ದಶಕಗಳ ಬಳಿಕ ಹೊರಬಿತ್ತು ರಜನಿಕಾಂತ್ ಲವ್ ಸ್ಟೋರಿ; ಸೂಪರ್ಸ್ಟಾರ್ ಪ್ರೀತಿಸುತ್ತಿದ್ದ ಹುಡುಗಿ ಬೆಂಗಳೂರಿನವಳು!
Rajinikanth: ರಜನಿಕಾಂತ್ ಈ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಈ ವೇಳೆ ಅವರು ನಿರ್ಮಲಾ ಎನ್ನುವ ಹುಡುಗಿಯನ್ನು ಪ್ರೀತಿಸಿದ್ದರಂತೆ. ನಿರ್ಮಲಾ ಆ ಸಮಯದಲ್ಲಿ ಎಂಬಿಬಿಎಸ್ ಓದುತ್ತಿದ್ದರು.
ಪ್ರೀತಿ-ಪ್ರೇಮದ ವಿಚಾರದಲ್ಲಿ ಅನೇಕರು ಮುಚ್ಚುಮರೆ ಮಾಡುತ್ತಾರೆ. ಅದರಲ್ಲೂ ಸ್ಟಾರ್ ನಟರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡೋದು ತುಂಬಾನೇ ಅಪರೂಪ. ಆದರೆ, ನಟ ರಜನಿಕಾಂತ್ ತಮ್ಮ ಹಳೆಯ ಪ್ರೇಮ ಕಥೆ ಬಗ್ಗೆ ಹೇಳಿಕೊಂಡಿದ್ದಾರೆ. ವಿಶೇಷ ಎಂದರೆ ಅವರು ಪ್ರೀತಿಸುತ್ತಿದ್ದ ಹುಡುಗಿ ಬೆಂಗಳೂರಿನವರಂತೆ!
ಹೌದು, ರಜನಿಕಾಂತ್ ಈ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಈ ವೇಳೆ ಅವರು ನಿರ್ಮಲಾ ಎನ್ನುವ ಹುಡುಗಿಯನ್ನು ಪ್ರೀತಿಸಿದ್ದರಂತೆ. ನಿರ್ಮಲಾ ಆ ಸಮಯದಲ್ಲಿ ಎಂಬಿಬಿಎಸ್ ಓದುತ್ತಿದ್ದರು. ಈ ಬಗ್ಗೆ ರಜನಿ ಮಲಯಾಳಂ ಖ್ಯಾತ ನಟ ದೇವನ್ ಬಳಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೇವನ್, ಚೆನ್ನೈನಲ್ಲಿ ನಾನು ಶೂಟಿಂಗ್ಗೆ ತೆರಳಿದ್ದೆ. ಈ ವೇಳೆ ರಜನಿಕಾಂತ್ ಕೂಡ ಚೆನ್ನೈಗೆ ಆಗಮಿಸಿದ್ದರು. ಅಚ್ಚರಿ ವಿಚಾರ ಎಂದರೆ, ರಜನಿಕಾಂತ್ ನನ್ನನ್ನು ಊಟಕ್ಕೆ ಆಹ್ವಾನಿಸಿದ್ದರು. ನಾನು ಅವರ ಆಹ್ವಾನ ಸ್ವೀಕರಿಸಿ ಊಟಕ್ಕೆ ತೆರಳಿದ್ದೆ ಎಂದಿದ್ದಾರೆ.
ಊಟಕ್ಕೆ ಸಿದ್ಧತೆ ಆಗಿತ್ತಂತೆ. ಈ ವೇಳೆ ರಜನಿ ದೇವನ್ ಬಳಿ ಹಳೆಯ ಲವ್ ಸ್ಟೋರಿ ಬಗ್ಗೆ ಕೇಳಿದ್ದರಂತೆ. ಈ ವಿಚಾರವಾಗಿ ದೇವನ್ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಂಡಿದ್ದರು. ಆಗ ರಜನಿ ತುಂಬಾನೇ ಭಾವುಕರಾಗಿದ್ದರಂತೆ. ಈ ಬಗ್ಗೆ ದೇವನ್ ಕೇಳಿದಾಗ ರಜನಿ ತಮ್ಮ ಹಳೆಯ ಲವ್ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರಂತೆ.
ನಾನು ಬೆಂಗಳೂರಿನಲ್ಲಿದ್ದಾಗ ನಿರ್ಮಲಾ ಎಂಬಾಕೆಯನ್ನು ಪ್ರೀತಿಸಿದ್ದೆ. ಆಕೆ ನಿತ್ಯ ನಾನು ಕಂಡಕ್ಟರ್ ಆಗಿದ್ದ ಬಸ್ನಲ್ಲಿಯೇ ಸಂಚರಿಸುತ್ತಿದ್ದಳು. ಒಂದು ದಿನ ನಿರ್ಮಲಾ ನಾನು ಮುಖ್ಯ ಪಾತ್ರ ನಿರ್ವಹಿಸಿದ್ದ ನಾಟಕವನ್ನು ನೋಡಿದ್ದಳು. ಅಷ್ಟೇ ಅಲ್ಲ, ಈ ಬಗ್ಗೆ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಷನ್ಗೆ ಲೆಟರ್ ಕೂಡ ಬರೆದಿದ್ದಳು. ಹೀಗಾಗಿ ನನಗೆ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಸಂದರ್ಶನದ ಪತ್ರ ನೋಡಿ ನಾನು ಕಂಗಾಲಾಗಿದ್ದೆ ಎಂದು ದೇವನ್ ಬಳಿ ರಜನಿ ಹೇಳಿಕೊಂಡಿದ್ದರು.
ನಂತರ ನಾನು ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಷನ್ ಹೋದೆ. ಚೆನ್ನೈಗೆ ತೆರಳಲು ನಿರ್ಮಲಾ 500 ರೂಪಾಯಿ ನೀಡಿದ್ದರು. ಫಿಲ್ಮ್ ಇನ್ಸ್ಟಿಟ್ಯೂಷನ್ ಸೇರಿದ ಮೇಲೆ ಬೆಂಗಳೂರಿಗೆ ಬಂದರೂ ನನಗೆ ನಿರ್ಮಲಾ ಕಾಣಿಸಿರಲಿಲ್ಲ. ಅದಾದ ನಂತರ ಅವಳು ಕಾಣಲೇ ಇಲ್ಲ ಎನ್ನುತ್ತಾರೆ ರಜನಿಕಾಂತ್.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ