Sushma ChakreSushma Chakre
|
news18-kannada Updated:September 6, 2020, 3:58 PM IST
ಸುಶಾಂತ್ ಸಿಂಗ್ ರಜಪೂತ್-ರಿಯಾ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪ್ರೇಯಸಿ ರಿಯಾ ಚಕ್ರವರ್ತಿಗೆ ಸಮನ್ಸ್ ನೀಡಲಾಗಿದೆ. ಇದೀಗ ಎನ್ಸಿಬಿ ಅಧಿಕಾರಿಗಳ ಎದುರು ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ. ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಜೈಲಿಗೆ ಹೋಗಲೂ ಸಿದ್ಧರಿದ್ದಾರೆ ಎಂದು ಅವರ ಪರ ವಕೀಲ ಸತೀಶ್ ಮಾನೆಶಿಂಧೆ ಹೇಳಿದ್ದಾರೆ. ಆಕೆ ಸುಶಾಂತ್ ಸಿಂಗ್ ಅವರನ್ನು ಪ್ರೀತಿ ಮಾಡಿದ್ದೇ ದೊಡ್ಡ ಅಪರಾಧವೆಂದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲು ರಿಯಾ ಸಿದ್ಧರಿದ್ದಾರೆ. ತಾನು ಪ್ರೀತಿ ಮಾಡಿದ ವ್ಯಕ್ತಿಯ ಸಾವಿಗೆ ನ್ಯಾಯ ಸಿಗಬೇಕೆಂಬ ಕಾರಣಕ್ಕೆ ಆಕೆ ಯಾವ ರೀತಿಯ ಸಂಕಷ್ಟಗಳನ್ನು ಎದುರಿಸಲೂ ಸಿದ್ಧರಿದ್ದಾರೆ ಎಂದು ವಕೀಲ ಮಾನೆಶಿಂಧೆ ಹೇಳಿಕೆ ನೀಡಿದ್ದಾರೆ.
ರಿಯಾ ಚಕ್ರವರ್ತಿ ಯಾವ ತಪ್ಪನ್ನೂ ಮಾಡಿಲ್ಲ, ಅವರು ಮುಗ್ಧರು. ಇದೇ ಕಾರಣಕ್ಕೆ ಅವರ ಮೇಲೆ ಹಲವು ದಿನಗಳಿಂದ ಆರೋಪಗಳು ಕೇಳಿಬರುತ್ತಿದ್ದರೂ ಅವರು ಯಾವುದೇ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ ಎಂದು ಸತೀಶ್ ಮಾನೆಶಿಂಧೆ ಹೇಳಿದ್ದಾರೆ. ಇಂದು ಬೆಳಗ್ಗೆ ಎನ್ಸಿಬಿ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿ ಎನ್ಸಿಬಿ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಒಳಗಾಗಿದ್ದಾರೆ.
ಸುಶಾಂತ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮೇಲೆ ಕೊಲೆಯ ಆರೋಪ ಕೇಳಿಬಂದಿತ್ತು. ಬಳಿಕ ಶುಕ್ರವಾರ ರಿಯಾ ಚಕ್ರವರ್ತಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು ರಿಯಾಳ ಸೋದರ ಶೋವಿಕ್ ಚಕ್ರವರ್ತಿಯನ್ನು ಬಂಧಿಸಿದ್ದರು. ರಿಯಾ ಚಕ್ರವರ್ತಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಹಾಗೂ ಸುಶಾಂತ್ ಸಿಂಗ್ ಅವರ ಖಾಸಗಿ ಸಿಬ್ಬಂದಿ ದೀಪೇಶ್ ಸಾವಂತ್ ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ರಿಯಾ ಚಕ್ರವರ್ತಿಗೂ ಸಮನ್ಸ್ ನೀಡಲಾಗಿತ್ತು.
ಇದನ್ನೂ ಓದಿ: Sushant Singh Death: ಸುಶಾಂತ್ ಸಿಂಗ್ ಸಾವಿನ ಕೇಸ್; ರಿಯಾ ಚಕ್ರವರ್ತಿಗೆ ಎನ್ಸಿಬಿಯಿಂದ ಸಮನ್ಸ್ ಜಾರಿ
34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದರು. ಮಾನಸಿಕ ಖಿನ್ನತೆಯಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸುಶಾಂತ್ನ ಕುಟುಂಬಸ್ಥರು, ಆಪ್ತ ವಲಯ ಸೇರಿದಂತೆ ಅಭಿಮಾನಿಗಳು ಕೂಡ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಇನ್ನು ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾ ಕೈವಾಡ ಇದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದೆ.
ದೊಡ್ಡ ಮೊತ್ತದ ಹಣ ಸುಶಾಂತ್ ಖಾತೆಯಿಂದ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂದು ಸುಶಾಂತ್ ಅವರ ತಂದೆ ದೂರಿದ್ದರು. ಈ ದೂರಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದೂರು ದಾಖಲು ಮಾಡಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ರಿಯಾ ಹಾಗೂ ಅವರ ಕುಟುಂಬವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೆಲ ವಾಟ್ಸ್ಆಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಡ್ರಗ್ ಡೀಲರ್ಗಳಿಗೆ ಕಳುಹಿಸಲಾದ ಮೆಸೇಜ್ ಎಂದು ಹೇಳಲಾಗಿದೆ. ಹೀಗಾಗಿ, ಈ ಬಗ್ಗೆ ವಿಚಾರಣೆ ನಡೆಸುವಂತೆ ಇಡಿ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್ಸಿಬಿ) ಪತ್ರ ಬರೆದಿತ್ತು. ಅಧಿಕೃತವಾಗಿ ಪತ್ರ ದೊರೆತ ನಂತರದಲ್ಲಿ ರಿಯಾ ವಿರುದ್ಧ ಎನ್ಸಿಬಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿತ್ತು.
Published by:
Sushma Chakre
First published:
September 6, 2020, 3:58 PM IST