'ದಿ ಐಸ್ ರೋಡ್'... ಶೀರ್ಷಿಕೆಯೇ ವಿವರಿಸುವಂತೆ ಮಂಜು ತುಂಬಿದ ರಸ್ತೆಯಲ್ಲಿ ನಡೆಯುವ ಸಾಹಸಮಯ ಕತೆಯಾಗಿದೆ. ಉತ್ತರ ಕೆನಡಾದಲ್ಲಿನ ವಜ್ರದ ಗಣಿ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವುದು ಸಿನಿಮಾದ ಒನ್ ಲೈನ್ ಸ್ಟೋರಿ. ಇದೇ ಕತೆಯ ಮುಖ್ಯಜೀವಾಳವಾಗಿದೆ. ಆದರೆ ಈ ಗಣಿಗಾರರನ್ನು ನಾಯಕ ಹೇಗೆ ರಕ್ಷಿಸುತ್ತಾನೆ ಎಂಬುದೇ ಕುತೂಹಲಕಾರಿಯಾಗಿದೆ. ಮಂಜುಗಡ್ಡೆಯಿಂದ ಮುಚ್ಚಿರುವ ರಸ್ತೆಯಲ್ಲಿ ಟ್ರಕ್ ಮೂಲಕ ಪ್ರಯಾಣಿಸಿ ಗಣಿಯಲ್ಲಿ ಸಿಲುಕಿರುವವರ ರಕ್ಷಣೆ ಮಾಡುವುದು ಸವಾಲಾಗಿತ್ತು. ಲಿಯಮ್ ನೀಸನ್ ಅವರು ತಮ್ಮ 'ದ ಐಸ್ ರೋಡ್' ಚಿತ್ರವನ್ನುಮೊದಲು ಪ್ರಕಟಿಸಿದಾಗ ಎಲ್ಲರೂ ಅಂದುಕೊಂಡಿದ್ದು, ಇದು ಫ್ರೆಂಚ್ ಥ್ರಿಲ್ಲರ್ ಆದ 'ದ ವೇಜಸ್ ಆಫ್ ಫಿಯರ್'ನ ರಿಮೇಕ್ ಎಂದು. ಜಾಂಥನ್ ಹೆನ್ಸಲರ್ಜಿ 'ದ ಐಸ್ ರೋಡ್' ಸಿನಿಮಾದ ಕಥೆಯನ್ನು ಬರೆದಿದ್ದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ಸ್ಪಷ್ಟವಾಗಿರುವ ಅಂಶವೇನೆಂದರೆ ಇದು 'ವೇಜಸ್ ಆಫ್ ಫಿಯರ್'ನ ರಿಮೇಕ್ ಅಲ್ಲ, ಇದು ಬೇರೆಯೇ ಕಥೆಯಾಗಿದೆ ಅನ್ನೋದು.
ಇದೊಂದು ರೋಮಾಂಚನಕಾರಿ, ಸಾಹಸಮಯ ಕತೆಯಾಗಿದ್ದು ಸಾಹಸಮಯ ದೃಶ್ಯಗಳನ್ನು ಸಿನಿಮಾದಲ್ಲಿ ಹೆಚ್ಚಾಗಿ ನೋಡಬಹುದಾಗಿದೆ. ಕೆನಡಾದ ವಜ್ರದ ಗಣಿಯಲ್ಲಿ ಮೀಥೇನ್ ಸ್ಫೋಟಗೊಂಡು ಒಳಗೆ ಕೆಲಸ ಮಾಡುತ್ತಿರುವ ಕಾರ್ಮಿಕರು ಸಿಲುಕಿಕೊಳ್ಳುತ್ತಾರೆ. ಅವರನ್ನು ರಕ್ಷಿಸಲು 30 ಟನ್‌ಗಳಷ್ಟು ಗ್ಯಾಸ್ ವೆಲ್‌ಹೆಡ್‌ನ ಅಗತ್ಯವಿರುತ್ತದೆ. ಇಷ್ಟು ದೊಡ್ಡ ವಸ್ತುವನ್ನು ಸುಲಭವಾಗಿ ಕೊಂಡೊಯ್ಯುವುದು ಪ್ರಯಾಸದ ಕೆಲಸವಾಗಿತ್ತು. ಅದೂ ಅಲ್ಲದೆ ದೊಡ್ಡ ವಿಮಾನಗಳನ್ನು ಈ ಸ್ಥಳಗಳಲ್ಲಿ ಲ್ಯಾಂಡ್ ಮಾಡುವುದು ಕಷ್ಟವಾಗಿತ್ತು. ಇನ್ನು ಹೆಲಿಕಾಪ್ಟರ್‌ಗಳು ಇಷ್ಟು ಭಾರವನ್ನು ಹೊತ್ತುಕೊಂಡು ಹಾರುವುದು ಅಸಾಧ್ಯದ ಮಾತಾಗಿತ್ತು.
ಹಾಗಿದ್ದರೆ ಇದನ್ನು ಕೊಂಡೊಯ್ಯಲು ಇರುವ ಒಂದು ಮಾರ್ಗವೆಂದರೆ ಟ್ರಕ್‌ಗಳ ಮೂಲಕ ಮತ್ತು ಈ ಟ್ರಕ್ ಐಸ್‌ನಿಂದ ತುಂಬಿರುವ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿರುತ್ತದೆ. ಹೆಚ್ಚು ಪರಿಣಿತ ಟ್ರಕ್ ಚಾಲಕನಿಂದ ಮಾತ್ರವೇ ಈ ಕೆಲಸ ಸಾಧ್ಯವಾಗಿತ್ತು. ಹೆಪ್ಪುಗಟ್ಟಿದ ಉತ್ತರ ಸರೋವರಗಳಿಂದ ರಚಿಸಲಾದ ಈ ರಸ್ತೆಗಳನ್ನು ಚಳಿಗಾಲದ ಸಮಯದಲ್ಲಿ ಮಂಜುಗಡ್ಡೆ ಸಾಕಷ್ಟು ಗಟ್ಟಿಯಾಗಿರುವಾಗ ಬಳಸಲಾಗುತ್ತದೆ. ಈಗ ಏಪ್ರಿಲ್‌ನ ಕೊನೆಯಾಗಿದ್ದು, ಎಲ್ಲ ಚಾಲಕರು ಹೊರಟು ಹೋಗಿರುತ್ತಾರೆ. ಆದರೆ ನಮ್ಮ ಕತೆಯ ನಾಯಕ ಈ ಕಾರ್ಮಿಕರನ್ನು ಹೊರತರುವ ಕೆಲಸಕ್ಕೆ ಕೈಹಾಕುತ್ತಾನೆ.
ಇದನ್ನೂ ಓದಿ: Bigg Boss 8: ದಿವ್ಯಾ ಸುರೇಶ್-ಪ್ರಿಯಾಂಕಾ ತಿಮ್ಮೇಶ್ರನ್ನು ಟಾರ್ಗೆಟ್ ಮಾಡಿದ ಚಕ್ರವರ್ತಿ ಚಂದ್ರಚೂಡ
ಮೂರು ಟ್ರಕ್‌ಗಳಲ್ಲಿ ಮೂರು ವೆಲ್‌ಹೆಡ್‌ಗಳನ್ನು ನಾಯಕ ಆತನ ಸ್ನೇಹಿತ ಹಾಗೂ ಟ್ರಕಿಂಗ್ ಕಂಪೆನಿಯ ಮಾಲೀಕ ಚಲಾಯಿಸುತ್ತಾರೆ. ಮೂರರಲ್ಲಿ ಒಂದಾದರೂ ಬಳಸಲ್ಪಡುತ್ತದೆ ಎಂಬುದು ನಾಯಕನ ಲೆಕ್ಕಾಚಾರವಾಗಿತ್ತು. ಏಕೆಂದರೆ ರಸ್ತೆಯಲ್ಲಿ ವೆಲ್‌ಹೆಡ್‌ಗಳನ್ನು ಕೊಂಡೊಯ್ಯುವುದು ಹೇಳುವಷ್ಟು ಸುಲಭವಾಗಿರಲಿಲ್ಲ. ಭಾರವಾದ ವಸ್ತುಗಳನ್ನು ಟ್ರಕ್ ಕೊಂಡೊಯ್ಯುತ್ತಿರುವುದರಿಂದ ನಿಧಾನವಾಗಿ ಚಲಾಯಿಸಬೇಕಾಗಿರುತ್ತದೆ. ಇಲ್ಲದಿದ್ದರೆ ಟಯರ್ ಒಡೆಯುವ ಸಾಧ್ಯತೆ ಇದ್ದು, ಟ್ರಕ್‌ಗಳನ್ನು ಎಲ್ಲಿಯೂ ನಿಲ್ಲಿಸಬಾರದಿತ್ತು.
ಈ ಕತೆಯಲ್ಲಿ ಮೆಚ್ಚುವ ಅಂಶವೆಂದರೆ ಇಲ್ಲಿ ಖಳನಾಯಕರಿಲ್ಲ. ಚಾಲಕರಿಗೆ ಟ್ರಕ್‌ಗಳನ್ನು ಐಸ್ ರಸ್ತೆಯಲ್ಲಿ ಚಲಾಯಿಸುವುದೇ ಸವಾಲಾಗಿತ್ತು. ಅವರುಗಳು ತಮ್ಮೊಳಗೆ ಹೋರಾಡುತ್ತಿದ್ದರು. ಒಂದು ಗುರಿ ಸಾಧನೆ ಮಾಡಲು ಉತ್ಸುಕರಾಗಿದ್ದರು. ಇನ್ನು ಕಥೆಯನ್ನು ಗಮನಿಸುವುದಾದರೆ ಅಷ್ಟೊಂದು ಆಸಕ್ತಿದಾಯಕವಾಗಿಲ್ಲ. ಏಕೆಂದರೆ ಕೆಲವೆಡೆ ಕೆಲವೊಂದು ಸನ್ನಿವೇಶಗಳನ್ನು ದೀರ್ಘವಾಗಿ ಎಳೆಯಲಾಗಿದೆ.
ಇದನ್ನೂ ಓದಿ: Bigg Boss 8: ಚಕ್ರವರ್ತಿ-ಮಂಜು ನಡುವಿನ ವಾದ-ವಿವಾದ: ಖ್ಯಾತ ನಟಿಯ ಜತೆಗಿನ ವಿಚ್ಛೇದನದ ವಿಷಯ ಚರ್ಚೆಗೆ ಬಂತು..!
ಮೀಥೇನ್ ಸ್ಫೋಟಕ್ಕೆ ಕಾರಣಗಳು, ಗಣಿಯ ನಿರ್ವಾಹಕರ ಕೈವಾಡ, ಇದನ್ನು ಮುಚ್ಚಿಹಾಕಲು ಅವರು ನಡೆಸುವ ಪ್ರಯತ್ನಗಳು ಮೊದಲಾದ ಸನ್ನಿವೇಶಗಳಲ್ಲಿ ಡೈಲಾಗ್‌ಗಳೇ ಕತೆಯನ್ನು ತಿಂದು ಹಾಕಿವೆ ಮತ್ತು ಕಾಲಹರಣ ಮಾಡುವಂತೆ ಕಂಡಿದೆ. ಒಟ್ಟಿನಲ್ಲಿ ಅಷ್ಟೊಂದು ಆಕರ್ಷಕ ಕಥಾ ಹಂದರವನ್ನು ದ ಐಸ್ ರೋಡ್ ಹೊಂದದಿದ್ದರೂ ತಕ್ಕಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಡುವಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ