ಕಳೆದ ಐದು ತಿಂಗಳಿನಿಂದ ಈ ಕೊರೋನಾ ಕಂಟಕ ಇಡಿ ವಿಶ್ವವನ್ನೇ ಹೈರಾಣಾಗಿಸಿದೆ. ಕೋಟ್ಯಂತರ ಜನರಿಗೆ ಸೋಂಕು ತಗುಲಿದ್ದು, ಲಕ್ಷಾಂತರ ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಇನ್ನು ಈ ಕಣ್ಣಿಗೆ ಕಾಣದ ವೈರಸ್ಗೆ ಹಲವು ಸೆಲೆಬ್ರಿಟಿಗಳೂ ಸಂಕಷ್ಟಕ್ಕೀಡಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಮಗಳಾದ ಆರಾಧ್ಯ ಬಚ್ಚನ್ಗೂ ಕೊರೊನಾ ಸೋಂಕು ತಗುಲಿತ್ತು. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಬಿಗ್ಬಿ ಕುಟುಂಬದ ಅಷ್ಟೂ ಮಂದಿ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಅದರ ಬೆನ್ನಲ್ಲೇ ಖ್ಯಾತ ನಟಿ ತಮ್ಮನ್ನಾ ಭಾಟಿಯಾ ಕುಟುಂಬಕ್ಕೂ ಕೊರೊನಾ ಕಂಟಕ ಎದುರಾಗಿದೆ.
ಹೌದು, ಕೆಜಿಎಫ್ ಚಿತ್ರದಲ್ಲಿ ರಾಕಿಭಾಯ್ ಯಶ್ ಜೊತೆ ಜೋಕೆ ನಾನು ಬಳ್ಳಿಯ ಮಿಂಚು ಅಂತ ಮಾದಕವಾಗಿ ಹಾಡಿ ಕುಣಿದಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಕುಟುಂಬಕ್ಕೆ ಸಿಡಿಲಿನಂತ ಸುದ್ದಿ ನಡುಗುವಂತೆ ಮಾಡಿದೆ. ಹೌದು, ತಮನ್ನಾರ ಪೋಷಕರಾದ ಸಂತೋಷ್ ಭಾಟಿಯಾ ಹಾಗೂ ರಜನಿ ಭಾಟಿಯಾ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ. ಅಪ್ಪ, ಅಮ್ಮ ಇಬ್ಬರಿಗೂ ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ, ಕೊವಿಡ್ 19 ಪರೀಕ್ಷೆ ಮಾಡಿಸಲಾಗಿತ್ತು. ಇಬ್ಬರ ರಿಪೋರ್ಟ್ ಕೂಡ ಪಾಸಿಟಿವ್ ಬಂದ ಕಾರಣ ತಮನ್ನಾ ಮತ್ತವರ ಕುಟುಂಬದವರೂ ಸೇರಿದಂತೆ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಟೆಸ್ಟ್ ಮಾಡಿಸಲಾಗಿದೆ. ಆದರೆ ಎಲ್ಲರ ರಿಪೋರ್ಟ್ ಕೂಡ ನೆಗಟಿವ್ ಬಂದಿದೆ.
ಈ ಕುರಿತು ಖುದ್ದು ತಮನ್ನಾ ಭಾಟಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಸದ್ಯ ತಂದೆ, ತಾಯಿ ಇಬ್ಬರ ಆರೋಗ್ಯದಲ್ಲೂ ಸುಧಾರಣೆ ಕಂಡುಬಂದಿದ್ದು, ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ ತಮನ್ನಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ