Sye Raa Narasimha Reddy: ಮೆಗಾಸ್ಟಾರ್​ಗೆ ಮಾಣಿಕ್ಯನ ಸಾಥ್: ದಾಖಲೆ ಮೊತ್ತಕ್ಕೆ ಸೈರಾ ಚಿತ್ರದ ಹಕ್ಕು ಮಾರಾಟ

Sye Raa Narasimha Reddy: ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯನ್ನು ತಿಳಿಸಲಿರುವ ಸೈರಾ ನರಸಿಂಹ ರೆಡ್ಡಿ ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದು, ಈ ಸಿನಿಮಾಗೆ ಚಿರಂಜೀವಿ ಪುತ್ರ ನಟ ರಾಮ್ ಚರಣ್ ತೇಜ ಬಂಡವಾಳ ಹೂಡಿದ್ದಾರೆ.

zahir | news18
Updated:June 30, 2019, 5:46 PM IST
Sye Raa Narasimha Reddy: ಮೆಗಾಸ್ಟಾರ್​ಗೆ ಮಾಣಿಕ್ಯನ ಸಾಥ್: ದಾಖಲೆ ಮೊತ್ತಕ್ಕೆ ಸೈರಾ ಚಿತ್ರದ ಹಕ್ಕು ಮಾರಾಟ
Sye Raa Narasimha Reddy
  • News18
  • Last Updated: June 30, 2019, 5:46 PM IST
  • Share this:
ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಸೈರಾ ನರಸಿಂಹ ರೆಡ್ಡಿ' ಬಿಡುಗಡೆಗೆ ಮುನ್ನವೇ ಅಬ್ಬರಿಸಿದೆ. ಬಹುತಾರಾಗಣದ ಈ ಐತಿಹಾಸಿಕ ಚಿತ್ರದ ಕರ್ನಾಟಕ ವಿತರಣಾ ಹಕ್ಕು ಕೋಟಿ ಲೆಕ್ಕದಲ್ಲಿ ಬಿಕರಿಯಾಗಿ ಸ್ಯಾಂಡಲ್​ವುಡ್​ ಮಂದಿಯ ಹುಬ್ಬೇರುವಂತೆ ಮಾಡಿದೆ.

ಈ ಹಿಂದೆ ಚಿರಂಜೀವಿ ಅಭಿನಯದ 'ಖೈದಿ ನಂ.150' ಸಿನಿಮಾ ರೈಟ್ಸ್​ 7.5 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಮೆಗಾಸ್ಟಾರ್ 150ನೇ ಚಿತ್ರವನ್ನು ವಿತರಣೆ ಮಾಡಿದ ಧೀರಜ್ ಎಂಟರ್​ಪ್ರೈಸಸ್ ಸಂಸ್ಥೆಯೇ ಇದೀಗ 'ಸೈರಾ ನರಸಿಂಹ ರೆಡ್ಡಿ'ಗೂ ಹೆಗಲು ಕೊಟ್ಟಿದೆ. ಅದರಂತೆ ಸೈರಾದ ಕರ್ನಾಟಕದ ವಿತರಣಾ ಹಕ್ಕನ್ನು ಬರೋಬ್ಬರಿ 32 ಕೋಟಿಗೆ ಧೀರಜ್ ಸಂಸ್ಥೆ ಖರೀದಿ ಮಾಡಿದೆ.

ಕರ್ನಾಟಕದಲ್ಲಿ ಇಂತಹದೊಂದು ಕಮಾಲ್ ಮಾಡಲು ಮುಖ್ಯ ಕಾರಣ ಕರುನಾಡ ಮಾಣಿಕ್ಯ ಕಿಚ್ಚ ಸುದೀಪ್. ಹೌದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಅಭಿನಯಿಸಿದ್ದಾರೆ. ಹೀಗಾಗಿ ಟಾಲಿವುಡ್​ನಲ್ಲಿ ಇರುವಂತೆ, ಸ್ಯಾಂಡಲ್​ವುಡ್​ನಲ್ಲೂ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ. ಇದರಿಂದ ಭರ್ಜರಿ ಮಾರ್ಕೆಟ್ ಸೃಷ್ಟಿಸಿಕೊಂಡಿರುವ ಸೈರಾ ತಂಡ ಇದೀಗ ಕೋಟಿ ಲೆಕ್ಕದಲ್ಲಿ ಚಿತ್ರದ ಹಕ್ಕನ್ನು ಮಾರಾಟ ಮಾಡಿದೆ.ಅಂದಹಾಗೆ ಅನ್ಯಭಾಷಾ ಸಿನಿಮಾವೊಂದು ಕರ್ನಾಟಕದಲ್ಲಿ 30 ಕೋಟಿಗಿಂತ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿರುವುದು ಇದು ಎರಡನೇ ಬಾರಿ.

ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ 36 ಕೋಟಿಗೆ ಮಾರಾಟವಾದರೆ,  ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ವಿತರಣಾ ಹಕ್ಕು 30 ಕೋಟಿಗೆ ಬಿಕರಿಯಾಗಿತ್ತು. ಅಲ್ಲದೆ ತೆಲುಗು ನಟ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದ ಹಕ್ಕು 28 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗಿದೆ. ಇದೀಗ 'ಸೈರಾ ನರಸಿಂಹ ರೆಡ್ಡಿ'  ಸಾಹೋ ದಾಖಲೆಯನ್ನು ಧೂಳೀಪಟಗೈದಿದೆ. ಈ ಮೂಲಕ ಕರ್ನಾಟಕದಲ್ಲಿ ಅತೀ ಹೆಚ್ಚಿನ  ವಿತರಣಾ ಹಕ್ಕು ಪಡೆದ 2ನೇ ತೆಲುಗು ಚಿತ್ರ ಎಂಬ ಹೆಗ್ಗಳಿಕೆ ಚಿರಂಜೀವಿ ಚಿತ್ರದ ಪಾಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯನ್ನು ತಿಳಿಸಲಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದು, ಈ ಸಿನಿಮಾಗೆ ಚಿರಂಜೀವಿ ಪುತ್ರ ನಟ ರಾಮ್ ಚರಣ್ ತೇಜ ಬಂಡವಾಳ ಹೂಡಿದ್ದಾರೆ. 200 ಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ತಮಿಳು, ತೆಲುಗು ಮಲಯಾಳಂನಲ್ಲಿ ಮೂಡಿ ಬರಲಿದೆ.  ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಕಿಚ್ಚ ಸುದೀಪ್ ಜತೆ ಅಮಿತಾಬ್ ಬಚ್ಚನ್, ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ ಸೇರಿದಂತೆ ದೊಡ್ಡ ತಾರಾಗಣವೇ ಕಾಣಿಸಿಕೊಂಡಿದೆ. ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿರುವ 'ಸೈರಾ ನರಸಿಂಹ ರೆಡ್ಡಿ'ಯ ಐತಿಹಾಸಿಕ ಕಥೆಯನ್ನು ಅಕ್ಟೋಬರ್ 2ರಂದು ತೆರೆಗೆ ತರಲು ನಿರ್ಮಾಪಕ ರಾಮ್ ಚರಣ್ ತೇಜ ಯೋಜನೆ ಹಾಕಿಕೊಂಡಿದ್ದಾರೆ.
First published: June 30, 2019, 5:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading