ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ (KGF Movie) ರಾಕಿ ಭಾಯ್ ಹಾಗೂ ಅಭಿಮಾನಿಗಳ ರಾಕಿಂಗ್ ಸ್ಟಾರ್ ಯಶ್ಗೆ (Rocking Star Yash) ಇಂದು ಹುಟ್ಟುಹಬ್ಬದ ಸಂಭ್ರಮ, ಯಶ್ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಯಶ್ ಫ್ಯಾಮಿಲಿ (Yash Family) ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ದುಬೈಗೆ (Dubai) ಹಾರಿದ್ದಾರೆ. ಈ ವರ್ಷ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಲ್ಲ ಎಂಬ ಸಂದೇಶವನ್ನು ಯಶ್ ಪತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ರು. ನೆಚ್ಚಿನ ನಟನ ಜನ್ಮದಿನ ಅಂದ್ರೆ ಸಾಕು ಅಭಿಮಾನಿಗಳಿಗೆ (Yash Fans) ಅದು ದೊಡ್ಡ ಹಬ್ಬವಾಗಿರುತ್ತದೆ. ಯಶ್ ರಾಜ್ಯದಲ್ಲಿ ಇಲ್ಲದಿದ್ರೂ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್!
2018 ಡಿಸೆಂಬರ್ ನಲ್ಲಿ ತೆರೆಕಂಡ ಯಶ್ ಚಿತ್ರ ಕೆಜಿಎಫ್ ಬಾಲಿವುಡ್, ಟಾಲಿವುಡ್ನಲ್ಲೂ ಕಮಾಲ್ ಮಾಡಿತು. ಬಾಲಿವುಡ್ ಮಂದಿ ಕೂಡ ಕನ್ನಡದ ರಾಕಿ ಭಾಯ್ಗೆ ಜೈ ಎಂದ್ರು. ರಿಲೀಸ್ ಆದ 5 ದಿನದಲ್ಲಿ ಕೆಜಿಎಫ್ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. ಸ್ಯಾಂಡಲ್ವುಡ್ ಮಾತ್ರವಲ್ಲ ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು.
ಪ್ಯಾನ್ ಇಂಡಿಯಾ ಸ್ಟಾರ್ ಯಶ್
ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿದೆ. 1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಇದೀಗ ಯಶ್ ಮುಂದಿನ ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.
ನಾಯಕ ಪಟ್ಟ ಕೊಟ್ಟ 'ಮೊಗ್ಗಿನ ಮನಸ್ಸು'
ಸೀರಿಯಲ್ ಗಳಲ್ಲಿ ಅಭಿನಯಿಸುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ್, 2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ರು, ಬಳಿಕ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಯಶ್ ಪೂರ್ಣ ಪ್ರಮಾಣದ ನಾಯಕ ನಟನಾದ್ರು. ಈ ಚಿತ್ರದ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್ ಅವರೇ ಯಶ್ ಮೊದಲ ಸಿನಿಮಾದ ನಾಯಕಿರಾಗಿದ್ರು.
ಬಿಗ್ ಬ್ರೇಕ್ ಕೊಟ್ಟ ಸಿನಿಮಾಗಳು
2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ರಾಕಿಂಗ್ ಸ್ಟಾರ್ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ನಂತರ ತೆರೆಗೆ ಬಂದ 'ಲಕ್ಕಿ', 'ಡ್ರಾಮಾ' ,'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು. 2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ನಿರ್ಮಿಸಿತು.
ಇದನ್ನೂ ಓದಿ: Yash: ಫ್ಯಾಮಿಲಿ ಜೊತೆ ದುಬೈಗೆ ಹಾರಿದ ರಾಕಿ ಭಾಯ್! ಮನೆ ಬಳಿ ಬಂದ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್!
ಒಂದಾದ್ರೂ ರಾಮಾಚಾರಿ-ಮಾರ್ಗರೇಟ್
ಸ್ಯಾಂಡಲ್ವುಡ್ನ ಸೂಪರ್ ಹಿಟ್ ಜೋಡಿ ರಾಧಿಕಾ ಪಂಡಿತ್, ಯಶ್ ಜೋಡಿ 2016 ಡಿಸೆಂಬರ್ 9 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಂತಸದ ಜೀವನ ನಡೆಸುತ್ತಿದ್ದ ಯಶ್-ರಾಧಿಕಾ ದಂಪತಿಯ ಸಂಭ್ರಮ ಹೆಚ್ಚಿಸಲು ಐರಾ ಆಗಮವಾಯಿತು. 2018 ಡಿಸೆಂಬರ್ 2 ರಂದು ರಾಧಿಕಾ ಪಂಡಿತ್ ಮುದ್ದು ಮಗಳು ಐರಾಗೆ ಜನ್ಮ ನೀಡಿದ್ರು. ಒಂದು ವರ್ಷದ ನಂತರ 2019 ರಲ್ಲಿ, ಮಗ ಯಥರ್ವ್ ಕೂಡ ಜನಿಸಿದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ