HOME » NEWS » Entertainment » URI MOVIE REVIEW ACTOR VICKY KAUSHALS PERFORMANCE PACKS A PUNCH IN SURGICAL STRIKE STORY

Uri Movie Review: ದ್ವೇಷ, ದೇಶಾಭಿಮಾನದ ಕಥೆ ಹೇಳುವ ‘ಉರಿ’

ಈ ಚಿತ್ರದಲ್ಲಿ ವಿಕ್ಕಿ ಕೌಶಲ್​ ನಾಯಕ. ಮೇಜರ್​ ವಿಹಾನ್​ ಸಿಂಗ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ನಟಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರವೇ ಅವರಾಗಿದ್ದಾರೆ ಎಂಬುದು ಹೆಚ್ಚು ಸೂಕ್ತ.

Rajesh Duggumane | news18
Updated:January 11, 2019, 11:30 AM IST
Uri Movie Review: ದ್ವೇಷ, ದೇಶಾಭಿಮಾನದ ಕಥೆ ಹೇಳುವ ‘ಉರಿ’
ಉರಿ
  • News18
  • Last Updated: January 11, 2019, 11:30 AM IST
  • Share this:
ರಾಜೇಶ್ ದುಗ್ಗುಮನೆ

ಅರಣ್ಯದ ನಡುವೆ ಸಾಗುವ ಒಂಟಿ ಹಾದಿ. ಅಲ್ಲಿ ಭಾರತೀಯ ಸೇನಾ ವಾಹನ ಸಾಗುತ್ತಿರುತ್ತದೆ. ಬಸ್​ ಒಳಗೆ ಕೂತ ಸೈನಿಕರು ಹಾಡುತ್ತಾ ಖುಷಿಯಿಂದ ತೆರಳುತ್ತಿರುತ್ತಾರೆ. ನೋಡ ನೋಡುತ್ತಿದ್ದಂತೆ ಸೈನಿಕರ ಮೇಲೆ ಗುಂಡಿನ ದಾಳಿ ನಡೆಯುತ್ತದೆ. ಬಸ್​ ಸುಟ್ಟು ಬೂದಿಯಾಗುತ್ತದೆ. ಅನೇಕ ಸೈನಿಕರು ಹುತಾತ್ಮರಾಗುತ್ತಾರೆ. 2015 ಜೂನ್​ 4ರಂದು ಕಾಶ್ಮೀರದಲ್ಲಿ ಸೇನೆ ಮೇಲೆ ಉಗ್ರರು ನಡೆಸಿದ ಕೃತ್ಯದೊಂದಿಗೆ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾ’ ತೆರೆದುಕೊಳ್ಳುತ್ತದೆ.

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿತ್ತು. ವಿಪಕ್ಷಗಳು ಇದನ್ನು ಸುಳ್ಳು ಎಂದು ವಾದಿಸಿದ್ದವು. ಇದಕ್ಕೆ, ಉತ್ತರ ಎಂಬಂತೆ ‘ಉರಿ’ ಸಿನಿಮಾ ಮೂಡಿಬಂದಿದೆ.

2016ರ ಸೆಪ್ಟೆಂಬರ್​ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕ್​ನ ನಾಲ್ವರು ಭಯೋತ್ಪಾದಕರು ದಾಳಿ ಮಾಡುತ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಯೋಧರು ಸೆ.28-29ರಂದು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದನ್ನು ಇಂಚಿಂಚು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾನೆ ನಿರ್ದೇಶಕ.

ಇದನ್ನೂ ಓದಿ: Petta Movie Review: ಮೊದಲ ಗತ್ತಿನಲ್ಲಿ ಕಂಬ್ಯಾಕ್​ ಮಾಡಿದ 'ಸೂಪರ್​ ಸ್ಟಾರ್​' ರಜನಿ

ಈ ಚಿತ್ರದಲ್ಲಿ ವಿಕ್ಕಿ ಕೌಶಲ್​ ನಾಯಕ. ಮೇಜರ್​ ವಿಹಾನ್​ ಸಿಂಗ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ನಟಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರವೇ ಅವರಾಗಿದ್ದಾರೆ ಎಂಬುದು ಹೆಚ್ಚು ಸೂಕ್ತ. ಈ ಮೊದಲು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ‘ರಾಝಿ’ ಮತ್ತು ‘ಸಂಜು’ ಸಿನಿಮಾಗಳು ಅವರ ನಟನಾ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದವು. ಇದೀಗ ಅವರು ನಟನೆಯಲ್ಲಿ ಮತ್ತಷ್ಟು ಪ್ರಬುದ್ಧತೆ ಪಡೆದಿರುವುದು ‘ಉರಿ’ಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.

ತಾಯಿಯ ಆರೈಕೆಗೋಸ್ಕರ ಕಾಶ್ಮೀರದ ಗಡಿಯಿಂದ ದೆಹಲಿಗೆ ವರ್ಗಾವಣೆ ಪಡೆದುಕೊಳ್ಳುತ್ತಾನೆ ವಿಹಾನ್.​ ಈ ನಡುವೆ, ಮತ್ತೆ ಕಾಶ್ಮೀರದಿಂದ ಆತನಿಗೆ ಬುಲಾವು ಬರುತ್ತದೆ. ಭಾರತದ ಗಡಿಯಲ್ಲಿದ್ದ ಉರಿ ಸೇನಾನೆಲೆಯ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಪಾಕ್​ ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲು ನೇತೃತ್ವ ವಹಿಸಿದ ವಿಹಾನ್​ಗೆ ದೇಶ ಕಾಯುವ ಕರ್ತವ್ಯದ ಜೊತೆಗೆ ಆ ದಾಳಿಗೆ ಬಲಿಯಾದ ತನ್ನ ಕುಟುಂಬದ ಸಂತೋಷಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಒದಗಿಬರುತ್ತದೆ.ಇದನ್ನೂ ಓದಿ: 'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​

ಸಿನಿಮಾದಲ್ಲಿ ನಿಜವಾದ ಕಥೆ ಆರಂಭವಾಗವುದೇ ದ್ವಿತೀಯಾರ್ಧದಿಂದ. ಇಂಟರ್​ವಲ್​ ಆದ ನಂತರ ಬಹುತೇಕರು ಸೀಟಿನ ತುದಿಯಲ್ಲೇ ಕೂತು ಸಿನಿಮಾ ವೀಕ್ಷಿಸಿದರೂ ಆಶ್ಚರ್ಯವಿಲ್ಲ! ನಮ್ಮ ಸೈನಿಕರು ದೇಶಕ್ಕೋಸ್ಕರ ಯಾವ ರೀತಿ ಪ್ರಾಣ ತ್ಯಾಗ ಮಾಡುತ್ತಾರೆ, ಅವರ ಬಲಿದಾನ ಎಂಥದ್ದು ಎಂಬುದನ್ನು ಮನಗಾಣಬೇಕಾದರೆ ‘ಉರಿ’ಯನ್ನೊಮ್ಮೆ ನೋಡಬೇಕು. ಮಿತೇಶ್​ ಮಿರ್ಚಂದಾನಿ ಛಾಯಾಗ್ರಹಣ ತುಂಬ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಪ್ರತಿ ಪ್ರೇಮ್​ಅನ್ನು ಅಳೆದು ತೂಗಿ ಸೆರೆಹಿಡಿದಂತೆ ಕಾಣುತ್ತದೆ. ಯುದ್ಧ ಸನ್ನಿವೇಶದ ದೃಶ್ಯಗಳು ಪ್ರೇಕ್ಷಕನ ಮೈ ರೋಮಾಂಚನಗೊಳಿಸುತ್ತವೆ. ಆದರೆ, ಚಿತ್ರದಲ್ಲಿ ಕಿವಿಯಲ್ಲಿ ಗುನುಗುವ ಯಾವುದೇ ಹಾಡುಗಳಿಲ್ಲ. ಚಿತ್ರದ ಹಿನ್ನಲೆ ಸಂಗೀತ ಇನ್ನಷ್ಟು ಬಲಗೊಂಡಿದ್ದರೆ ಸಿನಿಮಾ ಇನ್ನೂ ಅಚ್ಚುಕಟ್ಟಾಗಿ ಮೂಡಿ ಬರುತ್ತಿತ್ತು.

ಇದನ್ನೂ ಓದಿ: 'ಸೂಪರ್​ ಸ್ಟಾರ್'​ ರಜನಿ ವೃತ್ತಿಜೀವನದ ಕ್ಲೈಮ್ಯಾಕ್ಸ್​​ನಲ್ಲಿ 'ಪೆಟ್ಟಾ' ನೀಡಲಿದೆಯಾ ಯಶಸ್ಸಿನ ಸಿಹಿ?

ಸರ್ಜಿಕಲ್​ ಸ್ಟ್ರೈಕ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​ ಅವರನ್ನು ಸೂಚ್ಯವಾಗಿ ತೋರಿಸಲಾಗಿದೆ. ಯಾಮಿ ಗೌತಮ್​, ಪರೇಶ್​ ರಾವಲ್​ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಭಯೋತ್ಪಾದನಾ ಕ್ರೌರ್ಯ, ತಂದೆಯಂತೆ ನಾನು ಕೂಡ ಸೇನೆ ಸೇರಬೇಕು ಎನ್ನುವ ಮಗಳ ಹಂಬಲ, ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೈರಿಗಳ ವಿರುದ್ಧ ಹೋರಾಡುವ ಸೈನಿಕರು, ದೇಶ-ಕುಟುಂಬ ಎರಡನ್ನೂ ಕಾಯಬೇಕು ಎನ್ನುವ ಹಂಬಲದಲ್ಲಿರುವ ಸೈನಿಕನ ಕಥೆ, ದ್ವೇಷ, ದೇಶಭಕ್ತಿಯನ್ನು 'ಉರಿ' ಚಿತ್ರದಲ್ಲಿ ಬಿಂಬಿಸಲಾಗಿದೆ. ನಿರ್ದೇಶಕ ಆದಿತ್ಯ ಧಾರ್​ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಅವರ ಶ್ರಮ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಈ ಚಿತ್ರದ ಮೂಲಕ ಭಾರತ ಚಿತ್ರರಂಗಕ್ಕೆ ಓರ್ವ ಭರವಸೆಯ ನಿರ್ದೇಶಕ ಸಿಕ್ಕಿದ್ದಾನೆ ಎಂದರೆ ತಪ್ಪಾಗಲಾರದು.

First published: January 11, 2019, 7:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories