news18-kannada Updated:June 15, 2020, 3:30 PM IST
ನಟ ಸುಶಾಂತ್ ಸಿಂಗ್
ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಈ ಮಧ್ಯೆ, ಸುಶಾಂತ್ ಕುಟುಂಬದವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ.
34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿನ್ನೆ ಬೆಳಗ್ಗೆ ಅವರ ಮನೆಯ ಕೆಲಸದವರು ಬಂದು ನೋಡಿದಾಗ ಈ ವಿಷಯ ಗೊತ್ತಾಗಿತ್ತು. ಬೆಡ್ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಕಳೆದ 6 ತಿಂಗಳಿನಿಂದ ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿತ್ತು.
ನೇಣು ಬಿಗಿದುಕೊಂಡ ಕಾರಣಕ್ಕೇ ಸುಶಾಂತ್ ಮರಣ ಹೊಂದಿದ್ದಾರೆ. ಅವರ ದೇಹದ ಮೇಲೆ ಯಾವುದೇ ಗಾಯದ ಕಲೆಗಳು ಇರಲಿಲ್ಲ. ಹೀಗಾಗಿ ಇದು ಆತ್ಮಹತ್ಯೆ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಹೇಳಲಾಗಿದೆ.
ಆದರೆ, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯಾವುದೇ ಸ್ಯೂಸೈಡ್ ನೋಟ್ ಬರೆದಿಟ್ಟಿಲ್ಲ. ಈ ಬಗ್ಗೆ ಮಾತನಾಡಿರುವ ಸುಶಾಂತ್ ಸೋದರಮಾವ ಆರ್ಸಿ ಸಿಂಗ್ ಇದೊಂದು ಕೊಲೆ ಎಂದಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ. ಹೀಗಾಗಿ ಈ ಪ್ರಕರಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಸಿಬಿಐ ತನಿಖೆಗೆ ವಹಿಸಬೇಕು ಎಂದಿದ್ದಾರೆ ಆರ್ಸಿ ಸಿಂಗ್.
ಇಂದು ಅಂತ್ಯಸಂಸ್ಕಾರ
ಸುಶಾಂತ್ ಸಿಂಗ್ ಅಂತ್ಯ ಸಂಸ್ಕಾರ ಮುಂಬೈನಲ್ಲೇ ನಡೆಯಲಿದೆ. ಪಾಟ್ನಾದಲ್ಲಿರುವ ಅವರ ಕುಟುಂಬ ಮುಂಬೈಗೆ ಇಂದು ಆಗಮಿಸಿದೆ. ಹೀಗಾಗಿ, ಸಂಜೆವೇಳೆಗೆ ಅಂತ್ಯಸಂಸ್ಕಾರ ನೆರವೇರಲಿದೆ.
First published:
June 15, 2020, 3:30 PM IST