ವಿವಾದಗಳು ಸಿನಿಮಾ (Movie) ಆಗಿದ್ದು ಹೊಸದೇನು ಅಲ್ಲ, ರಾಜಕಾರಣಿಗಳು ಹಾಗೂ ಅನೇಕ ಅಧಿಕಾರಿಗಳ ಬಗ್ಗೆ ಅನೇಕ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಇದೀಗ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟ ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರೆ. ಸಿನಿಮಾ ಮಾಡುವ ಉದ್ದೇಶದಿಂದ ನಿರ್ಮಾಪಕರು ಟೈಟಲ್ ರಿಜಿಸ್ಟರ್ಗಾಗಿ ಫಿಲಂ ಚೇಂಬರ್ಗೆ (Film Chamber) ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷರೇ ಮಾಹಿತಿ ನೀಡಿದ್ದಾರೆ.
ಟೈಟಲ್ ರಿಜಿಸ್ಟರ್ಗಾಗಿ ಅರ್ಜಿ
ಈ ಹಿಂದೆ ‘ಐದು ಅಡಿ ಏಳು ಅಂಗುಲ’, ‘ಕೋಡಂಗಿ’ ಸಿನಿಮಾಗಳನ್ನು ನಿರ್ಮಿಸಿರುವ ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹಾಗೂ ಪ್ರವೀಣ್ ಶೆಟ್ಟಿ ಎಂಬ ನಿರ್ಮಾಪಕರು ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟ ಸಿನಿಮಾ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಜೊತೆಗೆ ಎರಡು ಪ್ರತ್ಯೇಕ ಟೈಟಲ್ ನೀಡುವಂತೆ ಕೋರಿದ್ದಾರೆ.
R v/s R ಫೈಟ್ ಸಿನಿಮಾ ಆಗುತ್ತಾ?
ರಾಜ್ಯದಲ್ಲಿ ಕಳೆದ 4-5 ದಿನಗಳಿಂದ ಐಎಎಸ್-ಐಪಿಎಸ್ ಕಿತ್ತಾಟ, ಆರೋಪ-ಪ್ರತ್ಯಾರೋಪಗಳು ಭಾರೀ ಸುದ್ದಿ ಆಗಿದೆ. ಈ ವಿವಾದವನ್ನೇ ಇಟ್ಟುಕೊಂಡು ಪ್ರವೀಣ್ ಶೆಟ್ಟಿ ಎಂಬುವರು ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ. R v/s R ಎಂಬ ಮತ್ತೊಂದು ಟೈಟಲ್ಗಾಗಿಯೂ ಅರ್ಜಿ ಬಂದಿದ್ದು ಈ ಸಿನಿಮಾವನ್ನು ನಿತ್ಯಾನಂದ ಪ್ರಭು ಎಸ್ ಎಂಬುವರು ನಿರ್ದೇಶನ ಮಾಡಲಿದ್ದಾರೆ. ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ.
ಅಧಿಕಾರ, ಪ್ರೀತಿ, ಆತ್ಮಹತ್ಯೆ, ಸತ್ಯಕತೆ ಆಧರಿತ ಸಿನಿಮಾ
ಭ್ರಷ್ಟಾಚಾರ, ರಾಜಕೀಯ, ಪ್ರೀತಿ-ಪ್ರೇಮ, ಮೋಸದಾಟ, ಆತ್ಮಹತ್ಯೆಯ ಅಂಶವನ್ನು ಈ ಕಥೆ ಒಳಗೊಂಡಿರಲಿದೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಈ ಸತ್ಯಕತೆಯನ್ನು ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ತಾವು ಕೋರಿರುವ ಟೈಟಲ್ ಅನ್ನು ನೀಡುವಂತೆ ಫಿಲಂ ಚೇಂಬರ್ಗೆ ಮನವಿ ಮಾಡಿದ್ದಾರೆ.
ಅಧ್ಯಕ್ಷ ಬಾಮಾ ಹರೀಶ್ ಸ್ಪಷ್ಟನೆ
ಇನ್ನು ನಿರ್ಮಾಪಕರು ಟೈಟಲ್ ರಿಜಿಸ್ಟರ್ಗೆ ಅರ್ಜಿ ಹಾಕಿರುವ ವಿಚಾರವನ್ನು ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್, ಈಗಷ್ಟೇ ಸಿನಿಮಾ ಟೈಟಲ್ಗಾಗಿ ಅರ್ಜಿಗಳು ಬಂದಿವೆ. ಬಂದಿರುವ ಎರಡೂ ಅರ್ಜಿಗಳನ್ನು ಸೋಮವಾರ ಟೈಟಲ್ ಕಮಿಟಿಯ ಮುಂದಿಡುತ್ತೇವೆ. ಸಮಿತಿ ಅನುಮತಿ ನೀಡಿದರೆ ಟೈಟಲ್ ನೀಡುತ್ತೇವೆ.
ಇದನ್ನೂ ಓದಿ: Nawazuddin Siddiqui: ಬಾಲಿವುಡ್ ನಟನ ವಿರುದ್ಧ ರೇಪ್ ಕೇಸ್ ದಾಖಲು; ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಆಲಿಯಾ ಕಣ್ಣೀರು!
ನಿರಪೇಕ್ಷಣಾ ಪತ್ರ ಪಡೆಯಬೇಕಿದೆ
ಯಾವುದೇ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಮಾಡುವುದಾದರೆ ಅವರಿಂದ ನಿರಪೇಕ್ಷಣಾ ಪತ್ರ (NOC) ಪಡೆಯಬೇಕಾಗುತ್ತದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್, ರಾಜ್ಯದಲ್ಲಿ ನಡೆಯುತ್ತಿರುವ ಇಬ್ಬರು ಅಧಿಕಾರಗಳ ಕಿತ್ತಾಟ ಸಿನಿಮಾ ಆಗಿದ್ದಲ್ಲಿ ಇಬ್ಬರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕಿದೆ.
ನೈಜ ಘಟನೆ ಆಧರಿತ ಸಿನಿಮಾ
ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕ ನಿತ್ಯಾನಂದ ಪ್ರಭು ಮಾತನಾಡಿದ್ದು, ನೈಜ ಘಟನೆ ಆಧರಿತ ಸಿನಿಮಾ ಮಾಡಲು, ಆರ್ vs ಆರ್ ಟೈಟಲ್ ನೀಡುವಂತೆ ಅರ್ಜಿ ಹಾಕಲಾಗಿದೆ. ಆದರೆ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಸಹ ಇರುತ್ತದೆ. ಫಿಲಂ ಚೇಂಬರ್ ಟೈಟಲ್ ಕೊಟ್ಟ ನಂತರ ಕಥೆ ಸಾರಾಂಶವನ್ನ ಫಿಲಂ ಚೇಂಬರ್ಗೆ ನೀಡುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ