ದಾಖಲೆಯೊಂದಿಗೆ ಪರಭಾಷೆಗೂ ರಿಮೇಕ್ ಆಗಿತ್ತು ಓಂ

Om Kannada Movie: ಚಾಕೊಲೇಟ್ ಹೀರೋ ಆಗಿ ಅದಾಗಲೇ ಯುವ ಸಮೂಹದ ಹೃದಯ ಗೆದ್ದಿದ್ದ ಶಿವಣ್ಣನನ್ನು ಉಪ್ಪಿ ವಿಭಿನ್ನ ರೀತಿಯಲ್ಲಿ ತೋರಿಸಿದರು. ಮೊದಲೇ ಒಂದೇ ರೀತಿ ಸಪ್ಪೆ ಚಿತ್ರಕಥೆಯಿಂದ ಬೆಸತ್ತಿದ್ದ ಕನ್ನಡ ಸಿನಿಪ್ರಿಯರಿಗೆ ಉಪ್ಪಿಯ ಕಥೆ ಹೊಸ ಅನುಭವ ನೀಡಿತು.

news18-kannada
Updated:May 19, 2020, 11:32 AM IST
ದಾಖಲೆಯೊಂದಿಗೆ ಪರಭಾಷೆಗೂ ರಿಮೇಕ್ ಆಗಿತ್ತು ಓಂ
Om
  • Share this:
ಅದು 1990...ಎಲ್ಲಾ ಚಿತ್ರರಂಗದಲ್ಲೂ ಹೊಸ ಅಲೆ ಶುರುವಾಗಿತ್ತು. ಆದರೆ ಇತ್ತ ಕನ್ನಡ ಚಿತ್ರರಂಗ ಈ ಹಿಂದಿನ ಟ್ರ್ಯಾಕ್​ನಲ್ಲೇ ಓಡುತ್ತಿತ್ತು. ಅತ್ತ ತೆಲುಗಿನಲ್ಲಿ ನಾಗಾರ್ಜುನ ಅಭಿನಯದ 'ಶಿವ' ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದರೆ, ತಮಿಳಿನಲ್ಲಿ 'ಬಾಂಬೆ' ಚಿತ್ರ ಎಲ್ಲರನ್ನು ಚಿಂತಿಸುವಂತೆ ಮಾಡಿತ್ತು.

ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರೂ ಸಹ ವಿಭಿನ್ನತೆಯನ್ನು ಬಯಸಿದ್ದ. ಅದಾಗಲೇ ‘ತರ್ಲೆ ನನ್ಮಗ’ ಮತ್ತು ‘ಶ್’ ಎಂಬ ಎರಡು ಸಿನಿಮಾ ಮಾಡಿ ಉಪೇಂದ್ರ ಕೂಡ ಗಾಂಧಿನಗರದಲ್ಲಿ ಸದ್ದು ಮಾಡಿದ್ದರು. ಹೀಗಾಗಿಯೇ ಮೂರನೇ ಸಿನಿಮಾ ಯಾವುದೆಂಬ ಕುತೂಹಲ ಸಿನಿಮಾವಲಯದಲ್ಲಿತ್ತು. ಅದಕ್ಕೆ ಸರಿಯಾಗಿ 'ಸತ್ಯ' ಎಂಬ ಟೈಟಲ್ ಕುಮಾರ್ ಗೋವಿಂದ್​ಗಾಗಿ ಫಿಕ್ಸ್ ಮಾಡಿದ್ದರು.

ಅದರಂತೆ ಕಥೆಯೊಂದನ್ನು ಸಿದ್ಧಪಡಿಸಿದ ಉಪ್ಪಿ ಸ್ಕ್ರಿಪ್ಟ್​​ನ್ನು ಕುಮಾರ್ ಗೋವಿಂದ್ ಅವರಿಗೆ ಹೇಳಿದ್ದರು. ಇನ್ನೇನು ಸಿನಿಮಾ ಸೆಟ್ಟೇರಲಿದೆ ಎನ್ನುವಾಗಲೇ ಗೋವಿಂದ್ ಹಾಗೂ ಉಪ್ಪಿ ನಡುವೆ ಸಣ್ಣದೊಂದು ತಕರಾರು ನಡೆದಿತ್ತಂತೆ. ಹೀಗಾಗಿ ಉಪೇಂದ್ರ ಬೇರೆ ದಾರಿಯ ಹುಡುಕಾಟದಲ್ಲಿದ್ದರು. ಅದಾಗಲೇ ಉಪ್ಪಿಯ ಡೈರೆಕ್ಷನ್ ಕರಾಮತ್ತನ್ನು ಗಮನಿಸಿದ ಹೊನ್ನವಳ್ಳಿ ಕೃಷ್ಣ ಹಾಗೂ ಗೌರಿಶಂಕರ್ ಯುವ ನಿರ್ದೇಶಕನನ್ನು ದೊಡ್ಮನೆಯತ್ತ ಕರೆದುಕೊಂಡು ಬಂದರು.

ಕಥೆ ಕೇಳಿದ ಅಣ್ಣಾವ್ರು ಹಾಗೂ ವರದರಾಜ್ ಗ್ರೀನ್ ಸಿಗ್ನಲ್ ನೀಡಿದರು. ಹಾಗೆಯೇ ಸ್ಕ್ರಿಪ್ಟ್​ನ ಮೊದಲ ಪುಟದ​ ಮೇಲೆ ಡಾ.ರಾಜ್​ ಕುಮಾರ್​ ಓಂ ಎಂದು ಪೂಜಾ ನಾಮ ಬರೆದಿದ್ದರು. ಇದನ್ನು ನೋಡಿದ ಉಪ್ಪಿಗೆ ಮತ್ತೊಂದು ಐಡಿಯಾ ಹೊಳೆಯಿತು. ಇದನ್ನೇ ಯಾಕೆ ಟೈಟಲ್ ಮಾಡಬಾರದೆಂದು. ಅಲ್ಲಿಂದ ಶುರುವಾಯಿತು ಸಿಂಗಲ್ ಲೆಟರ್ ಟೈಟಲ್ ಟ್ರೆಂಡ್.

ಚಾಕೊಲೇಟ್ ಹೀರೋ ಆಗಿ ಅದಾಗಲೇ ಯುವ ಸಮೂಹದ ಹೃದಯ ಗೆದ್ದಿದ್ದ ಶಿವಣ್ಣನನ್ನು ಉಪ್ಪಿ ವಿಭಿನ್ನ ರೀತಿಯಲ್ಲಿ ತೋರಿಸಿದರು. ಮೊದಲೇ ಒಂದೇ ರೀತಿ ಸಪ್ಪೆ ಚಿತ್ರಕಥೆಯಿಂದ ಬೆಸತ್ತಿದ್ದ ಕನ್ನಡ ಸಿನಿಪ್ರಿಯರಿಗೆ ಉಪ್ಪಿಯ ಕಥೆ ಹೊಸ ಅನುಭವ ನೀಡಿತು. ಆಗಷ್ಟೇ ಅಂಡರ್​ವರ್ಲ್ಡ್​ ಬಗ್ಗೆ ಗಾಸಿಪ್​ಗಳು ಸಿಕ್ಕಾಪಟ್ಟೆ ಹರಿದಾಡುತ್ತಿದ್ದರಿಂದ ಭೂಗತ ಜಗತ್ತಿನ ರೌಡಿಗಳನ್ನು ರಿಯಲ್ ಸ್ಟಾರ್ ಸಿನಿಮಾದಲ್ಲಿ ತೋರಿಸಿದರು. ಶಿವಣ್ಣ-ಪ್ರೇಮ ಅಭಿನಯ, ಹಂಸಲೇಖಾ ಸಂಗೀತ, ಥ್ರಿಲ್ಲರ್ ಮಂಜು ಸಾಹಸ...ಹೀಗೆ ಒಂದಕ್ಕಿಂತ ಒಂದು ಡಿಫೆರೆಂಟ್ ಆಗಿತ್ತು. ಆ ಬಳಿಕ ಓಂ ಬರೆದಿದ್ದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ.

ಕನ್ನಡ ಬಾಕ್ಸಾಫೀಸ್​ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದ್ದಂತೆ ಅತ್ತ ಟಾಲಿವುಡ್​ನಿಂದಲೂ ಓಂ ಚಿತ್ರಕ್ಕಾಗಿ ನಿರ್ಮಾಪಕರು ಮುಂದೆ ಬಂದರು. 1997 ರಲ್ಲಿ ಉಪೇಂದ್ರ ಅವರೇ ಓಂಕಾರಂ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಈ ಚಿತ್ರದಲ್ಲಿ ಸತ್ಯ ಪಾತ್ರದಲ್ಲಿ ರಾಜಶೇಖರ್ ಅವರು ನಟಿಸಿದ್ದರು. ಹಾಗೆಯೇ ಮಾಧುರಿಯಾಗಿ ಕೊಡಗಿನ ಬೆಡಗಿ ಪ್ರೇಮ. ಅಲ್ಲೂ ಕೂಡ ದಾಖಲೆಯ ಪ್ರದರ್ಶನ ಕಂಡಿತ್ತು.

ಸೌತ್ ಸಿನಿರಂಗದಲ್ಲಿ ಓಂ ಚಿತ್ರದ ಮೇಲಿನ ಕ್ರೇಜ್ ನೋಡಿದ ಬಾಲಿವುಡ್ ನಿರ್ಮಾಪಕರು ರಿಮೇಕ್ ಮಾಡಲು ಆಸಕ್ತಿವಹಿಸಿದರು. ಅದರಂತೆ 1999 ರಲ್ಲಿ ಅರ್ಜುನ್ ಪಂಡಿತ್ ಎಂಬ ಹೆಸರಿನಲ್ಲಿ ಹಿಂದಿಗೂ ಕನ್ನಡ ಚಿತ್ರ ರಿಮೇಕಾಯಿತು. ಇಲ್ಲಿ ಶಿವಣ್ಣ ಮಾಡಿದ ಪಾತ್ರವನ್ನು ಅಲ್ಲಿ ಸನ್ನಿ ಡಿಯೋಲ್ ಮಾಡಿದ್ದರು. ಹಾಗೆಯೇ ಪ್ರೇಮ ನಿರ್ವಹಿಸಿದ ರೋಲ್​ನಲ್ಲಿ ಜೂಹಿ ಚಾವ್ಲಾ ಕಾಣಿಸಿಕೊಂಡಿದ್ದರು.ಹೀಗೆ ಉಪೇಂದ್ರ ಅವರು ತಮ್ಮ 3ನೇ ಚಿತ್ರದ ಮೂಲಕ ಎಲ್ಲೆಡೆ ಹೊಸ ಕ್ರೇಜ್ ಹುಟ್ಟುಹಾಕಿದ್ದರು. ಇಂದಿಗೆ ಓಂ ಬಿಡುಗಡೆಯಾಗಿ 25 ವರ್ಷ ಪೂರೈಸುತ್ತಿದೆ. ಅನೇಕ ದಾಖಲೆಗಳ ಮೂಲಕ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಓಂ ಅಚ್ಚ ಹಸಿರಾಗಿ ಉಳಿದಿದೆ. ಅದರಲ್ಲೂ ಭಾರತೀಯ ಚಿತ್ರರಂಗದಲ್ಲಿ 632 ಬಾರಿ ರಿ ರಿಲೀಸ್ ಆಗುವ ಮೂಲಕ ಸಾರ್ವಕಾಲೀಕ ದಾಖಲೆಯೊಂದನ್ನು ಓಂ ಬರೆದಿಟ್ಟಿದೆ.
First published: May 19, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading