ಸಿನಿಮಾ ನೋಡಿ ಯುವಕರು (Youth) ಸಿನಿಮೀಯ ರೀತಿಯಲ್ಲಿ ತಮ್ಮನ್ನು ಬದಲಾಯಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಹಿಂದೆ ಅಣ್ಣಾವ್ರ “ಬಂಗಾರದ ಮನುಷ್ಯ” ಚಿತ್ರ ನೋಡಿ, ಪಟ್ಟಣ ಸೇರಿದ್ದ ಯುವಕರು, ಹಳ್ಳಿಗೆ ಹಿಂತಿರುಗಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ಅಳವಡಿಸಿಕೊಂಡಿದ್ದರು. ಅವತ್ತು ಅಣ್ಣಾವ್ರ ಚಿತ್ರ ಅಷ್ಟೊಂದು ಬದಲಾವಣೆ ಮಾಡಿತ್ತು. ಸಿನಿಮಾಗಳು ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಇದು ಹೊಸ ಕಾಲ. ಸಿನಿಮಾ (Movie) ಕಮರ್ಷಿಯಲ್ ಆಗಿದ್ರೇನೆ ಜನ ನೋಡ್ತಾರೆ. ಹಾಗಾಗಿ ಕೆಲವು ಸಿನಿಮಾಗಳು ಮತ್ತೊಂದು ರೀತಿಯಲ್ಲಿ ಯುವಕರ ಮೇಲೆ ಪ್ರಭಾವ ಬೀರಿತ್ತು. ಇದಕ್ಕೆ ತಾಜಾ ಉದಾಹರಣೆ ಅಂದರೆ ತಮಿಳಿನ ಪ್ರಖ್ಯಾತ ಚಿತ್ರ ತುನಿವು (Tunivu) .
ತಾಡಿಕೊಂಬು ರಸ್ತೆಯಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ (ಐಒಬಿ) ದರೋಡೆಗೆ ಯತ್ನಿಸಿದ 25 ವರ್ಷದ ವ್ಯಕ್ತಿಯನ್ನು ದಿಂಡಿಗಲ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಯುವಕನನ್ನು ಬೇಗಂಪುರ ಸಮೀಪದ ಪೂಚಿ ನಾಯಂಕನಪಟ್ಟಿಯ ಕಲೀಲ್ ರೆಹಮಾನ್ (25) ಎಂದು ಗುರುತಿಸಲಾಗಿದೆ.
ಯುವಕ ದರೋಡೆ ಮಾಡಿದ್ದು ಹೇಗೆ?
ನಿತ್ಯದಂತೆ ಮೂವರು ಉದ್ಯೋಗಿಗಳು ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಯುವಕ ಕಾರದ ಪುಡಿ, ಕಟಿಂಗ್ ಬ್ಲೇಡ್, ಚಾಕು ತೋರಿಸಿ ಬೆದರಿಸಿದ್ದಾನೆ. ನೌಕರರ ಮುಖಕ್ಕೆ ಕಾಳುಮೆಣಸಿನ ಸ್ಪ್ರೇ , ಮೆಣಸಿನಕಾಯಿ ಪುಡಿ ಎರಚಿ, ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿ ಹಣ ದರೋಡೆ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ಅಚಾತುರ್ಯದಿಂದ ಒಬ್ಬ ಉದ್ಯೋಗಿ ತಪ್ಪಿಸಿಕೊಂಡು ಬ್ಯಾಂಕ್ ಹೊರಗಡೆ ಓಡಿದ್ದಾರೆ. ಬ್ಯಾಂಕ್ ಆವರಣದ ಮುಂದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ . ಉದ್ಯೋಗಿ ಕೂಗಿ ಕೊಳ್ಳುತ್ತಿದ್ದಂತೆ ಬ್ಯಾಂಕ್ ಭದ್ರತಾ ಸಿಬ್ಬಂದಿ ಮತ್ತು ಸಾರ್ವಜನಿಕರು ಓಡಿ ಬಂದಿದ್ದಾರೆ. ಇವರೆಲ್ಲರೂ ಒಟ್ಟುಗೂಡಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದರೋಡೆಗೆ 'ತುನಿವು' ಚಿತ್ರವೇ ಸ್ಪೂರ್ತಿ ಎಂದ ಕಲೀಲ್
ಇನ್ನೂ ವಿಚಾರಣೆಯ ಸಂದರ್ಭದಲ್ಲಿ, ಕಲೀಲ್ ತನ್ನ ಜೀವನದ ಬಗ್ಗೆ ಹೇಳಿಕೊಂಡಿದ್ದಾನೆ. ತಾನು ದರೋಡೆ ಮಾಡಲು ಖ್ಯಾತ ತಮಿಳು ಚಿತ್ರನಟ ಅಜಿತ್ ಕುಮಾರ್ ಅವರ 'ತುನಿವು' ಚಿತ್ರವೇ ಸ್ಪೂರ್ತಿ ಎಂದು ಪೊಲೀಸರಿಗೆ ಹೇಳಿದ್ದಾನೆ. ಅಜಿತ್ ಆ ಚಿತ್ರದಲ್ಲಿ ಮಾಡಿದ ಪಾತ್ರದಂತೆ ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾಗಿ ತನಿಖೆಯಲ್ಲಿ ಕಲೀಲ್ ಬಾಯ್ಬಿಟ್ಟಿದ್ದಾನೆ. ವಿಚಾರಣೆ ಇನ್ನೂ ಮುಂದುವರಿದಿದೆ.
ಹಾಗೆ ನೋಡಿದರೆ, ಸಿನಿಮೀಯ ರೀತಿಯಲ್ಲಿ ದರೋಡೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ರೈಂ ನ್ಯೂಸ್ ನೋಡಿ ಅದೇ ತರ ಕೊಲೆ, ಕಳ್ಳತನ ಮಾಡಿದ ಪ್ರಕರಣಗಳು ಬಹಳಷ್ಟು ಇವೆ.
ಸಿನಿಮಾ ಪರದೆಯ ಮೇಲೆ ಮೂಡಿಬರುವ ಹೀರೋಗಳು ನಿಜ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಾರೆ. ಹೀರೋ ಆಕ್ಷನ್, ಹೀರೋ ಮಾತು, ಸ್ಟೈಲ್ ಎಲ್ಲವನ್ನ ಯುವಕರು ಅನುಕರಣೆ ಮಾಡ್ತಾರೆ. ಸಿನಿಮಾಗಳು ಹೆಚ್ಚು ಕಮರ್ಷಿಯಲ್ ಆಗ್ತಾ ಇರೋದರಿಂದ, ಮನೋರಂಜನೆಯ ದೃಷ್ಟಿಯಿಂದ ಇಂಥಾ ರಾಬರಿ ಸಿನಿಮಾಗಳು ಪರದೆಯ ಮೇಲೆ ಮೂಡುತ್ತಿವೆ.
ದೇಶದಲ್ಲಿ ಹೆಚ್ಚಿದ ದರೋಡೆ, ಕಳ್ಳತನ ಪ್ರಕರಣಗಳು
ನಮ್ಮ ದೇಶದಲ್ಲಿ ದರೋಡೆ, ಕಳ್ಳತನದ ಪ್ರಕರಣಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ನೇಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್ ಸಿ ಆರ್ ಬಿ) ಪ್ರಕಾರ, 2017 ರಲ್ಲಿ ಒಟ್ಟು 2,44,119 ದರೋಡೆ, ಕಳ್ಳತನ, ಸುಲಿಗೆ ಪ್ರಕರಣಗಳು ಜನವಾಸ ಸ್ಥಳಗಳಲ್ಲಿ ನಡೆದಿದೆ. ಒಂದು ಬೆಚ್ಚಿ ಬೀಳಿಸುವ ಸಂಗತಿ ಎಂದರೆ ವರ್ಷದಿಂದ ವರ್ಷಕ್ಕೆ ಇಂಥಾ ಪ್ರಕರಣಗಳು ಏರಿಕೆಯನ್ನು ಕಾಣುತ್ತಿವೆ.
2016 ಕ್ಕೆ ಹೋಲಿಸಿದರೆ, 10% ಪ್ರಕರಣಗಳು 2017 ರಲ್ಲಿ ಹೆಚ್ಚಾಗಿವೆ. 2,20,854 ಇಷ್ಟು ಪ್ರಕರಣಗಳು 2016 ರಲ್ಲಿ ದಾಖಲಾಗಿತ್ತು. 2017 ರಲ್ಲಿ ಜನವಸತಿ ಪ್ರದೇಶಗಳಲ್ಲಿ ಸುಮಾರು 2065 ಕೋಟಿ ಮೌಲ್ಯದ ದರೋಡೆ, ಕಳ್ಳತನ ನಡೆದರೆ, 2016 ರಲ್ಲಿ 1475 ಕೋಟಿ ಮೌಲ್ಯದ ದರೋಡೆ, ಲೂಟಿ, ಕಳ್ಳತನದ ಪ್ರಕರಣ ನಡೆದಿದೆ. ಅಂದರೆ ಒಂದು ವರ್ಷಕ್ಕೆ 40% ರಷ್ಟು ಮೌಲ್ಯದ ದರೋಡೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ