'ದಿ ವಿಲನ್​' ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ!

news18
Updated:July 9, 2018, 4:11 PM IST
'ದಿ ವಿಲನ್​' ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ!
ಶಿವರಾಜಕುಮಾರ್
news18
Updated: July 9, 2018, 4:11 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ತೆಲುಗು-ತಮಿಳು ಚಿತ್ರರಂಗದಂತೆ ಸ್ಟಾರ್ ವಾರ್ ಕನ್ನಡ ಚಿತ್ರರಂಗದಲ್ಲಿ ಇಲ್ಲವಾದರೂ, ಅಭಿಮಾನಿಗಳ ನಡುವಿನ ವಾರ್, ಯಾವ ಚಿತ್ರರಂಗಕ್ಕೇನು ಕಮ್ಮಿಯಿಲ್ಲ. ಕನ್ನಡ ಚಿತ್ರರಂಗದ ಬಾಸ್ ಯಾರು ಎಂಬಲ್ಲಿಂದ ಶುರುವಾದ ವಿವಾದ, ದಿನಕ್ಕೊಂದು ರೂಪ ಪಡೆದುಕೊಂಡು, ಹೊಸ ಹೊಸ ವಿಷಯಗಳನ್ನ ಸೇರಿಸಿಕೊಳ್ಳುತ್ತಾ ಹನುಮಂತನ ಬಾಲದಂತೆ ಬೆಳೆಯುತ್ತಾ ಇದೆ.

ಸದ್ಯ ಆನ್‍ಲೈನ್‍ನಲ್ಲಿ `ದಿ ವಿಲನ್' ಚಿತ್ರದ ವಿವಾದ ಜೋರಾಗಿದೆ. ಶಿವರಾಜ್ ಕುಮಾರ್ ಅಭಿಮಾನಿಗಳು `ದಿ ವಿಲನ್' ಬಹಿಷ್ಕರಿಸುವುದಾಗಿ  ಟ್ವಿಟರ್​, ಫೇಸ್​ಬುಕ್​ನಲ್ಲಿ ಅಬ್ಬರಿಸುತ್ತಾ ಇರೋದು ಹೊಸ ವಿಷಯವೇನಲ್ಲ.

'ದಿ ವಿಲನ್' ಚಿತ್ರತಂಡದಿಂದ ಶಿವರಾಜ್‍ಕುಮಾರ್​ ಅವರಿಗೆ ಸರಿಯಾದ ಗೌರವ ಸಿಕ್ಕುತ್ತಿಲ್ಲ, ಅವರನ್ನ ಪೋಸ್ಟರ್​ನಲ್ಲಿ ಸರಿಯಾಗಿ ಬಿಂಬಿಸಿಲ್ಲ. ಅವರಿಗೆ ಅಂತ ಚಿತ್ರಿಸಿರೋ ಟೀಸರ್​ನ್ಲಿ ಹೆಚ್ಚು ಕ್ರಿಯಾತ್ಮಕವಾಗಿ ಬಳಸಿಕೊಂಡಿಲ್ಲ ಅನ್ನೋದು ಅಭಿಮಾನಿಗಳ ಆರೋಪ. ಇದಕ್ಕೆ ಸ್ವತಃ ಪ್ರೇಮ್ ಅವರೇ ಪ್ರತಿಕ್ರಿಯಿಸಿ, 'ಅಂತದ್ದೇನು ಆಗಿಲ್ಲ, ಹಂಗೇನಾದರೂ ಆಗಿದ್ದರೆ ಶಿವಣ್ಣನೇ ಅಸಮಾಧಾನ ವ್ಯಕ್ತಪಡಿಸುತ್ತಾ ಇದ್ದರು. ಇಂತಹದೊಂದು ಚಿತ್ರದಲ್ಲಿ ಕೆಲಸ ಮಾಡಿರೋ ಬಗ್ಗೆ ಎಲ್ಲರೂ ಖುಷಿಯಿಂದಿದ್ದೇವೆ. ಅಭಿಮಾನಿಗಳು ಸಿನಿಮಾ ನೋಡಿ ಆಮೇಲೆ ಮಾತಾಡಲಿ, ಅದು ಬಿಟ್ಟು ಸುಮ್ಮನೆ ವಿವಾದ ಎಬ್ಬಿಸೋದು ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಉತ್ತಮವಲ್ಲ' ಎಂದಿದ್ದಾರೆ.

ಇದರ ಮುಂದುವರೆದ ಭಾಗವೆಂಬಂತೆ ಸ್ವತಃ ಶಿವಣ್ಣನೇ 'ವಿಲನ್' ವಿವಾದದ ಅಖಾಡಕ್ಕೆ ಧುಮುಕಿದ್ದಾರೆ. ಆನ್‍ಲೈನ್‍ನಲ್ಲಿ `ವಿಲನ್ ಬಹಿಷ್ಕಾರ' ಅಂತ ಅಭಿಯಾನ ಶುರು ಮಾಡಿದ್ದ ಅಭಿಮಾನಿಗಳನ್ನ ಮನೆಗೆ ಕರೆಸಿಕೊಂಡಿದ್ದಾರೆ. 'ದಿ ವಿಲನ್' ಬಗ್ಗೆ ಶುರು ಮಾಡಿರೋ ಅಭಿಯಾನವನ್ನ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದಾರೆ.

ಆನ್‍ಲೈನ್‍ನಲ್ಲಿ ಅಭಿಯಾನ ಶುರುಮಾಡಿದ್ದ ಶಿವರಾಜ್‍ಕುಮರ್ ಸಂಘ, ಶಿವು ಅಡ್ಡ ಟೀಮ್ ಇದನ್ನ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ಶಿವಣ್ಣನ ಮಾತಿಗೆ ಗೌರವ ಕೊಟ್ಟು ನಮ್ಮ ಅಭಿಯಾನ ಕೊನೆಗಾಣಿಸುತ್ತಿದ್ದೇವೆ. ಆಲ್‍ ದಿ ಬೆಸ್ಟ್ 'ದಿ ವಿಲನ್' ಅಂತ ಹೇಳಿಕೊಂಡಿದೆ.ಅಲ್ಲಿಗೆ ಈ ವಿವಾದ ಕೊನೆಯಾಯಿತು ಅಂತ ಕನ್ನಡ ಚಿತ್ರರಂಗ ಹಾಗೂ ಚಿತ್ರರಸಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ವಿಷಯಕ್ಕೆ ಕೊನೆಯಾದ ವಿವಾದ, ಇನ್ಯಾವ ವಿಷಯದೊಂದಿಗೆ ಶುರುವಾಗುತ್ತೋ ಅನ್ನೋ ಆತಂಕ ಸದಭಿರುಚಿಯ ಚಿತ್ರರಸಿಕಲ್ಲಿರೋದಂತೂ ಸುಳ್ಳಲ್ಲ.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ