Tandav Controversy: ತಾಂಡವ್‌ ವಿರುದ್ಧ ರುದ್ರತಾಂಡವ; ಕ್ಷಮೆ ಬೇಡ, ಕಾನೂನು ಕ್ರಮ ಆಗಲೇಬೇಕೆಂದು ಆಗ್ರಹ

ವೆಬ್‌ ಸಿರೀಸ್‌ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟ ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌ ದಂಪತಿ ನಿವಾಸಕ್ಕೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಮತ್ತೊಂದೆಡೆ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ವೆಬ್‌ಸಿರೀಸ್‌ ತಂಡಕ್ಕೆ ಹಾಗೂ ಓಟಿಟಿಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ದೃಶ್ಯಗಳ ಬಗ್ಗೆ ಉತ್ತರ ನೀಡುವಂತೆ ನೋಟೀಸ್‌ ಜಾರಿ ಮಾಡಿದೆ.

ತಾಂಡವ್ ವೆಬ್​ ಸೀರೀಸ್

ತಾಂಡವ್ ವೆಬ್​ ಸೀರೀಸ್

  • Share this:
ಕೆಲ ದಿನಗಳ ಹಿಂದಷ್ಟೇ ಓಟಿಟಿಯಲ್ಲಿ ರಿಲೀಸ್‌ ಆದ ವೆಬ್‌ ಸಿರೀಸ್‌ ತಾಂಡವ್‌ ವಿರುದ್ಧದ ಕಿಡಿ ಈಗ ಜ್ವಾಲೆಯಾಗಿ ಬದಲಾಗಿದೆ. ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿರುವುದಲ್ಲದೇ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಲವು ಅಂಶಗಳನ್ನು ತಾಂಡವ್‌ ವೆಬ್‌ಸಿರೀಸ್‌ ಒಳಗೊಂಡಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳಲೇಬೇಕೆಂಬ ಒತ್ತಡ ಜೋರಾಗಿದೆ. ಹೌದು, ಟೈಗರ್‌ ಜಿಂದಾ ಹೈ ಖ್ಯಾತಿಯ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್‌ ಆಕ್ಷನ್‌ ಕಟ್‌ ಹೇಳಿರುವ ವೆಬ್‌ ಸರಣಿ ತಾಂಡವ್‌ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಸೈಫ್‌ ಅಲಿ ಖಾನ್‌, ಮೊಹಮ್ಮದ್‌ ಜೀಷನ್‌ ಆಯುಬ್‌, ಡಿಂಪಲ್‌ ಕಪಾಡಿಯಾ, ಸಾರಾ ಜೇನ್‌ ಡಯಾಸ್‌, ಕೃತಿಕಾ ಕಾಮ್ರಾ, ವರುಣ್‌ ಗ್ರೋವರ್‌, ಟಿಗ್ಮಾನ್ಶು ಧುಲಿಯಾ, ಕುಮುದ್‌ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಹಿಮಾಂಶು ಕೃಷ್ಣ ಮೆಹ್ರಾ ನಿರ್ಮಿಸಿದ್ದಾರೆ.

ಸದ್ಯ ನಿರ್ದೇಶಕ, ನಿರ್ಮಾಪಕ, ನಾಯಕ ಹಾಗೂ ಈ ವೆಬ್‌ ಸರಣಿಯ ಕಥೆಗಾರನ ವಿರುದ್ಧ ದೇಶದ ಹಲವೆಡೆಗಳಲ್ಲಿ ಪೊಲೀಸ್‌ ದೂರು ದಾಖಲಾಗಿದೆ. ಮಾತ್ರವಲ್ಲ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ವೆಬ್‌ ಸಿರೀಸ್‌ ವಿರುದ್ಧ ಹಲವರು ಸಮರವನ್ನೇ ಸಾರಿದ್ದಾರೆ.

ವೆಬ್‌ ಸಿರೀಸ್‌ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟ ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌ ದಂಪತಿ ನಿವಾಸಕ್ಕೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಮತ್ತೊಂದೆಡೆ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ವೆಬ್‌ಸಿರೀಸ್‌ ತಂಡಕ್ಕೆ ಹಾಗೂ ಓಟಿಟಿಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ದೃಶ್ಯಗಳ ಬಗ್ಗೆ ಉತ್ತರ ನೀಡುವಂತೆ ನೋಟೀಸ್‌ ಜಾರಿ ಮಾಡಿದೆ. ಹೀಗಾಗಿಯೇ ಎಚ್ಚೆತ್ತುಕೊಂಡ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್‌, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ ಅಂತ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಯಾಚಿಸಿದ್ದಾರೆ.ಆದರೆ ಕ್ಷಮೆ ನಮಗೆ ಬೇಕಿಲ್ಲ, ಓಟಿಟಿಯಿಂದ ತಾಂಡವ್‌ ವೆಬ್‌ಸರಣಿಯನ್ನು ಕಿತ್ತೆಸೆಯಬೇಕು ಹಾಗೂ ಈ ಸರಣಿಯನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂಬ ಒತ್ತಡ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಬಿಜೆಪಿ ಮುಖಂಡ ರಾಮ್‌ ಕದಮ್‌ ಮುಂಬೈನ ಘಾಟ್‌ಕೋಪರ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಓಟಿಟಿ ಪ್ಲ್ಯಾಟ್‌ಫಾರ್ಮ್‌ ಈ ಕೂಡಲೇ ತಾಂಡವ್‌ಅನ್ನು ತೆಗೆಯಬೇಕು ಇಲ್ಲದಿದ್ದಲ್ಲಿ ಕಾನೂನು ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾ ಲೀಗಲ್‌ ನೋಟೀಸ್‌ ಕಳುಹಿಸಿದ್ದಾರೆ. ಲಖ್‌ನೌನ ಹಜರತ್‌ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಹಾಗೂ ಬಿಎಸ್‌ಪಿ ಪಕ್ಷದವರೂ ತಾಂಡವ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ಹಾಗೆಯೇ ಹಲವು ರಾಜ್ಯ ಸಚಿವರು ಹಾಗೂ ಸಂಸದರು ಸಹ ಮಾಹಿತಿ ಹಾಗೂ ಪ್ರಸರಣ ಸಚಿವಾಲಯಕ್ಕೆ ಪತ್ರ ಬರೆದು ಓಟಿಟಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳ ಮೇಲೆ ನಿಗಾ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಬ್ಯಾನ್‌ ತಾಂಡವ್‌, ಬಾಯ್ಕಾಟ್‌ ತಾಂಡವ್‌ ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿವೆ.
Published by:Latha CG
First published: