Rajinikanth - ರಜಿನೀಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಸೂಪರ್ ಸ್ಟಾರ್ ರಜಿನೀಕಾಂತ್ ಅವರು ಈ ವರ್ಷದ 51ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಮಾಹಿತಿ ಪ್ರಸರಣ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಇದರೊಂದಿಗೆ ಡಾ. ರಾಜಕುಮಾರ್ ಸಾಲಿಗೆ ರಜಿನೀ ಸೇರಿದ್ದಾರೆ.

ರಜಿನಿಕಾಂತ್.

ರಜಿನಿಕಾಂತ್.

 • Share this:
  ನವದೆಹಲಿ(ಏ. 01): ಕನ್ನಡಿಗ ಮತ್ತು ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು 2019ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ. ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವಡೇಕರ್ ಈ ಪ್ರಶಸ್ತಿಯನ್ನು ಇಂದು ಘೋಷಿಸಿದ್ದಾರೆ. 51ನೇ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ರಜಿನಿಕಾಂತ್ ಆಯ್ಕೆಯಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವರು ತಿಳಿಸಿದ್ಧಾರೆ. ಭಾರತದ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ನಟರಲ್ಲಿ ಅವರೊಬ್ಬರು. ನಟನಾಗಿ, ನಿರ್ಮಾಪಕನಾಗಿ ಮತ್ತು ಚಿತ್ರಕಥೆಗಾರನಾಗಿ ಅವರು ನೀಡಿರುವ ಕೊಡುಗೆ ಅಪಾರವಾದುದು ಎಂದು ಸುದ್ದಿಗೋಷ್ಠಿಯಲ್ಲಿ ಜಾವಡೇಕರ್ ಸ್ಮರಿಸಿದ್ದಾರೆ.

  ದಾದಾ ಸಾಹೇಬ್ ಫಾಲ್ಕೆ ಅವರು ಭಾರತೀಯ ಸಿನಿರಂಗದ ಪಿತಾಮಹ ಎಂದೇ ಪರಿಗಣಿಸಲ್ಪಟ್ಟಿದ್ಧಾರೆ. 1913ರಲ್ಲಿ ಭಾರತದ ಮೊದಲ ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರ ಹೆಸರಿನಲ್ಲಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಸಿನಿಮಾ ರಂಗದ ಅತ್ಯುಚ್ಛ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಒಟ್ಟಾರೆ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯಲ್ಲಿ ಸ್ವರ್ಣ ಕಮಲ ಪದಕ ಹಾಗೂ 10 ಲಕ್ಷ ರೂ ನಗದು ಬಹುಮಾನ ಒಳಗೊಂಡಿರುತ್ತದೆ.  2019ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಗೆ ರಚನೆಯಾಗಿದ್ದ ಸಮಿತಿಯಲ್ಲಿ ಆಶಾ ಭೋಂಸ್ಲೆ, ಸುಭಾಷ್ ಘಾಯ್, ಮೋಹನ್ ಲಾಲ್, ಶಂಕರ್ ಮಹದೇವನ್ ಮತ್ತು ಬಿಸ್ವಜೀತ್ ಚಟರ್ಜಿ ಅವರಿದ್ದರು. ಹಿಂದಿನ ಸಾಲಿನ ಪ್ರಶಸ್ತಿಯನ್ನು ಅಮಿತಾಭ್ ಬಚ್ಚನ್ ಅವರಿಗೆ ನೀಡಲಾಗಿತ್ತು.

  ಇದನ್ನೂ ಓದಿ: ನ್ಯೂಯಾರ್ಕ್​ನಲ್ಲಿ ಭಾರತೀಯ ರೆಸ್ಟೊರೆಂಟ್​ ತೆರೆದ ಪ್ರಿಯಾಂಕಾ ಚೋಪ್ರಾ​: ಇದರ ವಿಶೇಷತೆಗಳೇನು ಗೊತ್ತಾ?

  ಕರ್ನಾಟಕ ರತ್ನ, ವರನಟ ಡಾ. ರಾಜಕುಮಾರ್ ಸೇರಿದಂತೆ ಈವರೆಗೆ 50 ಮಂದಿ ಮೇರು ನಟರು, ಗಾಯಕರು, ನಿರ್ದೇಶಕರು ಈ ಅತ್ಯುಚ್ಚ ಪ್ರಶಸ್ತಿಗೆ ಬಾಜನರಾಗಿದ್ದಾರೆ. ದೇವಿಕಾ ರಾಣಿ ಈ ಪ್ರಶಸ್ತಿಯ ಮೊದಲ ವಿಜೇತೆ. ರಾಜಕುಮಾರ್ ಅವರಲ್ಲದೇ, ಲತಾ ಮಂಗೇಶ್ಕರ್, ಭುಪೇನ್ ಹಜಾರಿಕಾ, ಸತ್ಯಜಿತ್ ರೇ, ರಾಜ್ ಕಪೂರ್, ದೇವ್ ಆನಂದ್, ಶ್ಯಾಮ್ ಬೆನಗಲ್, ಅಡೂರ್ ಗೋಪಾಲಕೃಷ್ಣನ್, ಅಮಿತಾಭ್ ಬಚ್ಚನ್ ಮೊದಲಾದವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ.
  Published by:Vijayasarthy SN
  First published: