Sushma ChakreSushma Chakre
|
news18-kannada Updated:August 27, 2020, 1:59 PM IST
ರಿಯಾ ಚಕ್ರವರ್ತಿ- ಸುಶಾಂತ್ ಸಿಂಗ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಎರಡೂವರೆ ತಿಂಗಳೇ ಕಳೆದಿವೆ. ಆತ್ಮಹತ್ಯೆ ಎಂದು ಪರಿಗಣಿಸಲ್ಪಟ್ಟಿದ್ದ ಸುಶಾಂತ್ ಸಾವಿಗೆ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಿದ್ದು, ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ತಮ್ಮ ಮಗನ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ ಎಂದು ಆರೋಪಿಸಿದ್ದ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಇದೀಗ ತಮ್ಮ ಮಗನಿಗೆ ವಿಷ ಹಾಕಿ ರಿಯಾ ಚಕ್ರವರ್ತಿಯೇ ಕೊಂದಿದ್ದಾಳೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಕೆ.ಕೆ. ಸಿಂಗ್, ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಆತನ ಜೀವ ತೆಗೆಯಲೆಂದೇ ವಿಷ ಹಾಕಿದ್ದಾಳೆ. ಆಕೆಯೇ ನನ್ನ ಮಗನ ಕೊಲೆಗಾರ್ತಿ ಎಂದು ಅವರು ಆರೋಪಿಸಿದ್ದಾರೆ. ಬಹಳ ಸಮಯದಿಂದ ಸುಶಾಂತ್ಗೆ ಗೊತ್ತಾಗದ ಹಾಗೆ ರಿಯಾ ಆತನಿಗೆ ವಿಷವುಣಿಸುತ್ತಿದ್ದಳು. ಆಕೆಯೇ ನನ್ನ ಮಗನ ಕೊಲೆ ಮಾಡಿದಾಕೆ. ತನಿಖಾ ತಂಡ ಆಕೆಯನ್ನು ಮತ್ತು ಆಕೆಗೆ ಸಹಾಯ ಮಾಡಿದವರನ್ನು ಬಂಧಿಸಿ, ಸತ್ಯಾಂಶ ಬಯಲು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿ ಕೆಕೆ ಸಿಂಗ್ ಬಿಹಾರದಲ್ಲಿ ಕೇಸ್ ದಾಖಲಿಸಿದ್ದರು. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದವರ ಮೇಲೆ ಕೆಕೆ ಸಿಂಗ್ ದೂರು ನೀಡಿದ್ದರು. ಇದೀಗ ಸಿಬಿಐ, ಎನ್ಸಿಬಿ ಮತ್ತು ಇಡಿಯಿಂದ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ರಿಯಾಗೂ ಡ್ರಗ್ ಡೀಲರ್ಗೂ ನಂಟು?; ಕ್ರಿಮಿನಲ್ ಕೇಸ್ ದಾಖಲಿಸಿಕೊಂಡ ಎನ್ಸಿಬಿ
ದೊಡ್ಡ ಮೊತ್ತದ ಹಣ ಸುಶಾಂತ್ ಖಾತಯಿಂದ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂದು ಸುಶಾಂತ್ ತಂದೆ ದೂರಿದ್ದರು. ಈ ದೂರಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದೂರು ದಾಖಲು ಮಾಡಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ರಿಯಾ ಹಾಗೂ ಅವರ ಕುಟುಂಬವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೆಲ ವಾಟ್ಸ್ಆಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಡ್ರಗ್ ಡೀಲರ್ಗಳಿಗೆ ಕಳುಹಿಸಲಾದ ಮೆಸೇಜ್ ಎಂದು ಹೇಳಲಾಗಿದೆ. ಹೀಗಾಗಿ, ಈ ಬಗ್ಗೆ ವಿಚಾರಣೆ ನಡೆಸುವಂತೆ ಇಡಿ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್ಸಿಬಿ) ಪತ್ರ ಬರೆದಿತ್ತು. ಅಧಿಕೃತವಾಗಿ ಪತ್ರ ದೊರೆತ ನಂತರದಲ್ಲಿ ರಿಯಾ ವಿರುದ್ಧ ಎನ್ಸಿಬಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿದೆ.
34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದರು. ಮಾನಸಿಕ ಖಿನ್ನತೆಯಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸುಶಾಂತ್ ಸಿಂಗ್ ರಜಪೂತ್ ತಂದೆ, ತಮ್ಮ ಮಗನದ್ದು ಆತ್ಮಹತ್ಯೆಯಲ್ಲ, ಯಾರೋ ಆತನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಬಳಿಕ ಸುಶಾಂತ್ ಸಾವಿನ ಪ್ರಕರಣಕ್ಕೆ ಹೊಸ ತಿರುವುಗಳು ಸಿಗುತ್ತಿವೆ.
Published by:
Sushma Chakre
First published:
August 27, 2020, 1:57 PM IST