ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲ, ಆದರೆ ತಮ್ಮ ಬಾಳಿನಲ್ಲಿ ಕಳೆದಂತಹ ಸಮಯದ ನೆನಪುಗಳು, ಮಾಡಿದ ಪಾತ್ರಗಳ ನೆನಪಾಗಿ ನಮ್ಮೊಂದಿಗೆ ಯಾವಾಗಲೂ ಮಾನಸಿಕವಾಗಿ ಇರುತ್ತಾರೆ. ಸದಾ ಉತ್ಸಾಹದಿಂದ ಹೊಸದನ್ನು ಕಲಿಯಬೇಕು ಎನ್ನುವ ಹಂಬಲ ಹೊಂದಿದ್ದ ಸುಶಾಂತ್ ಕಲಿಯಲು ಅವಕಾಶವನ್ನು ಹುಡುಕುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಅವರಿಗೆ ವಿಜ್ಞಾನದ ಬಗ್ಗೆ ತುಂಬಾ ತಿಳಿದುಕೊಳ್ಳಬೇಕೆಂಬ ಹಂಬಲ ಇದ್ದದ್ದು ನೂರಕ್ಕೆ ನೂರರಷ್ಟು ಸತ್ಯ.ಇಡೀ ವಿಶ್ವದಲ್ಲಿಯೇ ನಾಸಾದಿಂದ ತರಬೇತಿ ಪಡೆದ ಏಕೈಕ ನಟ ಎಂದರೆ ಅದು ಸುಶಾಂತ್ ಸಿಂಗ್ ರಜಪೂತ್. ಅವರು ಇಂದು ಬದುಕಿದ್ದರೆ 2024ರ ಚಂದ್ರಯಾನದ ಮಿಷನ್ನಲ್ಲಿ ಕೆಲಸ ಮಾಡಲು ಖಂಡಿತವಾಗಿ ತೆರಳುತ್ತಿದ್ದರು ಎಂದು ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ಸುಶಾಂತ್ ಅವರಿಗೆ ವಿಜ್ಞಾನ ಬಗ್ಗೆ ತುಂಬಾ ಒಲವಿತ್ತು. ಆದ್ದರಿಂದಲೇ ಗಗನಯಾತ್ರಿಯ ತರಬೇತಿಯನ್ನು ನಾಸಾದಿಂದ ಪಡೆದಿದ್ದರು ಎಂದು ಸಹೋದರಿ ತಮ್ಮನ್ನು ಅಗಲಿದಂತಹ ಸಹೋದರನ ಬಗ್ಗೆ ನೆನಪು ಮಾಡಿಕೊಳ್ಳುತ್ತಾ ಈ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಅದರ ಕೆಳಗೆ ಶೀರ್ಷಿಕೆಯಲ್ಲಿ "ನಮ್ಮ ಸುಶಾಂತ್ ನಮ್ಮ ಹೆಮ್ಮೆ" ಎಂದೂ ಬರೆದಿದ್ದಾರೆ.
ಶ್ವೇತಾ ಸಾಮಾಜಿಕ ಮಾಧ್ಯಮಗಳಲ್ಲಿ ಸುಶಾಂತ್ ಬಗ್ಗೆ ಬರೆದಂತಹ ಈ ಸಾಲುಗಳಿಗೆ ಅವರ ಅಭಿಮಾನಿಗಳು ತುಂಬು ಹೃದಯದ ಪ್ರೀತಿಯನ್ನು ಹರಿಸಿದ್ದು, ಅವರನ್ನು ಇವರೆಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಹಲವು ಅಭಿಮಾನಿಗಳು ಸುಶಾಂತ್ ಅವರ ಸಹಜವಾದ ನಟನೆಯನ್ನು ಸಹ ಮಿಸ್ ಮಾಡಿಕೊಳ್ಳುತ್ತಿದ್ದು ಅದರ ಬಗ್ಗೆಯೂ ಬರೆದುಕೊಂಡಿದ್ದಾರೆ.
ಸುಶಾಂತ್ ತಮ್ಮ ಮುಂದಿನ 'ಚಂದ ಮಾಮ ದೂರ್ ಕೆ' ಚಿತ್ರಕ್ಕಾಗಿ ತರಬೇತಿ ಪಡೆಯುತ್ತಿದ್ದರು ಮತ್ತು 2024ರ ಚಂದ್ರಯಾನದ ಮಿಷನ್ನ ಒಂದು ಭಾಗವಾಗಿ ಕೆಲಸ ಮಾಡುವ ಇಚ್ಛೆಯನ್ನು ಸಹ ಹೊಂದಿದ್ದರು ಮತ್ತು ಎರಡಕ್ಕೂ ತಯಾರಿ ನಡೆಸುತ್ತಿದ್ದರು.
ಚಲನಚಿತ್ರವು ಸ್ಥಗಿತಗೊಂಡಿದ್ದರೂ ಸಹ, ಕಲಿಯಲೇ ಬೇಕು ಎನ್ನುವ ದೃಢವಾದ ಮನಸ್ಸಿನಿಂದ ನಾಸಾ ತರಬೇತಿಯನ್ನು ಪೂರ್ಣಗೊಳಿಸಲು ಮತ್ತೆ ನಾಸಾಗೆ ಹಿಂದಿರುಗಿ, ತರಬೇತಿಯನ್ನು ಪಡೆದು ಬಂದಿದ್ದರು. ಇದು ಅವರಲ್ಲಿದ್ದ ಛಲ ಮತ್ತು ಹೊಸದನ್ನು ಕಲಿಯಬೇಕು ಎನ್ನುವ ಹಂಬಲವನ್ನು ತೋರಿಸುತ್ತದೆ. ತನ್ನ ಒಂದು ಸಂದರ್ಶನವೊಂದರಲ್ಲಿ, ಸುಶಾಂತ್ ಒಂದು ದಿನ ತಮ್ಮ ಬದುಕಿನಲ್ಲಿ ನಾಸಾಗೆ ಹೋಗಬೇಕೆಂದು ಕನಸು ಕಂಡಿದ್ದ ಬಗ್ಗೆ ಹೇಳಿದ್ದರು. ಅದೇ ಪ್ರಕಾರವಾಗಿ ನಾಸಾಗೆ ಹೋಗಿ ತರಬೇತಿ ಪಡೆದು ಬಂದಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ.
ಸುಶಾಂತ್ರಿಗೆ ಇನ್ನೂ ಅನೇಕ ವಿಶಿಷ್ಟವಾದಂತಹ ಅಭ್ಯಾಸಗಳಿದ್ದು, ತಮ್ಮ ಎರಡು ಕೈಗಳಿಂದ ಏಕಕಾಲದಲ್ಲಿ ಬರೆಯುತ್ತಿದ್ದರು, ಗೇಮಿಂಗ್ ಅನ್ನು ತಯಾರಿಸುವ ಆಸೆಯನ್ನು ಸಹ ಹೊಂದಿದ್ದ ಸುಶಾಂತ್ ಕೋಡಿಂಗ್ ಮಾಡುವುದು ಸಹ ಕಲಿತಿದ್ದರಂತೆ.