Vignesh Shivan: ಹೆಂಡತಿ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ವಿಘ್ನೇಶ್​ ಶಿವನ್, ಫೋಟೋ ತೆಗೆಯುವಾಗ ತಪ್ಪಾಗಿದೆ ಕ್ಷಮಿಸಿ ಎಂದ ನಿರ್ದೇಶಕ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ನಡೆ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಹೀಗಾಗಿ ನಯನತಾರಾಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಟಿಟಿಡಿ ಸಿವಿಎಸ್‌ಒ ನರಸಿಂಹ ಕಿಶೋರ್ ಹೇಳಿದ್ದರು.

ನಯನತಾರಾ ಮತ್ತು ವಿಘ್ನೇಶ್​ ಶಿವನ್

ನಯನತಾರಾ ಮತ್ತು ವಿಘ್ನೇಶ್​ ಶಿವನ್

  • Share this:
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara - Vignesh Shivan) ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರುವ ಈ ನವ ಜೋಡಿಗೆ ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಷಯಗಳು ಹರಿದುಬರುತ್ತಿವೆ. ಇದರ ನಡುವೆ ನಿನ್ನೆ ನವ ದಂಪತಿಗಳು ಆಂಧ್ರಪ್ರದೇಶದ (Andhra Pradesh) ತಿರುಮಲ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ, ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಆದರೆ ಈ ಸಮಯದಲ್ಲಿ ನಡೆದ ಒಂದು ಎಡವಟ್ಟು ನೆಟ್ಟಿಗರನ್ನು ಕೆರಳಿಸಿತ್ತು. ಆದರೆ ಆ ವಿವಾದಕ್ಕೆ ವಿಘ್ನೇಶ್​ ಶಿವನ್ ಅಂತ್ಯ ಹಾಡಿದ್ದು, ನಯನತಾರಾ ಪರವಾಗಿ ಕ್ಷಮೆ ಕೇಳಿದ್ದಾರೆ.

ಅರಿವಿಲ್ಲದೇ ತಪ್ಪಾಗಿದೆ ಕ್ಷಮಿಸಿ ಎಂದ ವಿಘ್ನೇಶ್​ 

ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗಿದ್ದ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣವನ್ನು ಪ್ರವೇಶ ಮಾಡಿದ್ದರು. ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಆದರೆ ನಯನತಾರಾ ಚಪ್ಪಲಿ ಧರಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಮಾತ್ರ ಚಪ್ಪಲಿ ಧರಿಸಿದ್ದರು ಎಂದು ಅಲ್ಲಿದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಈಗ ವಿಘ್ನೇಶ್​ ಶಿವನ್ ಅರಿವಿಗೆ ಬಾರದೇ ಈ ತಪ್ಪು ಆಗಿದೆ ಎಂದಿದ್ದಾರೆ.

ತಿರುಮಲದ ಮೇಲೆ ತಮ್ಮಲ್ಲಿ ಅಪಾರ ಭಕ್ತಿ ಮತ್ತು ನಂಬಿಕೆ ಇದೆ. ಮದುವೆಯ ನಂತರ ಸ್ವಾಮಿಯ ಆಶೀರ್ವಾದಕ್ಕಾಗಿ ಮಂಟಪದಿಂದ ಇಲ್ಲಿಗೆ ಬಂದಿದ್ದೆವು. ದೇವಸ್ಥಾನದ ಹೊರಗೆ ಭಕ್ತಾದಿಗಳ ದಂಡೇ ನೆರೆದಿದ್ದರಿಂದ ಎರಡನೇ ಬಾರಿಗೆ ಫೋಟೋ ತೆಗೆಯಲು ಬಂದಿದ್ದೆವು. ಈ ವೇಳೆ ಈ ಅಚಾತುರ್ಯ ಜರುಗಿದೆ. ತಪ್ಪಿಗಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಟ್ಟಿಮೇಳ ಅಮೂಲ್ಯಾ ಗ್ರ್ಯಾಂಡ್​ ಬರ್ತ್​ ಡೇ ಸಲೆಬ್ರೇಷನ್, ಬಜಾರಿ ಕ್ಯೂಟ್​ ಫೋಟೋಸ್ ನೀವೂ ನೋಡಿ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ನಡೆ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಹೀಗಾಗಿ ನಯನತಾರಾಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಟಿಟಿಡಿ ಸಿವಿಎಸ್‌ಒ ನರಸಿಂಹ ಕಿಶೋರ್ ಹೇಳಿದ್ದರು. ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಟಿಟಿಡಿ ಸಿವಿಎಸ್ ಒ ಕಿಶೋರ್, ‘ನಯನತಾರಾ ದಂಪತಿ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಹಾಕಿಕೊಂಡು ನಡೆದಾಡಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಲ್ಲಿ ಫೋಟೋಶೂಟ್ ಮಾಡಿರುವುದು ಸಹ ವಿಡಿಯೋಗಳ ಮೂಲಕ ಸ್ಪಷ್ಟವಾಗುತ್ತಿದೆ.

ಇದು ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿದೆ. ನಯನತಾರಾ ದಂಪತಿ ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ‘ ಎಂದು ಹೇಳಿದ್ದರು. ಟಿಟಿಡಿ ನಿಯಮಗಳ ಪ್ರಕಾರ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಬಾರದು ಎಂಬ ನಿಯಮವಿದೆ. ಇದನ್ನು ಮೀರಿದ್ದರಿಂದ ನಯನತಾರಾಗೆ ನೋಟಿಸ್ ನೀಡಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿತ್ತು. ಈಗಾಗಲೇ ನಯನತಾರಾ ಚಪ್ಪಲಿ ಧರಿಸಿ ಫೋಟೋ ಶೂಟ್ ಮಾಡುವುದರ ಬಗ್ಗೆ ನಯನತಾರಾ ಅವರನ್ನು ಪ್ರಶ್ನಿಸಲಾಗಿದೆ ಎಂದು ನರಸಿಂಹ ಕಿಶೋರ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಮತ್ತೆ ನಿರೂಪಣೆಯತ್ತ ಮುಖ ಮಾಡಿದ ಶ್ವೇತಾ ಚೆಂಗಪ್ಪ, ಜೋಡಿ ನಂಬರ್ ಒನ್ ರಿಯಾಲಿಟಿ ಶೋ ಸಾರಥಿಯಾದ ಕಾದಂಬರಿ

ನೋಟಿಸ್​ ಜಾರಿ ಮಾಡಿದ್ದ ಟಿಟಿಡಿ 

ನೋಟಿಸ್ ಜಾರಿ ಮಾಡಿದ ನಂತರ ಅವರ ಉತ್ತರ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಏನೋ ತಪ್ಪಾಗಿದೆ ಎಂದು ನಯನತಾರಾ ನಮ್ಮ ಮುಂದೆ ಒಪ್ಪಿಕೊಂಡಿದ್ದಾರೆ. ಸಾಮಾನ್ಯ ಭಕ್ತರಿಗೆ ವಿಐಪಿಗಳೇ ಆದರ್ಶವಾಗಬೇಕು. ನಿಯಮಗಳನ್ನು ಪಾಲಿಸಿ ಭಕ್ತರ ಭಾವನೆಗಳನ್ನು ಕಾಪಾಡುವ ಜವಾಬ್ದಾರಿ ಅವರ ಮೇಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ತಿರುಮಲ ಬೆಟ್ಟದ ಪಾವಿತ್ರ್ಯತೆಯ ದೃಷ್ಟಿಯಿಂದ ಎಲ್ಲಾ ಭಕ್ತರು ಟಿಟಿಡಿ ವಿಧಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದ್ದರು.
Published by:Sandhya M
First published: