ನಟ ಕಿಚ್ಚ ಸುದೀಪ್ (Kichcha Sudeep) ಅವರು ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಂತೆ ಬೆದರಿಕೆ ಪತ್ರ ನಟನ ಮನೆ ಬಾಗಿಲಿಗೆ ಬಂತು. ಪೊಲೀಸರು (Police) ಇದೀಗ ಬೆದರಿಕೆ ಹಾಕಿದ ಕಿಡಿಗೇಡಿಗಳ ಬೆನ್ನು ಹತ್ತಿದ್ದಾರೆ. ತನಿಖೆ ಕೂಡ ಚುರುಕುಗೊಂಡಿದೆ. ದೊಮ್ಮಲೂರು ಅಂಚೆ ಕಚೇರಿಯಿಂದ (Dommalur Post Office) ಸುದೀಪ್ಗೆ ಪತ್ರ ರವಾನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್ಗೆ ಬೆದರಿಕೆ ಪತ್ರ (Threat Letter) ಹಾಕಿರುವುದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಆದರೆ ಈ ಕಾರಿನ ನಂಬರ್ ಪ್ಲೇಟ್ ನಕಲಿ ಎಂಬುದು ಕೂಡ ತಿಳಿದುಬಂದಿದೆ.
ಸ್ವಿಫ್ಟ್ ಕಾರಿನಲ್ಲಿ ಬಂದು ಬೆದರಿಕೆ ಪತ್ರ ಪೋಸ್ಟ್
ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಲು ಕಿಡಿಗೇಡಿಗಳು ಕೆಂಗೇರಿ ಬಳಿಯ ವ್ಯಕ್ತಿಯೊಬ್ಬರಿಗೆ ಸೇರಿರುವ ಸ್ವಿಫ್ಟ್ ಕಾರನ್ನು ಬಳಸಿದ್ದಾರೆ. ವಿಚಾರಣೆ ನಡೆಸಿದ ವೇಳೆ ಬೆದರಿಕೆ ಪತ್ರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಕಾರಿನ ಮಾಲೀಕ ಹೇಳಿದ್ದಾರೆ.
ನಂಬರ್ ಪ್ಲೇಟ್ ಬದಲಿಸಿ ಕೃತ್ಯ
ಪತ್ರ ಪೋಸ್ಟ್ ಮಾಡಲು ಬಂದ ಕಿಡಿಗೇಡಿಗಳು ನಂಬರ್ ಪ್ಲೇಟ್ ಬದಲಿಸಿದ್ದಾರೆ. ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ನಟ ಸುದೀಪ್ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಲೀಕ್ ಮಾಡುವುದಾಗಿ ಪತ್ರದಲ್ಲಿ ಬರೆದು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ.
ದೊಮ್ಮಲೂರಿನಿಂದ 2 ಬೆದರಿಕೆ ಪತ್ರಗಳು ಪೋಸ್ಟ್!
ಮಾರ್ಚ್ 10ರಂದು ಸುದೀಪ್ ಮನೆಗೆ ಮೊದಲ ಬೆದರಿಕೆ ಪತ್ರ ತಲುಪಿತ್ತು. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೂ ಇಂಟರ್ನಲ್ ಮಾಹಿತಿ ಕಲೆ ಹಾಕೋದಕ್ಕೆ ಯತ್ನಿಸಿದ್ದರು. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಗಂಭೀರವಾಗಿ ಪರಿಗಣಿಸಿ ದೂರು ನೀಡಲಾಗಿತ್ತು.
ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್. ಸುದೀಪ್ ಮನೆಗೆ ಬಂದ ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿತ್ತು. ಹೀಗಾಗಿ ಆ ಪತ್ರವನ್ನ ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.
ಸಾಕ್ಷಿ ಸಿಗಬಾರದು ಎಂದು ಸಿಸ್ಟಂ ಟೈಪಿಂಗ್ ಪತ್ರ
ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿ. ಕೈ ಬರಹ ಪತ್ರವನ್ನ ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನ ಪೋಸ್ಟ್ ಮಾಡಲಾಗಿದೆ.
ಈಗ ಸಿಸಿಬಿ ಲೆಟರ್ ಹಾಕಿದ ಪೋಸ್ಟ್ ಬಾಕ್ಸ್ ಬಳಿ ಇರೋ ಸಿಸಿ ಕ್ಯಾಮೆರಾಗಳನ್ನು ಜಾಲಾಡುತ್ತಿದ್ದಾರೆ. ಸಿಸಿಬಿಯ ಸೈಬರ್ ವಿಂಗ್ ಕೂಡ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನದಲ್ಲಿ ನಟ ಸುದೀಪ್ಗೂ ನೋಟಿಸ್ ನೀಡಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.
ಬೆದರಿಕೆ ಪತ್ರದ ಬಗ್ಗೆ ಸುದೀಪ್ ಹೇಳಿದ್ದೇನು?
ಬೆದರಿಕೆ ಪತ್ರದ ಬಗ್ಗೆ ಮಾತಾಡಿದ ನಟ ಸುದೀಪ್ ಅವರು ಏಪ್ರಿಲ್ 5 ರಂದು ಪ್ರತಿಕ್ರಿಯೆ ನೀಡಿದ್ದರು. ಬೆದರಿಕೆ ಪತ್ರ ಬರೆದಿರುವುದು ರಾಜಕೀಯದವರಲ್ಲ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದರು. ‘ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಯಾರು ಅಂತ ನನಗೆ ಚೆನ್ನಾಗಿಯೇ ಗೊತ್ತಿದೆ. ಈಗ ಸೈಲೆಂಟಾಗಿ ಇರುತ್ತೇನೆ. ಅದಕ್ಕೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು ಎಂದು ಸುದೀಪ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ