ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಬಣ್ಣದ ಲೋಕದಲ್ಲೂ ಚಟುವಟಿಕೆಗಳು ಆರಂಭವಾಗಿವೆ. ಆಯಾ ಚಿತ್ರತಂಡಗಳು ಶೂಟಿಂಗ್ ಆರಂಭಿಸಿದ್ದು, ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿವೆ. ಸ್ಯಾಂಡಲ್ವುಡ್ ಸಹ ಇದಕ್ಕೆ ಹೊರತಾಗಿಲ್ಲ. ಕೊರೋನಾ ಭೀತಿಯ ನಡುವೆಯೇ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗುತ್ತಿದೆ. ಸುಮಾರು 7 ತಿಂಗಳ ಕಾಲ ಸಿನಿಮಾ ಚಿತ್ರೀಕರಣವಿಲ್ಲದೆ ಮನೆಯಲ್ಲೇ ಲಾಕ್ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ಗಣೇಶ್, ಸದ್ಯ ಅವರ ಬಹು ನಿರೀಕ್ಷಿತ ಸಿನಿಮಾ ತ್ರಿಬಲ್ ರೈಡಿಂಗ್ ಸೆಟ್ಟೇರಿದೆ. ಅದರ ಚಿತ್ರೀಕರಣದಲ್ಲಿ ಗೋಲ್ಡನ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಗಣೇಶ್ ಎಲ್ಲೇ ಇದ್ದರೂ ಸಹ ಫಿಟ್ನೆಸ್ ಬಗ್ಗೆಯೂ ಗಮನವಹಿಸುತ್ತಾರೆ. ಸಿನಿಮಾ ಚಿತ್ರೀಕರಣದ ಸಮಯದಲ್ಲೂ ಬೆಳಿಗ್ಗೆ ಬೇಗ ಎದ್ದು ಸೈಕಲ್ ತುಳಿಯೋಕೆ ಹೋಗುತ್ತಾರೆ.
ತ್ರಿಬಲ್ ರೈಡಿಂಗ್ ಸಿನಿಮಾದ ಶೂಟಿಂಗ್ನಲ್ಲಿರುವ ಗಣೇಶ್ಗೆ ಇದ್ದಕ್ಕಿದ್ದಂತೆಯೇ ರವಿಚಂದ್ರನ್ ಅವರ ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು ಹಾಡು ನೆನಪಾಗಿದೆ. ಅದೂ ಹೇಗೆ ಅಂತೀರಾ..? ಗಣೇಶ್ ಚಿಕ್ಕಮಗಳೂರಿನ ಕೆಳಬಾವಿಯಲ್ಲಿ ತ್ರಿಬಲ್ ರೈಡಿಂಗ್ ಶೂಟಿಂಗ್ ನಡೆಯುತ್ತಿದೆ. ಅಲ್ಲೇ ಇರುವ ಗಣಿ ಬೆಳಿಗ್ಗೆ ಸೈಕ್ಲಿಂಗ್ ಹೋಗಿದ್ದು, ಅವರಿಗೆ ಈ ಹಾಡಿನ ಚಿತ್ರೀಕರಣ ನಡೆದ ಸ್ಥಳ ಸಿಕ್ಕಿದೆ. ಅದನ್ನು ನೋಡಿದ ಕೂಡಲೇ ಗಣೇಶ್ಗೆ ಈ ಹಾಡು ನೆನಪಾಗಿದೆ.
ಮದರ್ ಮೇರಿ ಪ್ರತಿಮೆ ಬಳಿ ತಮ್ಮ ಸೈಕಲ್ ಜೊತೆ ಫೋಟೋ ತೆಗೆಸಿಕೊಂಡಿರುವ ಗಣೇಶ್, ಫೋಟೋ ಜೊತೆಗೆ ಈ ಹಾಡು ಹಾಗೂ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದಾರೆ ಗೋಲ್ಡನ್ ಸ್ಟಾರ್. ಇನ್ನು ಯುಗಪುರುಷ ಸಿನಿಮಾವನ್ನು ಚಿಕ್ಕಂದಿನಲ್ಲಿ ವಿಸಿಆರ್ನಲ್ಲಿ ನೋಡಿದ್ದ ನೆನಪನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ: ಭೂಮಿ ಮೇಲಿನ ಸ್ವರ್ಗದಲ್ಲಿ ನಡೆಯಲಿದೆ 777 ಚಾರ್ಲಿ ಚಿತ್ರೀಕರಣ..!
ಮಹೇಶ್ ಗೌಡ ಈ ತ್ರಿಬಲ್ ರೈಡಿಂಗ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾಶೆಟ್ಟಿ (ಅನು ಸಿರಿಮನೆ) ಗಣೇಶ್ ಅವರಿಗೆ ತ್ರಿಬಲ್ ರೈಡಿಂಗ್ನಲ್ಲಿ ನಾಯಕಿಯಾಗಿದ್ದಾರೆ.
ಈ ಹಿಂದೆ ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣ ಆರಂಭವಾದಾಗ ಭಾವುಕರಾಗಿ ಗಣೇಶ್ ತಮ್ಮ ಬದುಕಿನ ಭಾಗವಾಗಿರುವ ಕ್ಯಾಮೆರಾ ಬಗ್ಗೆ ಪೋಸ್ಟ್ ಮಾಡಿದ್ದರು. ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ. 6ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ಕ್ಯಾಮೆರಾ ಎಂದು ಗಣೇಶ್ ಸಿನಿಮಾ ಚಿತ್ರೀಕರಣ ಮತ್ತೆ ಆರಂಭಿಸಿರುವ ಕುರಿತು ಬರೆದುಕೊಂಡಿದ್ದರು.
ಗಣೇಶ್ ಅವರ ಕೈಯಲ್ಲಿ ಗಾಳಿಪಟ 2 ಹಾಗೂ ಸಖತ್ ಎಂಬ ಎರಡು ಸಿನಿಮಾಗಳಿವೆ. ಇವುಗಳ ಚಿತ್ರೀಕರಣ ಸದ್ಯಕ್ಕೆ ಆರಂಭವಾಗಿಲ್ಲ. ಇದರಿಂದಾಗಿಯೇ ಈಗ ತ್ರಿಬಲ್ ರೈಡಿಂಗ್ ಶೂಟಿಂಗ್ ಮುಗಿಸಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ