ನಾಳೆ ಸ್ಯಾಂಡಲ್‍ವುಡ್‍ನಲ್ಲಿ ಇಬ್ಬರಿಗೆ ಪರೀಕ್ಷೆ; ಕೃಷ್ಣ ಟಾಕೀಸ್‍ನಲ್ಲಿ ರಿವೈಂಡ್ ಮಾಡಿ ನೋಡಿದಾಗ...!

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಕೃಷ್ಣ ಟಾಕೀಸ್ ಚಿತ್ರದ ನಾಯಕ ಅಜೇಯ್ ರಾವ್, `ಥಿಯೇಟರ್‍ಗಳಲ್ಲಿ ಶೇಕಡಾ 50ರಷ್ಟು ಆಕುಪನ್ಸಿಗೆ ಅವಕಾಶ ನೀಡಿದ್ದಾರೆ. ಆದರೂ ಸಿನಿಮಾ ರಿಲೀಸ್ ಮಾಡಲು ಕಾರಣ ನಮ್ಮ ಸಿನಿಮಾ ಮೇಲಿನ ನಂಬಿಕೆ. ಕಥೆ ಆಗಿರಲಿ, ಮೇಕಿಂಗ್ ಆಗಿರಲಿ, ಸಿನಿಮಾದಲ್ಲಿರುವ ವಿಷಯ ತುಂಬಾ ಸ್ಟ್ರಾಂಗ್ ಇರುವ ಕಾರಣ ನಾವೂ ತುಂಬ ಕಾನ್ಫಿಡೆಂಟ್ ಆಗಿದ್ದೇವೆ ಎಂದರು.

ನಟ ಅಜೇಯ್ ರಾವ್​-ನಟ  ತೇಜ್

ನಟ ಅಜೇಯ್ ರಾವ್​-ನಟ ತೇಜ್

  • Share this:
ಕೊರೋನಾ ಮೊದಲ ಅಲೆಯ ಹೊಡೆತದಿಂದಲೇ ಇನ್ನೂ ಚೇತರಿಸಿಕೊಳ್ಳಲು ಪರದಾಡುತ್ತಿರುವಾಗ, ಈಗ ಎರಡನೇ ಅಲೆಯ ಆಟ ಶುರುವಾಗಿದೆ. ಕೊರೋನಾ ಕಟ್ಟಿಹಾಕಲೆಂದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಾನಾ ಬಗೆಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಅದರ ಒಂದು ಭಾಗವಾಗಿ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​​​ಗಳಲ್ಲಿ ಶೇಕಡಾ 50ರಷ್ಟು ಆಸನ ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ ಕೊರೊನಾ ನಡುವೆಯೇ ಬದುಕಬೇಕು ಅನ್ನೋದನ್ನು ಅರಿತಿರುವ ಸ್ಯಾಂಡಲ್‍ವುಡ್ ಮಂದಿ ಜಗ್ಗದೇ, ಕುಗ್ಗದೇ ಮುನ್ನುಗ್ಗಲು ಮನಸ್ಸು ಮಾಡಿವೆ. ಶೇಕಡಾ 50ರಷ್ಟು ಅನುಮತಿಯ ನಡುವೆಯೇ ಎರಡು ಚಿತ್ರಗಳು ನಾಳೆ ಅದೃಷ್ಟ ಪರೀಕ್ಷೆಗಿಳಿದಿವೆ.

ಹೌದು, ನಾಳೆ ಸ್ಯಾಂಡಲ್‍ವುಡ್ ಕೃಷ್ಣ ಅಜೇಯ್ ರಾವ್, ಅಪೂರ್ವ ನಟಿಸಿರುವ ವಿಜಯಾನಂದ್ ಆಕ್ಷನ್ ಕಟ್ ಹೇಳಿರುವ ಕೃಷ್ಣ ಟಾಕೀಸ್ ಹಾಗೂ ಮೀಸೆ ಚಿಗುರಿದಾಗ ಚಿತ್ರದ ಖ್ಯಾತಿಯ ತೇಜ್ ನಾಯಕನಾಗಿ ನಟಿಸಿ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ರಿವೈಂಡ್ ಚಿತ್ರಗಳು ತೆರೆಗೆ ಬರಲಿವೆ. ಹಲವು ಸಿನಿಮಾಗಳು ಥಿಯೇಟರ್​​ಗಳ ಮೇಲಿನ ನಿರ್ಬಂಧದಿಂದಾಗಿ ರಿಲೀಸ್ ಡೇಟ್‍ಅನ್ನು ಮುಂದೂಡಿವೆ. ಆದರೆ ಥಿಯೇಟರ್​​ಗಳಲ್ಲಿ ಶೇಕಡಾ 50ರಷ್ಟು ಅನುಮತಿಯಲ್ಲೇ ಮಂಸೋರೆ ನಿರ್ದೇಶನದ ಆಕ್ಟ್ 1978 ಚಿತ್ರ 50 ದಿನಗಳನ್ನು ಪೂರೈಸಿ ಗೆಲುವಿನ ನಗೆ ಬೀರಿದೆ. ಹೀಗಾಗಿಯೇ ಸಿನಿಮಾ ಮೇಲೆ ಭರವಸೆ ಇದ್ದಲ್ಲಿ ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬ ಆತ್ಮವಿಶ್ವಾಸದೊಂದಿಗೆ ನಾಳೆ ಥಿಯೇಟರ್​​ನತ್ತ ಹೆಜ್ಜೆ ಹಾಕುತ್ತಿವೆ ಕೃಷ್ಣ ಟಾಕೀಸ್ ಹಾಗೂ ರಿವೈಂಡ್ ಚಿತ್ರತಂಡಗಳು.

Tomorrow will be release Two sandalwood Films amid 50 per cent seating in Theaters.
ರಿವೈಂಡ್​-ಕೃಷ್ಣ ಟಾಕೀಸ್


ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಕೃಷ್ಣ ಟಾಕೀಸ್ ಚಿತ್ರದ ನಾಯಕ ಅಜೇಯ್ ರಾವ್, `ಥಿಯೇಟರ್‍ಗಳಲ್ಲಿ ಶೇಕಡಾ 50ರಷ್ಟು ಆಕುಪನ್ಸಿಗೆ ಅವಕಾಶ ನೀಡಿದ್ದಾರೆ. ಆದರೂ ಸಿನಿಮಾ ರಿಲೀಸ್ ಮಾಡಲು ಕಾರಣ ನಮ್ಮ ಸಿನಿಮಾ ಮೇಲಿನ ನಂಬಿಕೆ. ಕಥೆ ಆಗಿರಲಿ, ಮೇಕಿಂಗ್ ಆಗಿರಲಿ, ಸಿನಿಮಾದಲ್ಲಿರುವ ವಿಷಯ ತುಂಬಾ ಸ್ಟ್ರಾಂಗ್ ಇರುವ ಕಾರಣ ನಾವೂ ತುಂಬ ಕಾನ್ಫಿಡೆಂಟ್ ಆಗಿದ್ದೇವೆ. ನಮ್ಮ ದೈನಂದಿನ ಜೀವನ ನಡೆಯಲೇಬೇಕು. ಕೊರೋನಾ ಬಂದು ಕಳೆದ ವರ್ಷ ಸುಮ್ಮನೆ ಮನೆಯಲ್ಲೇ ಕುಳಿತಿದ್ದೆವು. ಈಗ ಮತ್ತೆ ಎಲ್ಲ ಚೇತರಿಸಿಕೊಂಡು ದುಡಿಮೆಯತ್ತ ಗಮನ ಹರಿಸಿದ್ದೇವೆ. ಅದೇ ರೀತಿ ಚಿತ್ರರಂಗ ಕೂಡ ಚೇತರಿಸಿಕೊಂಡಿದೆ. ಈಗ ಮತ್ತೆ ಥಿಯೇಟರ್‍ಗಳಲ್ಲಿ ಶೇಕಡಾ 50ರಷ್ಟು ಆಕುಪನ್ಸಿ ಮಾಡಿದ್ದಾರೆ ಅಂತ ನಾವು ಹೆದರಿಕೊಂಡು ಮನೆಯಲ್ಲಿ ಕೂರೋದಕ್ಕೆ ಆಗೋದಿಲ್ಲ' ಎನ್ನುತ್ತಾರೆ.

Maski By Election: ಚುನಾವಣಾ ಪ್ರಚಾರದಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ಹರಡುವ ಭೀತಿ

ಹಾಗೇ ಎಚ್ಚರಿಕೆ ವಹಿಸಲು, ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲೂ ಮನವಿ ಮಾಡಿಕೊಳ್ಳುತ್ತಾರೆ ಅಜೇಯ್ ರಾವ್. `ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕೋ ಅದನ್ನೆಲ್ಲಾ ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಅಥವಾ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬಂದರೆ ಏನೂ ಭಯ ಪಡುವಂತಿಲ್ಲ ಅಂತನ್ನಿಸುತ್ತೆ. ನಾವು ಮುಂದುವರೆಯಲೇಬೇಕು, ಭಯ ಪಡುವ ಅವಶ್ಯಕತೆಯಿಲ್ಲ. ಕೊರೋನಾ ಅನ್ನೋದು ಇರುತ್ತೆ, ಅದನ್ನು ಎದುರಿಸಲೇಬೇಕು, ನಮ್ಮ ಜೀವನವನ್ನು ಅದರ ನಡುವೆಯೇ ಮುನ್ನಡೆಸಬೇಕು. ಕೊರೋನಾವನ್ನ ಗೆಲ್ಲಬೇಕು, ಅದನ್ನು ಹೋಗಲಾಡಿಸಬೇಕು. ಸಿನಿಮಾದಲ್ಲಿ ಒಂದೊಳ್ಳೆ ಸಂದೇಶವೂ ಇದೆ, ಮನರಂಜನೆಯೂ ಇದೆ' ಎನ್ನುತ್ತಾರೆ ಸ್ಯಾಂಡಲ್‍ವುಡ್ ಕೃಷ್ಣ.

ಇನ್ನು ಮೀಸೆ ಚಿಗುರಿದಾಗ ಚಿತ್ರದಲ್ಲಿ ನಾಯಕನಾಗಿದ್ದ ತೇಜ್, ಈಗ ರಿವೈಂಡ್ ಸಿನಿಮಾ ಮೂಲಕ ಮತ್ತೆ ಕಮ್‍ಬ್ಯಾಕ್ ಮಾಡಿದ್ದಾರೆ. ಜೊತೆಗೆ ಚೊಚ್ಚಲ ಬಾರಿಗೆ ನಿರ್ದೇಶನವನ್ನೂ ಮಾಡಿದ್ದಾರೆ. `ಕೋವಿಡ್‍ನಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿರುವುದು ನಿಜ. ಅದರಿಂದ ಥಿಯೇಟರ್‍ಗಳಲ್ಲೂ ಶೇಕಡಾ 50ರಷ್ಟು ನಿರ್ಬಂಧ ಹೇರಲಾಗಿದೆ. ಆದರೆ ಥಿಯೇಟರ್‍ಗಳಲ್ಲಿ ಶೇಕಡಾ 100ರಷ್ಟು ಹೌಸ್‍ಫುಲ್‍ಗೆ ಅವಕಾಶವಿದ್ದಾಗ ಏಪ್ರಿಲ್ 16ರಂದು ನಿನ್ನ ಸನಿಹಕೆ, ಗೋವಿಂದ ಗೋವಿಂದ ಸೇರಿದಂತೆ 7 ಸಿನಿಮಾಗಳು ರಿಲೀಸ್ ಘೋಷಣೆ ಮಾಡಿದ್ದವು. ಆದರೆ ಈ ಶೇಕಡಾ 50ರಷ್ಟು ಆಕುಪನ್ಸಿಗೆ ಅವಕಾಶ ನೀಡಿದ ಬಳಿಕ ನಾಲ್ಕು ಸಿನಿಮಾಗಳು ರಿಲೀಸ್ ಅನ್ನು ಮುಂದೂಡಿದವು. 100 ಪರ್ಸೆಂಟ್ ಇದ್ದಾಗ 7 ಚಿತ್ರಗಳು, 50 ಪರ್ಸೆಂಟ್ ಆದಾಗ 2 ಚಿತ್ರಗಳು. ಹೀಗಾಗಿ ಈ ಶೇಕಡಾ 50ರಷ್ಟು ನಿರ್ಬಂಧ ಹೇರಿರುವುದು ನಮ್ಮ ಚಿತ್ರದ ಮೇಲೆ ಪರಿಣಾಮ ಬೀರುತ್ತೆ ಅಂತ ನನಗನ್ನಿಸುತ್ತಿಲ್ಲ. ಆದರೆ ಕೊರೋನಾದಿಂದಾಗಿ ಥಿಯೇಟರ್‍ಗಳಿಗೆ ಜನರೇ ಬಾರದಿದ್ದರೆ, ಅದರಿಂದ ನಮ್ಮ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತೆ. ಲಸಿಕೆ, ಶುಚಿತ್ವ, ಮಾಸ್ಕ್, ಪಾಸಿಟಿವ್ ಮೈಂಡ್‍ಸೆಟ್ ಇದ್ದು, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಒಳ್ಳೆ ಸಿನಿಮಾಗಳನ್ನು ನೋಡಿ ಮನಸ್ಸನ್ನು ಫ್ರೀಯಾಗಿಟ್ಟುಕೊಳ್ಳಿ. ಯುವರತ್ನದಂತೆಯೇ ರಿವೈಂಡ್ ಸಿನಿಮಾ ಕೂಡ ಒಳ್ಳೆ ಕಂಟೆಂಟ್ ಇರುವ ಚಿತ್ರ. ನೋಡಿ, ಬೆಂಬಲಿಸಿ' ಎಂದು ಮನವಿ ಮಾಡಿಕೊಳ್ಳುತ್ತಾರೆ ತೇಜ್.

ಒಟ್ಟಾರೆ ನಾಳೆ ಸ್ಯಾಂಡಲ್‍ವುಡ್‍ನಲ್ಲಿ ಕೃಷ್ಣ ಟಾಕೀಸ್ ಹಾಗೂ ರಿವೈಂಡ್ ಚಿತ್ರಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಫಲಿತಾಂಶವೂ ಕೆಲ ದಿನಗಳಲ್ಲೇ ಪ್ರೇಕ್ಷಕ ಮಹಾಪ್ರಭುಗಳೇ ಪ್ರಕಟಿಸಲಿದ್ದಾರೆ.
Published by:Latha CG
First published: