Sushma ChakreSushma Chakre
|
news18-kannada Updated:September 5, 2020, 2:51 PM IST
ಸುಶಾಂತ್ ಸಿಂಗ್, ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸುಶಾಂತ್ನ ಪ್ರೇಯಸಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಬ್ಬರೂ ಇನ್ನೂ 5 ದಿನ ಎನ್ಸಿಬಿ ವಶದಲ್ಲಿಯೇ ಇರಲಿದ್ದಾರೆ. ಸೆ. 9ರವರೆಗೂ ಅವರಿಬ್ಬರೂ ಎನ್ಸಿಬಿ ವಶದಲ್ಲಿರಲಿದ್ದಾರೆ. ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ರಿಯಾ ಚಕ್ರವರ್ತಿ ಮನೆ ಮೇಲೆ ಶುಕ್ರವಾರ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ ಶೋಧಕಾರ್ಯ ನಡೆಸಿದ ಅಧಿಕಾರಿಗಳು 10 ಗಂಟೆಗಳ ಕಾಲ ವಿಚಾರಣೆ ನಡೆಸಿ, ನಿನ್ನೆ ರಾತ್ರಿ ರಿಯಾಳ ಸೋದರ ಶೋವಿಕ್ ಚಕ್ರವರ್ತಿಯನ್ನು ಬಂಧಿಸಿದ್ದಾರೆ. ಜೊತೆಗೆ, ಸ್ಯಾಮ್ಯುಯೆಲ್ ಮಿರಾಂಡಾ ಅವರ ಮನೆಯ ಮೇಲೂ ದಾಳಿ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ, ಅವರನ್ನೂ ಬಂಧಿಸಿದ್ದಾರೆ.
ಅವರಿಬ್ಬರಿಗೂ ಇಂದು ಕೋವಿಡ್ ಪರೀಕ್ಷೆ ಮಾಡಿಸಿ, ಎನ್ಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅವರನ್ನು ಇನ್ನೂ ಆರೇಳು ದಿನಗಳ ಕಾಲ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಎನ್ಸಿಬಿ ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ಈ ಕೇಸಿನ ಇತರೆ ಆರೋಪಿಗಳು ಕೂಡ ಶೋವಿಕ್ ಚಕ್ರವರ್ತಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಶೋವಿಕ್ ಚಕ್ರವರ್ತಿಯೇ ಗಾಂಜಾ, ಮರಿಜುನಾ ಮುಂತಾದ ಡ್ರಗ್ಗಳ ಸರಬರಾಜಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂದು ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದರು. ಮಾನಸಿಕ ಖಿನ್ನತೆಯಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸುಶಾಂತ್ನ ಕುಟುಂಬಸ್ಥರು, ಆಪ್ತ ವಲಯ ಸೇರಿದಂತೆ ಅಭಿಮಾನಿಗಳು ಕೂಡ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಇನ್ನು ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾ ಕೈವಾಡ ಇದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಬೆಂಗಳೂರು ಡ್ರಗ್ಸ್ ದಂಧೆ; ರಾಗಿಣಿ ಸೇರಿ 12 ಮಂದಿ ಮೇಲೆ ದಾಖಲಾದ ಎಫ್ಐಆರ್ನಲ್ಲಿ ಇಲ್ಲ ರವಿಶಂಕರ್ ಹೆಸರು
ದೊಡ್ಡ ಮೊತ್ತದ ಹಣ ಸುಶಾಂತ್ ಖಾತೆಯಿಂದ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂದು ಸುಶಾಂತ್ ಅವರ ತಂದೆ ದೂರಿದ್ದರು. ಈ ದೂರಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದೂರು ದಾಖಲು ಮಾಡಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ರಿಯಾ ಹಾಗೂ ಅವರ ಕುಟುಂಬವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೆಲ ವಾಟ್ಸ್ಆಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಡ್ರಗ್ ಡೀಲರ್ಗಳಿಗೆ ಕಳುಹಿಸಲಾದ ಮೆಸೇಜ್ ಎಂದು ಹೇಳಲಾಗಿದೆ. ಹೀಗಾಗಿ, ಈ ಬಗ್ಗೆ ವಿಚಾರಣೆ ನಡೆಸುವಂತೆ ಇಡಿ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್ಸಿಬಿ) ಪತ್ರ ಬರೆದಿತ್ತು. ಅಧಿಕೃತವಾಗಿ ಪತ್ರ ದೊರೆತ ನಂತರದಲ್ಲಿ ರಿಯಾ ವಿರುದ್ಧ ಎನ್ಸಿಬಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿತ್ತು.
ಕಳೆದ ವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸುಶಾಂತ್ ಸಿಂಗ್ ಅವರ ತಂದೆ ಕೆ.ಕೆ. ಸಿಂಗ್, ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಆತನ ಜೀವ ತೆಗೆಯಲೆಂದೇ ವಿಷ ಹಾಕಿದ್ದಾಳೆ. ಆಕೆಯೇ ನನ್ನ ಮಗನ ಕೊಲೆಗಾರ್ತಿ ಎಂದು ಆರೋಪಿಸಿದ್ದರು. ಬಹಳ ಸಮಯದಿಂದ ಸುಶಾಂತ್ಗೆ ಗೊತ್ತಾಗದ ಹಾಗೆ ರಿಯಾ ಆತನಿಗೆ ವಿಷವುಣಿಸುತ್ತಿದ್ದಳು. ಆಕೆಯೇ ನನ್ನ ಮಗನ ಕೊಲೆ ಮಾಡಿದಾಕೆ. ತನಿಖಾ ತಂಡ ಆಕೆಯನ್ನು ಮತ್ತು ಆಕೆಗೆ ಸಹಾಯ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಿಯಾ ಚಕ್ರವರ್ತಿ, ನಾನು ಕೆಲವು ದಿನಗಳಿಂದ ಅಧಿಕ ಒತ್ತಡದಿಂದ ಬಳಲುತ್ತಿದ್ದೇನೆ. ಕೆಲವು ತಿಂಗಳಿಂದ ನಾನು ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಹೀಗೆ ಪ್ರತಿದಿನ ಆರೋಪಗಳನ್ನು ಮಾಡಿ, ಹಿಂಸೆ ನೀಡುವ ಬದಲು ನನ್ನನ್ನು, ನನ್ನ ಫ್ಯಾಮಿಲಿಯನ್ನು ಯಾರಾದರೂ ಶೂಟ್ ಮಾಡಿ ಸಾಯಿಸಿಬಿಡಿ. ನಮಗೆ ಎಲ್ಲದಕ್ಕಿಂತಲೂ ಮರ್ಯಾದೆಯೇ ಮುಖ್ಯ. ಪ್ರತಿಯೊಬ್ಬರೂ ಹೊಸ ಹೊಸ ಕಥೆ ಕಟ್ಟಿ ನಮ್ಮನ್ನು ಇಂಚಿಂಚಾಗಿ ಕೊಲ್ಲುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.
Published by:
Sushma Chakre
First published:
September 5, 2020, 2:45 PM IST