ವಡಿವೇಲು. ತಮಿಳು ಚಿತ್ರರಂಗದ ಸ್ಟಾರ್ ಕಾಮಿಡಿಯನ್. ದೊಡ್ಡ ದೊಡ್ಡ ಸೂಪರ್ ಸ್ಟಾರ್ಗಳಿಗೆ ಇರುವಷ್ಟೇ ಅಭಿಮಾನಿಗಳು ವಡಿವೇಲು ಅವರಿಗೂ ಇದ್ದಾರೆ. ಮೆಗಾಸ್ಟಾರ್ಗಳು ಪಡೆಯುವಂತೆಯೇ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಾರೆ ವಡಿವೇಲು(Vadivelu). ಆದರೆ 2017ರಲ್ಲಿ ವಿವಾದವೊಂದಕ್ಕೆ ಸಿಲುಕಿಕೊಂಡ ವಡಿವೇಲು ಅವರನ್ನು ಕಾಲಿವುಡ್ ಚಿತ್ರರಂಗ (ಖ) ಬ್ಯಾನ್ ಮಾಡಿತ್ತು. ಅಲ್ಲಿಗೆ ವಡಿವೇಲು ಸಿನಿಮಾ ಕರಿಯರ್ಗೆ ಪೂರ್ಣ ವಿರಾಮ ಬಿತ್ತು ಎಂದೇ ಎಲ್ಲರೂ ಅಂದುಕೊಂಡಿದ್ದರು.
ಆದರೆ ಮೂಲಕ
ಈಗ ವಡಿವೇಲು ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮತ್ತೆ ರೀಎಂಟ್ರಿ ಕೊಟ್ಟಿದ್ದಾರೆ. ವಿವಾದವನ್ನು ಮಾತುಕತೆ ಬಗೆಹರಿಸಿಕೊಂಡು ಮತ್ತೆ ಕ್ಯಾಮರಾ ಮುಂದೆ ನಟಿಸಲು, ಬೆಳ್ಳಿ ತೆರೆ ಮೇಲೆ ಮಿಂಚಲು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ರೆಡಿಯಾಗಿದ್ದಾರೆ. ವಿಶೇಷ ಅಂದರೆ ಅವರ ರೀಎಂಟ್ರಿಗಾಗಿ ಕಾಯುತ್ತಿದ್ದ ತಮಿಳು ಸಿನಿಮಾ ತಂಡಗಳು, ಅವರು ಬರುವುದು ನಿಶ್ಚಿತ ಎಂಬುದು ತಿಳಿಯುತ್ತಲೇ ನಾ ಮುಂದು ತಾ ಮುಂದು ಅಂತ ಆಫರ್ ಕೊಟ್ಟಿದ್ದಾರೆ. ಹೀಗೆ ಸದ್ಯ ನಾಲ್ಕೈದು ಚಿತ್ರಗಳು ವಡಿವೇಲು ಬಳಿಯಿವೆ.
ಅದೆಲ್ಲಾ ಇರಲಿ, ವಡಿವೇಲು ಅವರಂತಹ ಸ್ಟಾರ್ ಕಾಮಿಡಿಯನ್ ಅನ್ನು ಬ್ಯಾನ್ ಯಾಕೆ ಮಾಡಿದ್ದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದು. ಅದಕ್ಕೆ ಕಾರಣ, ಇಮ್ಸಾಯ್ ಅರಸನ್ 24ಎಎಮ್ ಪುಲಿಕೇಶಿ (Imsai Arasan 24am Pulikecei) ಚಿತ್ರ. ಇದು 2006ರ ಸೂಪರ್ಹಿಟ್ ಇಮ್ಸಾಯ್ ಅರಸನ್ 23 ಪುಲಿಕೇಶಿ ಚಿತ್ರದ ಸೀಕ್ವಲ್. 2017ರಲ್ಲಿ ಈ ಚಿತ್ರ ಸೆಟ್ಟೇರಿತ್ತು. ಬಾಯ್ಸ್, ರೋಬೋ, ಐ ಖ್ಯಾತಿಯ ಸ್ಟಾರ್ ಡೈರೆಕ್ಟರ್ ಶಂಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿಂಬು ದೇವನ್ (Chimbu Deven) ಆಕ್ಷನ್ ಕಟ್ ಹೇಳುತ್ತಿದ್ದರು. 2017ರ ಆಗಸ್ಟ್ನಲ್ಲಿ ಸಿನಿಮಾ ಶೂಟಿಂಗ್ ಕೂಡ ಪ್ರಾರಂಭವಾಗಿತ್ತು. ಆದರೆ ದಿನಂಪ್ರತಿ ನಾಯಕನಟ ವಡಿವೇಲು ಚಿತ್ರತಂಡಕ್ಕೆ ಇಲ್ಲ ಸಲ್ಲದ ಕಿರಿಕ್ ಮಾಡುತ್ತಿದ್ದರಂತೆ. ಪ್ರಾರಂಭದಲ್ಲೇ ಸಿನಿಮಾದಲ್ಲಿ ನಟಿಸಲು ನನಗೆ ಹೆಚ್ಚು ಸಂಭಾವನೆ ಬೇಕು ಅಂತ ಡಿಮ್ಯಾಂಡ್ ಮಾಡಿದ್ದರಂತೆ. ಆ ಸಮಸ್ಯೆ ಬಗೆಹರಿಯುತ್ತಲೇ ಮೊದಲು ತಾವೇ ಒಪ್ಪಿದ್ದ ಹಾಡಿನ ಒಂದು ಭಾಗವನ್ನು ಅದು ಚೆನ್ನಾಗಿಲ್ಲ ಬದಲಾಯಿಸಿ ಅಂತ ಹಠ ಹಿಡಿದರಂತೆ. ಅದಕ್ಕೂ ಚಿತ್ರತಂಡ ಒಪ್ಪಿದೆ. ಬಳಿಕ ಕೆಲ ಸಹ ಕಲಾವಿದರ ಜೊತೆ ನಟಿಸುವುದಿಲ್ಲ ಅಂತ ಹಠ ಹಿಡಿದಿದ್ದಾರೆ. ಹಾಗಂತ ವಡಿವೇಲು ಆಟಾಟೋಪ ಅಲ್ಲಿಗೆ ನಿಂತಿಲ್ಲ. ಬದಲಾಗಿ ಮೇಕಪ್ ಮತ್ತು ಕಾಸ್ಟ್ಯೂಮ್ ತಂಡವನ್ನು ಬದಲಿಸಿ, ತಾವು ಹೇಳಿದವರನ್ನೇ ಕರೆಸಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಹೀಗೆ ಪ್ರತಿ ಬಾರಿ ಹಠ ಶುರುವಾದಾಗಲೂ ಅವರು ಶೂಟಿಂಗ್ನಿಂದ ದೂರ ಉಳಿಯುತ್ತಿದ್ದರಂತೆ. ಹೀಗಾಗಿ ಆಗಸ್ಟ್ನಿಂದ ನವೆಂಬರ್ವರೆಗೂ 3 ತಿಂಗಳಲ್ಲಿ ಕೇವಲ 10 ದಿನಗಳ ಕಾಲ ಮಾತ್ರ ಚಿತ್ರೀಕರಣ ನಡೆಸಲು ಸಾಧ್ಯವಾಗಿದ್ದು, ಆದರೆ ಮೂರೂ ತಿಂಗಳ ಸೆಟ್ ಬಾಡಿಗೆ ಮತ್ತು ಇತರೆ ಖರ್ಚುಗಳನ್ನು ನೀಡಬೇಕಾಗಿದೆ ಎಂದು ನಿರ್ಮಾಪಕ ಶಂಕರ್ (Shankar) ತಮಿಳು ನಾಡು ಸಿನಿಮಾ ನಿರ್ಮಾಪಕರ ಕೌನ್ಸಿಲ್ಗೆ ದೂರು ನೀಡಿದ್ದರು.
![]()
ವಡಿವೇಲು
ಹೀಗಾಗಿ ತಮಿಳು ನಾಡು ನಿರ್ಮಾಪಕರ ಸಂಘ ( Tamil Film Producers Council ) ವಡಿವೇಲು ಅವರ ಮೇಲೆ ನಿರ್ಬಂಧ ಹೇರಿದ್ದರು. ಹೀಗೆ ನಾಲ್ಕು ವರ್ಷಗಳ ಕಾಲ ವಡಿವೇಲು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ನಿರ್ಮಾಪಕರ ಸಂಘ ಹಾಗೂ ಪುಲಿಕೇಶಿ ಚಿತ್ರತಂಡದ ಜೊತೆ ಚರ್ಚೆ ನಡೆಸಿ ವಡಿವೇಲು ಅವರು ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಮಾತ್ರವಲ್ಲ ಒಂದೇ ನಿರ್ಮಾಣ ಸಂಸ್ಥೆಯ ಜೊತೆ ಐದು ಸಿನಿಮಾಗಳಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ