ಸಿನಿಮಾಗೂ ಮುನ್ನ ಬರಲಿದೆ ಮೋದಿ ತೆರೆಮರೆಯ ಕಥೆ​: ಪ್ರಧಾನಿ ಪಾತ್ರದಲ್ಲಿ ನಟಿಸಲಿರುವ ಖಾನ್ ಯಾರು ಗೊತ್ತಾ?

ಇದರ ಚಿತ್ರೀಕರಣವು ಗುಜರಾತ್, ಉತ್ತರಾಖಂಡ್, ಪಶ್ಚಿಮ ಬಂಗಾಳ, ದೆಹಲಿ ಮತ್ತು ಕಾಶ್ಮೀರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಉಮೇಶ್ ಶುಕ್ಲಾ ತಿಳಿಸಿದ್ದಾರೆ.

zahir | news18
Updated:March 15, 2019, 11:25 AM IST
ಸಿನಿಮಾಗೂ ಮುನ್ನ ಬರಲಿದೆ ಮೋದಿ ತೆರೆಮರೆಯ ಕಥೆ​: ಪ್ರಧಾನಿ ಪಾತ್ರದಲ್ಲಿ ನಟಿಸಲಿರುವ ಖಾನ್ ಯಾರು ಗೊತ್ತಾ?
Image Source : FILE/ITV
zahir | news18
Updated: March 15, 2019, 11:25 AM IST
ಬಾಲಿವುಡ್​ನಲ್ಲಿ ಈಗ ಬಯೋಪಿಕ್ ಚಿತ್ರಗಳದ್ದೇ ಕಾರುಬಾರು. ಒಂದೆಡೆ ಬ್ಯಾಡ್ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್, ಕಪಿಲ್ ದೇವ್ ಸೇರಿದಂತೆ ಕ್ರೀಡಾಪಟುಗಳ ಚಿತ್ರಗಳು ಸೆಟ್ಟೇರುತ್ತಿದ್ದರೆ, ಮತ್ತೊಂದೆಡೆ ರಾಜಕಾರಣಿಗಳಾದ ಎನ್​ಟಿಆರ್, ಜಯಲಿಲತಾ ಮತ್ತು ಪ್ರಧಾನಿ ನರೇಂದ್ರ ಮೋದಿ  ಅವರ ಸಿನಿಮಾಗಳು ಶೂಟಿಂಗ್ ಆರಂಭಿಸಿದೆ.

ಇದರಲ್ಲಿ 'ಪಿಎಂ ನರೇಂದ್ರ ಮೋದಿ' ಶೀರ್ಷಿಕೆಯ ಸಿನಿಮಾ ಆರಂಭದಿಂದಲೂ ಸಖತ್ ಸದ್ದು ಮಾಡುತ್ತಿದೆ. ಒಮಂಗ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಪ್ರಧಾನಿಯಾಗಿ ಮಿಂಚಲಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಇದರ ನಡುವೆ ಮೋದಿ ಅವರ ಜೀವನ ಚರಿತ್ರೆಯನ್ನು ತಿಳಿಸುವ ಮತ್ತೊಂದು ಚಿತ್ರ ನಿರ್ಮಿಸಲು ಚಿತ್ರತಂಡವೊಂದು ಕೈ ಹಾಕಿದೆ.

'ಓ ಮೈ ಗಾಡ್​', '102 ನಾಟೌಟ್'​ ಚಿತ್ರಗಳನ್ನು ನಿರ್ದೇಶಿಸಿದ ಉಮೇಶ್ ಶುಕ್ಲಾ ಅವರು ಪ್ರಧಾನಿ ಮೋದಿ ಅವರ ತೆರೆ ಮರೆಯ ಕಹಾನಿಯನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ. ಈಗಾಗಲೇ 'ಪಿಎಂ ನರೇಂದ್ರ ಮೋದಿ'  ಹೆಸರಿನಲ್ಲಿ ಚಿತ್ರವೊಂದು ಮೂಡಿ ಬರುತ್ತಿರುವುದರಿಂದ ಶುಕ್ಲಾ, ತಮ್ಮ ಕಥೆಯನ್ನು ವೆಬ್​ ಸಿರೀಸ್ ರೂಪದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: ಕೊನೆಗೂ ಬಹಿರಂಗವಾಯ್ತು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಚಿತ್ರದ ಬಿಡುಗಡೆ ದಿನಾಂಕ

ಈ ವೆಬ್​ ಸರಣಿಗೆ 'ಮೋದಿ' ಎಂದು ಶೀರ್ಷಿಕೆ ಫೈನಲ್ ಮಾಡಿದ್ದು, 10 ಸಿರೀಸ್​ಗಳಲ್ಲಿ ಮೂಡಿ ಬರಲಿದೆ. ಅಂದಹಾಗೆ 'ಮೋದಿ' ಸಿರೀಸ್​ಗೆ ಬಂಡವಾಳ ಹಾಕುತ್ತಿರುವುದು ಎರೋಸ್​ ನೌ ಸಂಸ್ಥೆ. ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡಿರುವ ತಂಡವು, ಪ್ರತಿ ಸರಣಿಯು 35 ರಿಂದ 40 ನಿಮಿಷಗಳಿರುತ್ತದೆ ಎಂದು ತಿಳಿಸಿದೆ.

ಇಲ್ಲಿ ಮೂರು ಹಂತಗಳಲ್ಲಿ ಪ್ರಧಾನಿ ಅವರ ಜೀವನ ಶೈಲಿ ಮತ್ತು ರಾಜಕೀಯ ಏರಿಳಿತಗಳನ್ನು ತಿಳಿಸಲಿದ್ದು, ಪ್ರತಿಯೊಂದು ಹಂತದಲ್ಲೂ ಮೋದಿ ಅವರ ಪಾತ್ರಧಾರಿ ಬದಲಾಗಲಿದೆ. ಇದರಲ್ಲಿ ಯುವ ನಟ ಫೈಸಲ್ ಖಾನ್ ಅವರು ಮೋದಿಜಿಯ ಪ್ರಮುಖ ಹಂತದ ರೋಲ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದೆರಡು ಹಂತಗಳ ಪಾತ್ರದಲ್ಲಿ ಆಶಿಶ್ ಶರ್ಮಾ ಮತ್ತು ಮಹೇಶ್ ಶರ್ಮಾ ಬಣ್ಣ ಹಚ್ಚಲಿದ್ದಾರೆ.


ಇದರ ಚಿತ್ರೀಕರಣವು ಗುಜರಾತ್, ಉತ್ತರಾಖಂಡ್, ಪಶ್ಚಿಮ ಬಂಗಾಳ, ದೆಹಲಿ ಮತ್ತು ಕಾಶ್ಮೀರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಉಮೇಶ್ ಶುಕ್ಲಾ ತಿಳಿಸಿದ್ದಾರೆ. ಒಟ್ಟಿನಲ್ಲಿ 'ಪಿಎಂ ನರೇಂದ್ರ ಮೋದಿ' ಚಿತ್ರದ ನಿರೀಕ್ಷೆಯಲ್ಲಿದ್ದ ಸಿನಿ ಪ್ರೇಮಿಗಳಿಗೆ  ಅದಕ್ಕೂ ಮುನ್ನ ವೆಬ್​ ಸಿರೀಸ್ ಮೂಲಕ ಪ್ರಧಾನಿಯ ಜೀವನ ಚರಿತ್ರೆಯನ್ನು ಕಣ್ತುಂಬಿಕೊಳ್ಳುವ ಅವಕಾಶವೊಂದು ಒದಗಿ ಬಂದಿದೆ.

ಇದನ್ನೂ ಓದಿ: ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಮಿರ ಮಿರ ಮಿಂಚುವ ನಟಿ ಮಿಮಿ ಚಕ್ರವರ್ತಿ

ಯಾರು ಈ ಫೈಸಲ್ ಖಾನ್?

ಡ್ಯಾನ್ಸ್​​ ಇಂಡಿಯಾ ಡ್ಯಾನ್ಸ್​ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಯುವ ಪ್ರತಿಭೆ ಫೈಸಲ್ ಖಾನ್. ಖಾಸಗಿ ಚಾನೆಲ್​ಗಳ ಹಲವು ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಈ ಡ್ಯಾನ್ಸರ್​ 'ಪ್ರೇಮ್​ ಕಹಾನಿ' ಎಂಬ ಮರಾಠಿ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ ಕೆಲ ಸಿನಿಮಾಗಳಲ್ಲಿ ನೃತ್ಯ ನಿರ್ದೇಶನವನ್ನು ಮಾಡಿದ ಅನುಭವವಿದೆ. ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಪ್ರಧಾನಿ ಮೋದಿ ಅವರ ಯೌವ್ವನದ ಪಾತ್ರದಲ್ಲಿ ಫೈಸಲ್ ಖಾನ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ.

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...