news18-kannada Updated:December 12, 2020, 7:25 AM IST
ರಜನಿಕಾಂತ್
ಖ್ಯಾತ ನಟ ರಜನಿಕಾಂತ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯ ತಲೈವಾ ಅವರಿಗೆ 71 ವರ್ಷ ಪೂರ್ಣಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.
ರಜಿನಿಕಾಂತ್ ಸಿನಿಮಾ ಜರ್ನಿ ಬಹಳ ವಿಚಿತ್ರವಾಗಿದೆ. ಬಸ್ ಕಂಡಕ್ಟರ್ ಆಗಿದ್ದ ಅವರು ಸಿನಿಮಾದಲ್ಲಿ ನಟಿಸುತ್ತಾ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡರು. ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ರಜನಿ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಹಿರಿಯ ನಟರೊಂದಿಗೆ ಹೆಜ್ಜೆ ಹಾಕಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಖಳನಟನಾಯಿಗೂ ಪಾತ್ರನಿರ್ವಹಿಸಿದ್ದರು.
ರಜನಿಕಾಂತ್ ಡಿಸೆಂಬರ್ 12, 1949ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಮರಾಠಿ ಸಂಸ್ಕಾರದ ಮನೆಯಲ್ಲಿ ಜನಿಸಿದ ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್ವಾಡ್. 5ನೇ ವಯಸ್ಸಿನಲ್ಲಿ ರಜನಿ ಅವರ ತಾಯಿ ತೀರಿಹೋದರು. ಅದಾದ ಬಳಿಕ ಅವರ ಪ್ರಾಥಮಿಕ ಶಿಕ್ಷಣ ಆಚಾರ್ಯ ಪಾಠಶಾಲೆಯಲ್ಲಿ, ನಂತರ ಕರ್ನಾಟಕ ರಾಮಕೃಷ್ಣ ವಿದ್ಯಾಲಯದಲ್ಲಿ ಮುಂದುವರಿಸಿದರು.
ಶಿವಾಜಿ ರಾವ್ ಸಿನಿಮಾಗೂ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಆದರೆ ಶಿವಾಜಿ ರಾವ್ಗೆ ಸಿನಿಮಾ ಅಂದರೆ ಪಂಚಪ್ರಾಣ. ಅದರ ಜೊತೆಗೆ ಸಿನಿಮಾದಲ್ಲೂ ನಟಿಸುವ ಆಸೆ. ಇವರ ಸಿನಿಮಾ ಪ್ರೀತಿಯನ್ನು ಕಣ್ಣಾರೆ ಕಂಡ ಗೆಳೆಯ ರಾಜ್ ಬಹದ್ದೂರ್ ಮದ್ರಾಸು ಫಿಲಂ ಇನ್ಟಿಟ್ಯೂಟ್ನಲ್ಲಿ ತರಬೇತಿ ತೆಗೆದುಕೊ ಎಂದು ಹುರಿದುಂಬಿಸಿದರು.
ಸಿನಿಮಾ ರಂಗ ಪ್ರವೇಶಿಸಿದ ಶಿವಾಜಿ ರಾವ್ ನಂತರ ರಜನಿಕಾಂತ್ ಆಗಿ ಗುರುತಿಸಿಕೊಳ್ಳುತ್ತಾರೆ. ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ದ ದೊಡ್ಡ ಬಜೆಟ್ ಸಿನಿಮಾದ ಮೂಲಕ ಮತ್ತು ಅವರದೇ ಶೈಲಿಯಲ್ಲಿ ಡೈಲಾಗ್ ಡೆಲಿವರಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಈಗಲೂ ಕಾಲಿವುಡ್ ಸಿನಿಮಾ ರಂಗದಲ್ಲಿ ರಜನಿಕಾಂತ್ಗೂ ಭಾರೀ ಬೇಡಿಕೆಯಿದೆ.
ರಜನಿಕಾಂತ್ ಕನ್ನಡದಲ್ಲಿ ಕಥಾಸಂಗಮ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಕುಂಕುಮ ರಕ್ಷ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ಸವಾಲಿಗೆ ಸವಾಲ್, ತಪ್ಪಿದ ತಾಳ, ಪ್ರಿಯ, ಘರ್ಜನೆ ಸಿನಿಮಾದಲ್ಲಿ ನಟಿಸಿದ್ದಾರೆ.ತಮಿಳಿನಲ್ಲಿ ಅನೇಕ ಸಿನಿಮಾದಲ್ಲಿ ನಟಿಸಿದ ರಜನಿಕಾಂತ್ ಸದ್ಯ ಅನ್ನಾಥೆ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದರೊಂದಿಗೆ ರಾಜಕೀಯದತ್ತ ಕೂಡ ಚಿತ್ತ ಹರಿಸಿದ್ದಾರೆ.
Published by:
Harshith AS
First published:
December 12, 2020, 7:25 AM IST