕಾರ್​'ನ ದರ್ಬಾರ್​ನಲ್ಲಿ ಕಾಣಿಸಿಕೊಂಡಿರುವುದು ಊಹಾಪೋಹಗಳನ್ನು ಹೆಚ್ಚಿಸಿದೆ.

'ಮೆರ್ಸಲ್'​ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ನಾಯಕ ಕೇಂದ್ರ ಸರ್ಕಾರದ ಜಿಎಸ್‌ಟಿ ಕ್ರಮ ಪ್ರಶ್ನಿಸುವ ಸನ್ನಿವೇಶ ಸೃಷ್ಟಿಸಲಾಗಿತ್ತು. ಶೇ.28 ರಷ್ಟು ತೆರಿಗೆ ಸಂಗ್ರಹಿಸುವ ಸರ್ಕಾರ ಉಚಿತ ವೈದ್ಯಕೀಯ ನೀಡುತ್ತಿಲ್ಲ. ಆದರೆ ಶೇ.7ರಷ್ಟು ತೆರಿಗೆ ಸಂಗ್ರಹಿಸುತ್ತಿರುವ ಸಿಂಗಾಪುರದ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುತ್ತಿದೆ ಎಂದು ಡೈಲಾಗ್ ಅಣಿಮುತ್ತು ಉದುರಿಸಿ ವಿಜಯ್ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ಮುರುಗದಾಸ್ ಅವರ 'ಸರ್ಕಾರ್​'ನಲ್ಲಿ 'ಮೆರ್ಸಲ್' ತಂಡದಲ್ಲಿದ್ದವರು ಕಾರ್ಯ ನಿರ್ವಹಿಸುತ್ತಿರುವುದರಿಂದ ಮತ್ತೊಮ್ಮೆ ವಿಜಯ್ ಸರ್ಕಾರದ ಕಾಲೆಳೆಯಲಿದ್ದಾರೆ ಎನ್ನಲಾಗುತ್ತಿದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ